ಎಂ. ಸಿ ಮೋದಿ
ಮಹಾನ್ ನೇತ್ರತಜ್ಞ ಡಾ. ಎಂ. ಸಿ ಮೋದಿ
ಡಾ. ಎಂ ಸಿ ಮೋದಿ ಎಂದರೆ ಲಕ್ಷಾಂತರ ಜನರಿಗೆ ನೇತ್ರ ಚಿಕಿತ್ಸೆ ಸುಲಭವಾಗಿ ಕೈಗೆಟಕುವಂತೆ ಮಾಡಿದವರೆಂದೇ ಪ್ರಸಿದ್ಧಿ. ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಡಾ. ಮೋದಿಯವರು ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿದ್ದರೆಂದು ನಂಬಲಾಗಿದೆ.
ಮುರಿಗೆಪ್ಪ ಚನ್ನವೀರಪ್ಪ ಮೋದಿಯವರು 1916 ರ ಅಕ್ಟೋಬರ್ 4ರಂದು ಬಾಗಲಕೋಟೆಯ ಬೀಳಗಿ ಗ್ರಾಮದಲ್ಲಿ ಜನಿಸಿದರು. ಜಮಖಂಡಿಯ ಪಿ ಬಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದ ಮೋದಿಯವರು ಮುಂದೆ ಕೆ ಬಿ ಎಚ್ ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆದರು. ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಬೆಳಗಾವಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಮೋದಿಯವರು ನಂತರದಲ್ಲಿ ದಾವಣಗೆರೆಯಲ್ಲಿ ನೆಲೆಸಿದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾದ ಮೋದಿಯವರು ಕೆಲವು ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. ಕಣ್ಣಿನ ಪೊರೆ (ಕ್ಯಾಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ನಿರಂತರವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಅವರು 'ರಷ್ಯಾ' ಮತ್ತು 'ಅಮೇರಿಕ' ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ತಮ್ಮ ಸೇವೆ ಸಲ್ಲಿಸಿ ಅಲ್ಲಿನ ಗೌರವಾದರಗಳಿಗೆ ಪಾತ್ರರಾಗಿದ್ದರು.
ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ನೇತ್ರ ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಡಾ. ಎಂ. ಸಿ ಮೋದಿಯವರು ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. 'ಸಾಮೂಹಿಕ ನೇತ್ರ ಚಿಕಿತ್ಸೆ' ಹಾಗೂ 'ಸಂಚಾರಿ ಘಟಕ'ವನ್ನು ತೆರೆದ ಮೊದಲ ವೈದ್ಯರೆಂಬ ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು.
ಮೋದಿಯವರು ತಿರುಪತಿಯಲ್ಲಿ ಒಂದೇ ದಿನದಲ್ಲಿ ಸತತ 14 ಗಂಟೆಗಳ ಶ್ರಮವಹಿಸಿ 833 ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಲಕ್ಷಾಂತರ ಜನಕ್ಕೆ ಶಸ್ತ್ರಚಿಕಿತ್ಸೆ ನಡೆಸಿರುವುದೂ ಒಂದು ಅಚ್ಚಳಿಯದ ದಾಖಲೆಯೇ ಆಗಿದೆ.
ಭಾರತ ಸರ್ಕಾರವು ಡಾ. ಮೋದಿಯವರನ್ನು ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಿಂದ ಗೌರವಿಸಿತ್ತು. ಇದಲ್ಲದೆ ಅವರಿಗೆ ಹೆಲ್ಲೆನ್ ಕೆಲರ್ ಗೌರವ, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಪುಣೆ ವಿಶ್ವವಿದ್ಯಾಲಯಗಳ ಡಾಕ್ಟೊರೇಟ್ ಮತ್ತು ಅನೇಕ ದೇಶ ವಿದೇಶಗಳ ಪ್ರಶಸ್ತಿ ಗೌರವಗಳು ಸಂದಿದ್ದವು. ಮೋದಿಯವರು ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿ ನಿಯೋಜಿತರಾಗಿದ್ದರು.
ತಮ್ಮ ಜೀವನವನ್ನು ನಿರಂತರ ಜನಸೇವೆಗೆ ಮುಡಿಪಾಗಿಟ್ಟ ಮೋದಿಯವರು ನವೆಂಬರ್ 11, 2005ರಲ್ಲಿ, ತಮ್ಮ 90ನೆ ವಯಸ್ಸಿನಲ್ಲಿ ನಿಧನರಾದರು. ಅವರ ಇಚ್ಚೆಯಂತೆ ಅವರ ಕಣ್ಣುಗಳನ್ನು ಮರಣೋತ್ತರವಾಗಿ ದಾನಮಾಡಲಾಯಿತು. ಅವರ ಪುತ್ರ ಡಾ. ಅಮರನಾಥ ಮೋದಿ ಸಹಾ ನೇತ್ರ ತಜ್ಞರಾಗಿದ್ದಾರೆ.
ಮಹಾನ್ ನೇತ್ರತಜ್ಞ, ದೃಷ್ಟಿದಾನಿ ಎಂ. ಸಿ. ಮೋದಿ ಎಂಬ ಮಹಾನ್ ಚೇತನಕ್ಕೆ ನಮ್ಮ ನಮನ.
Photo Courtesy: Anush Infobase
On the birth anniversary of great eye surgeon Dr.M.C. Modi who did record number of free eye surgeries
ಕಾಮೆಂಟ್‌ಗಳು