ಜಯಂತಿ ಮನೋಹರ್
ಜಯಂತಿ ಮನೋಹರ್
ಸಾಂಸ್ಕೃತಿಕ ಲೋಕದಲ್ಲಿ ಬಹುಮುಖಿ ಕ್ರಿಯಾಶೀಲರಾಗಿರುವ ಡಾ.ಜಯಂತಿ ಮನೋಹರ್ ಅವರು ವೇದಾಧ್ಯಯನ, ಸಾಹಿತ್ಯಸೃಷ್ಟಿ, ರಂಗಕಲೆ - ಸಾಕ್ಷ್ಯಚಿತ್ರ ನಿರ್ಮಾಣ - ಚಿತ್ರಕಥೆ - ಸಹ ನಿರ್ದೇಶನ, ಭಾಷಾ ಬೋಧನೆ ಮುಂತಾದ ಹಲವು ನಿಟ್ಟಿನಲ್ಲಿ ಹೆಸರಾಗಿದ್ದಾರೆ.
ಜಯಂತಿ ಮನೋಹರ್ 1951ರ ಅಕ್ಟೋಬರ್ 2ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ಎಂ. ನಾಗರಾಜ್ ಅವರು ಗಾಂಧೀಜಿಯವರ ಮೌಲ್ಯಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆವಾಸ ಕಂಡವರು. ತಾಯಿ ಆರ್. ಅಮೃತಾಬಾಯಿಯವರು 50ರ ದಶಕದಲ್ಲೆ ಬಿ.ಎ. ಪದವಿ ಪಡೆದು ಸಮಾಜ ಕಲ್ಯಾಣ ಸಲಹಾ ಮಂಡಳಿಯಲ್ಲಿ ಮುಖ್ಯ ಆಯೋಜಕಿಯಾಗಿ ಹಲವಾರು ವರ್ಷಗಳು ಹಳ್ಳಿಗಳಲ್ಲಿ ದುಡಿದು ನಂತರ ರಾಮನಗರದ ಸಂಸ್ಕೃತ ವಿದ್ಯಾಪೀಠದಲ್ಲಿ ಮುಖ್ಯ ಉಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ಹೆಸರಾದವರು.
ಜಯಂತಿ ಮನೋಹರ್ ಅವರು ತಮ್ಮ ತಂದೆಯ ಸೋದರಮಾವ ಎಚ್.ಎಲ್.ಎನ್. ಸಿಂಹರವರ ಮನೆಯಲ್ಲಿ ಪ್ರತಿನಿತ್ಯ ನಡೆಯುತ್ತಿದ್ದ ಪುರಾಣ ಪುಣ್ಯಕಥೆಗಳ ವಾಚನ ಮತ್ತು ಹರಿಕಥಾ ಕಾಲಕ್ಷೇಪಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ತಲ್ಲೀನರಾಗಿ ಕೇಳುತ್ತಿದ್ದರು. ಜೊತೆಗೆ ಅಜ್ಜಿಯರು ಹೇಳುತ್ತಿದ್ದ ಕಥೆಗಳು, ರಾಮನಗರದಲ್ಲಿ ನಡೆಯುತ್ತಿದ್ದ ಸಂಗೀತ, ಹರಿಕಥೆ, ಉತ್ಸವ ಮುಂತಾದ ಸಾಂಸ್ಕೃತಿಕ ವಾತಾವರಣ ಇವರ ಮನಸ್ಸಿನ ಮೇಲೆ ಅಗಾಧ ಸಾಂಸ್ಕೃತಿಕ ಪ್ರಭಾವ ಬೀರಿದ್ದವು.
ಜಯಂತಿ ಅವರು ಶಾಲೆ ಕಾಲೇಜುಗಳಲ್ಲಿ ಇದ್ದಾಗ ಅಂದಿನ ದಿನಗಳಲ್ಲಿ ದೊರೆಯುತ್ತಿದ್ದ ಕಥೆ ಕಾದಂಬರಿಗಳನ್ನು ಓದಿ ಗೆಳತಿಯರಿಗೆ ವರ್ಣಿಸತೊಡಗಿದ್ದರಿಂದ ಅವರಲ್ಲಿ ಒಂದು ಕಥೆ ಹೇಳುವ ಗುಣ ಬೆಳೆಯತೊಡಗಿತು. ಹೀಗೆ ಪ್ರಾರಂಭವಾದ ಅವರ ಓದು ಮುಂದೆ ಪ್ರಬುದ್ಧ ಬರಹಗಳು ಮತ್ತು ಆಧ್ಯಾತ್ಮ ಕೃತಿಗಳವರೆಗೆ ವ್ಯಾಪಿಸಿತು.
