ಚಿ. ದತ್ತರಾಜ್
ಚಿ. ದತ್ತರಾಜ್
ಚಿ. ದತ್ತರಾಜ್ ನ್ನಡ ಚಲನಚಿತ್ರರಂಗದಲ್ಲಿ ಸದ್ದುಗದ್ದಲಗಳಿಲ್ಲದೆ ಅಪಾರ ಕೆಲಸಮಾಡಿ ತಮ್ಮ ಸದ್ಗುಣಗಳಿಗೆ ಹೆಸರಾಗಿದ್ದವರು.
ಚಿ. ದತ್ತರಾಜ್ 1938ರ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಮಹಾನ್ ಚಿತ್ರಸಾಹಿತಿ ಚಿ. ಸದಾಶಿವಯ್ಯನವರ ಸುಪುತ್ರರು. ಮತ್ತೊಬ್ಬ ಮಹಾನ್ ಸಾಹಿತಿ ಚಿ. ಉದಯಶಂಕರ್ ಇವರ ಹಿರಿಯ ಸಹೋದರರು. ದತ್ತರಾಜ್ ಬಸವನಗುಡಿಯ ನ್ಯಾಷನಲ್ ಹೈಸ್ಕೂಲಿನಲ್ಲಿ ಎಸ್ಎಸ್‌ಎಲ್‌ಸಿ ಓದಿ, ಎಸ್.ಜೆ.ಪಿ.ಯಲ್ಲಿ ರೇಡಿಯೊ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದರು. ನಂತರ ಮದ್ರಾಸಿಗೆ ಹೋಗಿ 150 ರೂಪಾಯಿ ಸಂಬಳಕ್ಕೆ ರೇಡಿಯೊ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದರು. ನಂತರ ಆಕಾಶವಾಣಿ ಕಲಾವಿದರಾದರು. ಎಸ್.ಕೆ. ಅನಂತಾಚಾರ್, ರೇವತಿ, ಪಾಪಮ್ಮ, ಎಂ.ನರೇಂದ್ರ ಬಾಬು, ವಾಸುದೇವ ಗಿರಿಮಾಜಿ, ಆರೂರು ಪಟ್ಟಾಭಿ, ಜಯ ಮೊದಲಾದವರೊಡನೆ ರೇಡಿಯೊ ನಾಟಕಗಳಲ್ಲಿ ದುಡಿದು, ಅಭಿನಯಿಸಿದರು. ನಾಟಕಗಳ ಸಂಭಾಷಣೆ ತಿದ್ದಿ ಹೊಸದಾಗಿ ಬರೆಯುವ ಮೂಲಕ ಇವರಿಗೆ ಬರವಣಿಗೆ ಅಭ್ಯಾಸವಾಯಿತು. ಈ ದಿನಗಳಲ್ಲಿ ಇವರಿಗೆ ಸಿನಿಮಾ ನಿರ್ದೇಶಕನಾಗಬೇಕೆಂಬ ಆಸೆ ಮೊಳೆಯಿತು.
