ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಡುಪಿ ಜಯರಾಂ


ಉಡುಪಿ ಜಯರಾಂ

ನಾವು ಕಂಡ ಬಹುತೇಕ ಚಲನಚಿತ್ರಗಳಲ್ಲಿ ಒಂದು ಸಾಮಾನ್ಯ ಹೆಸರಿರುತ್ತಿತ್ತು.  ಅದು ನೃತ್ಯ ಸಂಯೋಜಕರಾದ ಉಡುಪಿ ಜಯರಾಂ ಅವರದ್ದು (ಮಹಿಳಾಮಣಿ ದೇವಿ ಅವರನ್ನು ಕೂಡಾ ನೆನೆಯುತ್ತೇನೆ).  ಭಾರತೀಯ ಚಿತ್ರರಂಗದ ಎಲ್ಲ ಭಾಷೆಗಳ 500ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದವರು ಉಡುಪಿ ಜಯರಾಂ.  ‍ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಶ್ , ನಾಗ್ ಸಹೋದರರು,  ಶಿವಾಜಿ ಗಣೇಶನ್, ಎಂಜಿ ರಾಮಚಂದ್ರನ್, ಎನ್ ಟಿ ರಾಮರಾವ್, ಅಕ್ಕಿನೇನಿ, ರಜನಿ, ಕಮಲ್, ಚಿರಂಜೀವಿ ಮುಂತಾದವರು  ಸೇರಿದಂತೆ ಹಲವು ತಲೆಮಾರುಗಳ ಕಲಾವಿದರಿಗೆ ನೃತ್ಯ ನಿರ್ದೇಶಕರಾಗಿ ಬಹುಬೇಡಿಕೆಯಲ್ಲಿದ್ದವರು ಉಡುಪಿ ಜಯರಾಂ.  

1929 ವರ್ಷದ ನವೆಂಬರ್ 28ರಂದು ಉಡುಪಿ ಜಿಲ್ಲೆಯ ಬಾಳೇಕುದ್ರು ಎಂಬ ಪುಟ್ಟ ಊರಿನಲ್ಲಿ ಜಯರಾಂ ಜನಿಸಿದರು.  ತಂದೆ  ಆನಂದ್ ಭಟ್. ತಾಯಿ ಜಲಜಮ್ಮ.  ಜಯರಾಂ ತಮ್ಮ ತಾಯಿಯನ್ನು 5ನೇ ವಯಸ್ಸಿಗೆ ಕಳೆದುಕೊಂಡಿದ್ದರು. ತದನಂತರ ಮಲತಾಯಿಯೊಡನೆ ಅವರ  ಬದುಕು ಸವಿಯಾಗಿರಲಿಲ್ಲ.  ಮಲೆನಾಡಿನಲ್ಲಿ ಅಡಕೆ ಕೊಯ್ಲಿನ ಸಂದರ್ಭದಲ್ಲಿ ಅಡಕೆ ಸುಲಿಯಲು ಹೋಗುತ್ತಿದ್ದ ಜಯರಾಂ ಅವರಿಗೆ ಸಿಗುತ್ತಿದ್ದದ್ದು ಊಟ ಮತ್ತು ಸ್ವಲ್ಪ ಅಡಿಕೆ!  

ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಸಹಪಾಠಿಯೂ ಆಗಿದ್ದ ಜಯರಾಂ ಅವರು ಸಂಗೀತವನ್ನು ತುಂಬಾ ಪ್ರೀತಿಸುತ್ತಿದ್ದರು. ಬಾಲ್ಯದಲ್ಲೇ ಜಯರಾಂ ಗುರು ಪದ್ಮನಾಭ್ ಭಟ್ಟ ಅವರ ಬಳಿ ಸಂಗೀತ ಕಲಿತರು. 

