ಎಚ್. ಎನ್. ಸುರೇಶ್
ಎಚ್. ಎನ್. ಸುರೇಶ್
ಬೆಂಗಳೂರಿನ ಕೇಂದ್ರಭಾಗದಲ್ಲಿರುವ ಭಾರತೀಯ ವಿದ್ಯಾಭವನವು ನಮ್ಮ ನಾಡಿನ ಸಾಂಸ್ಕೃತಿಕ ಕೇಂದ್ರವೂ ಹೌದು. ಭಾರತೀಯ ವಿದ್ಯಾಭವನವು ಜನರಿಗೆ ಆಪ್ತವಾಗಿರುವುದಕ್ಕೆ ಅಲ್ಲಿರುವ ಪ್ರಮುಖರುಗಳ ಆಪ್ತ ರೀತಿ ನೀತಿಗಳೂ ಕಾರಣ. ಇಂತಹ ರಾಯಭಾರಿಗಳಾಗಿ ಗೋಚರಿಸುವ ಪ್ರಮುಖ ವ್ಯಕ್ತಿಗಳಲ್ಲಿ ಎಚ್. ಎನ್. ಸುರೇಶ್ ಒಬ್ಬರು.
ಎಚ್. ಎನ್. ಸುರೇಶ್ ಎಂದರೆ ನನಗೆ ಮೊದಲು ನೆನಪಾಗುವುದು ಅವರ ಸುಮಧುರ ಕಂಠದ, ನಗೆ ಮೊಗದ ಆಪ್ತವೆನಿಸುವ ಸುಸಂಸ್ಕೃತ ಮಾತು. ವೇದಿಕೆಯ ಮೇಲೆ ಅತ್ಯಂತ ಆಪ್ತವಾಗಿ - ಆಕರ್ಷಕವಾಗಿ ವಿಷಯ ಪ್ರಸ್ತುತಿ ಮಾಡುವವರಾಗಿ ಸುರೇಶ್ ನನಗೆ ಸದಾ ಅಚ್ಚುಮೆಚ್ಚು. ಹಾಗೆಯೇ ಯಾವಾಗ ಭವನಕ್ಕೆ ಹೋದರೂ ಅವರೊಡನೆ ಮಾತನಾಡುವ ಕ್ಷಣಗಳೂ ಕೂಡಾ.
ಸುರೇಶ್ ಭಾರತೀಯ ವಿದ್ಯಾಭವನದ ಸಾಂಸ್ಕೃತಿಕ ರಾಯಭಾರಿಯಾಗಿರುವ ಅಲ್ಲಿನ ನಿರ್ದೇಶಕರು ಮಾತ್ರವಲ್ಲ, ಅವರೊಬ್ಬ ಮಹತ್ವದ ಕಲಾವಿದ. ಕಲಾವಿಮರ್ಶಕ. ಅನೇಕ ಸಾಂಸ್ಕೃತಿಕ ಮನಗಳ - ಕಲಾವಿದರ - ಚಟುವಟಿಕೆಗಳ ಸಮನ್ವಯಕಾರರು.
ಎಚ್. ಎನ್. ಸುರೇಶ್ 1950ರ ಅಕ್ಟೋಬರ್ 10ರಂದು ಜನಿಸಿದರು. ತಾಯಿ ಲಕ್ಷ್ಮೀದೇವಮ್ಮ. ತಂದೆ ಡಾ. ಹುಸಕೂರು ನಾರಾಯಣ ರಾಯರು ಅಂದಿನ ಕಾಲದ ಪ್ರಸಿದ್ಧ ಸಮಾಜ ಸೇವಕರು.
ಸುರೇಶ್ ಯುವಕರಾಗಿದ್ದಾಗಲೇ 'ಯೂಥ್ ರೈಟರ್ಸ್ ಅಂಡ್ ಆರ್ಟಿಸ್ಟ್ಸ್ ಗಿಲ್ಡ್' ಎಂಬ ಸಮುದಾಯವನ್ನು ಕಟ್ಟಿ ಅಭಿವ್ಯಕ್ತಿ ಮತ್ತು ಪ್ರದರ್ಶನ ಕಲೆಯ ವಿಸ್ತೃತ ಆಸಕ್ತಿಗಳಿಗೆ ತಮ್ಮನ್ನು ತೆರೆದಿಟ್ಟುಕೊಂಡವರು.
