ಚಿಂತಲಪಲ್ಲಿ ಕೃಷ್ಣಮೂರ್ತಿ
ಚಿಂತಲಪಲ್ಲಿ ಕೃಷ್ಣಮೂರ್ತಿ
ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಚಿಂತಲಪಲ್ಲಿ ಪರಂಪರೆ ಕುರಿತು 800 ವರ್ಷಗಳಷ್ಟು ಇತಿಹಾಸ ಕಾಣಲು ಸಿಗುತ್ತದೆ. ಕಳೆದ ಶತಮಾನದಲ್ಲಿ ಸಹಾ ಚಿಂತಲಪಲ್ಲಿ ವೆಂಕಟರಾಯರು ಹಾಗೂ ರಾಮಚಂದ್ರರಾಯರು ಮೈಸೂರು ಸಾಮ್ರಾಜ್ಯದಲ್ಲಿ ಪಡೆದ ಖ್ಯಾತಿಯ ಬೆನ್ನಲ್ಲೇ ಅದೇ ಕಾಲದಲ್ಲಿ ಆ ಪರಂಪರೆಯ ಬೆಳಕಿನಲ್ಲಿ ಬೆಳಗಿದ ವಿದ್ವನ್ಮಣಿಗಳ ಸಾಲು ಸಹಾ ಇತಿಹಾಸದಷ್ಟು ದೀರ್ಘವಾದದ್ದೇ. ವಿದ್ವಾನ್ ಚಿಂತಲಪಲ್ಲಿ ವೆಂಕಟಾಚಲಯ್ಯ, ಚಿಂತಲಪಲ್ಲಿ ಶೇಷಗಿರಿರಾವ್, ಚಿಂತಲಪಲ್ಲಿ ವೆಂಕಟರಾಮಯ್ಯ, ಚಿಂತಲಪಲ್ಲಿ ಸುಬ್ಬರಾವ್, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ರಂಗರಾವ್… ಹೀಗೆ ಸಾಗುತ್ತ ಹೋದಂತೆ ಅದರಲ್ಲಿ ಗಾಯನ, ಬೋಧನೆಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಮತ್ತೊಂದು ಹೆಸರು ಗಾನಸುಧಾನಿಧಿ, ಕರ್ನಾಟಕ ಕಲಾಶ್ರೀ ಚಿಂತಲಪಲ್ಲಿ ಕೃಷ್ಣಮೂರ್ತಿಯವರದ್ದು ಎದ್ದು ತೋರುವಂಥದ್ದು. ಚಿಂತಲಪಲ್ಲಿ ಪರಂಪರೆಯನ್ನು ಆ ಮನೆತನದ ಹೆಣ್ಣುಮಕ್ಕಳು ಹಾಗೂ ಗಂಡು ಮಕ್ಕಳ ಪರಂಪರೆಯವರಿಬ್ಬರೂ ಬೆಳೆಸಿದರು, ಪೋಷಿಸಿದರು.
ಚಿಂತಲಪಲ್ಲಿ ವೆಂಕಟರಾಯರ ಜೇಷ್ಠ ಪುತ್ರಿ ವೆಂಕಟಲಕ್ಷ್ಮಮ್ಮ ಕೃಷ್ಣಮೂರ್ತಿಯವರ ತಾಯಿ. ತಂದೆಯವರಾದ ಗುಡಿಬಂಡೆಯ ವೇ.ಬ್ರ.ಶ್ರೀ ಅಶ್ವತ್ಥನಾರಾಯಣರಾಯರ ತಾಯಿ ಸಹಾ ಚಿಂತಲಪಲ್ಲಿಯವರೇ. ವೆಂಕಟರಾಯರ ಚಿಕ್ಕಪ್ಪ ಭಾಸ್ಕರರಾವ್ ಎಂಬುವವರ ಮಗಳು ಅಶ್ವತ್ಥಮ್ಮನವರು ಅಶ್ವತ್ಥನಾರಾಯಣರಾಯರ ತಾಯಿ. ಹೀಗಾಗಿ ತಾಯಿ, ತಂದೆ ಎರಡೂ ಕಡೆ ಸಂಗೀತ ಕುಟುಂಬದ ಹಿನ್ನೆಲೆ ಹಾಗೂ ರಕ್ತಗತವಾಗಿ ಬಂದ ಸಂಗೀತ ಕೃಷ್ಣಮೂರ್ತಿಗಳಿಗೆ ಅಯಾಚಿತವಾಗಿ ಬಂದ ಭಾಗ್ಯವಾಗಿದ್ದವು .
