ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲೀಲಾ ಅಪ್ಪಾಜಿ

ಲೀಲಾ ಅಪ್ಪಾಜಿ


"ಲೀಲಾ ಅಪ್ಪಾಜಿ, ಅವರ ಹಕ್ಕಿಗಳು, ಅವರ ಕ್ಯಾಮರಾ ಕಣ್ಣು, ಅವರ ಗಾಂಧೀ ಪ್ರೀತಿ, ಕುವೆಂಪು ಭಕ್ತಿ, ಬದುಕಿನತ್ತ ನಿರ್ಮಲ ಪಕ್ಷಿನೋಟ ಇವೆಲ್ಲ ತುಂಬಾ ಅಭಿಮಾನ ಹುಟ್ಟಿಸುವ ಸಂಗತಿಗಳು." ಅವರು ಅಭಿಮಾನ ಹುಟ್ಟಿಸುವಂತ ಕ್ರಿಯಾಶೀಲೆ ಮತ್ತು ಆಳವಾದ ಚಿಂತಕಿ.

ಲೀಲಾ ಅಪ್ಪಾಜಿ ಅವರ ಜನ್ಮದಿನ ಅಕ್ಟೋಬರ್ 3.   ಗಾಂಧೀ ಅವರ ಮಹಾನ್ ಅನುಯಾಯಿಯಾದ ಲೀಲಾ ಅಪ್ಪಾಜಿ ಅವರು ಗಾಂಧೀ ಹುಟ್ಟು ಹಬ್ಬದ ಮಾರನೇ ದಿನವೇ  ಹುಟ್ಟಿದ ಹಬ್ಬ ಹೊಂದಿರುವುದು, ನಿಜಕ್ಕೂ ಅವರ ಅಭಿರುಚಿಗೆ ಎಲ್ಲ ರೀತಿಯಲ್ಲೂ ಸನಿಹದಂತಿದೆ.

ಲೀಲಾ ಅಪ್ಪಾಜಿ ಅವರು ಗಾಂಧೀಜಿ ಹಿಂದೆ ಮತ್ತು ಕುವೆಂಪು ಹಿಂದೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು.  ನನಗೂ ಗಾಂಧೀ ಅಂದರೆ ಅಪಾರ ಪ್ರೀತಿ.  ಹಾಗಾಗಿ ಗಾಂಧಿಯನ್ನು ನನಗೆ ಆಪ್ತವಾಗಿ ಸ್ಮರಿಸುವ ಸುಲಭೋಪಾಯವೆಂದರೆ ಲೀಲಾ ಅಮ್ಮನ ಜೊತೆ ಸಂವಹಿಸುವುದು.  

ಲೀಲಾ ಅಪ್ಪಾಜಿ ಅವರು ನನಗೆ ಒಮ್ಮೆ ಹೇಳಿದ್ದು "ಗಾಂಧಿ - ಅವ ಒಳಗೆ ಕೂತು ನನ್ನವ್ವ ಆಗಿಬಿಟ್ಟಿದ್ದಾರೆ. ನೆನೆಯದೆ ಇರಲಾರೆ".  ಒಂದು ರೀತಿ ಈ ಲೀಲಾ ಅಮ್ಮನೂ ಹಾಗೆ.  ಅದಕ್ಕೇ ಅವರ ಮಾತಿಗೆ ಪ್ರತಿಕ್ರಿಯೆಯಾಗಿ ನುಡಿದೆ, “ನೀವು ನನ್ನವ್ವನಂತೆ ನನ್ನ ಹೃದಯವಾಸಿ ಆಗಿದ್ದೀರಿ.  ಹೀಗೆ ನನಗೆ ಲೀಲಾ ಅಪ್ಪಾಜಿ, ಗಾಂಧೀ ಮತ್ತು ಕುವೆಂಪು ಎಲ್ಲರೂ ಜೊತೆಯಾಗಿದ್ದಾರೆ".

ಲೀಲಾ ಅವರು ಸುಮಾರು ಮೂರೂವರೆ ದಶಕಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ.   ಜೊತೆ ಜೊತೆಗೆ ಎಲ್ಲರಿಂದ, ಬದುಕಿನ ಎಲ್ಲ ಘಟನೆಗಳಿಂದ ಕಲಿತಿದ್ದಾರೆ.  ಅವರ ಬರಹಗಳಲ್ಲಿ  ಪಕ್ಷಿಗಳೇ ವಿದ್ಯಾರ್ಥಿಗಳಾಗಿ, ವಿದ್ಯಾರ್ಥಿಗಳೇ ಪಕ್ಷಿಗಳಾಗಿ, ಒಂದು ರೀತಿಯಲ್ಲಿ ಇವರೇ ಪಕ್ಷಿಯಾಗಿ, ವಿದ್ಯಾರ್ಥಿಯೂ ಆಗುವ ರೀತಿ ವಿಸ್ಮಯ ಹುಟ್ಟುತ್ತದೆ. ಅಷ್ಟೊಂದು ಅಂತರ್ಗತವಾಗುವ ತನ್ಮಯತೆ ಅವರಿಗೆ ತಮ್ಮ ಕ್ಯಾಮರಾ ಮತ್ತು ಪೆನ್ನಿನಲ್ಲಿ ಸಿದ್ಧಿಸಿದೆ. 