ಸುರೇಶರು ವಾಣಿಜ್ಯ ಪದವಿ ಪಡೆದು ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ತಮ್ಮಲ್ಲಿದ್ದ ಕ್ರಿಯಾಶೀಲ ಕಲಾಭಿರುಚಿಗೆ ಸೂಕ್ತ ಪೋಷಣೆ ಕಂಡುಕೊಂಡವರು. ತಮ್ಮಲ್ಲಿದ್ದ ಚಿತ್ರಕಲಾಭಿರುಚಿಗೆ ಡಾ. ಎಚ್. ಎಮ್. ಹಡಪದರ ಕೆನ್ ಸ್ಕೂಲ್ ಆಫ್ ಆರ್ಟ್ಸನಲ್ಲಿ ವ್ಯವಸ್ಥಿತ ಶಿಕ್ಷಣ ಪಡೆದುಕೊಂಡರು.
ಎಚ್ ಎನ್ ಸುರೇಶ್ ಅವರು ಅನೇಕ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳಲ್ಲಿ ಕಲಾರಸಿಕರ ಮನವನ್ನು ಸೂರೆಗೊಂಡಿದ್ದಾರೆ. ಅವರ ಚಿತ್ರಪ್ರದರ್ಶನಗಳು ಬೆಂಗಳೂರಿನ ಮಾಕ್ಸ್ ಮುಲರ್ ಭವನ, ಅಲಯನ್ಸ್ ಫ್ರಾಂಚಯ್ಸ್, ಲಲಿತ ಕಲಾ ಅಕಾಡಮಿ; ನವದೆಹಲಿಯ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸೊಸೈಟಿ; ಯುನೈಟೆಡ್ ಕಿಂಗ್ಡಂ, ಅಮೆರಿಕ ಸೇರಿದಂತೆ ಹಲವು ರಾಷ್ಟ್ಟಗಳ ಹಲವು ಹೆಸರಾಂತ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಗಳಲ್ಲಿ ಏರ್ಪಟ್ಟಿವೆ.
ಎಚ್. ಎನ್. ಸುರೇಶರು ತಮ್ಮ ವರ್ಣಕಲೆಯಲ್ಲಿ ನಕ್ಷತ್ರಗಳು, ರಾಶಿ ಚಿಹ್ನೆಗಳು, ಅಷ್ಟದಿಕ್ಪಾಲಕರು, ಭಾರತೀಯ ಗ್ರಂಥಗಳು, ಖಗೋಳ ವಿಜ್ಞಾನ, ಜ್ಯೋತಿಷ, ಸಂಗೀತದಲ್ಲಿ ಸಪ್ತಸ್ವರ ಮುಂತಾದ ವಿಶಿಷ್ಟ ಸಂಗತಿಗಳಿಗೆ ರೂಪಕೊಟ್ಟಿರುವುದು ಕಲಾ ವಿದ್ವಾಂಸರು ಮತ್ತು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ, ಭವನದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿರುವ ಸುರೇಶರು, ಲಲಿತ ಕಲಾ ಅಕಾಡಮಿ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಸದಸ್ಯರಾಗಿ, ನೂಪುರ ಭರತ ನಾಟ್ಯ ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಸಹಾ ನಿರತರಾಗಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಸಮೂಹ ಪತ್ರಿಕೆಗಳಲ್ಲಿ ಮತ್ತು ಕಲಾ ಅಕಾಡಮಿಗಳ ಪ್ರಕಟಣೆಗಳಲ್ಲಿ ಸುರೇಶರ ಕಲಾ ವಿಮರ್ಶೆಗಳು ಮತ್ತು ಸಾಂದರ್ಭಿಕ ಲೇಖನಗಳು ಹೆಸರಾಗಿವೆ. ಅವರ ಕಲೆ ಮತ್ತು ಹಲವು ಸಾಂಸ್ಕೃತಿಕ ಮಾತುಕತೆಗಳು ದೂರದರ್ಶನ ಮತ್ತು ಆಕಾಶವಾಣಿಗಳಲ್ಲೂ ಹರಿದಿವೆ.
ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಕಲಾಶ್ರೀ, ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ನೆದರ್ ಲ್ಯಾಂಡ್ ಮೊಬೈಲ್ ಆರ್ಟ್ ಗ್ಯಾಲರಿಯಲ್ಲಿ 'ಮಾತಂಗಿ' ಕಲಾಕೃತಿಗೆ ಅತ್ಯುತ್ತಮ ಕಲಾಕೃತಿಯಾಗಿ ಆಯ್ಕೆ ಮುಂತಾದ ಅನೇಕ ಗೌರವಗಳು ಸಂದಿವೆ. ಎಚ್. ಎನ್. ಸುರೇಶರ ಹೆಸರಿನಲ್ಲಿ ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
ಕಲಾವಿದರೂ, ಸಾಂಸ್ಕೃತಿಕ ರಾಯಭಾರಿಗಳೂ, ಆತ್ಮೀಯರೂ ಆದ ಎಚ್. ಎನ್. ಸುರೇಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birth day of artiste, cultural activist and affectionate H N Suresh Hns Sir
ಕಾಮೆಂಟ್‌ಗಳು