ಕೃಷ್ಣಮೂರ್ತಿ ಅವರು 1920ರಲ್ಲಿ ಚಿಂತಲಪಲ್ಲಿಯಲ್ಲಿ ತಾತನ ಮನೆಯಲ್ಲಿ ಜನಿಸಿದರು. ನಾಲ್ಕು ಜನ ಸಹೋದರರು, ನಾಲ್ಕು ಜನ ಸಹೋದರಿಯನ್ನು ಹೊಂದಿದ ದೊಡ್ಡ ಕುಟುಂಬ ಕೃಷ್ಣಮೂರ್ತಿಯವರದ್ದು. ಅಶ್ವತ್ಥನಾರಾಯಣರಾಯರ ಜೇಷ್ಠಪುತ್ರರಾಗಿ ಜನಿಸಿದ ಇವರು ಬೆಳೆದದ್ದು,ಕಲಿತದ್ದು ಎಲ್ಲಾ ತಾತನವರ ಹಾಗೂ ಮಾವನವರ ಬಳಿಯಲ್ಲೇ.
ಕೃಷ್ಣಮೂರ್ತಿಯವರ ತಾಯಿಯ ತಮ್ಮ ಆಸ್ಥಾನ ವಿದ್ವಾನ್ ಚಿಂತಲಪಲ್ಲಿ ರಾಮಚಂದ್ರರಾಯರಿಗೆ ಅಲ್ಲಿ ಮದುವೆಯಾದ ಹೊಸತು. ತಮಗೆ ಇನ್ನೂ ಮಕ್ಕಳಿಲ್ಲದ ಕಾಲದಲ್ಲಿ ಅಕ್ಕನ ಮಗ ಕೃಷ್ಣಮೂರ್ತಿ, ಅವರ ಬಾಯಲ್ಲಿ ಕಿಟ್ಟು ಆಗಿಹೋದ. ಆತನನ್ನು ಮೂರನೇ ವಯಸ್ಸಿನಲ್ಲೇ ತಮ್ಮ ಮನೆಗೆ ಕರೆತಂದು ಸಾಕಿದ್ದೇ ಅಲ್ಲದೆ ಚೌಲ ಮಾಡಿಸಿದ್ದು ಸಹಾ ಮಾವನವರಾದ ರಾಮಚಂದ್ರರಾಯರೇ. ರಾಮಚಂದ್ರರಾಯರ ಶ್ರೀಮತಿಯವರಾದ ಲಕ್ಷ್ಮೀದೇವಮ್ಮ ಕಿಟ್ಟುವಿನ ಬಾಯಲ್ಲಿ ಅತ್ತಿಗೆ. ತಮ್ಮ ಮಕ್ಕಳಿಗಿಂತ ಮುಂಚಿನವನಾದ ಕಿಟ್ಟುವಿಗೆ ಎಣ್ಣೆ ಒತ್ತಿ ನೀರೆರೆದು ಮುಚ್ಚಟೆಯಾಗಿ ಸಾಕಿ ಶೇಷಾದ್ರಿಪುರದ ಆರ್ಯ ವಿದ್ಯಾಶಾಲೆಗೆ ಸೇರಿಸಿದರು. ಅಲ್ಲಿ ಎಲ್.ಎಸ್. ನವರೆಗೆ ಓದಿದ ನಂತರ ಶೇಷಾದ್ರಿಪುರಂ ಹೈಸ್ಕೂಲ್‌ನಲ್ಲಿ ಎಸ್.ಎಸ್.ಎಲ್.ಸಿ. ಯವರೆ ವಿದ್ಯಾಭ್ಯಾಸ, ಇದಿಷ್ಟು ಅವರ ಲೌಕಿಕಕ ವಿದ್ಯಾಭ್ಯಾಸದ ವಿವರಗಳು.
