ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೇಖಾ




ರೇಖಾ

ರೇಖಾ ಭಾರತೀಯ ಚಿತ್ರರಂಗ ಕಂಡ ಉತ್ತಮ ಪ್ರತಿಭೆಗಳಲ್ಲಿ ಒಬ್ಬರು.  ಎಂತಹ ಕನಿಷ್ಠ ಪಾತ್ರವೇ ಇರಲಿ ತಮ್ಮನ್ನು ತಾವೇ ಅರ್ಪಿಸಿಕೊಂಡಂತೆ ಅಭಿನಯಿಸುವ ಅಪೂರ್ವ ನಿಷ್ಠೆಯ ಕಲಾವಿದೆ.  

ರೇಖಾ 1954ರ  ಅಕ್ಟೋಬರ್ 10ರಂದು ಜನಿಸಿದರು. ತಮಿಳು ಚಿತ್ರರಂಗದ ಜೆಮಿನಿ ಗಣೇಶನ್ ಮತ್ತು ತೆಲುಗು ಚಿತ್ರರಂಗದ ಪುಷ್ಪವಲ್ಲಿ ಅವರಿಗೆ ಜನಿಸಿದ ರೇಖಾ, ತನಗೆ ಜನ್ಮ ಕೊಟ್ಟವ ತನ್ನನ್ನು ಮಗಳು ಎಂದು ಒಪ್ಪದ ಮಾನಸಿಕ ಬಳಲಿಕೆಯಲ್ಲಿ ಬೆಳೆದು ಬಂದವರು.  ಮತ್ತೊಂದು ರೀತಿಯಲ್ಲಿ ಅವರು,  ತನ್ನ ಬದುಕಿನ ಸಂಬಂಧಗಳನ್ನೂ, ತನ್ನೊಳಗೇ ಇರಿಸಿಕೊಳ್ಳಲೂ ಆಗದೆ ಹೊರಗೆ ಬಿಡಲೂ ಆಗದಂತಹ ಗೊಂದಲದಲ್ಲೇ ತಮ್ಮ ಬದುಕನ್ನು ನಡೆಸಿಕೊಂಡು ಬರಬೇಕಾಯಿತು.   

ಚಿಕ್ಕವಯಸ್ಸಿನಲ್ಲೇ ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚಿದ ರೇಖಾ ಮುಂದೆ ‘ಗೋವಾದಲ್ಲಿ ಸಿ.ಐ.ಡಿ 999’ ಎಂಬ ರಾಜ್ ಕುಮಾರ್ ಅವರ ಜೊತೆಗಿನ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.  ಎಪ್ಪತ್ತರ ದಶಕದವರೆಗೆ ಹಲವು ಚಿತ್ರಗಳಲ್ಲಿ ಗ್ಲಾಮರ್ ಗೊಂಬೆಯಾಗಿ ನಟಿಸಿದ ರೇಖಾ, ಮುಂದೆ ಮೂಡಿಬಂದ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿನ ಶ್ರೇಷ್ಠ ಅಭಿವ್ಯಕ್ತಿಯಿಂದ ಜನಮನವನ್ನು ಸೂರೆಗೊಂಡರು.  

ಹೃಷೀಕೇಶ್ ಮುಖರ್ಜಿಯವರ ‘ಖೂಬ್ ಸೂರತ್’,  ‘ಮುಖ್ಖದ್ದರ್ ಕಾ ಸಿಕಂದರ್’, ‘ಖೂನ್ ಭರಿ ಮಾಂಗ್’, ‘ಖಿಲಾಡಿಯೋಂ ಕಾ ಖಿಲಾಡಿ’ ಅವರಿಗೆ ಪ್ರತಿಷ್ಠಿತ ಫಿಲಂ ಫೇರ್ ಪ್ರಶಸ್ತಿಗಳನ್ನು ತಂದುಕೊಟ್ಟರೆ, ‘ಉಮ್ರಾವ್ ಜಾನ್’ ಚಿತ್ರದಲ್ಲಿನ ಶ್ರೇಷ್ಠ ಅಭಿನಯ ಅವರಿಗೆ ರಾಷ್ಟ್ರೀಯ ಪುರಸ್ಕಾರವನ್ನು ತಂದಿತು.

ಪ್ರಶಸ್ತಿ ಪಡೆದ ಚಿತ್ರಗಳ ಆಚೆಗೆ ಕೂಡಾ ರೇಖಾ  ‘ಘರ್’, ಶ್ಯಾಮ್ ಬೆನಗಲ್ ಅವರ ‘ಕಲಿಯುಗ್’, ಗೋವಿಂದ ನಿಹಲಾನಿ ಅವರ ‘ವಿಜೇತಾ’, ಗಿರೀಶ್ ಕಾರ್ನಾಡರ ‘ಉತ್ಸವ್’, ಗುಲ್ಜಾರ್ ಅವರ ‘ಇಜಾಸತ್’ ಮುಂತಾದ ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು.  

ಸುಮಾರು 180 ಚಿತ್ರಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನೆಲೆಸಿರುವ ರೇಖಾ, ಇಂದಿನ ದಿನಗಳಲ್ಲೂ ಚಲನಚಿತ್ರ ಸಮಾರಂಭಗಳಲ್ಲಿ ಲಕ್ಷಣವಾಗಿ ಸೀರೆಯುಟ್ಟು ಸುಕೋಮಲವಾದ ಅಂಗ ಸೌಷ್ಟವದಿಂದ ಗಮನ ಸೆಳೆಯುತ್ತಾರೆ.  ಸುಂದರವಾಗಿ ನರ್ತಿಸುತ್ತಾರೆ.  ಸುಶ್ರಾವ್ಯವಾಗಿ ಹಾಡುತ್ತಾರೆ. ‘ಯೋಗ’ದ ಅಭ್ಯಾಸವನ್ನು ತಮ್ಮ ಸತತ ಸಂಗಾತಿಯಾಗಿಸಿಕೊಂಡಿರುವ ರೇಖಾ ಅವರ ಕುರಿತು ಪ್ರಕಟವಾಗಿರುವ  ‘ಯೋಗ ಮತ್ತು ದೇಹವೆಂಬ ದೇಗುಲ’  ಪುಸ್ತಕ ಕೂಡಾ ಜನಪ್ರಿಯವಾಗಿದೆ.  ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ. 

ಚಿತ್ರರಂಗವೆಂಬ ಬೂದಿಮುಚ್ಚಿದ ಕೆಂಡದಲ್ಲಿ ಬದುಕು ಎಷ್ಟರಮಟ್ಟಿಗೆ ವ್ಯಥಿತವಾದದ್ದು,  ಅದೂ ನಟಿಯರಿಗೆ ಎಂಬುದು ಚರಿತ್ರೆಯಲ್ಲಿ ಸಾಕಷ್ಟು ಕಾಣಬರುತ್ತದೆ.  ಈ ವಿರುದ್ಧದ ಅಲೆಗಳ ಮಧ್ಯದಲ್ಲಿ ತನ್ನನ್ನು ಸರಿದೂಗಿಸಿಕೊಂಡು ಸಾಕಷ್ಟು ಸಾಧನೆಯನ್ನೂ ಮಾಡಿದ ರೇಖಾ ಅವರು ಭಾರತೀಯ ಚಿತ್ರರಂಗದಲ್ಲಿ ಹಲವು ನಿಟ್ಟಿನಲ್ಲಿ ಗಮನಾರ್ಹರು.  ಅವರ ಬದುಕು ಸುಗಮವಾಗಿ ಸಾಗಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.


On the birth day of great actress of our Indian Cinema Rekha 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