ಬಸವರಾಜ ಕಟ್ಟೀಮನಿ
ಬಸವರಾಜ ಕಟ್ಟೀಮನಿ
ಬಸವರಾಜ ಕಟ್ಟೀಮನಿ ಕಳೆದ ಶತಮಾನದ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು.
ಬಸವರಾಜ ಕಟ್ಟೀಮನಿಯವರು 1919 ಅಕ್ಟೋಬರ 5ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ ಜನಿಸಿದರು. ತಾಯಿ ಬಾಳವ್ವ, ತಂದೆ ಅಪ್ಪಣ್ಣ. ತಂದೆ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿದ್ದವರು.
ಕಟ್ಟೀಮನಿಯವರ ಶಿಕ್ಷಣ ಗೋಕಾಕ, ಬೆಳಗಾವಿ, ಪುಣೆಗಳಲ್ಲಿ ನಡೆಯಿತು. ಪ್ರಾರಂಭದಲ್ಲಿ ಅವರ ವಿಧ್ಯಾಭ್ಯಾಸ ಚೆನ್ನಾಗಿ ನಡೆದರೂ ನಂತರದಲ್ಲಿ ಅವರ ಕಿವಿಗಳು ಮಂದವಾದ ಕಾರಣ ಹೆಚ್ಚಿನ ವಿಧ್ಯಾಭ್ಯಾಸವನ್ನು ಗಳಿಸುವುದು ಸಾಧ್ಯವಾಗಲಿಲ್ಲ. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಗಣಿತ ವಿಷಯ ಒಂದರಲ್ಲಿ ನಪಾಸಾಗುವುದರೊಂದಿಗೆ ವಿದ್ಯಾಭ್ಯಾಸವನ್ನು ಅಲ್ಲಿಗೆ ಕೈಬಿಡಬೇಕಾಯಿತು. ಚಿಕ್ಕಂದಿನಿಂದಲೇ ಗಳಗನಾಥ, ವಾಸುದೇವಾಚಾರ್ಯ, ಮಾಸ್ತಿ, ಆನಂದ, ಕುವೆಂಪು ಅವರ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರು.
ಕಟ್ಟೀಮನಿಯವರು 1936ರಲ್ಲಿ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಕೆಲಸಗಾರರಾಗಿ ಸೇರಿಕೊಂಡರು. ನಂತರದಲ್ಲಿ ಹುಬ್ಬಳ್ಳಿಯ 'ತರುಣ ಕರ್ನಾಟಕ' ಪತ್ರಿಕೆಯಲ್ಲಿದ್ದಾಗ 'ದಿವಾಕರ ರಂಗನಾಥ'ರೊಡನೆ ಅವರು ನಡೆಸಿದ ಸಂದರ್ಶನ ಈ ಪತ್ರಿಕೆಯಲ್ಲಿ ಪ್ರಕಟವಾದಾಗ ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು. ಹೀಗಾಗಿ ಈ ಪತ್ರಿಕೆಯನ್ನೂ ಬಿಟ್ಟು ಕಟ್ಟೀಮನಿಯವರು ಧಾರವಾಡದ ಭಾಲಚಂದ್ರ ಘಾಣೇಕರ ಅವರ 'ಸಮಾಜ' ಪತ್ರಿಕೆಯ ಪೂರ್ತಿ ಹೊಣೆ ಹೊತ್ತರು. 'ಸಮಾಜ'ದ ಮಾಲಿಕತ್ವ ಬದಲಾದಾಗ ಕಟ್ಟೀಮನಿಯವರು ಈ ಕೆಲಸವನ್ನೂ ಬಿಟ್ಟು, 1937ರಲ್ಲಿ ಹುಬ್ಬಳ್ಳಿಯಿಂದ ಪುರಾಣಿಕ ಎನ್ನುವವರು ನಡೆಯಿಸುತ್ತಿದ್ದ 'ಲೋಕಮತ'ದಲ್ಲಿ ಕೆಲಕಾಲ ಕೆಲಸ ಮಾಡಿದರು. ಅಲ್ಲಿಂದ ಗದಗಿನ 'ಕರ್ನಾಟಕ ಬಂಧು' ಪತ್ರಿಕೆಯನ್ನು ಸೇರಿಕೊಂಡರು. ಕಟ್ಟೀಮನಿಯವರು 3 ವರ್ಷ ಅಲ್ಲಿ ದುಡಿದು, ಬೆಂಗಳೂರಿಗೆ ತೆರಳಿ ಸ್ವತಂತ್ರ ಕರ್ನಾಟಕ ಪತ್ರಿಕೆಯನ್ನು ಸೇರಿದರು. ಕೆಲ ಸಮಯದ ನಂತರ ಪುನ: ಧಾರವಾಡದ 'ಸಮಾಜ'ಕ್ಕೆ ಮರಳಿದರು.
