ಮೈಸೂರು ಕಾರ್ತಿಕ್
ಮೈಸೂರು ಎನ್ ಕಾರ್ತಿಕ್
ಮೈಸೂರು ಎನ್ ಕಾರ್ತಿಕ್ ಕನ್ನಡನಾಡು ಕರ್ನಾಟಕ ಸಂಗೀತಕ್ಕೆ ನೀಡಿರುವ ಮಹತ್ವದ ಯುವ ಪ್ರತಿಭೆ. ಪಿಟೀಲು ವಾದನದಲ್ಲಿ ವಿಶ್ವಖ್ಯಾತಿ ಗಳಿಸಿರುವ ಕಾರ್ತಿಕ್ ಅವರಿಗೆ ಅಕ್ಟೋಬರ್ 3 ಜನ್ಮದಿನ.
ಮಹಾನ್ ಪಿಟೀಲುವಾದಕ ಪ್ರೊ. ಮೈಸೂರು ಮಹದೇವಪ್ಪ ಅವರ ಮೊಮ್ಮಗ ಮತ್ತು ಮಹಾನ್ ಪಿಟೀಲು ವಿದ್ವಾಂಸ ಮೈಸೂರು ನಾಗರಾಜ್ Mysore Nagaraj ಅವರ ಸುಪುತ್ರರಾದ ಮೈಸೂರು ಕಾರ್ತಿಕ್ ಪ್ರತಿಭಾವಂತರು. ಮೈಸೂರು ನಾಗರಾಜ್ ಅಂದರೆ ಜೊತೆಗೂಡುವ ಮಹಾನ್ ಪಿಟೀಲು ವಾದನ ಪ್ರತಿಭೆ ಮೈಸೂರು ಮಂಜುನಾಥ್ Mysore Manjunath ಅವರು ಕಾರ್ತಿಕ್ ಅವರ ಚಿಕ್ಕಪ್ಪ. ಈ ಇಬ್ಬರೂ ಸಹೋದರರೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪುರಸ್ಕೃತ ಲೋಕವಿಖ್ಯಾತ ಸಂಗೀತಗಾರರು. Sumanth Manjunath ಮತ್ತು ಮಾಳವಿ ಮಂಜುನಾಥ್ ಈ ಕುಟುಂಬದ ಇನ್ನಿಬ್ಬರು ಅಮೋಘ ಪ್ರತಿಭೆಗಳು.
ಮೈಸೂರು ಕಾರ್ತಿಕ್ ಚಿಕ್ಕಂದಿನಿಂದಲೆ ತಾತ ಮೈಸೂರು ಮಹಾದೇವಪ್ಪ ಮತ್ತು ತಂದೆ ನಾಗರಾಜ್ ಬಳಿ ಪಿಟೀಲು ವಾದನ ಕಲಿಯುತ್ತಾ, ಸಂತೋಷಿಸುತ್ತಾ, ಅಪ್ಪ ಮತ್ತು ಚಿಕ್ಕಪ್ಪಂದಿರ ಅಪಾರ ಪ್ರತಿಭೆ, ಶಿಸ್ತು, ಸಾಧನೆ ಮತ್ತು ವಿಶ್ವಪ್ರಿಯತೆಗಳಿಂದ ಪ್ರೇರಣೆ ಪಡೆದರು. ಹೀಗೆ ಮೈಸೂರು ಕಾರ್ತಿಕ್ ಎಂಟನೇ ವಯಸ್ಸಿನ ವೇಳೆಗಾಗಲೇ ಕಛೇರಿ ನೀಡಿದ ಬಾಲಪ್ರತಿಭೆಯಾಗಿ ಹೊರಹೊಮ್ಮಿದ್ದರು.
ಅತ್ಯಂತ ಚಿಕ್ಕವಯಸ್ಸಿನಲ್ಲೇ ಆಕಾಶವಾಣಿಯ 'ಎ' ಗ್ರೇಡ್ ಕಲಾವಿದರಾಗಿ ಮನ್ನಣೆ ಗಳಿಸಿದ ಕೀರ್ತಿ ಕಾರ್ತಿಕ್ ಅವರದು.
