ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕುಸುಮಾ ಸೊರಬ


 ಮೂಕ ಸಹ್ಯಾದ್ರಿಗೆ ಮಾತು ಕೊಟ್ಟ ಕುಸುಮಕ್ಕ


ಉತ್ತರ ಕನ್ನಡ ಜಿಲ್ಲೆಗೇ ಬೆಳಕಾಗಬಲ್ಲ ಸಂಸ್ಥೆಗಳ ಹಣತೆ ಹಚ್ಚಿಟ್ಟು ಕುಸುಮಕ್ಕ ಎಂದೇ ಪ್ರಖ್ಯಾತರಾದವರು  ಡಾ| ಕುಸುಮಾ ಸೊರಬ.  

ಕುಸುಮಾ 1937ರ ಅಕ್ಟೋಬರ್ 13ರಂದು ಜನಿಸಿದರು.   ಸುಮಾರು ಐದಡಿಯಷ್ಟಿದ್ದ, ಬಡಕಲು ದೇಹ. ಆ ಬಡಕಲು ದೇಹಕ್ಕೆ ಸದಾ ಸುತ್ತಿಕೊಂಡಿರುತ್ತಿದ್ದ ಬಿಳಿ ಸೀರೆ.  ಚರಕದ ಮುಂದೆ ಕೂತು ನೂಲು ನೇಯುತ್ತಿದ್ದರೆ ಗಾಂಧಿಯ ಪರಮಭಕ್ತೆ; ಅದೇ, ಚಳವಳಿಯ ಮಂಚೂಣಿಯಲ್ಲಿ ನಿಂತಿದ್ದರೆ ಕೆಚ್ಚೆದೆಯ ಹೋರಾಟಗಾರ್ತಿ! ಇದು ಡಾ. ಕುಸುಮಾ ಭವಾನಿಶಂಕರ ಅಥವಾ ಸಹ್ಯಾದ್ರಿ ಮಡಿಲಲ್ಲಿನ ಶೋಷಿತ ಸಮಾಜ- ಪರಿಸರದ ದನಿಯಾಗಿದ್ದ ಕುಸುಮಕ್ಕ ಅವರ ನಿಜರೂಪ.

ಈ ಕುಸುಮಕ್ಕ ಅವರ ಬಗ್ಗೆ ಕೆ.ವಿ.ಸುಬ್ಬಣ್ಣ ಒಂದು ಮಾತು ಹೇಳಿದ್ದರು. "ಕುಸುಮಕ್ಕ ದಲಿತ-ರೈತ-ಕನ್ನಡ-ಪರಿಸರ-ಬಳಕೆದಾರ-ಸ್ತ್ರೀ ಚಳವಳಿಗಳಿಗೆ ಒಂದೇ ನೆಲೆ ಕಲ್ಪಿಸಿ, ಅವನ್ನೆಲ್ಲ ಒಗ್ಗೂಡಿಸಿದರು" ಎಂದು. ಕುಸುಮಕ್ಕನ ಬಡಕಲು ದೇಹವನ್ನು ಮೊದಲ ಬಾರಿಗೆ ಕಂಡವರ ಮನದಲ್ಲಿ "ಈ ಮಹಿಳೆ ಇಷ್ಟೆಲ್ಲಾ ಸಾಧನೆ ಮಾಡಿದ್ದಾರಾ?" ಎಂಬ ಪ್ರಶ್ನೆ ಹುಟ್ಟುತ್ತಿತ್ತು.