ಈ ನಡುವೆ ಸ್ವಾತಂತ್ರ್ಯ ಚಳುವಳಿಯ ಚಟುವಟಿಕೆಗಳಿಗಾಗಿ 6 ತಿಂಗಳುಗಳನ್ನು ಹಿಂಡಲಗಿ ಸೆರೆಮನೆಯಲ್ಲಿ ಕಳೆದು ಬಂದ ಕಟ್ಟೀಮನಿಯವರು 1943ರಲ್ಲಿ ಬೆಂಗಳೂರಿನ ಉಷಾ ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ 1946ರಲ್ಲಿ ದಾವಣಗೆರೆಯಲ್ಲಿ ಸ್ವತಂತ್ರ ಪತ್ರಿಕೆಯ ಸಂಪಾದಕತ್ವ ವಹಿಸಿದರು. 1948 ಡಿಸೆಂಬರ್ ಮಾಸದಲ್ಲಿ ಅಲ್ಲಿಂದ ಹೊರಬಿದ್ದು ಧಾರವಾಡಕ್ಕೆ ಮರಳಿ, ಮತ್ತೊಮ್ಮೆ ಜಠಾರರ 'ಸಮಾಜ ಪತ್ರಿಕೆ'ಯನ್ನು ಪ್ರಾರಂಭಿಸಿದರು. 1950ರಲ್ಲಿ ಈ ಪತ್ರಿಕೆಯನ್ನು ಮತ್ತೊಮ್ಮೆ ಬಿಟ್ಟು ಪೂರ್ಣಾವಧಿ ಕಾದಂಬರಿಕಾರರಾದರು.
ಕಟ್ಟೀಮನಿಯವರು ಬದುಕಿನಲ್ಲಿ ಕ್ರಾಂತಿಕಾರಿಯಾಗಿದ್ದಂತೆಯೇ ಸಾಹಿತ್ಯದಲ್ಲೂ ಕ್ರಾಂತಿಕಾರಿ ಲೇಖಕರಾಗಿದ್ದರು. ಇವರ ಮೊದಲ ಕಥೆ "ಕಾರವಾನ್", 1943ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಬಿದ್ದ ಭೀಕರ ಬರಗಾಲದಿಂದ ತತ್ತರಿಸಿ ಗುಳೇ ಹೋದ ಜನರ ಕತೆಯಾಗಿತ್ತು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷದ ಬಗೆಗೆ ಭ್ರಮನಿರಸನರಾದ ಕಟ್ಟೀಮನಿ ರೈತ-ಕೂಲಿಕಾರರ ಪಕ್ಷವನ್ನು ಸಂಘಟಿಸಿದರು. ಆದರೆ ರಾಜಕೀಯ ಚದುರಂಗದಾಟಕ್ಕೆ ಬೇಸತ್ತು ಅದನ್ನು ತ್ಯಜಿಸಿದರು. ಆದರೂ ರಾಷ್ಟ್ರದ ಬಗೆಗಿನ ಅವರ ಚಿಂತನೆಗಳು ಎಂದೂ ಕಡಿಮೆಯಾಗಿರಲಿಲ್ಲ. 1968ರಿಂದ 1974ರ ಅವಧಿಗೆ ಕಟ್ಟೀಮನಿಯವರು ಕರ್ನಾಟಕದ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಮೇಲೆ ಅವರ ರಾಜಕೀಯ ಧೋರಣೆ ಮತ್ತು ಚಟುವಟಿಕೆಗಳು ಮತ್ತಷ್ಟು ವ್ಯಾಪಕಗೊಂಡವು. ಇದಕ್ಕೆ ಮುಂಚೆ 1969ರಿಂದ 1972ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸೆನೇಟ್ ಸದಸ್ಯರೂ ಆಗಿದ್ದರು.
