ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿರಡಿ ಸಾಯಿಬಾಬಾ


ಶ್ರೀ ಶಿರಡಿ ಸಾಯಿಬಾಬಾ


ಶ್ರೀ ಶಿರಡಿ ಸಾಯಿಬಾಬಾ ಅವರು ಈ ಲೋಕದ ಯಾತ್ರೆಯನ್ನು ಸಂಪೂರ್ಣಗೊಳಿಸಿದ್ದು ವಿಜಯದಶಮಿಯಂದು.

ಭಾರತೀಯ ದೈವಿಕ ಭಕ್ತಿ ಹೃದಯಿಗಳಿಗೆ ಹತ್ತಿರವಾದ ಹೆಸರುಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾ ಅವರ ಹೆಸರೂ ಪ್ರಮುಖವಾದುದು. ಗೋದಾವರಿ ತಟದ ಅಹಮದ್ ನಗರ ಜಿಲ್ಲೆಯ, ಕೋಪರ್‌ಗಾಂವ್ ತಾಲೂಕಿನಲ್ಲಿದೆ ಶಿರಡಿ. ಗೋದಾವರಿ ನದಿ ದಾಟಿದ ತಕ್ಷಣವೇ ಮಾರ್ಗವು ನಮ್ಮನ್ನು ಶಿರಡಿ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ. ಎಂಟು ಮೈಲು ಸಾಗಿದರೆ ನಾವು ನೀಮ್‌ಗಾಂವ್ ತಲುಪುತ್ತೇವೆ. ಅಲ್ಲಿಂದ ಸಾಯಿಬಾಬಾ ಅವರಿಂದ ಪ್ರಸಿದ್ಧವಾದ ಶಿರಡಿಯ ವೈಭವವನ್ನು ಕಾಣಬಹುದಾಗಿದೆ. 

ಶ್ರೀ ಸಾಯಿಬಾಬಾ ಅವರ ಜನ್ಮತಿಥಿ, ಜನ್ಮಸ್ಥಾನ ಮತ್ತು ಅವರ ಹೆತ್ತವರ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಬಾಬಾರಿಂದ ಮತ್ತು ಅವರ ಸಮೀಪವರ್ತಿಗಳಲ್ಲಿ ಈ ಕುರಿತು ಕೇಳಲಾಗಿತ್ತಾದರೂ, ಯಾವುದೇ ಫಲಪ್ರದ ಉತ್ತರ ದೊರೆತಿರಲಿಲ್ಲ. ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ "ಶ್ರೀ ಸಾಯಿ ಸತ್‌ಚರಿತೆ"ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು. ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್‌ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು.

1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್‌ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.

1858ರಿಂದ 1918ರ ಅಕ್ಟೋಬರ್ 15ರಂದು (ವಿಜಯದಶಮಿ ದಿನ) ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು. ದೇವರಿದ್ದಾನೆ ಎಂದು ಜನತೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಅವರು ಹಲವಾರು ಪವಾಡಗಳನ್ನು ಮಾಡಿದರು. ರೋಗ ಶಮನಗೊಳಿಸಿದರು. ತಮ್ಮ ಭಕ್ತರಿಗೆ ನೈತಿಕ ಆತ್ಮಬಲ ಮತ್ತು ಭೌತಿಕ ಬಲವನ್ನು ಒದಗಿಸಿದರು. ಎಲ್ಲಾ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಲು ಶ್ರಮಿಸಿದರು. ದೇವರೊಬ್ಬನೇ, ನಾಮ ಹಲವು ಎಂಬುದನ್ನ ಜನರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದರು. ನಿಮ್ಮದೇ ಧರ್ಮ ಅನುಸರಿಸಿ, ಸತ್ಯ ದರ್ಶನವಾಗುತ್ತದೆ ಎಂದು ಬೋಧಿಸಿದರು. 

ಸಾಯಿಬಾಬಾ ಅವರ ಜೀವನಚರಿತ್ರೆ 'ಶ್ರೀ ಸಾಯಿ ಸತ್‌ಚರಿತೆ'ಯು ಕನ್ನಡವನ್ನೊಳಗೊಂಡಂತೆ ಹಲವಾರು ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡದ ಆವೃತ್ತಿಯನ್ನು ವಿ. ಕೃ. ಗೋಕಾಕ್ ಮಾಡಿದ್ದಾರೆ.

On the day Shri Shirdi Saibaba completed his journey on this earth 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