ವಿ. ಸೀತಾರಾಮಯ್ಯ
ವಿ. ಸೀತಾರಾಮಯ್ಯ
ಕಾದಿರುವಳು ಶಬರಿ,
ರಾಮ ಬರುವನೆಂದು,
ತನ್ನ ಪೂಜೆಗೊಳುವನೆಂದು..
ಈ ಶಬರಿ ಪದ್ಯ, ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪಿದೆಯೇ?
ಮಾನವನೆತ್ತರ ಆಗಸದೇರಿಗೆ
ಏರುವವರೆಗೂ ಏರೇವು;
ಮಾನವ ಹೃದಯಕೆ ವಿಶ್ವವಿಶಾಲತೆ
ಹಾಯುವವರೆಗೂ ಹಾದೇವು
ಎಂದು “ವಿಶ್ವಾಸ”ವನ್ನು ತುಂಬಿದ ಕವನ ಕೇಳಿರಬೇಕಲ್ಲವೆ?
ಕಂಡಲ್ಲಿ ಗುಣಕೆ ಕೈ ಮುಗಿದು ಕೊಂಡಾದಿ ಕರೆವ,
ಎತ್ತಿ ಮಡಿಲಲಿ ತೂಗಿ ಜಗಕೆಲ್ಲ ತೋರಿ ತಣಿವ,
ಹಾಲ್ ಬೆಣ್ಣೆ ಹೆಜ್ಜೇನು ಕೆನೆಮೊಸರನೂಡಿ
ಒಳ್ಪನುಪಚರಿಸಿ ಉಪಚರಿಸಿ ಮಣಿವ
ಧನ್ಯದಾನದ ನೆಲೆಯು ನಮ್ಮ ಹೊನ್ನಾಡು
ಹೀಗೆ ನಮ್ಮ ನಾಡಿನ ಸವಿ ವರ್ಣನೆ ಕೇಳಿರಬೇಕಲ್ಲವೆ.
“ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು”
ಈ ಹಾಡು ಪ್ರತೀ ಮದುವೆಗಳಲ್ಲಿ ಹೆಣ್ಣು ಮಗಳನ್ನು ಗಂಡನ ಮನೆ ತುಂಬಿಸುವಾಗ ಹಾಡುತ್ತಾರಲ್ಲವೇ. ಇಂತಹ ಸೊಗಸಾದ ಅನೇಕ ಗೀತೆಗಳ ಕರ್ತೃ ನಮ್ಮ ಕನ್ನಡ ನಾಡಿನ ವರ ಪುತ್ರ ವಿ.ಸೀತಾರಾಮಯ್ಯನವರು.
ವಿ. ಸೀತಾರಾಮಯ್ಯನವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದ ವಿಸೀ ಅವರು 1928ರಲ್ಲಿ ಮೈಸೂರಿನ ಶಾರದಾ ವಿಲಾಸ ಶಾಲೆಯಿಂದ ಪ್ರಾರಂಭಗೊಂಡು 1955ರಲ್ಲಿ ನಿವೃತ್ತಿ ಆಗುವ ವರೆಗೆ ರಾಜ್ಯದ ಹಲವೆಡೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಅವರು ಶಾಸ್ತ್ರೀಯ ಸಂಗೀತವನ್ನು ಮೈಸೂರು ವಾಸುದೇವಾಚಾರ್ಯ ಮುಂತಾದ ಹಿರಿಯರಲ್ಲಿ ಶಾಸ್ತ್ರೀಯವಾಗಿ ಅಭ್ಯಸಿಸಿದ್ದರು. ಹಲವು ಕಾಲ ಅವರು ತಮ್ಮ ಕವನಗಳನ್ನು ಸಂಗೀತದ ಧಾಟಿಯಲ್ಲಿ ಹಾಡುತ್ತಿದ್ದರು ಕೂಡಾ.
ವಿನಯನಿಧಿ, ಸ್ನೇಹವತ್ಸಲ, ಧೀಮಂತ ವಿದ್ವಾಂಸ, ವಾಗ್ಮಿ, ಉದಾರಿ, ಶುಚಿರುಚಿ ಚತುರ ಹೀಗೆ ವಿ. ಸೀತಾರಾಮಯ್ಯನವರು ಪ್ರಸಿದ್ಧರು.
