ಶಾಂತಮ್ಮ ಪತ್ತಾರ
ಶಾಂತಮ್ಮ ಪತ್ತಾರ
ಶಾಂತಮ್ಮ ಪತ್ತಾರ ಅಭಿನೇತ್ರಿಯಾಗಿ ಮತ್ತು ಗಾಯಕಿಯಾಗಿ ರಂಗಭೂಮಿಯನ್ನು ಪ್ರಕಾಶಿಸಿದ ಅದ್ಭುತ ಚೇತನ.
ಶಾಂತಮ್ಮ ಪತ್ತಾರ ಅವರು 1942ರಲ್ಲಿ ಜನಿಸಿದರು. ತಂದೆ ಈರಪ್ಪ. ತಾಯಿ ಯಲ್ಲವ್ವ. ಬಡತನದ ಕಾರಣ ಐದನೇ ತರಗತಿಗೆ ಶಿಕ್ಷಣ ನಿಂತಿತು. ಮಗಳ ಕಂಠಸಿರಿ ಗುರುತಿಸಿದ ಈರಪ್ಪನವರು, ಎಂಟನೇ ವಯಸ್ಸಿನಿಂದಲೇ ಕುಷ್ಟಗಿಯ ಅಯ್ಯಪ್ಪ ಬಡಿಗೇರ ಹಾಗೂ ಹನಮಂತಪ್ಪ ಮಾಸ್ತರ ಬಳಿ ಸಂಗೀತ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿದರು. ಆದರೆ ತಂದೆಯ ಅಕಾಲಿಕ ನಿಧನ, ತಾಯಿಯ ಅಸಹಾಯಕತೆ ಹಾಗೂ ಆರ್ಥಿಕ ಸಂಕಷ್ಟಗಳಿಂದಾಗಿ ಸಂಗೀತಾಭ್ಯಾಸ ಮುಂದುವರಿಯಲಿಲ್ಲ. ಗಾಯಕಿಯಾಗುವ ಅವರ ಕನಸು ನನಸಾಗಲಿಲ್ಲ. ಆದರೆ ಈ ಎಲ್ಲ ಹಿನ್ನಡೆಗಳಿಂದ ಶಾಂತಮ್ಮ ಧೃತಿಗೆಡಲಿಲ್ಲ. ‘ತಾಯಿಗೆ ಆಸರೆಯಾಗಬೇಕು, ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳಬೇಕು’ ಎನ್ನುವ ಮನೋಬಲ ಗಟ್ಟಿಯಾಯಿತು.
ವೃತ್ತಿರಂಗಭೂಮಿ ಶಾಂತಮ್ಮನವರಿಗೆ ಜೀವನೋಪಾಯದ ಮಾರ್ಗವಾಗಿ ಕಂಡಿತು. ಇಳಕಲ್‌ನ ವೃತ್ತಿರಂಗಭೂಮಿಯ ಖ್ಯಾತ ನಟ ಕೀರ್ತೆಪ್ಪ ಕೊಪ್ಪರದ ಅವರು ಶಾಂತಮ್ಮ ಅವರ ಕಲಾಪ್ರತಿಭೆ ಗುರುತಿಸಿ, ಅವಕಾಶ ನೀಡಿ, ಭದ್ರನೆಲೆ ಒದಗಿಸಿದರು. ರೂಪ, ಕಂಠಸಿರಿ ಹಾಗೂ ಪ್ರತಿಭೆಯ ಸಂಗಮವಾಗಿದ್ದ ಶಾಂತಮ್ಮ ಬಹುಬೇಗ ಕಲಾವಿದೆಯಾಗಿ ಛಾಪು ಮೂಡಿಸಿದರು. ಬಾಲ್ಯದಲ್ಲಿ ಗಳಿಸಿದ ಸಂಗೀತಜ್ಞಾನ ನಟಿಯಾದ ಮೇಲೆ ಕೈ ಹಿಡಿಯಿತು.
13ನೇ ವಯಸ್ಸಿನಲ್ಲಿ ಬಳ್ಳಾರಿಯ ಲಲಿತ ಕಲಾ ಸಂಘದ ಮೂಲಕ ರಂಗಭೂಮಿ ಪ್ರವೇಶಿಸಿದ ಶಾಂತಮ್ಮನವರು, ಎಚ್.ಟಿ. ಮಹಾಂತೇಶ ಶಾಸ್ತ್ರಿಗಳ ನಿರ್ದೇಶನದ ‘ಅಕ್ಕ–ತಂಗಿ’ ನಾಟಕದ ‘ಮಾಧುರಿ’ ಪಾತ್ರದ ಮೂಲಕ ರಂಗಪಯಣ ಆರಂಭಿಸಿದರು.
