ಚಂದ್ರಕಾಂತ ಕುಸನೂರ
ಚಂದ್ರಕಾಂತ ಕುಸನೂರ
ಚಂದ್ರಕಾಂತ ಕುಸನೂರ ಖ್ಯಾತ ಬರಹಗಾರರಾಗಿ, ರಂಗತಜ್ಞರಾಗಿ ಮತ್ತು ಕಲಾವಿದರಾಗಿ ಹೆಸರಾದವರು. ವಿವಿಧ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಕುಸನೂರ ಅವರು ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಹೈಕು ಮಾದರಿಯ ಕವಿತೆಗಳನ್ನು ಸಹ ಪರಿಚಯಿಸಿದ್ದರು.
ಚಂದ್ರಕಾಂತ ಕುಸನೂರ ಮೂಲತಃ ಕಲಬುರಗಿಯ ಕುಸನೂರಿನವರು. ಅವರು 1931ರ ಅಕ್ಟೋಬರ್ 21 ರಂದು ಜನಿಸಿದರು. ಎಂ.ಎ, ಬಿ.ಇಡಿ ಪದವಿ ಗಳಿಸಿದ ಚಂದ್ರಕಾಂತ ಕುಸನೂರ ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸಹಾ ಸೇವೆ ಸಲ್ಲಿಸಿದ್ದರು.
ಕುಸನೂರ ಅವರು ಕಲಬುರ್ಗಿಯಲ್ಲಿ ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರೂ ಕನ್ನಡ ಮತ್ತು ಹಿಂದಿ ಸಾಹಿತ್ಯಕ್ಕೆ ಕೊಡುಗೆ ನೀಡಿದರು. ಕಥೆ, ಕಾದಂಬರಿ, ಕವನಸಂಕಲನ, ಅನುವಾದ, ನಾಟಕ, ವಿಮರ್ಶಾ ಬರಹಗಳು ಸೇರಿ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು.
ಕುಸನೂರ ಅವರ ಕೃತಿಗಳಲ್ಲಿ ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು ಮುಂತಾದವು ನಾಟಕಗಳು. ನಂದಿಕೋಲು ಕಾವ್ಯ ಸಂಕಲನ. ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ಕೆರೂರು ನಾಮ, ಚರ್ಚ್ ಗೇಟ್ ಮುಂತಾದವು ಕಾದಂಬರಿಗಳು. ಇದಲ್ಲದೆ ಡಾ.ಯು.ಆರ್.ಅನಂತಮೂರ್ತಿ ಅವರ 'ಸಂಸ್ಕಾರ' ಮತ್ತು ಆಲನಹಳ್ಳಿ ಕೃಷ್ಣ ಅವರ 'ಕಾಡು' ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದರು.
ಚಂದ್ರಕಾಂತ ಕುಸನೂರ ಖ್ಯಾತ ಚಿತ್ರಕಲಾವಿದರೂ ಆಗಿದ್ದು ಹಲವಾರು ಪುಸ್ತಕಗಳ ಹೊದಿಕೆಗಳಿಗೆ ಕಲಾವಿನ್ಯಾಸ ಮಾಡಿದ್ದರು.
ಚಂದ್ರಕಾಂತ ಕುಸನೂರ ಅವರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.
ಚಂದ್ರಕಾಂತ ಕುಸನೂರ 2020ರ ಎಪ್ರಿಲ್ 19ರಂದು ಬೆಳಗಾವಿಯಲ್ಲಿ ನಿಧನರಾದರು.
On the birth anniversary of writer, theatre activist and artiste Chandrakanth Kusnoor
ಕಾಮೆಂಟ್‌ಗಳು