ಮೂವತ್ತೈದಕ್ಕೂ ಹೆಚ್ಚು ಕಾದಂಬರಿಗಳು, ಹತ್ತಾರು ಕವನ ಸಂಕಲನಗಳು ಮತ್ತು ಇತರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಕಟ್ಟೀಮನಿ ಅವರದು ಸಾಹಿತ್ಯ ಕ್ಷೇತ್ರದಲ್ಲಿ ಅಳಿಯದ ಹೆಸರು. ‘ಜ್ವಾಲಾಮುಖಿಯ ಮೇಲೆ’ ಎಂಬ ಅವರ ಕಾದಂಬರಿಗೆ ‘ಸೋವಿಯತ್ ಲ್ಯಾಂಡ್’ನ ನೆಹರೂ ಪ್ರಶಸ್ತಿ ದೊರಕಿದೆ. ಅದು ಅವರ ಮಹತ್ವದ ಕೃತಿಗಳಲ್ಲಿ ಒಂದು. ಬಂಡವಾಳಶಾಹಿ ವ್ಯವಸ್ಥೆ ಮತ್ತು ಕಾರ್ಮಿಕ ಸಂಘಟನೆಗಳು ನಮ್ಮ ದೇಶದ ‘ವಿಶಿಷ್ಟ ಸಾಮಾಜಿಕ ಪರಿಸ್ಥಿತಿಯಲ್ಲಿ’ ಮುಖಾಮುಖಿಯಾಗುವ ಚಿತ್ರ ಇದರಲ್ಲಿ ಮೂಡಿಬರುತ್ತದೆ. ಇದೇ ಕಾರಣದಿಂದಾಗಿ ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಒಂದು ಅಪೂರ್ವ ಕೃತಿಯೂ ಆಗಿ ಉಳಿದಿದೆ. ‘ಸ್ವಾತಂತ್ರ್ಯದೆಡೆಗೆ’ ಮತ್ತು ‘ಮಾಡಿ ಮಡಿದವರು’ ಅಂತಹ ಕಾದಂಬರಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬಗೆಗೆ ಇರುವಷ್ಟೇ ಆವೇಶವನ್ನು, ‘ಮೋಹದ ಬಲೆಯಲ್ಲಿ’ ಮತ್ತು ‘ಜರತಾರಿ ಜಗದ್ಗುರು’ ಕಾದಂಬರಿಗಳಲ್ಲಿ ಸಮಾಜದ ಹುಳುಕುಗಳನ್ನು ಬಯಲಿಗೆಳೆಯುವಲ್ಲಿ ಕೂಡಾ ಅವರು ತೋರುತ್ತಾರೆ. ‘ಗಿರಿಯ ನವಿಲು’ ಕಾದಂಬರಿಯಲ್ಲಿ ಅಕ್ಕ ಮಹಾದೇವಿಯ ಪಾತ್ರವನ್ನು ಅವರು ಸೃಷ್ಟಿಸಿರುವ ರೀತಿ, ಅವರು ವಾಸ್ತವಿಕತೆಗೆ ಅದೆಷ್ಟು ಮಹತ್ವವನ್ನು ನೀಡುತ್ತಿದ್ದರು ಎಂಬುದನ್ನು ತೋರಿಸುತ್ತದೆ. ಅವರ ‘ಮಾಡಿ ಮಡಿದವರು’ ಕತೆ ಚಲನಚಿತ್ರವಾಗಿತ್ತು. ‘ಖಾನಾವಳೀ ಲೀಲಾ’ ಅವರ ಅಪಾರ ಪ್ರತಿಭೆಯನ್ನು ಸಾದೃಶ್ಯಗೊಳಿಸುವ ಮತ್ತೊಂದು ಮಹತ್ವದ ಕಾದಂಬರಿ.
