ಉಧಾಮ್ ಸಿಂಗ್
ಉಧಾಮ್ ಸಿಂಗ್
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಉಧಾಮ್ ಸಿಂಗ್ ಭಾರತೀಯ ಸ್ವಾಭಿಮಾನದ ಪ್ರತೀಕ. ಜಲಿಯನ್ ವಾಲಾಬಾಗ್ ಮಾರಣ ಹೋಮಕ್ಕೆ ಕಾರಣನಾದ ನೀಚ ಬ್ರಿಟಿಷ್ ಅಧಿಕಾರಿ ಡೈಯರ್ ಅನ್ನು ಕೊಂದ ಧೀರನೀತ. ಇಂದು ಅವರ ಜನ್ಮದಿನ.
ಉಧಾಮ್ ಸಿಂಗ್ 1899ರ ಡಿಸೆಂಬರ್ 26ರಂದು ಪಂಜಾಬಿನ ಸುನಮ್ ಎಂಬಲ್ಲಿ ಜನಿಸಿದರು. ಇವರ ಬಾಲ್ಯದಲ್ಲೇ ತಂದೆ ನಿಧನರಾದ ಕಾರಣ ಅಮೃತಸರದ ಅನಾಥಾಶ್ರಮದಲ್ಲಿದ್ದು 1918ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ 1919ರಲ್ಲಿ ಅನಾಥಾಶ್ರಮದಿಂದ ಹೊರಬಂದರು.
1919ರ ಏಪ್ರಿಲ್ 13ರಂದು ಜಲಿಯನ್ ವಾಲಾಬಾಗಿನ ಕಿರು ಏಕ ಪ್ರವೇಶದಲ್ಲಿ ಒಳಗೆ ಬಂದು ರೌಲಟ್ ಕಾಯಿದೆಯನ್ನು ವಿರೋಧಿಸಲು ಸಭೆ ಸೇರಿದ್ದವರು 10,000ಕ್ಕೂ ಹೆಚ್ಚು ಮಂದಿ ಪುರುಷರು, ಮಹಿಳೆಯರು ಮತ್ತು ಮಕ್ಕಳು. ಅವರಿಗೆ ಹೊರಹೋಗಲಿಕ್ಕೆ ಸಹಾ ಯಾವುದೇ ಆಸ್ಪದವಿಲ್ಲದ ಹಾಗೆ, ಬ್ರಿಗೇಡಿಯರ್ ಜನರಲ್ ಮೈಕೇಲ್ ಓ ಡೈಯರ್ ಎಂಬ ಅಯೋಗ್ಯ ಅಧಿಕಾರಿಯ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು 15 ನಿಮಿಷಗಳ ಕಾಲ ಗುಂಡಿನ ಮಳೆಗರೆದವು. ಈ ಗುಂಡಿನ ಸುರಿಮಳೆಯಲ್ಲಿ ಕನಿಷ್ಠ 379 ಜನ ಮೃತರಾಗಿ 1200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅನೇಕರು ಅಲ್ಲಿದ್ದ ಬಾವಿಗೆ ಹಾರಿದ ಘಟನೆ ಕೂಡಾ ನಡೆಯಿತು.
ಇದರಿಂದ ನೊಂದ ಹೃದಯಗಳಲ್ಲಿ ಉಧಾಮ್ ಸಿಂಗ್ ಒಬ್ಬರು. ಜನರಲ್ ಡೈಯರ್ ಅನ್ನು ಕೊಲ್ಲಲ್ಲೇಬೇಕು ಎನ್ನುವಂತ ಹಠಕ್ಕೆ ಬಿದ್ದರು. ಇಂಗ್ಲೆಂಡ್ಗೆ ಓದಲು ತೆರಳಿದ ಉಧಾಮ್ ಸಿಂಗ್ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಭಗತ್ ಸಿಂಗ್ ಎಂದರೆ ಅವರಿಗೆ ಅಪಾರ ಅಭಿಮಾನ. ಇಂಗ್ಲೆಂಡಿನಲ್ಲಿದ್ದು ಗಧಾರ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಉಧಾಮ್ ಸಿಂಗ್ 1927ರಲ್ಲಿ ಭಗತ್ ಸಿಂಗ್ ಅವರ ಇಚ್ಛೆಯ ಮೇರೆಗೆ 25 ಜನ ಸಂಗಡಿಗರೊಡನೆ ಭಾರತಕ್ಕೆ ಹಿಂದಿರುಗಿದರು. ಪರವಾನಗಿ ಇಲ್ಲದೆ ಅಪಾರ ಶಸ್ತ್ರಾಸ್ತ್ರ ಹೊಂದಿದ್ದರೆಂದು ಬ್ರಿಟಿಷ್ ಸರ್ಕಾರ ಅವರನ್ನು 1931ರವರೆಗೆ 5 ವರ್ಷ ಸೆರೆವಾಸದಲ್ಲಿರಿಸಿತು. ಜೈಲಿನಿಂದ ಬಿಡುಗಡೆ ಆದಮೇಲೂ ಉಧಾಮ್ ಸಿಂಗ್ ಅವರ ಚಲನವಲನಗಳ ಮೇಲೆ ಬ್ರಿಟಿಷ್ ಆಡಳಿತ ತೀವ್ರ ನಿಗಾ ಇಟ್ಟಿತ್ತು. ಉಧಾಮ್ ಸಿಂಗ್ ಕಾಶ್ಮೀರಕ್ಕೆ ಹೋಗಿ ಅಲ್ಲಿಂದ ಪೋಲೀಸರ ಕಣ್ತಪ್ಪಿಸಿ ಜರ್ಮನಿಗೆ ಹೋಗಿ ಅಲ್ಲಿಂದ 1934ರಲ್ಲಿ ಇಂಗ್ಲೆಂಡ್ ತಲುಪಿದರು.