ಜಯಂತಿ ಅವರು ಸ್ನಾತಕೋತ್ತರ ಪದವಿ ಪಡೆದನಂತರ ಭಾರತೀಯ ಸ್ಟೇಟ್ ಬ್ಯಾಂಕ್ ಅಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸತೊಡಗಿದರು. ಬ್ಯಾಂಕಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ‘ಕೊಲೀಗ್’ ಎಂಬ ಪತ್ರಿಕೆಗಾಗಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದರು.
ಜಯಂತಿ ಅವರು ಬ್ಯಾಂಕ್‌ನಲ್ಲಿದ್ದ ಕೆಲ ಹಿರಿಯ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಹ್ವಾನದಂತೆ ಕನ್ನಡ ಭಾಷೆ ಕಲಿಸಿದರು. 1970ರ ದಶಕದಲ್ಲಿ ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ವಿದೇಶಿಯರಿಗೆ ಕನ್ನಡಭಾಷೆ ಕಲಿಸತೊಡಗಿದ್ದು ಎಸ್.ಬಿ.ಐ ನಲ್ಲಿ ಉದ್ಯೋಗಿಯಾಗಿ ಭಾಷಾ ವಿಭಾಗದಲ್ಲಿ ಹತ್ತು ವರುಷ ದುಡಿದ ನಂತರ ಭಾಷೆಯನ್ನು ಕಲಿಸಲೆಂದೇ ಸಂಪೂರ್ಣವಾಗಿ ತೊಡಗಿಕೊಂಡರು. 1987ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ‘ಅನುಭವಾತ್ಮಕ ಕಲಿಕೆ’ಯ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಜರ್ಮನಿಯ ಹೈಡಲ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ‘ಮಹಾತ್ಮಗಾಂಧಿ ಶಿಕ್ಷಣ ಪದ್ಧತಿ’ಯ ಬಗ್ಗೆ ಬರೆದ ಪ್ರಬಂಧ ಮಂಡನೆಯ ಜೊತೆಗೆ ಕ್ಷಿಪ್ರ ಕನ್ನಡ ಕಲಿಕಾ ತರಗತಿಗಳ ಕುರಿತು ಸಹಾ ವಿಚಾರ ಮಂಡಿಸಿದರು.
1994ರಲ್ಲಿ ಆಸ್ಟ್ರೇಲಿಯಾದ ಮೆಲ್ಬೊರನ್‌ನಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಬೈಬಲಿನ ಹಳೆ ಒಡಂಬಡಿಕೆಯ ಒಂದು ಭಾಗವನ್ನು ಋಗ್ವೇದ ಸೂತ್ರದೊಂದಿಗೆ ಸಮನ್ವಯಿಸಿ ತುಲನಾತ್ಮಕವಾದ ಪ್ರಬಂಧ ಮಂಡಿಸಿ ಮೆಚ್ಚುಗೆಯ ಸನ್ಮಾನ ಸ್ವೀಕರಿಸಿದರು.
ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ರಂಗಭೂಮಿಯಲ್ಲಿ ಮೂಡಿದ ನವ್ಯ ಅಲೆಯಲ್ಲಿ ಜಯಂತಿ ಅವರೂ ಸಕ್ರಿಯರಾಗಿ ತೊಡಗಿಕೊಂಡರು.ಇವರಿಗೆ ತಂದೆಯ ಸೋದರಮಾವ ಎಚ್.ಎಲ್.ಎನ್. ಸಿಂಹ ಹಾಗೂ ತಾಯಿಯ ಸೋದರಮಾವ ನಾಟಕರಂಗದಲ್ಲಿ ಪ್ರಸಿದ್ದರಾಗಿದ್ದ ಬಿ.ಕೃಷ್ಣ (ತುಪ್ಪ) ಇವರುಗಳಿಂದ ಬಂದ ಬಳುವಳಿ ಜೊತೆಗಿದ್ದು ನಾಟಕ ಮತ್ತು ಸಿನಿಮಾ ರಂಗದ ಬಗ್ಗೆ ಒಲವು ಸಹಜವಾಗಿ ಜೊತೆಗೂಡಿತ್ತು.