ವಿ. ಸೀತಾರಾಮಯ್ಯನವರು ಮುಖ್ಯವಾಗಿ ಕವಿ, ವಿಮರ್ಶಕ. ಅವರ ಮೊದಲ ಗ್ರಂಥವಾದ ‘ಪಂಪಾ ಯಾತ್ರೆ’ ಕನ್ನಡದ ಮೊದಲ ಪ್ರವಾಸ ಕಥನವಷ್ಟೇ ಅಲ್ಲ, ಒಂದು ಚಾರಿತ್ರಿಕ ಸತ್ಯದ ಪುನರ್ದರ್ಶನವಾಗಿ ಇಂದಿಗೂ ಕಂಗೊಳಿಸುತ್ತಿದೆ. ಹಾಳು ಹಂಪೆ, ಬಾಳು ಹಂಪೆಯಾಗಿದ್ದ ಕಾಲದ ವೈಭವದ ಚಿತ್ರ ಕಣ್ಮುಂದೆ ಸುಳಿದು ನಮ್ಮನ್ನು ಗತವೈಭವದ ಲೋಕಕ್ಕೆ ಕರೆದೊಯ್ಯುತ್ತದೆ.
ಬಹುಶಃ ಹಾಡುಗಳಿಗಾಗಿಯೇ ಹುಟ್ಟಿದ ‘ಗೀತಗಳು’ ವಿಸೀ ಅವರ ಪ್ರಥಮ ಸಂಕಲನ. ಅದರ ಮುನ್ನುಡಿಯನ್ನು ಬಿ.ಎಂ. ಶ್ರೀಕಂಠಯ್ಯನವರು ಬರೆದಿದ್ದಾರೆ. ಅವರ ಮಾತುಗಳು ಇವು: “ಈ ಗೀತಗಳಲ್ಲಿ ಸಂಗೀತ ಕ್ರಮದಲ್ಲಿ ಹಾಡತಕ್ಕವು ಕೆಲವು; ಛಂದಸ್ಸಿಗನುಸಾರವಾಗಿ ಹೇಳತಕ್ಕವು ಕೆಲವು. ಹೊಸ ಛಂದಸ್ಸುಗಳ ಅವಶ್ಯಕತೆಯನ್ನು ತಿಳಿದ ವಿಮರ್ಶಕರು ಇಲ್ಲಿ ಕೆಲವು ಸುಂದರ ರೂಪಗಳನ್ನೂ ಕಾಣಬಹುದಾಗಿದೆ. ಭಾಷೆಯಲ್ಲಿ ಒಂದು ಬಗೆಯ ಸರಳತೆ, ಓಜಸ್ಸು, ಗಾಂಭೀರ್ಯ ತುಂಬಿದೆ. ಯುವಕರ ರಕ್ತವನ್ನು ಕುದಿಸುವ ದೇಶಾಭಿಮಾನ ಮತ್ತು ಪ್ರೇಮ; ಪ್ರಕೃತಿಮಾತೆಯ ಭಯಂಕರವಾದ ಮತ್ತು ಸೌಮ್ಯವಾದ ದರ್ಶನಗಳು; ಋತುಗಳ ಕುಣಿತ, ದೇವತಾ ವಿಷಯದಲ್ಲಿ ಮನಸ್ಸನ್ನು ತೂಗಾಡಿಸುವ ಸಂದೇಹ, ಭಕ್ತಿ, ಪಾಪದ ಭಯ, ಧರ್ಮದ ಪ್ರೀತಿ; ಮುಖ್ಯವಾಗಿ ಎಲ್ಲ ಕಡೆಗಳಲ್ಲಿಯೂ ಕಾಣುವ ಸೂಕ್ಷ್ಮವಾದ, ಉದಾರವಾದ, ನಿರ್ಮಲವಾದ ಮನಸ್ಸು – ಇವು ಸಹಾನುಭೂತಿಯಿಂದ ನೋಡತಕ್ಕವರಿಗೆ ಈ ಗೀತೆಗಳಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ.” ಕನ್ನಡ ನವೋದಯದ ಆಚಾರ್ಯರಾದ ಬಿ.ಎಂ.ಶ್ರೀ ಅವರ ಈ ಮಾತುಗಳು ಇಂದಿಗೂ ವಿಸೀ ಅವರ ಕೃತಿಗಳಿಗೆ ತೋರ್ಗೈಯಾಗಿ ನಿಂತಿದೆ.
