ರಾಜನ್ ನಾಗೇಂದ್ರ
ನಿಂತು ಹೋದ ರಾಜನ್ ನಾಗೇಂದ್ರ ಸಂಗೀತದಲೆ
ಸಿನಿಮಾ ಸಂಗೀತದಲ್ಲಿ ರಾಜನ್ ನಾಗೇಂದ್ರ ಎಂದರೆ ಒಂದು ರೀತಿಯ ಗೀತ ಸುನಾದ, ವಿಧ ವಿಧ ವಾದ್ಯಗಳ ನಾದ ತರಂಗ ನಮ್ಮನ್ನಾವರಿಸುತ್ತದೆ. ರಾಜನ್ ನಾಗೇಂದ್ರ ಅವರ ಸಂಗೀತ ಅಂದರೆ ಕನ್ನಡಕ್ಕೊಂದು ಟ್ರಂಪ್ ಕಾರ್ಡ್. ಕೆಲವೊಂದು ಚಿತ್ರಗಳು, ಗೀತೆಗಳ ಮೌಲ್ಯಗಳಿಂದಲೇ ಗುರುತಿಸಲ್ಪಟ್ಟಿವೆ, ಚಿತ್ರದ ಬಾಕ್ಸ್ ಆಫೀಸ್ ಮೌಲ್ಯಗಳನ್ನು ಹೆಚ್ಚಿಸಿವೆ, ನಟ ನಟಿಯರ ತಾರಾ ವರ್ಚಸ್ಸನ್ನು ಹೆಚ್ಸಿಸಿವೆ ಎಂದು ಗುರುತಿಸುವುದಾದರೆ ಅಲ್ಲಿ ರಾಜನ್ ನಾಗೇಂದ್ರ ಸಂಗೀತ ಜೋಡಿಯ ಹೆಸರು ಪ್ರಧಾನವಾಗಿ ಉಲ್ಲೇಖಿಸಲ್ಪಡುತ್ತದೆ. ಹಿಂದೀ ಚಿತ್ರರಂಗದಲ್ಲಿ ಲಕ್ಮೀಕಾಂತ್ ಪ್ಯಾರೇಲಾಲ್, ಕಲ್ಯಾಣಜೀ ಆನಂದಜೀ, ಶಂಕರ್ ಜೈಕಿಷನ್ ಜೋಡಿಗಳು ಪಡೆದ ಪ್ರಖ್ಯಾತಿಯನ್ನೇ ದಕ್ಷಿಣ ಭಾರತದ ಕನ್ನಡ ಮತ್ತು ಇತರ ಚಿತ್ರರಂಗಗಳಲ್ಲಿ ರಾಜನ್ ಮತ್ತು ನಾಗೇಂದ್ರ ಜೋಡಿ ಪಡೆದಿದ್ದಾರೆ
ಮೈಸೂರಿನ ಶಿವಾರಾಮಪೇಟೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರಾಜನ್ ಮತ್ತು ನಾಗೇಂದ್ರ ಸಹೋದರರು ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಸಂಗೀತ ನೀಡಿದ ಚಿತ್ರಗಳ ಸಂಖ್ಯೆ ಕನ್ನಡದಲ್ಲಿ ಸುಮಾರು 200 ಮತ್ತು ಉಳಿದಂತೆ ಒಟ್ಟಾರೆ ಸುಮಾರು 175 ಚಿತ್ರಗಳು ತಮಿಳು, ತೆಲುಗು, ಸಿಂಹಳಿ ಭಾಷೆಗಳಿಗೆ ಸೇರಿವೆ. ಈ ಸಹೋದರರ ತಂದೆ ರಾಜಪ್ಪನವರು ಪ್ರಸಿದ್ಧ ಹಾರ್ಮೋನಿಯಂ ವಾದಕರಾಗಿದ್ದರು. ಮೂಖಿ ಚಿತ್ರಗಳ ಯುಗದಲ್ಲಿ ಅವರು ಸಂಗೀತವಾದನ ನೀಡಿದ್ದರು.