ಜಯಂತಿ ಮನೋಹರ್ ಅವರು ಕನ್ನಡ ಎಂ.ಎ. ಓದುವ ಸಂದರ್ಭದಲ್ಲಿ ಕುವೆಂಪು ರಾಮಾಯಣ ದರ್ಶನಂನಲ್ಲಿ ‘ದಶಾನನ ಸ್ವಪ್ನ ಸಿದ್ಧಿ’ ಅಧ್ಯಾಯ ಓದಿ ಪ್ರಭಾವಿತರಾಗಿ ‘ರಾವಣಾಸುರನ ಕನಸು’ ಎಂಬ ನಾಟಕವನ್ನು ರಚಿಸಿದ್ದರು. ಇದು ಸೀತೆಯ ಬಗ್ಗೆ ರಾವಣನಿಗೆ ಇದ್ದ ಕಾಮುಕ ದೃಷ್ಟಿ ಮಾತೃವಾತ್ಸಲ್ಯವಾಗಿ ಪರಿವರ್ತನೆಯಾಗುವ ವಸ್ತುವುಳ್ಳ ನಾಟಕ. ಇದು ಹಲವಾರು ಬಾರಿ ರಂಗದ ಮೇಲೂ ಪ್ರದರ್ಶನಗೊಂಡು ಜನಪ್ರಿಯವಾಯಿತು. ಮುಂದೆ ಇದು ಕಾದಂಬರಿ ರೂಪದಲ್ಲೂ ಪ್ರಕಟಗೊಂಡಿದೆ.
ಜಯಂತಿಯವರಿಗೆ ತಮ್ಮ ಬ್ಯಾಂಕ್ ಸಹೋದ್ಯೋಗಿ ಮನೋಹರ್ ಅವರು ಬಾಳಸಂಗಾತಿಯಾಗಿದ್ದು, ಈ ದಂಪತಿಗಳು ಜೊತೆಯಾಗಿ ರಂಗಭೂಮಿ, ಕಿರುತೆರೆ ಧಾರವಾಹಿ, ಅಭಿನಯ ಮತ್ತು ಸಂಭಾಷಣೆ ರಚನೆ; ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಸಾಕ್ಷ್ಯ ಚಿತ್ರಗಳ ನಿರ್ಮಾಣ ಹೀಗೆ ಹಲವಾರು ಪ್ರಕಾರಗಳಲ್ಲಿ ಜೊತೆಗೂಡಿ ಕೆಲಸಮಾಡುತ್ತಿದ್ದಾರೆ.
1980ರಲ್ಲಿ ಬೆಂಗಳೂರಿನಲ್ಲಿ ನಡೆದ ಕಳ್ಳಭಟ್ಟಿ ದುರಂತವು 300 ಜನರನ್ನು ಬಲಿತೆಗೆದುಕೊಂಡಿದ್ದರ ಸಾಕ್ಷ್ಯಚಿತ್ರ, ವೀನಸ್ ಸರ್ಕಸ್‌ಗೆ 1981ರಲ್ಲಿ ಬೆಂಕಿಬಿದ್ದ ಅವಘಡದಲ್ಲಿ ಸಿಲುಕಿಕೊಂಡ ನೂರಾರು ಶಾಲಾಮಕ್ಕಳ ಹೃದಯ ವಿದ್ರಾವಕ ಘಟನೆ, 1982ರಲ್ಲಿ ರಾಜಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿ, ಶ್ರವಣಬೆಳಗೊಳದ ಗೊಮ್ಮಟೇಶ್ವರ ಮಹಾಮಜ್ಜನ, ಕರ್ನಾಟಕದ ವಿಶಿಷ್ಟಕಲೆ ಸಾಹಿತ್ಯಾವಧಾನ ಹೀಗೆ 16 ಸಾಕ್ಷ್ಯಚಿತ್ರಗಳನ್ನು ಜಯಂತಿ - ಮನೋಹರ್ ದಂಪತಿಗಳು ನಿರ್ಮಿಸಿದ್ದಾರೆ. ಪಿ.ಶೇಷಾದ್ರಿಯವರ ಮೆಗಾ ಧಾರಾವಾಹಿ ‘ಉಯ್ಯಾಲೆ’ಗೆ ಸಂಭಾಷಣೆ, ಜಿ.ವಿ. ಅಯ್ಯರ್ ಅವರ ಹಿಂದಿ ಮತ್ತು ಸಂಸ್ಕೃತ ದೂರದರ್ಶನ ಧಾರಾವಾಹಿ ‘ಕಾದಂಬರಿ’ ಸಹನಿರ್ದೇಶನ, ಸಂಸ್ಕೃತ ಚಿತ್ರ ಸ್ವಪ್ನವಾಸವದತ್ತಂ ಸಹನಿರ್ದೇಶನ ಮುಂತಾದವು ಇವರ ಇತರ ವೈವಿಧ್ಯಮಯ ತೊಡಗುವಿಕೆಗಳಲ್ಲಿ ಸೇರಿವೆ.
