ಬೇಕಲ ರಾಮನಾಯಕ
ಬೇಕಲ ರಾಮನಾಯಕ
ಬೇಕಲ ರಾಮನಾಯಕರು ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದರೂ, ತಮ್ಮ ಪರಿಶ್ರಮವನ್ನು ಧಾರೆಯೆರೆದು ಕೋಟೆ ಕೊತ್ತಲಗಳ ಬಗೆಗೆ ಸಂಶೋಧನಾತ್ಮಕ ಬರಹಗಳನ್ನು ಬರೆದು ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಮಹನೀಯರು.
ಬೇಕಲ ರಾಮನಾಯಕರು 1902ರ ಅಕ್ಟೋಬರ್ 26ರಂದು ಕಾಸರಗೋಡಿನ ಚಾರಿತ್ರಿಕ ಸ್ಥಳವಾದ ಬೇಕಲದಲ್ಲಿ ಜನಿಸಿದರು. ತಂದೆ ಸಿದ್ದಯ್ಯ. ತಾಯಿ ಮಂಜಮ್ಮ. ಅವರ ಶಾಲಾ ಶಿಕ್ಷಣ ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ ನಡೆಯಿತು.
ರಾಮನಾಯಕರು ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ನಂತರ ಐದು ವರ್ಷಗಳ ಕಾಲ ಕೋಟೆಕೊತ್ತಲಗಳು, ವೀರಗಲ್ಲು, ಮಾಸ್ತಿಕಲ್ಲು, ಶಾಸನಗಳ ಅಧ್ಯಯನ ಕೈಗೊಂಡರು. ತಾವು ಬೆಳೆದ ಪರಿಸರ ಕೋಟೆಕೊತ್ತಲಗಳ ನಾಡಾಗಿದ್ದುದು, ಆ ಕುರಿತು ರಾಮನಾಯಕರಿಗೆ ಕುತೂಹಲ ಹುಟ್ಟಿತು. ಜೊತೆಗೆ ರಾಮನಾಯಕರ ವಂಶಸ್ಥರು ರಾಮಕ್ಷತ್ರಿಯ ಪಂಗಡಕ್ಕೆ ಸೇರಿದ ಯುದ್ಧಗಳಲ್ಲಿ, ಕೋಟೆಕೊತ್ತಲಗಳ ರಕ್ಷಣೆಯಲ್ಲಿ ನಿರತರಾದ ಜನಾಂಗವಾಗಿದ್ದು ಆ ಕುರಿತು ವಿಶೇಷಾಧ್ಯಯನದಲ್ಲಿ ತೊಡಗಿಕೊಳ್ಳುವಲ್ಲಿ ಅವರನ್ನು ಪ್ರೇರಿಸಿತು.
ರಾಮನಾಯಕರು ಇಂಟರ್ ಮೀಡಿಯೆಟ್‌ಗೆ ಸೇರಿದರಾದರೂ ಕಾರಣಾಂತರದಿಂದ ವ್ಯಾಸಂಗವನ್ನು ಮುಂದುವರೆಸಲಾಗದೆ, ಸೆಕೆಂಡರಿ ಟೀಚರ್ಸ್ ಟ್ರೈನಿಂಗಿಗೆ ಸೇರಿದರು. ಕೆಲಕಾಲ ಹಂಗಾಮಿ ಅಧ್ಯಾಪಕರಾಗಿ, ಗ್ರಂಥಪಾಲಕರಾಗಿ ಕಾರ್ಕಳ, ಮಂಗಳೂರು, ಕುಂಬಳೆ ಮುಂತಾದೆಡೆಗಳಲ್ಲಿ ದುಡಿದು, ನಂತರ ಕಾಸರಗೋಡಿನ ಬಿ.ಇ.ಎಂ ಹೈಸ್ಕೂಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ ಸೇರಿದರು. ಅಧ್ಯಯನ,ಅಧ್ಯಾಪನಗಳೆರಡರಲ್ಲೂ ತೊಡಗಿದ್ದ ರಾಮನಾಯಕರು ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಗಳಿಸಿದರು.
