ವಿಶ್ವಶಾಂತಿ ದಿನ
ವಿಶ್ವಶಾಂತಿ ದಿನ
On International Peace Day 🕊️
ಈ ವಿಶ್ವದಲ್ಲಿ ನಡೀತಿರೋದು ಎರಡೇ. ಯುದ್ಧ ಅಥವಾ ಯುದ್ಧಕ್ಕೆ ತಯಾರಿ. ಉಳಿದ ಮಾತುಗಳೆಲ್ಲ ಢೋಂಗಿಯದು. ಹೀಗಾಗಿ 'ವಿಶ್ವಶಾಂತಿ' ಎಂಬುದು ಹಾಸ್ಯಾಸ್ಪದ ಸ್ಲೋಗನ್ ಅನ್ನೋ ತರಹ ಇದೆ.
ವಿಶ್ವಶಾಂತಿ ಅಂತ ಹೇಳೋ ರಾಷ್ಟ್ರಗಳೆಲ್ಲ ದೊಡ್ಡ ದೊಡ್ಡ ಪರಮಾಣು ಬಾಂಬು ರೆಡಿ ಮಾಡ್ಕೊಂಡಿರೊ ದೇಶಗಳು. "ನನ್ನ ಸುದ್ದಿಗೆ ಬಂದ್ರೆ ಇಲ್ಲ ಅನ್ನಿಸಿಬಿಡ್ತೀನಿ" ಎಂಬ ದೌಲತ್ತಿನ ರಾಷ್ಟ್ರಗಳವು. ಯಾರೂ ಏನೂ ಮಾಡದಿದ್ರು, ನೋಡು ನಮ್ಮನೆ ಸೈಡಲ್ಲಿರುವ ನಿನ್ನ ಮನೆ ಕಾಂಪೌಂಡು ಒಳಗಡೆಯೂ ನೀ ಏನೂ ಮಾಡೋ ಹಾಗಿಲ್ಲ, ಅದು ‘disputed area’ ಅನ್ನೋ ಅಷ್ಟರಮಟ್ಟಿಗಿವೆ ಅವುಗಳ ಕೊಬ್ಬು. ಅದು ದೌಲತ್ತು, ಕೊಬ್ಬುಗಳ ಸ್ವರೂಪದದ್ದಾರೂ, ಅಲ್ಲಿ ಕಾಣೋದು ಇವನು ನನ್ನ ಮನೆ ಹತ್ರ ಏನೊ ತಂದು ಹಾಕಿಬಿಟ್ರೆ ಎಂಬ ಆತಂಕ. ಆದಷ್ಟು ಬೇಗ ಈ ಆತಂಕ ಕಳಕೊಬೇಕು ಎಂಬ ಅಸಹನಾತ್ಮಕ ಪ್ರವೃತ್ತಿ. ಅಶಾಂತಿಗೆ ಮುಖ್ಯ ಕಾರಣ ಆತಂಕ ಮತ್ತು ಅಸಹನೆ.
ಈ ದೊಡ್ಡ ರಾಷ್ಟ್ರಗಳು ಶಕ್ತಿ ಕಡಿಮೆ ಇರುವ ರಾಷ್ಟ್ರಗಳ ಬಳಿಗೆ ಶಾಂತಿ ಸ್ನೇಹದ ಮಾತುಕತೆಯ ನಾಟಕ ಆಡಿ, "ನಿನ್ನ ಪಕ್ಕದ ದೇಶ, ನಿನ್ನ ನಾಶ ಮಾಡಕ್ಕೆ ಕಾಯ್ತಿದೆ. ನನ್ನ ದೇಶದ ಶಸ್ತ್ರಾಸ್ತ್ರ, ತಂತ್ರಜ್ಞಾನ ಮತ್ತು ಧಾಳಿ ವಿಮಾನ ತೊಗೊಂಡು ರಕ್ಷಣೆ ಮಾಡ್ಕೊ" ಎಂದು ವ್ಯಾಪಾರ ಮಾಡುತ್ತವೆ. ನಾನು ನಿನ್ನ ದೇಶಕ್ಕೆ ಬಂದು ಸಂಪನ್ಮೂಲ ನಿರ್ಮಿಸಿಕೊಡ್ತೀನಿ ಅಂತ ಚಿಕ್ಕ ದೇಶಗಳ ಬಳಿ ಬಂದು ಅಲ್ಲಿನ ಆಡಳಿತಾರೂಢರನ್ನು ಭ್ರಷ್ಟರಾಗಿಸಿ, ಆ ದೇಶದ ನೆಲದಿಂದ ತನಗಾಗದ ದೇಶಗಳ ಮೇಲೆ ಗೂಢಚಾರಿಕೆ ನಡೆಸತೊಡಗುತ್ತೆ.