ವಿಸೀ ಅವರು ಸ್ವತಂತ್ರ ಪ್ರವೃತ್ತಿಯ ಕಾವೇ ಧೈರ್ಯವಾಗಿ ನುಡಿಯಬಹುದಾದ ಮಾತುಗಳನ್ನು 1931ರಲ್ಲಿಯೇ ಪ್ರಥಮ ಕವನಸಂಕಲನದಲ್ಲಿಯೇ ಹೃದಯಂಗಮವಾಗಿ ವಿವರಿಸಿ ನುಡಿದು ಯುವಕರ ಮನಸ್ಸನ್ನು ಗೆದ್ದರು. ಅವರ ಈ ಸಂಕಲನದಲ್ಲಿ ಪಡೆದ ಯಶಸ್ಸು ಶಾಶ್ವತವಾಗಿ ಅವರನ್ನು ನಮ್ಮ ಹಿರಿಯ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ‘ಪ್ರಶ್ನೆ’, ‘ಚಿತ್ತ’, ‘ಯಾನ’, ‘ಸಮಭೂಮಿ’, ‘ಮಧುಮಾಸ’, ’ವೀಣಾಗಾನ’, ‘ಸ್ನೇಹ’, ‘ಕೋಗಿಲೆ’ ಮುಂತಾದ ಅವರ ಬಲು ಸೊಗಸಾದ ಕವನಗಳು ಈಗಲೂ ಗಾನಮಾಧುರ್ಯವನ್ನು ಬಿಂಬಿಸುತ್ತಿವೆ. ಭಾವವಿಸ್ತಾರವನ್ನು ಚಿತ್ರಿಸುತ್ತಿವೆ. ಸ್ನೇಹದ ಪೂರ್ಣ ಪ್ರಭಾವವನ್ನು ಅರಿತಿದ್ದ, ಬಹು ಗಾಢವಾದ ಸ್ನೇಹವನ್ನು ಪಡೆದಿದ್ದ ಅವರ “ಸ್ವರ್ಗದೊಳಗೀ ಸ್ನೇಹ ದೊರೆವುದೇನೂ” ಎಂಬ ಸಾಲು ಇಂದಿಗೂ ಅನುರಣವಾಗುತ್ತಿದೆ. ಪ್ರಸಿದ್ಧ ವೈಣಿಕ ವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪನವರ ವಾದನವನ್ನು ಕೇಳಿ ಬರೆದ ‘ವೀಣಾಗಾನ’ ಬಹು ಅಪರೂಪದ ಕವನ.
ಹೀಗೆ ಪ್ರಾರಂಭವಾದ ವಿಸೀ ಅವರ ಕವನರಚನೆ ಕನ್ನಡದ ಕೆಲವು ಅತ್ಯಂತ ಶ್ರೇಷ್ಠವಾದ ಕವನಗಳನ್ನು ಸೃಷ್ಟಿಸಿವೆ. ‘ಮೃಗಶಾಲೆಯ ಸಿಂಹಗಳು’, ‘ಅಭೀಹಿ’, ‘ಮನೆ ತುಂಬಿಸುವುದು', ‘ಗಡಿದಾಟು’, ‘ಶಿಲ್ಪಿ’, ‘ಕ್ರೋಧಕೇತನ’, ‘ಕಸ್ಮೈದೇವಾಯ’, ‘ಬಾಳಹೆದ್ದಾರಿ’, ‘ಪುರಂದರದಾಸರು’ ಮುಂತಾದ ಅತ್ಯುತ್ತಮ ಕವನಗಳು ವಿಸೀ ಅವರ ಇಂತಹ ಕವನ ಸಂಕಲನಗಳಿಂದ ದೊರೆಯುವ ಮಣಿಗಳು. ’ಅರಲು-ಬದಲು’ ಕವನ ಸಂಕಲನದ ಮುನ್ನುಡಿಯಲ್ಲಿ ಅವರ ಮಾತುಗಳು ಹೃದಯ ಸ್ಪರ್ಶಿಯಾಗಿವೆ: "ಸಂಸ್ಕಾರದ ಪರಂಪರೆಯನ್ನು ಗುರುತಿಸಲಾರದ ಜನ ಏನೇನೋ ಹೇಳಿ ಹಾರಾಡಬಹುದು. ಕಾವ್ಯದ ಹೃದಯದ ಅನ್ವೇಷಣೆ, ಸೌಂದರ್ಯದ ಸಮೀಕ್ಷೆ ಅಷ್ಟೊಂದು ಸುಲಭವಾಗಿ ಕೈಗತವಾಗುವ ವಸ್ತುವಲ್ಲ” ಬಹು ನವಿರಾದ ಈ ಬರಹ ಅವರ ಮಾಗಿದ ಪರಿಣತಿಯ ಫಲ.