ಕಿಟ್ಟುವಿನ ತಾಯಿ ಸೊಗಸಾಗಿ ನಳಚರಿತ್ರೆ, ಧ್ರುವಚರಿತ್ರೆ ಮುಂತಾದವನ್ನು ಹಾಡುತ್ತಿದ್ದವರು. ತಾಯಿ ಮತ್ತೆ ತಾತ ವೆಂಕಟರಾಯರ ಬಳಿ ಬಾಲಪಾಠಗಳು, ಮುಂದೆ ಉನ್ನತ ಶಿಕ್ಷಣವೆಲ್ಲ ಮಾವನವರ ಬಳಿ. ಮನೆಯಲ್ಲಿ ಇಪ್ಪತ್ತುನಾಲ್ಕು ಗಂಟೆಯೂ ಸಂಗೀತವೇ. ಕಿಟ್ಟುವಿನ ಜೊತೆಗೆ ಪಾಠ ಕಲಿಯುತ್ತಿದ್ದ ಇನ್ನಿತರರಲ್ಲಿ ವೆಂಕಟರಾಯರ ತಮ್ಮನ ಮಗ ವೆಂಕಟರಾಮಯ್ಯ, ಚಿಕ್ಕಕರಿಗಿರಿರಾವ್, ದೊಡ್ಡಕರಿಗಿರಿರಾವ್ ಶ್ರೀರಂಗನಹಳ್ಳಿ ನರಸಿಂಹ, ನಾದಸ್ವರ ಮುಂತಾದವರು. ಬೆಳಿಗ್ಗೆ ನಾಲ್ಕು ಗಂಟೆಗೆಲ್ಲಾ ತಾತನವರು ಎದ್ದು, ಭುಜದ ಮೇಲಿನ ಶಲ್ಯವನ್ನು ಚಾಟಿಯಂತೆ ಹಿಡಿದು ಸಾಲಾಗಿ ಮಲಗಿದ್ದ ಶಿಷ್ಯರನ್ನೆಲ್ಲಾ ಅದರಲ್ಲಿ ಮೃದುವಾಗಿ ಬಡಿದು ಎಬ್ಬಿಸುತ್ತಿದ್ದರು. ಮನೆಯಲ್ಲಿ ಅಥವಾ ಮನೆಯ ಹತ್ತಿರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಅಕಾರ ಮತ್ತು ಕಟ್ಟುನಿಟ್ಟಿನ ಸಂಗೀತ ಸಾಧನೆ.
ಪಾಠ ಅಷ್ಟಾದರೆ ಕೇಳ್ಮೆ ಇನ್ನಷ್ಟು. ಮಾವನವರ ಮಲ್ಲೇಶ್ವರದ ಮನೆಗೆ, ತಾತನ ಊರಿನ ಚಿಂತಲಪಲ್ಲಿಯ ಮನೆಗೆ ನೂರಾರು ಜನ ವಿದ್ವಾಂಸರು ಬರುತ್ತಿದ್ದರು. ಅನೇಕ ಪಕ್ಕವಾದ್ಯಗಾರರುಗಳ ಸಹವಾಸ ಮತ್ತು ಸಾಹಚರ್ಯ ಲಭ್ಯವಿತ್ತು.