ಜಯಂತಿ ಮನೋಹರ್ ಅವರು ಭಾರತೀಯ ಚಿಂತನೆಗಳಿರುವ ಅನೇಕ ಗ್ರಂಥಗಳ ಅಧ್ಯಯನದ ಜೊತೆಗೆ ವೇದ ಮಂತ್ರಗಳ ಅಧ್ಯಯನ ನಡೆಸಿ ‘ಋಗ್ವೇದದಲ್ಲಿರುವ ಸಂಕೇತಾಕ್ಷರಗಳು – ಸಿದ್ಧಾಂಜನದ ಹಿನ್ನೆಲೆಯಲ್ಲಿ ಒಂದು ವಿಶೇಷ ಅಧ್ಯಯನ’ ಎಂಬ ಪ್ರೌಢ ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಬರೆದ ‘ಋಗ್ವೇದವನ್ನು ಏಕೆ ಓದಬೇಕು?’ ಎಂಬ ಕೃತಿಯು 2000ದಲ್ಲಿ ಪ್ರಕಟವಾಗಿದೆ. ಇದು ಪ್ರೊ. ಕಶ್ಯಪ್‌ರವರ ಪುಸ್ತಕದ ಅನುವಾದವಾಗಿದೆ. ನಂತರ ಬರೆದ ಕೃತಿ ‘ಋಗ್ವೇದದ ಅಗ್ನಿ ಮಂತ್ರಗಳು’. ಇವಲ್ಲದೆ ಭಾರತೀಯ ಚಿಂತನೆಗಳಲ್ಲಿ ಮನೋವೈಜ್ಞಾನಿಕ ತತ್ತ್ವಗಳು, ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿದ ಸೀತಾರಾಮ ಸಮಾಗಮಕ್ಕೆ ರಾವಣನ ದೌತ್ಯ, ಹಾಗೂ ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿದ ಥಾಯ್‌ಲ್ಯಾಂಡ್ ಮತ್ತು ಕಾಂಬೋಡಿಯಾಗಳಲ್ಲಿ ಹರಡಿರುವ ಭಾರತೀಯ ಸಂಸ್ಕೃತಿ ಮುಂತಾದ ಇವರ ಕೃತಿಗಳು ಪ್ರಕಟಗೊಂಡಿವೆ.
ಜಯಂತಿ ಮನೋಹರ್ ಅವರು ವಿಶೇಷವಾಗಿ ವೇದಮಂತ್ರಗಳಲ್ಲಿ ಸಂಕೇತದಲ್ಲಿ ಪ್ರಕಟಗೊಂಡಿರುವ ಅಧ್ಯಾತ್ಮಿಕ ಹಾಗೂ ಮನೋವೈಜ್ಞಾನಿಕ ಅಂತರಾರ್ಥದ ಅಧ್ಯಯನ ಹಾಗೂ ವಾಲ್ಮೀಕಿ ರಾಮಾಯಣದೊಂದಿಗೆ ಥಾಯ್‌ಲ್ಯಾಂಡ್, ಕಾಂಬೋಡಿಯಾ, ಬಾಲಿ ಮತ್ತು ವಿವಿಧ ಕನ್ನಡ ರಾಮಾಯಣಗಳ ತೌಲನಿಕ ಅಧ್ಯಯನ ಮತ್ತು ಪಂಡಿತ ತ್ರಯಂಬಕ ಮಖಿಯ ‘ಧರ್ಮಕೂತಂ’ ಗ್ರಂಥದ ಇಂಗ್ಲಿಷ್ ಅನುವಾದ ಮುಂತಾದವುಗಳ ವಿಶೇಷಾಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಜಯಂತಿ ಮನೋಹರ್ ಅವರ ಭಾರತೀಯ ಚಿಂತನೆಯಲ್ಲಿ ಮನೋವೈಜ್ಞಾನಿಕ ತತ್ತ್ವಗಳು ಕೃತಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಮತ್ತು ವೇದಾಧ್ಯಯನದ ಸಾಧನೆಗಾಗಿ ಶ್ರೀ ಅರೋಬಿಂದು ಕಪಾಲಿ ಶಾಸ್ತ್ರಿ ವೇದ ಸಂಸ್ಕೃತ ಸಂಸ್ಥೆಯ ಟಿ.ವಿ. ಕಪಾಲಿ ಶಾಸ್ತ್ರಿ ಪುರಸ್ಕಾರ, ಎಂ.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ, ಅಜಂತಾ ರಾಷ್ಟರತ್ನ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ.ಹಿರಿಯಣ್ಣ ಪ್ರಶಸ್ತಿ ಮುಂತಾದ ಗೌರವಗಳು ಸಂದಿವೆ.
ಜಯಂತಿ ಮನೋಹರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of scholar Dr. Jayanthi Manohar

ಕಾಮೆಂಟ್‌ಗಳು