ರಾಜನ್ ಮತ್ತು ನಾಗೇಂದ್ರ ಸಹೋದರರು ಸಂಗೀತ ಕಲಿತದ್ದು ಬಿಡಾರಂ ಕೃಷ್ಣಪ್ಪನಂತಹವರ ಬಳಿ. ರಾಜನ್ ಅವರು ಸ್ವಯಂ ಟಿ ಚೌಡಯ್ಯನವರಲ್ಲಿ ಪಿಟೀಲು ವಾದನ ಕಲಿತರು. ನಾಗೇಂದ್ರರು ಜಲತರಂಗ್ ವಾದನ ಕಲಿತರು. ಈ ಸೋದರರು ಕಾಳಿಂಗರಾಯರ ತಂಡ ಮತ್ತು ಇತರ ವಾದ್ಯ ತಂಡಗಳಲ್ಲಿ ಕಾರ್ಯ ನಿರ್ವಹಿಸಿ 1952ರ ವರ್ಷದಲ್ಲಿ ಸೌಭಾಗ್ಯಲಕ್ಷ್ಮಿ ಎಂಬ ಚಿತ್ರದ ಮೂಲಕ ಚಿತ್ರಸಂಗೀತ ನಿರ್ದೇಶನಕ್ಕೆ ಪಾದಾರ್ಪಣ ಮಾಡಿದರು. ಈ ಜೋಡಿಯಲ್ಲಿನ ರಾಜನ್ ಅವರು ಜನಿಸಿದ್ದು ಮೇ 27, 1938ರಂದು. ನಾಗೇಂದ್ರರು 1935ರಲ್ಲಿ ಜನಿಸಿ 2000ದ ನವೆಂಬರ್ 4ರಂದು ನಿಧನರಾಗಿದ್ದರು.
ರಾಜನ್ ನಾಗೇಂದ್ರರ ಸಂಗೀತ ನಿರ್ದೇಶನದ ಹಾಡುಗಳನ್ನು ಮತ್ತು ಚಿತ್ರಗಳನ್ನು ನೆನೆಯುವುದರಲ್ಲಿ ಏನೋ ಸಂತಸವಿದೆ. ನ್ಯಾಯವೇ ದೇವರು, ಗಂಧದ ಗುಡಿ, ದೇವರ ಗುಡಿ, ಎರಡು ಕನಸು, ನಾ ನಿನ್ನ ಮರೆಯಲಾರೆ, ನಾ ನಿನ್ನ ಬಿಡಲಾರೆ, ಮಾಂಗಲ್ಯ ಭಾಗ್ಯ, ಹೊಂಬಿಸಿಲು, ಬಯಲು ದಾರಿ, ಪಾವನ ಗಂಗಾ, ಗಿರಿಕನ್ಯೆ, ಚಂದನದಾ ಗೊಂಬೆ, ಕೌಬಾಯ್ ಕುಳ್ಳ, ಕಳ್ಳ ಕುಳ್ಳ, ಪರಸಂಗದ ಗೆಂಡೆತಿಮ್ಮ, ಅವಳ ಹೆಜ್ಜೆ, ಆಟೋ ರಾಜಾ, ಬಂಗಾರದ ಹೂವು, ಬಯಸದೆ ಬಂದ ಭಾಗ್ಯ, ಬೆಳುವಲದ ಮಡಿಲಲ್ಲಿ, ಬೆಟ್ಟದ ಹೂವು, ಬಿಳಿಗಿರಿಯ ಬನದಲ್ಲಿ, ಚಲಿಸುವ ಮೋಡಗಳು,ದೇವರ ದುಡ್ಡು, ಗಾಳಿ ಮಾತು, ಹೃದಯ ಗೀತೆ, ಮಹಾತ್ಯಾಗ, ಸಿಂಗಾಪುರದಲ್ಲಿ ರಾಜಾಕುಳ್ಳ, ಸುಪ್ರಭಾತ, ನವಜೀವನ, ವಿಜಯವಾಣಿ, ಬೆಂಕಿಯ ಬಲೆ ಮುಂತಾದ ಅನೇಕ ಯಶಸ್ವೀ ಚಿತ್ರಗಳು ರಾಜನ್ ನಾಗೇಂದ್ರ ಅವರ ಸಂಗೀತದಿಂದ ಭವ್ಯವೆನಿಸಿವೆ. ಕಿಂಚಿತ್ತೂ ಯಶಕಾಣದ ‘ಯಾವ ಹೂವು ಯಾರ ಮುಡಿಗೋ’ ಎಂಬ ಚಿತ್ರದ ಹಾಡುಗಳು ಕೂಡಾ ಇಂದೂ ರೇಡಿಯೋಗಳಲ್ಲಿ, ಕ್ಯಾಸೆಟ್ಟುಗಳಲ್ಲಿ ಜನಪ್ರಿಯವಾಗಿದೆ ಎಂದರೆ ರಾಜನ್ ನಾಗೇಂದ್ರ ಜೋಡಿಯ ಸಂಗೀತ ಎಷ್ಟು ಮಧುರವಾದದ್ದು ಎಂದು ವೇದ್ಯವಾಗುತ್ತದೆ.