ಕೃಷ್ಣಮೂರ್ತಿಗಳ ವೇದಿಕೆಯ ಪ್ರವೇಶವಾದದ್ದು ಅವರ 13ನೆಯ ವಯಸ್ಸಿನಲ್ಲಿ, ಅಲಸೂರು ಪೇಟೆ ರಾಮಮಂದಿರದಲ್ಲಿ. ಅಂದು ಬಿ.ಟಿ. ರಾಜಣ್ಣ ಮತ್ತು ಪುಟ್ಟಾಚಾರ್ಯರ ವಾದ್ಯ ಸಹಕಾರ. ಆಗ ಪ್ರಾರಂಭವಾದ ಕಚೇರಿ ಅವರ ಜೀವನದ ಅಂತಿಮ ಕ್ಷಣದವರೆಗೆ ಮುಂದುವರೆಯಿತು. ಪುಟ್ಟಾಚಾರ್ಯರೊಡನೆಯ ಸ್ನೇಹವಂತೂ ಅವಿಚ್ಛಿನ್ನವಾದದ್ದು. ಮುಂದೆ ಎಲ್ಲೆ ಕಚೇರಿಯಾಗಲಿ ಕಿಟ್ಟು ಹಾಡಿಕೆ ಪುಟ್ಟಾಚಾರ್ ಮೃದಂಗ. ಈ ಕಿಟ್ಟು, ಪುಟ್ಟು ಜೋಡಿ ಬಹಳಕಾಲ ಮುಂದುವರೆಯಿತು. ಹಾಗೆಯೇ ತದನಂತರದ ಕಾಲದಲ್ಲಿ ಆರ್.ಆರ್. ಕೇಶವಮೂರ್ತಿ, ಬಿ.ಟಿ. ರಾಜಣ್ಣ, ಚಿಕ್ಕಬಳ್ಳಾಪುರದ ಗೋವಿಂದಸ್ವಾಮಿ, ಎಂ.ಎಸ್. ಸುಬ್ರಹ್ಮಣ್ಯಂ, ತುಮಕೂರು ರಾಮಯ್ಯ, ಸುಬ್ರಹ್ಮಣ್ಯ ಶಾಸ್ತ್ರಿ, ಎ.ವಿ. ವೆಂಕಟರಮಣಯ್ಯ, ಶೇಷಗಿರಿರಾವ್ (ರಾಜಣ್ಣಿ) ಇವರುಗಳು ಪಿಟೀಲಿನಲ್ಲಿ ಸಹಕಾರವಾದರೆ ಅಯ್ಯಾಮಣಿ, ಕುಂಜುಮಣಿ, ಪಳನಿಸ್ವಾಮಿ, ಎಂ.ಎಲ್. ವೀರಭದ್ರಯ್ಯ, ರಾಮಾಚಾರ್ ಹೆಚ್.ಪಿ. ಎಂ.ಎಸ್. ರಾಮಯ್ಯ, ಟಿ.ಎ.ಎಸ್. ಮಣಿ, ವಯ್ಯಾಪುರಿ ಮುಂತಾದವರು ಮೃದಂಗದಲ್ಲಿ ಆಗ್ಗೆ ವೇದಿಕೆಗಳಲ್ಲಿ ಇವರ ಜೊತೆ ವಿಜೃಂಭಿಸುತ್ತಿದ್ದವರು. ಜೊತೆಗೆ ಆಗಿನ ಅನೇಕ ವರ್ಧಿಷ್ಣು ಕಲಾವಿದರನ್ನೂ ತಮ್ಮೊಡನೆ ಹಾಕಿಕೊಂಡು ನುಡಿಸಲು ಪ್ರೋತ್ಸಾಹಿಸಿ ಒಂದು ಹಂತಕ್ಕೆ ತರಲು ಕಾರಣಕರ್ತರು ಕೃಷ್ಣಮೂರ್ತಿಗಳು. ವಿದ್ವಾನ್ ಎಸ್. ಶೇಷಗಿರಿರಾವ್ ಪಿಟೀಲು, ವಿದ್ವಾನ್ ಟಿ.ಎಸ್. ಚಂದ್ರಶೇಖರ್ ಮೃದಂಗ, ವಿದ್ವಾನ್ ಟಿ.ಎಸ್. ಕೃಷ್ಣಮೂರ್ತಿ ಪಿಟೀಲು, ವಿದ್ವಾನ್ ಗುಂಡಪ್ಪ ಮೃದಂಗ, ವಿದ್ವಾನ್ ಟಿ.ಎ.ಎಸ್. ಮಣಿ ಮೃದಂಗ, ಇವರೆಲ್ಲರಿಗೂ ಕೃಷ್ಣಮೂರ್ತಿಯವರು ಸ್ಮರಣೀಯರೆನಿಸಿದವರು. ಇದಲ್ಲದೆ ಹೊರರಾಜ್ಯದ ಎಂ.ಎಸ್. ಗೋಪಾಲಕೃಷ್ಣನ್, ಮದ್ರಾಸ್ ಕಣ್ಣನ್, ಕೆ. ಕಮಲಾಕರರಾವ್ ಮುಂತಾದ ಮಹಾನ್ ವಿದ್ವಾಂಸರೂ ಚಿಂತಲಪಲ್ಲಿ ಕೃಷ್ಣಮೂರ್ತಿ ಅವರ ಗಾಯನಕ್ಕೆ ತಾವು ನೀಡಿದ ಪಕ್ಕವಾದ್ಯ ಸಂಗೀತದ ಅನುಭವ ವಿಶಿಷ್ಟವಾದದ್ದು ಎಂದು ಭಾವಿಸಿದ್ದರು.