ಅಡಕೆ ಮಾರಿ ಜೀವನ ನಿರ್ವಹಿಸುತ್ತಿದ್ದ ಜಯರಾಂ ಅವರಿಗೆ ಬದುಕು ದೊಡ್ಡ ಪಾಠ ಕಲಿಸತೊಡಗಿತ್ತು.  ಜಯರಾಂ ಅವರು ತಮ್ಮ  ಅಕ್ಕ ಸುಶೀಲಳ ಮನೆಗೆ ಹೋದಾಗ, ತಮ್ಮನ ಕಷ್ಟ ಕಂಡು ಮನನೊಂದು ಆಕೆ ಅಲ್ಲಿ ಇಲ್ಲಿ ಹಣ ಹೊಂದಿಸಿ,  ಸಹೋದರಿಯ ಗಂಡ ಕೃಷ್ಣ ಕಾರಂತರ ಹೋಟೆಲ್ಗೆ ತಮ್ಮ ಜಯರಾಂನನ್ನು  ಕಳುಹಿಸಿಕೊಟ್ಟರು. ನಿಷ್ಠೆಯ ಕೆಲಸದಿಂದ ಜಯರಾಂ ಎಲ್ಲರಿಗೂ ಇಷ್ಟವಾಗಿದ್ದರು. ಏತನ್ಮಧ್ಯೆ ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಅವರ ಬದುಕಿಗೆ ಮಾರ್ಗದರ್ಶಿಯಾಗಿಬಿಟ್ಟಿದ್ದರು.

ತಮ್ಮ  17ನೇ ವಯಸ್ಸಿಗೆ ಕೈಯಲ್ಲಿ ಬಿಡಿಗಾಸೂ  ಇಲ್ಲದೆ ಜಯರಾಂ ಮದ್ರಾಸ್ ತಲುಪಿದರು. ಅಲ್ಲಿ ಹೋಟೆಲಿನಲ್ಲಿ ಕೆಲಸ ಮಾಡುತ್ತ ಅಲ್ಲಿದ್ದ ಕನ್ನಡಿಗರ ಪರಿಚಯದ ಮೂಲಕ 1948ರಲ್ಲಿ ಮೊದಲ ಬಾರಿಗೆ ಜೆಮಿನಿ ಪಿಕ್ಚರ್ಸ್ ಅಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಯರಾಂ ಅವರು 1954ರಲ್ಲಿ ವರನಟ ರಾಜ್‍ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಸಹಾಯಕ ನೃತ್ಯ ಸಂಯೋಜಕರಾಗಿ ಕೆಲಸ ಮಾಡಿದರು.  1956ರಲ್ಲಿ ಭಾಗ್ಯೋದಯ ಕನ್ನಡ ಸಿನಿಮಾದ ಮೂಲಕ ಸ್ವತಂತ್ರರಾಗಿ ನೃತ್ಯ ಸಂಯೋಜಕರಾದ ಜಯರಾಂ ಮುಂದೆ ಸಿನಿಮಾರಂಗದಲ್ಲಿ ಹಿಂದಿರುಗಿ ನೋಡಲೇ ಇಲ್ಲ. ನಂತರದ್ದು ಇತಿಹಾಸ.   500ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದ ಹೆಗ್ಗಳಿಕೆ ಉಡುಪಿ ಜಯರಾಮ್ ಅವರದ್ದು!  (ಒಂದೆಡೆ 2000 ಚಿತ್ರಗಳು ಎಂಬ ಮಾತಿದೆ).

ಜಯರಾಂ ಅವರು ಚಿತ್ರರಂಗದಲ್ಲಿ  ಶಾಸ್ತ್ರೀಯ ನೃತ್ಯ ಪ್ರಕಾರಗಳಾದ  ಭರತನಾಟ್ಯಂ, ಕಥಕ್, ಮಣಿಪುರಿ ಹಾಗೂ ಕೂಚುಪುಡಿ ನೃತ್ಯದ ಮಾದರಿಯ ಮಾಸ್ಟರ್ ಆಗಿ ಗಮನಸೆಳೆದವರು. ಅವರು ಅಷ್ಟರ ಮಟ್ಟಿಗಿನ ಜ್ಞಾನಸಂಪಾದನೆ ಮಾಡಿದ್ದಾದರೂ ಹೇಗೆ  ಎಂಬುದೂ ಕೂಡಾ ಅಚ್ಚರಿ ಹುಟ್ಟಿಸುವಂತದ್ದು. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಹಿಂದಿ ಹೀಗೆ ಎಲ್ಲ ಭಾಷಾ ಚಿತ್ರಗಳಲ್ಲಿ  ಉಡುಪಿ ಜಯರಾಂ ಅವರು ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