ಜನರಲ್ಲಿ ನಾನು, ನನ್ನ ಧರ್ಮ, ನನ್ನ ಊರು, ನನ್ನ ದೇಶ ಇವೆಲ್ಲ ಸ್ವಾಭಿಮಾನದ ಲಕ್ಷಣ ಅಂತ ನಾವು ಭಾವಿಸ್ತೇವೆ. ಇನ್ನೊಂದು ಊರವನು, ಧರ್ಮದವನು, ದೇಶದವನು ಹಾಗೇ ಇದ್ರೆ ಅದನ್ನ ದುರಭಿಮಾನ ಅಂತೀವಿ. ಸೂಕ್ಷ್ಮವಾಗಿ ನೋಡಿದರೆ ನಾವು ಏನೇನನ್ನ ಅಭಿಮಾನದ ಸಂಕೇತ ಅಂತೀವೊ, ಇವೆಲ್ಲ ಸೂಕ್ತ ಸಂವೇದನಾ ತಿಳುವಳಿಕೆಗಳನ್ನು ಕಳಕೊಂಡಾಗ ಪಾಂಡವರು ಕೌರವರ ಕಥೆಯಂತಾಗುತ್ತೆ. ಇದು ವ್ಯಕ್ತಿಗಳಿಗೆ, ಕುಟುಂಬಗಳಿಗೆ ಮತ್ತು ದೇಶಗಳಿಗೆ ಎಲ್ಲಕ್ಕೂ ಅನ್ವಯವಾಗುತ್ತೆ. ವಿಶ್ವದ ಎಲ್ಲ ರಾಷ್ಟ್ರಗಳಲ್ಲಿನ ಅಧಿಕಾರಶಾಹಿಗಳೂ ತಮ್ಮ ಸಮುದಾಯವನ್ನು ಸ್ವಾಭಿಮಾನದೆಡೆಗೆ ಬಡೆದೆಬ್ಬಿಸುವ ನಿಟ್ಟಿನಲ್ಲೇ ತಮ್ಮ ನಾಯಕತ್ವವನ್ನು ಗಟ್ಟಿಗೂಳಿಸಿಕೊಳ್ಳಲು ಯತ್ನಿಸುತ್ತಾರೆ.
ಸಧ್ಯಕ್ಕಂತೂ ವಿಶ್ವಶಾಂತಿ ಅನ್ನೋದು "ನಾನು ನಿನ್ನ ನಂಬಲ್ಲ ಆದ್ರೂ, ಸ್ನೇಹಿತರಾಗಿರೋಣ, ಪ್ರೀತಿಸೋಣ, ಪ್ರೇಮಿಸೋಣ, ಮದುವೆ ಆಗೋಣ" ಎಂಬಂತಹ ಒಬ್ಬರನ್ನೊಬ್ಬರು ಮೋಸಗೊಳಿಸುವ ಹಂತದಲ್ಲೇ ಇವೆ.
ಮುಲ್ಲಾ ನಸ್ರುದ್ದೀನ್ ಹಿರಿಯರ ಬಳಿ ತಕರಾರು ತಂದ: "ನನ್ನ ಹೆಂಡತಿ ಮನೇಲೇ ಕೋಳಿಗಳ ಇಟ್ಕೊಂಡಿದಾಳೆ ಎಲ್ಲಿ ಅಂದ್ರೆ ಅಲ್ಲಿ ಗಲೀಜು. ಕಾಲು ಕಾಲಿಗೆ ಹಂದಿಗಳು, ಬರೀ ವಾಸನೆ. ಇಲ್ಲಿ ಹೇಗಿರೋದು?". ಸರಿ ಮುಲ್ಲಾ ನಸ್ರುದ್ದೀನ್ "ಕಿಟಕಿ ಎಲ್ಲ ತೆಗೆದಿಡು ಒಳ್ಳೇ ಗಾಳಿ ಬರುತ್ತೆ.". ಮುಲ್ಲಾ ನಸ್ರುದ್ದೀನ್ ಹೇಳಿದ, "ಅದು ಹೇಗೆ ಸಾಧ್ಯ, ನನ್ ಬಾತುಕೋಳಿ ಎಲ್ಲ ಹಾರಿಹೋಗುತ್ತೆ!" ಹೀಗಿದೆ ವಿಶ್ವಶಾಂತಿಯ ಕತೆ.
ವ್ಯಕ್ತಿಗತವಾಗಿ ನಾನು ಕಂಡುಕೊಂಡಂತೆ "ನನಗೆ ಶಾಂತಿಯೇ ಸರ್ವಸ್ವ. ನನ್ನ ಎಲ್ಲ ಕ್ರಿಯೆಗಳು ಶಾಂತಿಕೇಂದ್ರಿತವಾಗಿರಬೇಕು. ಯಾವುದು ಶಾಂತಿಗೆ ಅನುವು ಮಾಡಿಕೊಡುವುದಿಲ್ಲವೊ ಅದು ತ್ಯಾಜ್ಯನೀಯ."
ವಿಶ್ವದಲ್ಲಿ, ನಮ್ಮಲ್ಲಿ, ಎಲ್ಲ ಜೀವಿಗಳಲ್ಲಿ, ಎಲ್ಲವುಗಳಲ್ಲಿ ಶಾಂತಿ ಮೂಡಲಿ. ಅದು ಬಾಯ್ಮಾತಾಗದೆ ಆತ್ಮಪರಿವರ್ತನೆ ಆಗಲಿ.
ಕಾಮೆಂಟ್‌ಗಳು