ಆಕಾಶವೆ ಬೀಳಲಿ ಮೇಲೆ, ನಾವಾಡುವ ನುಡಿಯೇ ಕನ್ನಡ ನುಡಿ, ಕನ್ನಡವೇ ಸವಿ ನುಡಿಯು ಕರುನಾಡು ತಾಯ್ನಾಡು, ಮಾಮರವೆಲ್ಲೋ ಕೋಗಿಲೆಯೆಲ್ಲೋ, ಆಸೆಯ ಭಾವ ಒಲವಿನ ಜೀವ, ಜೀವ ವೀಣೆ ನೀಡು ಮಿಡಿತದ ಸಂಗೀತ, ಬಾನಲ್ಲು ನೀನೆ ಭುವಿಯಲ್ಲು ನೀನೆ, ಆಕಾಶ ದೀಪವು ನೀನು, ಏನೆಂದು ನಾ ಹೇಳಲಿ, ಆಕಾಶದಿಂದ ಧರೆಗಿಳಿದ ರಂಭೆ, ಆಡು ಆಟ ಆಡು, ಸುತ್ತ ಮುತ್ತ ಯಾರು ಇಲ್ಲ, ನಾ ಹಾಡಲು ನೀವು ಹಾಡಬೇಕು, ನೋಟದಾಗೆ ನಗೆಯಾ ಮೀಟಿ, ತೇರ ಏರಿ ಅಂಬರದಾಗೆ, ಬಂದೆಯ ಬಾಳಿನ ಬೆಳಕಾಗಿ, ನನ್ನ ಆಸೆ ಹಣ್ಣಾಗಿ, ನಲಿವಾ ಗುಲಾಬಿ ಹೂವೆ, ನೀ ನಡೆವ ಹಾದಿಯಲ್ಲಿ, ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ, ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ, ದೇವಿ ಶಾರದೆ ಲೋಕ ಪೂಜಿತೆ, ತಾರೆಯು ಬಾನಿಗೆ ತಾವರೆ ನೀರಿಗೆ, ಜೇನಿನ ಹೊಳೆಯೋ ಹಾಲಿನ ಮಳೆಯೋ, ನಾನೆ ಎಂಬ ಭಾವ ನಾಶವಾಯಿತೋ, ಒಮ್ಮೆ ನಿನ್ನನ್ನು ಕಣ್ತುಂಬಾ, ಹೃದಯ ಗೀತೆ ಹಾಡುತಿದೆ, ಯುಗ ಯುಗಗಳೆ ಸಾಗಲಿ, ಕಂಗಳು ವಂದನೆ ಹೇಳಿವೆ, ಕಾಲವನ್ನು ತಡೆಯೋರು ಯಾರೂ ಇಲ್ಲ, ಪ್ರೇಮ ಪ್ರೀತಿ ನನ್ನುಸಿರು, ಈ ಹೃದಯಾ ಹಾಡಿದೆ, ಈ ಭಾವ ಗೀತೆ ನಿನಗಾಗಿ ಹಾಡಿದೆ, ಲೀಲಾಮಯ ಹೇ ದೇವ, ಮಧುಮಾಸ ಚಂದ್ರಮ ನೈದಿಲೆಗೆ ಸಂಭ್ರಮ, ಬಿಸಿಲಾದರೇನು ಮಳೆಯಾದರೇನು, ಒಲಿದ ಜೀವ ಜೊತೆಯಲಿರಲು ಹೀಗೆ ಹೇಳುತ್ತಲೇ ಹೋದಲ್ಲಿ ರಾಜನ್ ನಾಗೇಂದ್ರರ ಎಲ್ಲ ಗೀತೆಗಳನ್ನೂ ಹೆಸರಿಸುತ್ತಲೇ ಹೋಗಬೇಕಾಗುತ್ತದೆ.