ಶರಾವತಿ ಬಲದಂಡೆಯ ಕೆರವಳ್ಳಿ ಕುಸುಮಾ ಸೊರಬರ ಪೂರ್ವಿಕರ ಊರು. ಆದ್ದರಿಂದಲೇ ಜಿಲ್ಲೆಯ ಮೇಲೆ, ಊರಿನ ಮೇಲೆ ಅಪಾರ ಪ್ರೀತಿ. ಪರಿಶುದ್ಧ, ಪ್ರಾಮಾಣಿಕ ಬದುಕಿನುದ್ದಕ್ಕೂ ಸೋಲಿನ ಸರಮಾಲೆಯನ್ನು ಧರಿಸಿಯೇ, ಜಿಲ್ಲೆಯ ಕತ್ತಲನ್ನು ಸೀಳಬಲ್ಲ ಹಣತೆಗಳನ್ನು ಹಚ್ಚಿಟ್ಟವರು ಕುಸುಮಕ್ಕ. ಹುಟ್ಟಿದ್ದು ಹುಬ್ಬಳ್ಳಿ, ಬೆಳೆದದ್ದು ಸೊರಬದಲ್ಲಿ. ಆದರೂ ಕರುಳುಬಳ್ಳಿ ಅವರನ್ನು ಇಲ್ಲಿಗೆ ಸೆಳೆತಂದಿತ್ತು. ನರ್ಸ್‌ ಆಗಿ ರಾತ್ರಿ ದುಡಿದು ಎಂ.ಬಿ.ಬಿ.ಎಸ್‌; ಎಂ.ಎಸ್‌. ಓದಿ, ಹಿಮಾಲಯದಲ್ಲಿ ಯೋಗ ನಿಸರ್ಗೋಪಚಾರ, ಆಯುರ್ವೇದ ಕಲಿತು, ಕ್ರಿಶ್ಚಿಯನ್‌ ಆಸ್ಪತ್ರೆಯಲ್ಲಿ ಅನುಭವ ಪಡೆದು, ಹೊನ್ನಾವರ ಕಾಸರಕೋಡಿಗೆ ಬಂದು ವಾಮನ ಪ್ರಭು ಅವರ ಕಟ್ಟಡ ಬಾಡಿಗೆ ಪಡೆದು ‘ಸ್ನೇಹಕುಂಜ’ ಸಂಸ್ಥೆ ಆರಂಭಿಸಿದ್ದರು.  ಇದಲ್ಲದೆ ಸಣ್ಣ ಆಸ್ಪತ್ರೆ ಆರಂಭಿಸಿ ಚಿಕಿತ್ಸೆ ನೀಡುತ್ತ ಗ್ರಾಮೀಣ ಕೈಗಾರಿಕೆ, ಮಹಿಳಾ ಸಂಘಟನೆ ಮೊದಲಾದವುಗಳಲ್ಲಿ ತೊಡಗಿಕೊಂಡರು. ಖಾದಿ ಸೀರೆ ಉಟ್ಟು ಬರಿಗೈ, ಬರಿಗಾಲಿನಲ್ಲಿ ಓಡಾಡುತ್ತ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡಿದ್ದರು.

ಹೊನ್ನಾವರದ ಬಳಿಯ ಕಾಸರಕೋಡ ಕಡಲ ತೀರದಲ್ಲಿ ಸರಕಾರದಿಂದ ಭೂಮಿ ಪಡೆದು ಮುಂಬಯಿ, ಬೆಂಗಳೂರುಗಳಿಂದ ಹಣ ಬೇಡಿ ತಂದು ವಿವೇಕಾನಂದ ಆರೋಗ್ಯಧಾಮ ಕಟ್ಟಿದರು. ಜಿಲ್ಲೆಯ ಪರಿಸರ ಉಳಿಸಿಕೊಳ್ಳಲು ಪ್ರಾಮಾಣಿಕ ಹೋರಾಟ ನಡೆಸಿದ ಕುಸುಮಕ್ಕನಂತಹ ಇನ್ನೊಬ್ಬರನ್ನು ಜಿಲ್ಲೆ ಇನ್ನೂ ಕಂಡಿಲ್ಲ. ಶರಾವತಿ ಟೇಲರಿಸ್‌, ಕೈಗಾ, ಅಘನಾಶಿನಿ ಬೃಹತ್ ಯೋಜನೆಗಳು ಕುಸುಮಕ್ಕನ ಹೋರಾಟದಿಂದಾಗಿ ವಿಳಂಬವಾಗಿ ಆರಂಭವಾದವು. ಅವರ ಹೋರಾಟಕ್ಕೆ ಗೆಲುವಾಗದಿದ್ದರೂ ಪರಿಸರ ಜಾಗೃತಿಯಾಯಿತು. ಕನಿಷ್ಠ ಹಾನಿಯೊಂದಿಗೆ ವಿಶೇಷ ಕಾಳಜಿಯಿಂದ ಯೋಜನೆಯನ್ನು ಜಾರಿಗೊಳಿಸಬೇಕಾಯಿತು. ಕುಸುಮಕ್ಕ 'ಪಶ್ಚಿಮಘಟ್ಟ ಉಳಿಸಿ' ಪಾದಯಾತ್ರೆ ಸಂದರ್ಭದಲ್ಲಿ ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಕೂಡ ಕೆಲಸ ಮಾಡಿದ್ದರು. ಅಲೋಪಥಿಯ ಕಡು ವಿರೋಧಿಯಾಗಿದ್ದ ಕುಸುಮಕ್ಕ ನಿಸರ್ಗೋಪಚಾರ , ಯೋಗ, ಆಯುರ್ವೇದದ ಸಂಯೋಜನೆಯಿಂದ ಉತ್ತಮ ಪರಿಣಾಮ ಪಡೆಯಬಹುದು ಎಂಬುದನ್ನು ಆ ಕಾಲದಲ್ಲಿ ಸಿದ್ಧಪಡಿಸಿ ತೋರಿಸಿದ್ದರು.