ಎಂಜಿಆರ್ ಅವರ “ನಾಳೈ ನಮ್ಮದೈ”, ಶಿವಾಜಿ ಗಣೇಶನ್ ಅವರ ಕರ್ಣನ್ ತಮಿಳು ಸಿನಿಮಾಕ್ಕೂ ಜಯರಾಂ ಕೋರಿಯೋಗ್ರಫಿ ಮಾಡಿದ್ದರು. ಹೀಗೆ ಕನ್ನಡದ ಬದುಕು ಬಂಗಾರವಾಯ್ತು, ಕವಿರತ್ನ ಕಾಳಿದಾಸ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಬಬ್ರುವಾಹನ, ಗಿರಿ ಕನ್ಯೆ, ಜೀವನ ಚೈತ್ರ, ಸೊಸೆ ತಂದ ಸೌಭಾಗ್ಯ, ಮಲಯ ಮಾರುತ, ಗೀತಾ, ಪುಟಾಣಿ ಏಜೆಂಟ್ 1,2,3, ಚಂಡಿ ಚಾಮುಂಡಿ ಮುಂತಾದ  ವೈವಿಧ್ಯಪೂರ್ಣ  ಚಿತ್ರಗಳು ಅವರ ಚಲನಚಿತ್ರಗಳ ವ್ಯಾಪ್ತಿ ವೈವಿಧ್ಯದ ವಿಶಾಲತೆಯನ್ನು ಸೂಚಿಸುತ್ತವೆ. 

ಚೆನ್ನೈನಲ್ಲಿ ವಾಸವಾಗಿದ್ದ ಜಯರಾಂ ಅವರು 24ನೇ ವಯಸ್ಸಿನಲ್ಲೇ ಸರೋಜ ಅವರ ಜೊತೆ ಹಸೆಮಣೆ ಏರಿದ್ದರು. ಜಯರಾಂ, ಸರೋಜ ದಂಪತಿಗಳಿಗೆ ಮೂವರು ಗಂಡು ಹಾಗೂ ಓರ್ವ ಹೆಣ್ಣು ಮಗಳು. ಅವರ ಪತ್ನಿ ಅವರಿಗೆ ಯಾವಾಗಲೂ ಎರಡು ಮೂರು ಸೂಟ್ ಕೇಸ್ ತಯಾರಿಸಿ ಪಯಣಕ್ಕೆ ಸಿದ್ಧ ಮಾಡಿಡುತ್ತಿದ್ದರಂತೆ.  ಅಷ್ಟೊಂದು ಬೇಡಿಕೆ ಚಲನಚಿತ್ರರಂಗದಲ್ಲಿ ಅವರಿಗಿತ್ತು.  ಒಂದು ಶೂಟಿಂಗ್ ಮುಗಿಸಿ ಒಂದೂರಿನಿಂದ ಬಂದರೆ ಕಾಲವಿಳಂಬವಿಲ್ಲದಂತೆ ಮತ್ತೊಂದು ಸೂಟ್ಕೇಸ್ ಹಿಡಿದು ಮತ್ತೊಂದು ಪಯಣ  ಕೈಗೊಳ್ಳುವುದು ಜಯರಾಂ ಅವರಿಗೆ ಅನಿವಾರ್ಯವಾಗಿತ್ತು.  

ಅನುಗಾಲವೂ ಕಾರ್ಯನಿರತರಾಗಿರುತ್ತಾ ಘಟಾನುಘಟಿ  ನಟರಿಗೆ ನೃತ್ಯ ಹೇಳಿಕೊಟ್ಟು ದೃಶ್ಯವೈಭವ ಕಟ್ಟಿಕೊಡುತ್ತಿದ್ದ  ಜಯರಾಮ್ ಅವರ ಬದುಕಿನ ಕೊನೆಯ ಎಂಟು ತಿಂಗಳುಗಳು  ಮರೆಗುಳಿ (ಅಲ್ ಝಮೈರ್) ರೋಗದಿಂದ ಕರುಣಾಜನಕವಾಗಿತ್ತು.  ಈ ಮಹನೀಯರು 2004ರ ಅಕ್ಟೋಬರ್ 13ರಂದು ತಮ್ಮ ಇಹಲೋಕದ ಯಾತ್ರೆಯನ್ನು ಕೊನೆಗೊಳಿಸಿದರು.

Great choreographer Udupi Jayaram 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