ಕೃಷ್ಣಮೂರ್ತಿಗಳು ತಮ್ಮ ಸಹಪಾಠಿ ಹಾಗೂ ಭಾವನವರೂ ಆದ ವಿದ್ವಾನ್ ಚಿಂತಲಪಲ್ಲಿ ವೆಂಕಟರಾಮಯ್ಯನವರ ಜೊತೆ ದ್ವಂದ್ವ ಗಾಯನವನ್ನು ಸುಮಾರು 30 ವರ್ಷಗಳ ಕಾಲ ಚಿಂತಲಪಲ್ಲಿ ಸಹೋದರರು ಎಂಬ ಅಭಿಧಾನದಿಂದ ಹಾಡಿದ್ದುಂಟು. ಆಗ್ಗೆ ಈ ಸಹೋದರರು ಹಾಡಲು ಕುಳಿತರೆ ಆ ಹುರುಪಿನ ಗಾಯನ, ಪೈಪೋಟಿ, ಹತ್ತಾರು ಕಡೆ ಕ್ಲಿಷ್ಟವಾದ ಎಡುಪುಗಳು ಇದರಿಂದ ಎಷ್ಟೋಬಾರಿ ಈ ಇಬ್ಬರ ಗಾಯನಕ್ಕೆ ಪಕ್ಕವಾದ್ಯಗಾರರೇ ನುಡಿಸಲು ಹಿಂದೇಟು ಹಾಕುತ್ತಿದ್ದುದುಂಟು. ಮುಂದೆ ವೆಂಕಟರಾಮಯ್ಯನವರ ವಿದೇಶ ಪ್ರವಾಸ, ತದನಂತರದ ಅವರ ಅಕಾಲಿಕ ಮರಣದಿಂದಾಗಿ ಈ ಜೋಡಿ ಭಿನ್ನವಾಯಿತು.
ಕೃಷ್ಣಮೂರ್ತಿಗಳ ಹಾಡಿಕೆ ತುಂಬಾ ಗಂಭೀರವಾದ ಗಮಕಯುಕ್ತವಾದ ಶೈಲಿಯಿಂದ ಕೂಡಿರುವಂಥದ್ದಾಗಿತ್ತು. ತಾಳಭಾಗದಲ್ಲಿ ಅವರಿಗಿದ್ದ ಖಚಿತತೆ ನಿಖರತೆಗಳು, ಕೃತಿಗಳನ್ನು ಹಾಡುವಾಗ ಅವರು ತೆಗೆದುಕೊಳ್ಳುತ್ತಿದ್ದ ಖಚಿತವಾದ ಕಾಲಪ್ರಮಾಣಗಳು ಕಚೇರಿಗೆ ವಿಶೇಷವಾದ ತೂಕವನ್ನು ನೀಡುತ್ತಿದ್ದವು. ಕಲ್ಪನಾಸ್ವರಗಳಲ್ಲಂತೂ ಅವರಿಗಿದ್ದ ಪಾಂಡಿತ್ಯ ಅಸಾಧಾರಣವಾದದ್ದು. ಸರ್ವಲಘುವಿನ ಪುಂಖಾನು ಪುಂಖವಾದ ಸ್ವರಗಳು, ಕೃತಿಗಳಲ್ಲಿ ವಾದ್ಯಗಾರರು, ಕೇಳುಗರು ಊಹಿಸಿರದಂತಹ ಎಡೆಗಳಲ್ಲಿ ಜಾಣತನದಿಂದ ಕೂಡಿರುವ ಎಡುಪುಗಳು ಗಾಯನಕ್ಕೆ ಮೆರುಗನ್ನು ನೀಡುತ್ತಿದ್ದವು.