“ವಿಮರ್ಶೆ ಒಂದು ಟಾರ್ಚ್ ಲೈಟ್ ಆಗಬೇಕು. ಸಿಕ್ಕಿದ್ದನ್ನೆಲ್ಲ ಮಣ್ಣು ಮುಕ್ಕಿಸುವ ಜಡ್ಜಿಯ ತೀರ್ಪಾಗಬಾರದು” ಎಂಬುದು ವಿಸೀ ಆಗಾಗ ಹೇಳುತ್ತಿದ್ದ ಮಾತು. ಇಂಥ ಉನ್ನತ ಚಿಂತನೆಯ ಮತಿಯಿಂದ ಅವರು ರಚಿಸಿರುವ ಎರಡು ಮೂರು ವಿಮರ್ಶಾ ಗ್ರಂಥಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುತ್ತದೆ. ‘ಕರ್ನಾಟಕ ಕಾದಂಬರಿ’, ‘ಅಭಿಜ್ಞಾನ ಶಾಕುಂತಲ ನಾಟಕ’, ‘ಅಶ್ವತ್ಥಾಮನ್’ – ಈ ಮೂರೂ ಆಯಾ ವಿಷಯವನ್ನೇ ಕುರಿತ ಕನ್ನಡ ಗ್ರಂಥಗಳಲ್ಲಿ ಶಿಖರಪ್ರಾಯವಾಗಿವೆ.
ವಿಸೀ ನಾಲ್ಕು ಸ್ವಂತ ನಾಟಕಗಳನ್ನೂ, ಎರಡು ಇಂಗ್ಲೀಷ್ ನಾಟಕಗಳ ಅನುವಾದಗಳನ್ನೂ ರಚಿಸಿದ್ದಾರೆ. ‘ಸೊಹ್ರಾಬ್ –ರುಸ್ತುಂ’ ಮ್ಯಾಥ್ಯೂ ಅರ್ನಾಲ್ದನ ಕವಿತೆಯ ನಾಟಕ ರೂಪಕ. ‘ಆಗ್ರಹ’ ಭಾರತ ಸೌಪ್ತಿಕ ಪರ್ವದ ಕಥೆಯ ಅಶ್ವತ್ಥಾಮನನ್ನು ಚಿತ್ರಿಸುವ ರೂಪಕ. ‘ಚ್ಯವನ’ ಆಧುನಿಕ ಜೀವನದ ಸಮಸ್ಯೆಯನ್ನು ಆಧರಿಸಿ ರಚಿತವಾಗಿರುವ ನಾಟಕ. ‘ಶ್ರೀಶೈಲ ಶಿಖರ’ ಅವರ ಮಿತ್ರರು ಹೇಳಿದ ಕಥೆಯ ರೂಪಾಂತರ. ಒಂದು ಹೆಣ್ಣಿನ ಬಾಳು, ಭಾವನೆಗಳ ಅಂತರಂಗವನ್ನು ಚಿತ್ರಿಸುವ ಈ ನಾಟಕ ಬಹು ಬೆಲೆ ಬಾಳುವ ತತ್ವವನ್ನು ಸಾರುತ್ತದೆ.