ಇಂಗ್ಲೆಂಡಿನಲ್ಲಿ ಇಂಜಿನಿಯರ್ ಆಗಿ ಕೆಲಸ ಸಂಪಾದಿಸಿದರಾದರೂ ಮೈಕೇಲ್ ಓ ಡಯರ್ ಅನ್ನು ಮುಗಿಸುವ ಧ್ಯೇಯ ಉಧಾಮ್ ಸಿಂಗ್ ಹೃದಯದಲ್ಲಿ ಮನೆಮಾಡಿತ್ತು. ಜನರಲ್ ಡಯರ್‍ನನ್ನು ಹುಡುಕಾಟ ಮಾಡುತಿದ್ದರು. ಹೀಗೆಯೇ ಹಲವಾರು ದಿನಗಳು ನಡೆದು ಹೋದವು. ಯಾವಾಗಲೂ ಒಂದು ರಿವಾಲ್ವರ್ ಅನ್ನು ಜೊತೆಯಲ್ಲಿಟ್ಟುಕೊಂಡೇ ತಿರುಗಾಡುತ್ತಿದ್ದರು.
ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದು ಆಗಲೇ 21 ವರ್ಷಗಳ ಗತಿಸಿದ್ದವು. ಉಧಾಮ್ ಸಿಂಗ್ ಅವರ ಹುಡುಕಾಟಕ್ಕೂ ಒಂದು ದಿನ ಕಾಲ ಕೂಡಿ ಬಂತು. 1940ರ ಮಾರ್ಚ್ 13ರಂದು ಲಂಡನ್ನಿನ ಕಾಕ್ಸಟಲ್ ಹಾಲಿನಲ್ಲಿ ಮೈಕೇಲ್ ಡಯರ್ ಭಾಷಣ ಕಾರ್ಯಕ್ರಮ ಏರ್ಪಾಡಾಗಿತ್ತು. ಭಾಷಣ ಮುಗಿಯುವ ಸಮಯದಲ್ಲಿ ಉಧಾಮ್ ಸಿಂಗ್ ವೇದಿಕೆಯ ಬಳಿ ಹೋಗಿ ಮೈಕೇಲ್ ಓ ಡಯರ್ನನ್ನು ಗುಂಡಿಟ್ಟು ಹತ್ಯೆ ಮಾಡಿದರು.
ಉಧಾಮ್ ಸಿಂಗ್ ಮುಖದಲ್ಲಿ ಉಗ್ರಸ್ವರೂಪವನ್ನು ನೋಡಿದರೆ ಯಾವುದೇ ಪೊಲೀಸರು ಕೂಡ ಅವನನ್ನು ಬಂಧಿಸಲು ಹೆದರಿದರು. ಆದರೆ ಶಪಥ ಪೂರೈಸಿಕೊಂಡ ತೃಪ್ತಿಯಲ್ಲಿ ಉದ್ಧಾಮಸಿಂಗ್ ತಾವೇ ಶರಣಾಗತರಾದರು.
ನಂತರ ವಿಚಾರಣೆ ನಡೆದು ಉಧಾಮ್ ಸಿಂಗ್ ಅವರನ್ನು ಮರಣದಂಡನೆಗೆ ಗುರಿಪಡಿಸಲಾಯಿತು. 1940ರ ಜುಲೈ 31ರಂದು ಅವರನ್ನು ಗಲ್ಲಿಗೇರಿಸಲಾಯಿತು.
On the birth anniversary of avenger of Jallianwala Bagh Massacre Udham Singh
ಕಾಮೆಂಟ್‌ಗಳು