ಪಲ್ಲವಿಯ ಗಾಯನದಲ್ಲಂತೂ ಚಿಂತಲಪಲ್ಲಿ ಕಲಾವಿದರ ಶ್ರೇಷ್ಠತೆಯನ್ನು ಇವರೂ ಉಳಿಸಿ ಬೆಳೆಸಿಕೊಂಡು ಬಂದರು. ಗಾನಕಲಾ ಪರಿಷತ್ತಿನಲ್ಲಿ 5 ಕಳೆಗೆಳ ಒಂದು ಪಲ್ಲವಿಯನ್ನು ಅತಿ ಕ್ಲಿಷ್ಟವಾಗಿ ಹಾಡಿದ ರೀತಿಯನ್ನು ಶ್ಲಾಘಿಸುತ್ತ ಡಾ.ಬಿ. ದೇವೇಂದ್ರಪ್ಪನವರು “35 ತಾಳಗಳಲ್ಲೇ ಎಷ್ಟು ಅದ್ಭುತವಾಗಿ ಪಲ್ಲವಿಯನ್ನು ಹಾಡಬಹುದು ಎನ್ನುವ ವಿಷಯ ಬೆರಗುಗೊಳಿಸುವಂಥದ್ದು. ಇಂದು ಈ ಪಲ್ಲವಿಗೆ ತನಿ ನುಡಿಸಲು ಅವಕಾಶ ಬೇಡ, ಏಕೆಂದರೆ ಇವರು ಹಾಡಿದ್ದಕ್ಕೆ ತನಿ ನುಡಿಸುವುದೂ ಒಂದು ಸಾಹಸವಾದೀತು.” ಎಂದಿದ್ದುಂಟು. ಕಚೇರಿಯಲ್ಲಿ ಕೂರುವಾಗಲೂ ಸಿಂಹದಂತೆ ಒಂದು ಚೂರೂ ಬಗ್ಗದೆ ನೇರವಾಗಿ ವೇದಿಕೆಗೆ ಕಳೆಯೇರುವಂತೆ ಅವರು ಕೂರುತ್ತಿದ್ದ ನಿಲುವು, ಸದೃಢವಾಗಿದ್ದ ಆ ದೇಹ, ನಗುಮುಖದ ಮೇಲೆ ರಾರಾಜಿಸುತ್ತಿದ್ದ ವಿಭೂತಿ ಕುಂಕುಮಗಳು ದೈವೀಕವಾದ ವಾತಾವರಣವನ್ನು ನೀಡುತ್ತಿದ್ದವು.
ಕೃಷ್ಣಮೂರ್ತಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಗೋವಾ ಇಲ್ಲೆಲ್ಲಾ ಸಂಚರಿಸಿ ನೀಡಿದ ಕಚೇರಿಗಳಿಗಾಗಿ, ಅವರ ಸಂಗೀತ ಸೇವೆಗಾಗಿ ಸಂದ ಪ್ರಶಸ್ತಿ ಸನ್ಮಾನಗಳು ಹಲವಾರು. ಡಾ.ಬಿ. ದೇವೇಂದ್ರಪ್ಪನವರು ಮಾರುತಿ ಸೇವಾ ಸಮಾಜದಿಂದ ನೀಡಿದ ಗಾನಭೂಷಣ, ಸಿದ್ಧಗಂಗಾ ಸಂಸ್ಥಾನದಿಂದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ನೀಡಿದ ಗಾಯಕ ಚತುರ, ಶ್ರೀ ತ್ಯಾಗರಾಜ ಗಾನ ಸಭಾದಿಂದ ಕಲಾಭೂಷಣ, ಆದರ್ಶ ಭಾರತೀಯ ಸಾಂಸ್ಕೃತಿಕ ಸಂಸತ್ ನೀಡಿದ ಗಾಯನ ಲಯ ಸಾಮ್ರಾಟ್ ಹಾಗೆಯೇ ಗಾನವಿದ್ಯಾ ನಿಧಿ, ಗಾನಸುಧಾ ನಿಧಿ, ಗಂಧರ್ವಕಲಾನಿಧಿ, ರಾಜ್ಯ ಸಂಗೀತ ನೃತ್ಯ ಅಕಾಡಮಿಯ 1993-94ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗಳು ಗಮನಾರ್ಹವಾದವು.