ದತ್ತರಾಜ್ 1970ರಲ್ಲಿ ರವೀ ಅವರ ‘ಲಕ್ಷ್ಮಿ ಸರಸ್ವತಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದರು. ನಂತರ ರವೀ ಅವರದೇ ‘ಶ್ರೀಕೃಷ್ಣ ರುಕ್ಷ್ಮಿಣಿ ಸತ್ಯಭಾಮ’, ‘ದೇವರು ಕೊಟ್ಟ ತಂಗಿ’ಗೆ ಕೆಲಸ ಮಾಡಿದರು. ‘ಬಂಗಾರದ ಪಂಜರ’ಕ್ಕೆ ಸಹಾಯಕರಾದರು. ಡಾ.ರಾಜ್ ಇವರ ಪ್ರತಿಭೆ, ಶ್ರದ್ಧೆಯನ್ನು ಗಮನಿಸಿ, "ಸಂಭಾಷಣೆ ತಿಳಿದುಕೊಳ್ಳಲು, ಅಭ್ಯಾಸ ಮಾಡಲು ದತ್ತು ಅವರು ಇರಲಿ, ಅವರನ್ನು ಕರೆಯಿಸಿ" ಅನ್ನುತ್ತಿದ್ದರು. ಹೀಗೆ ದತ್ತರಾಜ್ ರಾಜ್ ಅವರ ನೆರಳಿನಲ್ಲಿ 8 ಚಿತ್ರಗಳಿಗೆ ದುಡಿದರು. ಇದರಲ್ಲಿ ಮಹತ್ವದ ‘ಸನಾದಿ ಅಪ್ಪಣ್ಣ’, ‘ಹುಲಿಯ ಹಾಲಿನ ಮೇವು’, ‘ಶ್ರೀನಿವಾಸ ಕಲ್ಯಾಣ’ ಸೇರಿವೆ. ‘ರಾಜಾ ನನ್ನ ರಾಜಾ’ ಚಿತ್ರದ ಬಹುತೇಕ ಕೆಲಸ ಇವರದ್ದೇ. ರಾಜ್‍ಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ ಅಲ್ಲದೆ ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ 'ರುದ್ರಿ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ತಾವು ದುಡಿದ ಎಲ್ಲ ಚಿತ್ರಗಳಲ್ಲೂ ಒಂದೊಂದು ಪಾತ್ರಕ್ಕೆ ಧ್ವನಿ ನೀಡಿರುವುದಲ್ಲದೇ ಪುಟ್ಟ ಪಾತ್ರಗಳಲ್ಲೂ ಅಭಿನಯಿಸಿದ್ದರು.
ಸಂಕೋಚ ಸ್ವಭಾವದವರಾದ ದತ್ತು, ರಾಜ್–ಪಾರ್ವತಮ್ಮ ಅವರನ್ನು ತಮ್ಮ ತಂದೆ–ತಾಯಿಯರಂತೆ, ವರದರಾಜು ಅವರನ್ನು ಅಣ್ಣ ಉದಯಶಂಕರ್ ಅವರಂತೆ ಗೌರವಿಸುತ್ತಾ ತೆರೆಯ ಮರೆಯಲ್ಲಿಯೇ ಇದ್ದ ಸೌಮ್ಯಜೀವಿ. ಎಂಟು ವರ್ಷಗಳ ಕಾಲ ‘ವಿಜಯಚಿತ್ರ’ ಪತ್ರಿಕೆಯಲ್ಲಿ ಪ್ರಕಟವಾದ ಡಾ.ರಾಜ್ ಅವರ ಆತ್ಮಕಥೆ ‘ಕಥಾನಾಯಕನ ಕಥೆ’ಯನ್ನು ರಾಜಕುಮಾರ್ ಹೇಳುತ್ತಾ ಹೋದಂತೆ ಬರೆದು ನಿರೂಪಿಸಿದವರು ದತ್ತರಾಜ್.
ದತ್ತರಾಜ್ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಜೊತೆಗೆ ಚಿತ್ರರಂಗದಲ್ಲಿನ ಮಹತ್ವದ ಸೇವೆಗಾಗಿ ಅವರಿಗೆ ‘ಎಸ್.ಪಿ.ವರದರಾಜು ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
ಚಿ. ದತ್ತರಾಜ್ ಅವರು ಗಾಣಗಾಪುರದ ಶ್ರೀ ದತ್ತಾತ್ರೇಯರ ಪರಮ ಭಕ್ತರಾಗಿದ್ದರು.ಸರಳತೆ, ಸಹೃದಯತೆ, ಸಜ್ಜನಿಕೆಗಳಿಗೆ ಹೆಸರಾಗಿದ್ದ ಚಿ. ದತ್ತರಾಜ್ 2024ರ ಅಕ್ಟೋಬರ್ 14ರಂದು ನಿಧನರಾದರು.
ಕಾಮೆಂಟ್‌ಗಳು