ಮೈಸೂರು ಕಾರ್ತಿಕ್ ಪ್ರಧಾನ ಪಿಟೀಲು ವಾದಕರಾಗಿ, ತಂದೆ ನಾಗರಾಜ್ ಜೋಡಿಯಾಗಿ, ಹಾಗೂ ತಂದೆ ಮತ್ತು ಚಿಕ್ಕಪ್ಪ ಮಂಜುನಾಥ್ ಇಬ್ಬರ ಜೊತೆಗೂ ಸೇರಿ ಮೂವರ ಪಿಟೀಲು ವಾದನದಲ್ಲಿ ಕಛೇರಿ ನೀಡಿದ್ದಾರೆ. ಎನ್ ಸಿ ಪಿ ಎ ಮುಂಬೈ, ಬೆಂಗಳೂರು ಗಾಯನ ಸಮಾಜ, ರಾಮಸೇವಾ ಮಂಡಳಿ ಟ್ರಸ್ಟ್, ಮೈಸೂರು ದಸರಾ ಸಂದರ್ಭದಲ್ಲಿ ಅರಮನೆ ವೇದಿಕೆ, ಬೆಂಗಳೂರು ಗಣೇಶ ಉತ್ಸವ ಹೀಗೆ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಅವರು ಸಂಗೀತ ನೀಡಿದ್ದಾರೆ. ಪ್ರಖ್ಯಾತ ಸಂಗೀತಗಾರರಾದ ಟಿ. ವಿ. ಶಂಕರನಾರಾಯಣನ್, ಎನ್. ರಮಣಿ, ಶಶಾಂಕ್ ಸುಬ್ರಹ್ಮಣ್ಯಮ್, ತಿರುವಾರೂರು ಭಕ್ತವತ್ಸಲಂ, ಪತ್ರಿ ಸತೀಶ್ ಕುಮಾರ್, ವಿಜಯ್ ಪ್ರಕಾಶ್, ಉಸ್ತಾದ್ ರಷಿದ್ ಖಾನ್, ಅಭಿಷೇಕ್ ರಘುರಾಮ್ ಮುಂತಾದ ಹೆಸರಾಂತ ಕಲಾವಿದರುಗಳಿಗೆ ಅವರು ಪಿಟೀಲು ಪಕ್ಕವಾದ್ಯ ನೀಡಿದ್ದಾರೆ.
ಮೈಸೂರು ಕಾರ್ತಿಕ್ ಅವರು ಲಯತರಂಗ ಎಂಬ ವಾದ್ಯವೃಂದದ ಸದಸ್ಯರಾಗಿ ಮತ್ತು 'ಸಾಗರ' ಎಂಬ ಕರ್ನಾಟಕ ಜಾಸ್ ಸಂಗೀತ ತಂಡದ ಸದಸ್ಯರಾಗಿಯೂ ಕಾರ್ಯಕ್ರಮ ನೀಡುತ್ತಿದ್ದಾರೆ.
ಮೈಸೂರು ಕಾರ್ತಿಕ್ ಹಲವಾರು ದೇಶಗಳಿಗೂ ಸಂಗೀತ ಕಾರ್ಯಕ್ರಮ ನೀಡಿಕೆ ಮತ್ತು ಕಾರ್ಯಾಗಾರ ನಡೆಸಲು ಹೋಗಿಬಂದಿದ್ದಾರೆ. ಅನೇಕ ಆಸಕ್ತರಿಗೆ ನೇರ ಮತ್ತು ಆನ್ಲೈನ್ ಮಾಧ್ಯಮಗಳಲ್ಲಿ ಕಲಿಸುತ್ತಿದ್ದಾರೆ
ನಮ್ಮ ಮಹಾನ್ ಯುವಪ್ರತಿಭೆ ಮೈಸೂರು ಕಾರ್ತಿಕ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ ಹೇಳೋಣ.
Mysore Karthik
ಕಾಮೆಂಟ್‌ಗಳು