ಕೃಷ್ಣಮೂರ್ತಿಗಳಿಗೆ ಕೀರ್ತಿ ತಂದ ಇನ್ನೊಂದು ಖ್ಯಾತಿಯೆಂಧರೆ ಅವರ ಸಂಗೀತ ಬೋಧನೆ. ಗುರುಗಳ ಹೆಸರನ್ನು ಶಾಶ್ವತವಾಗಿಸುವಂತಹ ನೂರಾರು ಶಿಷ್ಯರನ್ನು ಸಂಗೀತಲೋಕಕ್ಕೆ ಅವರು ನೀಡಿದರು. ಕಲಾ ಪ್ರಪಂಚದಲ್ಲಿ ಆಗ ಪ್ರಸಿದ್ಧಿಯಲ್ಲಿದ್ದ ದಿ. ಬಂಗಾರು ಪೇಟೆ ಕೃಷ್ಣಮೂರ್ತಿ, ಸಿ.ಕೆ. ತಾರಾ. ಖ್ಯಾತ ಹಿನ್ನೆಲೆಗಾಯಕಿ ದಿ. ಬೆಂಗಳೂರು ಲತಾ, ಖ್ಯಾತ ನಟಿ ಬಿ. ಸರೋಜಾದೇವಿ, ಖ್ಯಾತ ಕಲಾವಿದೆ ಪ್ರಸನ್ನಕುಮಾರಿ ಸತ್ಯಂ, ಲೇಖಕಿ ಶುಭಾಂಗಿ ಆರ್. ಗೊರೂರು, ಪಿಟೀಲು ವಾದಕ ಕೃಷ್ಣಮೂರ್ತಿ, ರಮೇಶ್, ಪಂಚಧಾರಾ ಸಹೋದರಿಯರು, ಕೃಷ್ಣಮೂರ್ತಿಯವರ ತಮ್ಮಂದಿರಾದ ಗುಡಿಬಂಡೆ ಸಹೋದರರು, ಅವರ ಮಕ್ಕಳಾದ ಚಿಂತಲಪಲ್ಲಿ ಕೆ. ರಮೇಶ್, ಸುಬ್ಬ ಗಂಗಾ, ಅಳಿಯ ಶ್ರೀನಿವಾಸ್ ಮುಂತಾದವರು ಸಂಗೀತ ಪ್ರಪಂಚಕ್ಕೆ ಕೃಷ್ಣಮೂರ್ತಿಯವರು ಅರ್ಪಿಸಿರುವ ಕಲಾ ಕುಸುಮಗಳು.
ದಾಸರ ಕೃತಿಗಳನ್ನು ಹಾಗೂ ರಾಘವೇಂದ್ರ ಸ್ವಾಮಿಗಳ ಮೇಲೆ ದೇವರನಾಮಗಳನ್ನೂ ಹಾಡುವುದರಲ್ಲಿ ಕೃಷ್ಣಮೂರ್ತಿ ಅವರಿಗೆ ಎಲ್ಲಿಲ್ಲದ ತಲ್ಲೀನತೆ-ಭಕ್ತಿ, ಭಾವ. ಅಂದಿನ ಮೈಸೂರು ಆಕಾಶವಾಣಿ, ಬೆಂಗಳೂರು ಆಕಾಶವಾಣಿಗಳಲ್ಲೂ ಇವನ್ನು ಹಾಡಿದ್ದ ಖ್ಯಾತಿ ಅವರದ್ದು. ಇವರು ಹಾಡಿರುವ ದೇವರನಾಮಗಳ ದಾಸವಾಣಿ ಹಾಗೂ ಶುಭದಿನ ಎಂಬ ಹೆಸರಿನ ಧ್ವನಿಸುರುಳಿಗಳೂ ಹೊರಬಂದವು.
ಹಾಡುತ್ತ ಹಾಡುತ್ತಲೇ ಭಗವಂತನನ್ನು ಸೇರಬೇಕೆಂಬ ಆಕಾಂಕ್ಷೆ ಹೊಂದಿದ್ದ ಚಿಂತಲಪಲ್ಲಿ ಕೃಷ್ಣಮೂರ್ತಿ ಅವರು ಘಾಟಿಯ ಸುಬ್ರಹ್ಮಣ್ಯದಲ್ಲಿ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ 1996ರ ಡಿಸೆಂಬರ್ 26ರಂದು ಸುಬ್ರಹ್ಮಣ್ಯನ ಪಾದತಲದಲ್ಲೇ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.
Great musician Chintalapalli Krishnamurthy
ಕಾಮೆಂಟ್‌ಗಳು