ವಿಸೀ ಸಂಪಾದಿಸಿದಷ್ಟು ಮಿತ್ರವರ್ಗ ಬೇರೆಯವರಿಗೆ ಇರುವುದು ಸಾಧ್ಯವಿಲ್ಲ. ಅವರ ವ್ಯಕ್ತಿತ್ವದ ಸತ್ಯವೇ ಮೈತ್ರಿಯಿಂದ ಕೂಡಿದ್ದು. ಹಿರಿಯರನ್ನು, ಮಿತ್ರರನ್ನು ಕುರಿತ ಅವರ ಗ್ರಂಥಗಳು: ‘ಮಹನೀಯರು’, 'ಶಿವರಾಮ ಕಾರಂತರು’, ‘ಕಾಲೇಜು ದಿನಗಳು’. ಇವುಗಳಲ್ಲಿರುವ ಚಿತ್ರ ಪರಂಪರೆ ನೆನಪಿಗೆ ಸದಾ ಹಸಿರನ್ನು ಕೊಡುತ್ತದೆ.
ಅವರ ‘ಹಣ ಪ್ರಪ್ರಂಚ’ ಕನ್ನಡ ಭಾಷೆಯಲ್ಲಿ ರಚಿತವಾದ ಶಾಸ್ತ್ರ ಗ್ರಂಥ. ಹಣ ಪ್ರಪಂಚವನ್ನು ಓದುವಾಗ ಒಂದು ಕಾದಂಬರಿಯನ್ನು ಓದಿದಂತೆ ರಸವತ್ತಾಗಿರುವುದು ಕಂಡು ಬರುತ್ತದೆ. ‘ಸಾಹಿತ್ಯ ವಿಮರ್ಶೆಗಳಲ್ಲಿ ಅರ್ಥ ಮತ್ತು ಮೌಲ್ಯ’ ಎಂಬ ಗ್ರಂಥದಲ್ಲಿ ಮೂಡಿ ಬಂದಿರುವ ವಿಚಾರದ ವಿಸ್ತಾರ ಮತ್ತು ಆಳ, ಅಪಾರವಾದ ಮತ್ತು ಖಚಿತವಾದ ವಿದ್ವತ್ತಿನಿಂದ ಮಾತ್ರ ಮೂಡುವುದು ಸಾಧ್ಯ. ‘ಸತ್ಯ ಮತ್ತು ಮೌಲ್ಯ’ ದರ್ಶನ ಶಾಸ್ತ್ರ ಪರವಾದ ಗ್ರಂಥ.
ವಿಸೀ ಅವರಿಗೆ 1973 ರಲ್ಲಿ “ಅರಲು-ಬರಲು” ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ, ಭಾರತೀಯ ಜ್ಞಾನಪೀಠಪ್ರಶಸ್ತಿ ಸಲಹಾ ಮಂಡಲಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರು ಹಿಂದೂ ಪತ್ರಿಕೆಯಲ್ಲಿ ಕನ್ನಡ ಸಾಹಿತಿಗಳ ಮತ್ತು ಕನ್ನಡ ಸಾಹಿತ್ಯದ ಅರಿವನ್ನು ಅನ್ಯ ಭಾಷಿಕರಿಗೆ ತಿಳಿಸಲು ಸಂಪಾದಿಸಿರುವ ಲೇಖನಗಳೂ ಅಭೂತಪೂರ್ವ. ವಿಸೀ ಯವರು 1983ರ ಸೆಪ್ಟಂಬರ್ 4ರಂದು ಈ ಲೋಕವನ್ನಗಲಿದರು.
ವಿಸೀ ಅವರು ಯುವಕರಾಗಿ ಕೈಗೊಂಡ ವ್ರತವನ್ನು ಈ ಸಾಲುಗಳು ತಿಳಿಸುತ್ತವೆ:
ಹೊರುವೆವು ಮಲ್ಲರೊಲು ಕಾಲದೊಡನೆ
ಕಾಲವೆಮ್ಮಯದಾಗಿ ಆಗುವನಕ;
ಗರಿಯಿಕ್ಕದೆಳೆವೆಕ್ಕಿ ಎಮ್ಮಾಸೆ ಇನ್ನೂ
ತುಮ್ಬುಗರಿವಕ್ಕಿಯದು ಆಗುವನಕ,
ಆಗಿ ಭೋರಿಡುವ ಬಿರುಗಾಳಿ ಸಮಕೂ
ಗಾಳಿ ಕಡೆ ರೆಕ್ಕೆಗಳ ಹರಡುವನಕ.
