ವೆಂಕಟಾಚಲಯ್ಯ
ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯ
ಎಂ. ಎನ್. ವೆಂಕಟಾಚಲಯ್ಯನವರು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ, ಕಾನೂನುಲೋಕ, ಶೈಕ್ಷಣಿಕ ಲೋಕ ಮತ್ತು ಹಿಂದಿನ ತಲೆಮಾರಿನ ಸರಳ ಸುಸಂಸ್ಕೃತ ಜನಾಂಗದ ಪ್ರತಿನಿಧಿಗಳಾಗಿ, ನಮ್ಮ ನಡುವೆ ಇರುವ ಎದ್ದು ಕಾಣುವ ಹಿರಿಯರಾಗಿದ್ದಾರೆ.
ಮನೇಪಲ್ಲಿ ನಾರಾಯಣರಾವ್ ವೆಂಕಟಾಚಲಯ್ಯ ಅವರು 1929ರ ಅಕ್ಟೋಬರ್ 25ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿಗಳನ್ನು ಗಳಿಸಿದರು.
ವೆಂಕಟಾಚಲಯ್ಯನವರು 1951ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. 1975ರ ನವೆಂಬರ್ 6ರಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನಿಯೋಜಿತರಾದರು. 1987ರ ಅಕ್ಟೋಬರ್ 5ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಭಡ್ತಿ ಪಡೆದರು. 1993ರ ಫೆಬ್ರವರಿ 12ರಂದು ದೇಶವು ಅವರಿಗೆ ಸರ್ವೋಚ್ಚ ನ್ಯಾಯಾಲಯದ ಇಪ್ಪತ್ತೈದನೆಯ ಪ್ರಧಾನ ನ್ಯಾಯಮೂರ್ತಿಗಳ ಗೌರವಯುತ ಜವಾಬ್ದಾರಿಯನ್ನು ವಹಿಸಿತು. ನ್ಯಾಯಮೂರ್ತಿ ವೆಂಕಟಾಚಲಯ್ಯನವರು 1994ರ ಅಕ್ಟೋಬರ್ 24ರಂದು ನಿವೃತ್ತರಾದರು.
ವೆಂಕಟಾಚಲಯ್ಯನವರು ನಿವೃತ್ತಿಯ ನಂತರದಲ್ಲೂ ಭ್ರಷ್ಟಾಚಾರ ನಿವಾರಣೆ ಮತ್ತು ಮಾನವ ಹಕ್ಕುಗಳ ವಿಚಾರ, ಮತ್ತು 2003ರಲ್ಲಿ ಆಡಳಿತದಲ್ಲಿ ಬದಲಾವಣೆಗಳ ಕುರಿತಾದ ಚಿಂತನಶೀಲ ಯೋಜನೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ವೆಂಕಟಾಚಲಯ್ಯನವರು 1996-1998 ಅವಧಿ ಮತ್ತು 2000 ವರ್ಷದಲ್ಲಿ 'ರಾಷ್ಟ್ರೀಯ ಹಕ್ಕುಗಳ ಅಯೋಗ' ಮತ್ತು 'ಸಂವಿಧಾನ ತಿದ್ದುಪಡಿ ವಿಮರ್ಶಾ ಆಯೋಗಗಳ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯನವರು ಪ್ರಸಕ್ತದಲ್ಲಿ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳ ಉನ್ನತ ಅಧ್ಯಯನ ಕೇಂದ್ರದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯನವರಿಗೆ ಪದ್ಮವಿಭೂಷಣ ಪ್ರಶಸ್ತಿ ಹಾಗೂ ಪದುಚೇರಿ ವಿಶ್ವವಿದ್ಯಾಲಯ, ಮಣಿಪಾಲ್ ವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಗಳ ಹಿರಿಯ ಗೌರವಗಳು ಸಂದಿವೆ.
ಹಿರಿಯರಾದ ನ್ಯಾಯಮೂರ್ತಿ ವೆಂಕಟಾಚಲಯ್ಯನವರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಕಾಣುವಾಗ ಅವರು ತೋರುವ ಸರಳತೆ, ಗಾಂಭೀರ್ಯ, ನಗೆಮೊಗ ಮತ್ತು ಮಾತನಾಡುವಲ್ಲಿ ತೋರುವ ವಿದ್ವತ್ತುಗಳು ಅವರ ವ್ಯಕ್ತಿತ್ವದ ಹಿಂದಿರುವ ಆಗಾಧತೆಯ ಕುರಿತು ನಮ್ಮಲ್ಲಿ ಸ್ವಾಭಾವಿಕವಾಗಿ ಎಂಬಂತೆ ನಮಗರಿವಿಲ್ಲದಂತೆಯೇ ಗೌರವಭಾವ ಹುಟ್ಟಿಸುತ್ತವೆ.
ನಮ್ಮ ನಡುವಿನ ಹಿರಿಯ ಮಹನೀಯರಾದ ನ್ಯಾಯಮೂರ್ತಿ ಎಂ. ಎನ್. ವೆಂಕಟಾಚಲಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
On the birth day Former Chief Justice is India M. N. Venkatachalaiah Sir 🌷🙏🌷
ಕಾಮೆಂಟ್‌ಗಳು