ಲೀಲಾ ಅಪ್ಪಾಜಿ ಅವರ ಮುಖ್ಯ ಹವ್ಯಾಸದಲ್ಲಿ  ವನ್ಯಜೀವಿಗಳ ಛಾಯಾಗ್ರಹಣ ಪ್ರಮುಖವಾದುದು.  ಭಾರತದ ಎಲ್ಲ ಮೂಲೆ ಮೂಲೆಗಳಲ್ಲಿ ಹಿಮಾಲಯದವರೆಗಿನ ಪರ್ವತ ಶ್ರೇಣಿಗಳಲ್ಲಿ ಮತ್ತು ಕೆಲವೊಂದು ವಿದೇಶೀ ತಾಣಗಳಲ್ಲಿ ಸಹಾ ಕ್ಯಾಮರಾ ಹೊತ್ತು ತಿರುಗಿ, ತಾಳ್ಮೆಯಿಂದ ಕಾದು ರಮ್ಯ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಈಗಲೂ ತಾವಿರುವ ವಾತಾವರಣದಲ್ಲೆ ಸುಂದರ ಚಿತ್ರಗಳನ್ನು ತೆಗೆಯುತ್ತಾರೆ.  ಹಕ್ಕಿಗಳಿಗೆ ಇವರೆಷ್ಟು ಆಪ್ತ ಅಂದರೆ ದಿನಾ ಡ್ರೆಸ್ ಮಾಡಿಕೊಂಡು ಬಂದು ಇವರಿಗೆ ಸುಂದರ ಪೋಸ್ ಕೊಟ್ಟು ಹೋಗುತ್ತವೆ. ತಮ್ಮ ಚಿತ್ರಗಳನ್ನ ಮತ್ತು ತಮ್ಮ ಅನುಭವ - ಅನುಭಾವಗಳನ್ನ ಅವರು  ಮುಕ್ತವಾಗಿ ಲೋಕದೊಂದಿಗೆ ತೆರೆದಿಟ್ಡಿದ್ದಾರೆ.

ಲೀಲಾ ಅಪ್ಪಾಜಿ ಅಮ್ಮಾ ತುಂಬ ಸಾಧಿಸಿದ್ದಾರೆ.  ಕಂಡಿದ್ದಾರೆ. ಅರಿತಿದ್ದಾರೆ, ಅರಗಿಸಿಕೊಂಡಿದ್ದಾರೆ, ಹಾಗೇ ಬಾಳುತ್ತಿದ್ದಾರೆ. ಮಾಹಿತಿ ಎಂಬುದು ಅಕ್ಷರಗಳ ದಾಖಲೆ.  ಅದಕ್ಕಿಂತ ಮುಖ್ಯ ಬದುಕೇ ಮಾತಾಡುವುದು.  ಅವರು ಈ ಫೇಸ್ಬುಕ್ ಆವರಣದಲ್ಲಿ ಕಂಡ, ತಮ್ಮ ಬದುಕೇ ಮಾತಾಡುವಂತೆ ಭಾಸವಾಗುವ ಅಪೂರ್ವರು.  

ಅವರಿಗೆ ಅನೇಕ ಪ್ರಶಸ್ತಿಗಳು ಬಂದಿದೆ ಎಂದು ಕೆಲವು ಕಡೆ ಓದಿದೆ.  ಅವುಗಳ ವಿವರ ನನಗೆ ಗೊತ್ತಿಲ್ಲ. ರಾಷ್ಟ್ರಮಟ್ಟದ ಬೆಸ್ಟ್ ಎನ್ ಎಸ್ ಎಸ್ ಟೀಮ್ ಎಂದು ಪ್ರಿನ್ಸಿಪಾಲರಾಗಿ ಅವರು ರಾಷ್ಟ್ರಪತಿಗಳಿಂದ ಸಹಾ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಲೀಲಾ ಅಮ್ಮ ಎಂಬುವ ಲೀಲಾ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Leela Appaji Amma 🌷🙏🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