ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ.ಅನಂತರಾಮು



ಕೆ.ಅನಂತರಾಮು


ಡಾ.ಕೆ.ಅನಂತರಾಮು ಅವರು ಬರಹಗಾರರಾಗಿ, ಪ್ರಾಧ್ಯಾಪಕರಾಗಿ ಮತ್ತು ಪ್ರಕಾಶಕರಾಗಿ ಹೆಸರಾಗಿದ್ದಾರೆ. 

ಅನಂತರಾಮು ಅವರು 1943ರ ಅಕ್ಟೋಬರ್ 25ರಂದು ಜನಿಸಿದರು. ಹುಣಸೂರು ತಾಲೂಕು ಗಾವಡಗೆರೆ ಇವರ ಹುಟ್ಟೂರು. ತಂದೆ ಎನ್.ಎಸ್.ಕೃಷ್ಣಪ್ಪ.  ತಾಯಿ ಸುಬ್ಬಲಕ್ಷ್ಮಿ. ಗಾವಡಗೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕೆ.ಆರ್.ನಗರದಲ್ಲಿ ಪ್ರೌಢ ಶಿಕ್ಷಣ ಪೂರೈಸಿ, ಮೈಸೂರಿನ ಸಿಪಿಸಿಯಲ್ಲಿ ಡಿಪ್ಲೊಮಾದಲ್ಲಿ ಮೂರು ವರ್ಷಗಳ ಆಟೊಮೊಬೈಲ್ ಕೋರ್ಸ್ ಮಾಡಿದರು. 

ಅನಂತರಾಮು ಅವರಿಗೆ ಹೈದರಾಬಾದ್‌ನ ಎಪಿಎಸ್‌ಆರ್‌ಟಿ ಬಸ್ ಡಿಪೋದಲ್ಲಿ ಕೆಲಸ ದೊರಕಿತು. ಬಳಿಕ ಅನಂತಪುರದಲ್ಲಿ ಉದ್ಯೋಗಾವಕಾಶ ದೊರಕಿತು. ಸೇವೆಗೆ ಸೇರಿದ ಸ್ವಲ್ಪ ದಿನದಲ್ಲೇ ಕೆಲಸ ಹಿಡಿಸದೆ ರಾಜೀನಾಮೆ ನೀಡಿದರು.  ತರಬೇತಿ ಅವಧಿಯಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ಯೂನಿವರ್ಸಿಟಿಯ ಸಂಜೆ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ಕೆಲಸ ಬಿಟ್ಟ ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಮಾಡಿ, ಬಳಿಕ ಮೈಸೂರು ವಿವಿಯಲ್ಲಿ ಎಂಎ ಮಾಡಿದರು. 1970ರಲ್ಲಿ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಆರಂಭ ಮಾಡಿದರು. 1972ರಲ್ಲಿ ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಮುಂದುವರಿಸಿದರು. ಅಲ್ಲಿಯೇ 2004ರಲ್ಲಿ ನಿವೃತ್ತರಾದರು. ಈ ನಡುವೆ ಕನ್ನಡ, ಭಾಷಾ ವಿಜ್ಞಾನ, ಹಿಂದಿಯಲ್ಲಿ ಎಂಎ. ಜೈನಾಲಜಿಯಲ್ಲಿ ಪಿಎಚ್.‌ಡಿ ಪದವಿ ಪಡೆದರು.

ಅನಂತರಾಮು ಅವರು ಬರಹಗಾರರಾಗಿ ಮತ್ತು ಪ್ರಕಾಶಕರಾಗಿಯೂ ಹೆಸರು. ಅವರು "ಅನಂತ ಪ್ರಕಾಶನ"ದ ಮೂಲಕ  ತಮ್ಮ ಕೃತಿಗಳನ್ನು ಪ್ರಕಟಿಸುತ್ತಾರೆ.  ಇವರ ಬರಹಗಳಲ್ಲಿ ಉದಯ ರವಿಯ ನಾಡಿನಲ್ಲಿ - ಎಕ್ಸ್‌ಪೋ 70 (ಜಪಾನ್ ಪ್ರವಾಸ ಕಥನ), ಸಕ್ಕರೆಯ ಸೀಮೆ - ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ ಪ್ರವಾಸ ಕಥನ, ದಕ್ಷಿಣದ ಸಿರಿನಾಡು - ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಥನ, ಪವಿತ್ರ ಪರಿವ್ರಜನ; ಕವಿ ಬ್ರಹ್ಮಶಿವ - ಡಾಕ್ಟರೇಟ್ ಸಂಶೋಧನಾ ಪ್ರಬಂಧ; ದೇವರ ದಾಸಿಮಯ್ಯ - 101 ಸ್ವತಂತ್ರ ವಚನಗಳು, ರಾಮಕೃಷ್ಣ ಆಶ್ರಮದಿಂದ ‘ವಿವೇಕಾನಂದರ ನೀತಿ ಕತೆಗಳು’, ನವಲಗುಂದ ನಾಗಲಿಂಗಪುರ ಮಠದಿಂದ ಪ್ರಕಟಗೊಂಡ ‘ಅಜಾತ ನಾಗಲಿಂಗಸ್ವಾಮಿ’, ‘ಯುಗ ಪುರುಷ ಮೌನೇಶ್ವರ’ ಹಾಗೂ ಎಡತೊರೆ ಶ್ರೀಯೋಗನಂದೇಶ್ವರ ಸರಸ್ವತಿ ಮಠದಿಂದ ‘ಶ್ರೀಗುರುದತ್ತಾತ್ರೇಯ’ ಜೀವನ ಚರಿತ್ರೆ, ಮುಕ್ತ ವಿವಿಯಿಂದ ಪ್ರಕಟಗೊಂಡ ‘ಕನ್ನಡ ಸಂಸ್ಕೃತ ಸಂಬಂಧ’, ‘ಕನ್ನಡ ವ್ಯಾಕರಣಗಳು’, ‘ಕನ್ನಡದಲ್ಲಿ ಸಂಸ್ಕೃತ ಶಬ್ದಗಳು’ ಮುಂತಾದ ಕೃತಿಗಳು ಸೇರಿವೆ.

ಅನಂತರಾಮು ಅವರಿಗೆ ಮೂರು ಬಾರಿ ಕನ್ನಡದ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,  ಸಮಗ್ರ ಸಾಹಿತ್ಯ ಸೇವೆಗಾಗಿ 2004ರಲ್ಲಿ ರಾಜ್ಯಪ್ರಶಸ್ತಿ, ಮೈಸೂರು ಜಿಲ್ಲಾ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಗೌರವ, ರನ್ನ ಪ್ರಶಸ್ತಿ,  ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

On the birthday of writer and publisher Dr. K. Anantharamu 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