ನಂತರ ರೇಣುಕಾಚಾರ್ಯ ನಾಟ್ಯ ಸಂಘ, ಕಮತಗಿಯ ಬಿ.ಆರ್. ಅರಿಶಿಣಗೋಡಿ ಅವರ ‘ಶ್ರೀ ಹುಚ್ಚೇಶ್ವರ ನಾಟ್ಯ ಸಂಘ’, ಬಸವರಾಜ ಗುಡಗೇರಿ ಅವರ ಸಂಗಮೇಶ್ವರ ನಾಟ್ಯ ಸಂಘ, ಮಹಾಕೂಟೇಶ್ವರ ನಾಟ್ಯ ಸಂಘ, ಶಿವಯೋಗಮಂದಿರದ ಕುಮಾರೇಶ್ವರ ನಾಟ್ಯ ಸಂಘ ಹೀಗೆ ಹಲವಾರು ಕಂಪನಿಗಳ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. ಕಂದಗಲ್ ಹನಮಂತರಾಯರು, ಎಚ್.ಆರ್. ಭಸ್ಮೆ, ಪಿ.ಬಿ. ಧುತ್ತರಗಿ, ಎಚ್.ಎನ್. ಹೂಗಾರ, ಆರ್.ಡಿ. ಕಾಮತ್‌ರಂತಹ ದಿಗ್ಗಜರ ಜತೆ ಶಾಂತಮ್ಮ ಕೆಲಸ ಮಾಡಿದ್ದರು.
ಶಾಂತಮ್ಮ ಅವರು ಹಾಡಿದ ರಂಗಗೀತೆಗಳು ಪ್ರೇಕ್ಷಕರ ಮನಸೆಳೆದವು.
ಶಾಂತಮ್ಮ ಅವರ ಕಲೆ ಮೆಚ್ಚಿ ಪ್ರಕಾಶ ಬಾಳಸಂಗಾತಿಯಾದರು. ಶಾಂತಮ್ಮನವರು ಪುತ್ರಿಯರಾದ ರೇಣುಕಾ (ಶಿಕ್ಷಕಿ), ಪ್ರೊ.ಸಂತೋಷಕುಮಾರಿ (ಪ್ರಾಧ್ಯಾಪಕಿ) ಹಾಗೂ ಕಾಂಚನಾ (ಟೆಕ್ಕಿ) ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ಬದುಕಿನ ಸಾರ್ಥಕತೆ ಹೆಚ್ಚಿಸಿಕೊಂಡರು.
‘ಹರಿಶ್ಚಂದ್ರ’ ನಾಟಕದ ‘ತಾರಾಮತಿ’, 'ಪುರಂದರದಾಸ’ದಲ್ಲಿನ ‘ಲಕ್ಷ್ಮೀ’, ಶಿವದರ್ಶನ’ದ ‘ರಾಣಿ’, ‘ಲಂಚ ಸಾಮ್ರಾಜ್ಯ’ದ ‘ಮೀನಾಕ್ಷಿ’, ‘ರಾಜಾವಿಕ್ರಮ‘ ನಾಟಕದ ‘ರಾಣಿ ಪ್ರಭಾವತಿ‘, ‘ಹೈಬ್ರಿಡ್ ಹೆಣ್ಣು‘ ನಾಟಕದ ‘ಸುಮಿತ್ರಾ ದೇಸಾಯಿ’, ಬನಶಂಕರಿ ದೇವಿ ಮಹಾತ್ಮೆಯಲ್ಲಿ ದೇವಿ ಪಾತ್ರಗಳು, ಕುರುಕ್ಷೇತ್ರ, ರಕ್ತರಾತ್ರಿ, ಅಕ್ಷಯಾಂಬರ ನಾಟಕಗಳಲ್ಲಿ ‘ದ್ರೌಪದಿ‘ ಪಾತ್ರ, ಚಿತ್ರಾಂಗದಾ ನಾಟಕದಲ್ಲಿನ ‘ಚಿತ್ರಾಂಗದಾ‘ ಮುಂತಾದ ಅನೇಕ ನಾಟಕಗಳಲ್ಲಿ ಅವರ ಕಲಾವಂತಿಕೆ ವಿಜ್ರಂಭಿಸಿತ್ತು.
ಮಹಾನ್ ಕಲಾವಿದೆ ಶಾಂತಮ್ಮ ಪತ್ತಾರ 2020ರ ಅಕ್ಟೋಬರ್ 14ರಂದು ಭಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಿಧನರಾದರು.
Shanthamma Patrara, a great theatre actress and singer 🌷🙏🌷
ಶ್ರದ್ದಾಂಜಲಿ
ಪ್ರತ್ಯುತ್ತರಅಳಿಸಿ