ಈ ಕಾರ್ಯದಲ್ಲಿ ಅವರ ವಿಶ್ವಾಸ ಎಷ್ತಿತ್ತೆಂಬುದನ್ನು ಅವರದೇ ಕವನ ಬಲು ಸುಂದರವಾಗಿ ಚಿತ್ರಿಸುತ್ತದೆ.
ಮಾನವನೆತ್ತರ ಆಗಸದೇರಿಗೆ
ಏರುವವರೆಗೂ ಬೆಳೆದೇವು;
ಮಾನವ ಹೃದಯಕೆ ವಿಶ್ವವಿಶಾಲತೆ
ಹಾಯುವವರೆಗೂ ಹಾದೇವು.
ತತ್ವದ ಸಿದ್ಧಿಯ ಕಾಲಕೆ ಕಾದರೆ
ಯುಗಯುಗಗಳು ಸಾಕಾದಾವೆ?
ಸಖ್ಯಕೆ ಸಹನೆಗೆ ಕರುಣೆಗೆ ಒಲವಿಗೆ
ಗುಡಿನುಡಿ ಅಡ್ಡಿಯ ತಂದಾವೆ?
ಒಡೆಯುವ ಮನಗಳ ಸುಡುವ ನಿರಾಸೆಯ
ವೇಗವ ಕಟ್ಟಲೆ ತಡೆದೀತೆ?
ಮೃದು ಸೌಹಾರ್ದವು ನೋವಿಗೆ ಕರಗದೆ
ಸಾಹ್ಯಕೆ ನುಗ್ಗದೆ ನಿಂತೀತೆ?
ಶತಶತಮಾನವು ತಾವೊಪ್ಪುವ ತೆರ
ನವ ವಿಶ್ವಾಸವ ತೊಟ್ಟಾವು;
ಹಿರಿಮೆಯೆ ಚೆಲುವಿನ ಕನಸನು ರೂಢಿಸಿ
ಪ್ರೇಮವ ಶ್ರೇಯವ ನಟ್ಟಾವು.
ಇಹದಲಿ ಒಪ್ಪಲು ಆಗದ ಪರವನು
ಬಯಕೆಯು ಕರೆವುದೆ ಕೈಚಾಚಿ?
ಬಾಳನು ಶೋಧಿಸಿ ಶುಚಿಯನು ಬೆಳೆದರೆ
ಇಹವೇ ಅರಳದೆ ಪರವಾಗಿ?
ಈ ನಂಬಿಕೆಯಿಂದ ಜೀವನ ನಡೆಸಿದ ವಿಸೀ ಕೊನೆಯತನಕ ನಗು ಮುಖವನ್ನು ಜಗತ್ತಿಗೆ ತೋರಿಸಿದರು. ಕಹಿ, ನೋವು, ಕಟಕಿಗಳನ್ನು ನುಂಗಿಕೊಂಡು ಬದುಕಿದರು. ಅವರ ಶಿಷ್ಯವಾತ್ಸಲ್ಯ, ಗುರುಗೌರವ, ಅಧ್ಯಯನ, ಅಧ್ಯಾಪನ, ಕಲಾಸ್ವಾದನೆ, ಎಟುಕದದುರ ಕಡೆಗೆ ಕೈಚಾಚಿ ಗೆಲ್ಲಬೇಕೆಂಬ ಸಾಹಸ, ಗೆದ್ದಾಗ, ಅದನ್ನು ಡಂಗುರ ಹಾಕಿ ಸಾರದ ವಿನೀತಗುಣ ಇತ್ಯಾದಿಗಳಿಂದ ಅವರು, ಅವರು ಅವರ ಕಾರ್ಯಗಳನ್ನೆಲ್ಲ ಮೀರಿದ ದೊಡ್ಡ ಚೈತನ್ಯವಾಗಿದ್ದರು.
ಆಧಾರ: ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ವಿ.ಸೀ ಕುರಿತ ಬರಹ.
On the birth anniversary of our great poet V. Seetharamaiah 🌷🙏🌷


ಕಾಮೆಂಟ್‌ಗಳು