ಕಟ್ಟೀಮನಿ ಅವರ ಸಣ್ಣ ಕತೆಗಳಲ್ಲಿ ಹಳ್ಳಿಯ ಜನರ ಮುಗ್ಧತೆ, ಪ್ರೇಮ ಮತ್ತು ಛಲಗಾರಿಕೆ ಮೆಚ್ಚುಗೆಯ ವಸ್ತುಗಳಾಗಿವೆ. ‘ಜಟ್ಟಿಯ ಪ್ರೇಮ’, ‘ಕೊಲೆಪಾತಕಿ ಸುಲೇಮಾನ್ ಖಾನ್’ ಈ ನಿಟ್ಟಿನಲ್ಲಿ ಪ್ರಮುಖವಾಗಿ ಕಾಣುತ್ತವೆ. ಅಂತೆಯೇ ಮುಗ್ಧ ಜನರನ್ನು ಶೋಷಿಸುವ ಕ್ರೌರ್ಯದ ವಿರುದ್ಧ ಕಿಡಿ ಕಾರುತ್ತಾರೆ. ಕಟ್ಟೀಮನಿ ಒಂದೆರಡು ನಾಟಕಗಳು ಮತ್ತು ಜೀವನ ಚರಿತ್ರೆಗಳನ್ನೂ ಬರೆದಿದ್ದಾರೆ. ‘ಕಾದಂಬರಿಕಾರನ ಬದುಕು’ ಅವರ ಆತ್ಮ ಕಥೆ.
“ ಕೆಚ್ಚು, ಕಲಿತನದ ಮತಿ
ಬಿಚ್ಚುಮಗ್ಗಿ ಮಾತು-ಕಥಿ
ಸಾಧುವಿಗೆ
ಸಾಧು ಬಗೆ
ಬಾಧಿಪಗೆ ಬಿಚ್ಚುಗತ್ತಿ”
ಇದು ಎಂ. ಅಕಬರ ಆಲಿ ಅವರು ತಮ್ಮ ಗೆಳೆಯ ಬಸವರಾಜ ಕಟ್ಟೀಮನಿ ಅವರ ಬಗ್ಗೆ ಬರೆಯುವ ಮಾತು. ಇದು ಅವರ ಬದುಕಿನ ಬಗೆಗಿನ ಸುಸ್ಪಷ್ಟ ವ್ಯಾಖ್ಯಾನ ಕೂಡ ಆಗಿದೆ.
ಬಸವರಾಜ ಕಟ್ಟೀಮನಿ ಅವರು ಅಕ್ಟೋಬರ್ 23, 1989ರ ವರ್ಷದಲ್ಲಿ ನಿಧನರಾದರು. ಅವರ ಕೊಡುಗೆಗಳಿಂದ ಅವರು ಅವಿಸ್ಮರಣೀಯರು. ಈ ಮಹಾನ್ ಚೇತನಕ್ಕೆ ನಮ್ಮ ಗೌರವಪೂರ್ವಕ ನಮನ.
(ಆಧಾರ:: ಎನ್. ಬಿ. ಚಂದ್ರಮೋಹನ್ ಅವರ ಬಸವರಾಜ ಕಟ್ಟೀಮನಿ ಅವರ ಕುರಿತ ಸಾಲುದೀಪಗಳು ಕೃತಿಯಲ್ಲಿನ ಲೇಖನ)
On the birth anniversary of great writer Basavaraja Kattimani
👌
ಪ್ರತ್ಯುತ್ತರಅಳಿಸಿ