ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಣಿಕ ಪ್ರಭು


 ಮಾಣಿಕಪ್ರಭು 

Manika Prabhu 

ಮಾಣಿಕಪ್ರಭು ಅವರ ಕಾಲ 1817-65. ಕರ್ನಾಟಕದಲ್ಲಿ ಬಾಳಿದ ಈತ 'ಸಕಲ ಮತ ಸಂಪ್ರದಾಯ' ಎಂಬ ಹೆಸರಿನ ಮತದ ಪ್ರವರ್ತಕರು.

ಮಾಣಿಕಪ್ರಭು ಅವರು ಬೀದರ ಜಿಲ್ಲೆಯ ಲಾಡ(ಜ)ವಂತಿ ಗ್ರಾಮದಲ್ಲಿ ಜನಿಸಿದರು.  ತಂದೆ ಮನೋಹರ ನಾಯಕ ಹರಕುಡೆ. ತಾಯಿ ಬಾಯಮ್ಮ ದೇವಿ. ಈತ ದೇಶಸ್ಥ ದತ್ತಸಂಪ್ರದಾಯದ ಬ್ರಾಹ್ಮಣರ ಮನೆತನದ ಋಗ್ವೇದೀ ಅಶ್ವಲಾಯನ ಶಾಖೆಯ ಶ್ರೀವತ್ಸಗೋತ್ರದವರು. ಬಾಲ್ಯದಿಂದಲೇ ಪ್ರಾಸಾದಿಕ ವ್ಯಕ್ತಿಯೆಂದು ಪ್ರಕಾಶಕ್ಕೆ ಬಂದ ಈತ ಅನೇಕ ಚಮತ್ಕಾರಗಳನ್ನು ಮಾಡಿ ತೋರಿಸಿದರು. 1845ರಲ್ಲಿ ಹುಮ್ನಾಬಾದದ ಬಳಿ ನಿರ್ಜನಸ್ಥಳವೊಂದರಲ್ಲಿ ನೆಲೆನಿಂತರು. ಅದೇ ಈಗ ಮಾಣಿಕನಗರವೆಂದು ಪ್ರಸಿದ್ಧವಾಗಿರುವುದು. 

ಮಾಣಿಕಪ್ರಭು ಅವರಿಗೆ ಅನೇಕ ಮಂದಿ ಭಕ್ತರಾದರು. ಅವರು ತಮ್ಮ ಮತವನ್ನು 'ಸಕಲಮತ ಸಂಪ್ರದಾಯ ಮತ' ಎಂದೇ ಕರೆದರು. ಈ ಪಂಥದ ಉಪಾಸ್ಯದೇವತೆ ಚೈತನ್ಯದೇವ, ಎಂದರೆ ಮಾನವನ ಅಂತರ್ಯಾಮಿಯಾದ ಚೈತನ್ಯವೇ ಅದು. ಮಧುಮತೀನಾಮಕ ಶಕ್ತಿದೇವತೆ ಹಾಗೂ ದತ್ತಾತ್ರೇಯ ಮೂರ್ತಿಗಳು ಇವರು ಪೂಜಿಸುವ ವಿಗ್ರಹಗಳು. ಸರ್ವಧರ್ಮ ಸಮನ್ವಯದಂತೆ ಇರುವ ಈ ಮತಕ್ಕೆ ಮುಸಲ್ಮಾನ್, ಪಾರಸೀ, ಜೈನ, ಬೌದ್ಧ, ಲಿಂಗಾಯತ ಮುಂತಾದ ಅನೇಕ ಕೋಮಿನವರು ಅನುಯಾಯಿಗಳಾಗಿದ್ದಾರೆ. ಶಿವರಾತ್ರಿ, ಮೊಹರಮ್ ದತ್ತಜಯಂತಿ ಇವು ಇಲ್ಲಿ ಆಚರಿಸಲಾಗುವ ವಿಶೇಷಹಬ್ಬಗಳು. ಶಾಲಿವಾಹನ ಶಕೆ 1787 ಮಾರ್ಗಶಿರ ಶುದ್ಧ 11ರಂದು ಮಾಣಿಕಪ್ರಭು ಸಜೀವ ಸಮಾಧಿಹೊಂದಿದರು. ಈತ ಹಿಂದಿ, ಮರಾಠಿ, ಕನ್ನಡ ಮೂರೂ ಭಾಷೆಗಳಲ್ಲಿಯೂ ಪದ್ಯರಚನೆ ಮಾಡಿದುದಾಗಿ ತಿಳಿದು ಬರುತ್ತದೆ. ಆ ಪದ್ಯಗಳಲ್ಲಿ ಮೀರಾಬಾಯಿಯ ಪದ್ಯಗಳ ಮಾಧುರ್ಯವಿದೆ. ಈಗ ಈ ಮಾಣಿಕನಗರವನ್ನು ಮಾಣಿಕಪ್ರಭೂ ಸಂಸ್ಥಾನ ಎಂದೇ ಕರೆಯಲಾಗುತ್ತಿದೆ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