ಅಂತಹ ಮಧುರತೆ, ಸುಕೋಮಲತೆ, ಶ್ರವ್ಯತೆ, ಗೇಯತೆ ಈ ಸಹಸ್ರಾರು ಹಾಡುಗಳಲ್ಲಿವೆ. ಕಾಲ ಬದಲಾದಂತೆ ಈ ಜೋಡಿಗೆ ಹಿರೀತನ ಮೂಡುತ್ತಿದ್ದಂತೆ ಸಿನಿಮಾಗಳಲ್ಲಿ ಸಂಗೀತ ಮೌಲ್ಯ ಕಡಿಮೆಯಾಗುತ್ತಿದ್ದಂತೆ ರಾಜನ್ – ನಾಗೇಂದ್ರರಂತಹ ಜೋಡಿ ನೀಡಿದ ಹಾಡುಗಳ ಸಂಖ್ಯೆ 90ರ ದಶಕದ ನಂತರದಲ್ಲಿ ಕಡಿಮೆಯಾಗತೊಡಗಿತು.
ಈ ಜೋಡಿಯಲ್ಲಿ ಕಿರಿಯರಾದ ನಾಗೇಂದ್ರ ಅವರು ನವೆಂಬರ್ 4, 2000 ವರ್ಷದಲ್ಲಿ ಈ ಲೋಕವನ್ನಗಲಿದರು. ಹಿರಿಯರಾದ ರಾಜನ್ ಅವರು ಇಂದು ಈ ಲೋಕವನ್ನಗಲಿರುವುದು ದುಃಖ ತಂದಿದೆ. ಈ ರಾಜನ್ ನಾಗೇಂದ್ರ ಜೋಡಿ ನಮ್ಮ ಮನದಲ್ಲಿ ಎಂದೆಂದೂ ಹಿತವಾದ ನಾದವಾಗಿ ನೆಲೆಸಿದ್ದಾರೆ. ಕೆಲವು ವರ್ಷದ ಹಿಂದೆ ನನ್ನ ಈ ಲೇಖನ ನೋಡಿದಾಗ ಸಂತೋಷದ ವಂದನೆ ಹೇಳಿದ್ದರು. ದೊಡ್ಡವರೇ ಹಾಗೆ. ಹೇಳದೆ ಕೇಳದೆ ಪ್ರೀತಿಯಂಥ ಸಂಗೀತ ಹರಿಸುತ್ತಾರೆ. ಹೀಗೆ ಹೇಳದೆ ಕೇಳದೆ ನಮ್ಮನ್ನಗಲಿಬಿಡುತ್ತಾರೆ. (ಅವರುಗಳಿದ್ದಾಗ, ಅವರು ಬಹುಶಃ ಕಷ್ಟದಲ್ಲಿದ್ದಾಗ, 'ನಾವು ಅವರನ್ನು ಕಂಡಿದ್ದೆವೆ?'ಎಂಬ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ಆಗಾಗ ಕಾಡುತ್ತದೆ ಎಂಬುದು ಸುಳ್ಳಲ್ಲ.)
Rajan Nagendra
ಕಾಮೆಂಟ್‌ಗಳು