ತಮ್ಮ ಹುಟ್ಟೂರಾದ ಕೆರವಳ್ಳಿಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಏತ ನೀರಾವರಿ ಯೋಜನೆಯನ್ನು ಸಹಕಾರಿ ತತ್ವದಡಿ ಆಳವಡಿಸಿದ್ದರು. ಶರಾವತಿಕೊಳ್ಳದ ಚಾಪೆ ನೇಯ್ಗೆಗೆ ಆಧುನಿಕ ರೂಪ ಕೊಡಬಯಸಿದ್ದರು. ಹೆಸರಾಂತ ಪರಿಸರ ಹೋರಾಟಗಾರರಾದ ಸುಂದರಲಾಲ ಬಹುಗುಣ, ಮೇಧಾ ಪಾಟ್ಕರ್,  ಡಾ| ಶಿವರಾಮ ಕಾರಂತ ಮೊದಲಾದವರನ್ನು ಕರೆಸಿ ಪಶ್ಚಿಮಘಟ್ಟದ ಕುರಿತು ದೇಶದ ಗಮನ ಸೆಳೆಯುವಂತೆ ಮಾಡಿದರು. 'ಮೂಕ ಸಹ್ಯಾದ್ರಿಗೆ ಮಾತುಕೊಟ್ಟವಳು' ಎಂದು ಕೆ.ವಿ. ಸುಬ್ಬಣ್ಣ ಬರೆದಿದ್ದಾರೆ.

ಸರ್ವೇಸಂತು ನಿರಾಮಯ ಎಂಬ ಘೋಷವಾಕ್ಯದೊಂದಿಗೆ ಉತ್ತರ ಕನ್ನಡ ಜಿಲ್ಲೆ ಮಾನಸಿಕ, ಆರ್ಥಿಕ, ಸಾಮಾಜಿಕ ಆರೋಗ್ಯ ಪಡೆಯಬೇಕು ಎಂಬ ಕಳಕಳಿಯಲ್ಲಿ ಕುಸುಮಕ್ಕ ಆರಂಭಿಸಿದ ಸಂಸ್ಥೆಗಳು ಕುಡಿದೀಪದಂತೆ ಇಂದಿಗೂ ಬೆಳಕುಬೀರುತ್ತಿದೆ.

ಈ ಮಹಾನ್ ಕ್ರಿಯಾಶೀಲೆ  ಕುಸುಮಕ್ಕ 1998ರ  ಮಾರ್ಚ್ 14ರಂದು ಪರಿಸರ ಹೋರಾಟದ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟವರು ಬೆಳಗಿನ ಜಾವ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದಾಗ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು. ಆಕೆ ತಾವು ಮಾಡಿದ ಕಾಯಕದಿಂದ ನಿತ್ಯಸ್ಮರಣೀಯರಾಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮನ.

On the birth anniversary great social worker Dr. Kusuma Soraba 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