ಹೈಸ್ಕೂಲಿನಲ್ಲಿದ್ದಾಗಲೇ ಎಲ್ಲ ವಿಷಯಗಳನ್ನೂ ತೀಕ್ಷವಾಗಿ ಗಮನಿಸುವ ಸ್ವಭಾವದವರಾಗಿದ್ದ ನಾಯಕರು, ಅಧ್ಯಾಪಕರಾಗಿದ್ದ ಐರೋಡಿ ಶಿವರಾಮಯ್ಯ (1874-1941) ಅವರಿಂದ ಸಾಹಿತ್ಯದ ಪ್ರೇರಣೆ ಪಡೆದು ಹಲವಾರು ಕೃತಿಗಳನ್ನು ರಚಿಸಿದರು. ಕಾಸರಗೋಡಿಗೆ ಸಂಬಂಧಿಸಿದ ಐತಿಹ್ಯಗಳನ್ನು ಸಂಗ್ರಹಿಸಿ ಕೋಟೆಯ ಕತೆಗಳು, ಬಾಳಿದ ಹೆಸರು ಮತ್ತು ಇತರ ಐತಿಹ್ಯಗಳು, ಪುಳ್ಕೂರು ಬಾಚ, ಕೆಚ್ಚಿನ ಕಿಡಿಗಳು, ನಾಡಕತೆಗಳು ಮತ್ತು ತೆಂಕನಾಡ ಐತಿಹ್ಯಗಳು ಎಂಬ ಆರು ಕಥಾ ಸಂಗ್ರಹಗಳನ್ನು ಪ್ರಕಟಿಸಿದರು. ಐತಿಹ್ಯಗಳನ್ನು ಸಂಗ್ರಹಿಸಿ ಕಥೆ ಬರೆದಂತೆ ಹಲವಾರು ನಾಟಕಗಳ ರಚನೆಗಳಲ್ಲಿಯೂ ತೊಡಗಿಕೊಂಡು ತೌಳವ ಸ್ವಾತಂತ್ರ್ಯ, ಕೇತುಭಂಗ (ಧ್ವಜ ವಂದನೆ) ಸೌಭಾಗ್ಯರತ್ನ, ಸತ್ಯಪರೀಕ್ಷೆ, ರತ್ನಹಾರ, ಉತ್ಕಲ ಕುಮಾರಿ, ವೀರ ವಸುಂಧರೆ, ಪ್ರೇಮಲತೆ ಎಂಬ ಎಂಟು ನಾಟಕಗಳನ್ನು ರಚಿಸಿದರು. ಇವುಗಳಲ್ಲಿ ಸಾಮಾಜಿಕ ವಸ್ತುವಾಗುಳ್ಳ ಪ್ರೇಮಲತೆ ಹಾಗೂ ಜಾನಪದ ಗೀತನಾಟಕವಾದ ಸತ್ಯಪರೀಕ್ಷೆಯನ್ನು ಬಿಟ್ಟರೆ ಉಳಿದೆಲ್ಲ ನಾಟಕಗಳೂ ಚಾರಿತ್ರಿಕ ವಸ್ತುಗಳಿಂದ ಕೂಡಿವೆ. ಮತೀಯ ಸಾಮರಸ್ಯ, ದೇಶಪ್ರೇಮ, ನಾಡ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಗೀತೆಗಳಿಂದ ಕೂಡಿದ ನಾಟಕಗಳನ್ನು ಶಾಲಾಮಕ್ಕಳು ಅಭಿನಯಿಸುವ ಸಲುವಾಗಿಯೇ ಅವರು ರಚಿಸಿದರು. ದೀರ್ಘಕಾಲ ಅಧ್ಯಾಪನದಲ್ಲಿ ತೊಡಗಿಕೊಂಡಿದ್ದ ನಾಯಕರು, ಸಹಜವಾಗಿ ಮಕ್ಕಳು ಆಕರ್ಷಿತರಾಗುವುದು ಲಯಬದ್ಧ, ಪ್ರಾಸಬದ್ಧ ಹಾಡುಗಳಿಂದ ಎಂಬ ಅರಿವಿನಿಂದ ಹಲವಾರು ಪದ್ಯಗಳನ್ನು ರಚಿಸಿ ‘ಸಚಿತ್ರಬಾಲಗೀತೆ’ ಎಂಬ ಸಂಕಲನ ಮೂಡಿಸಿದರು.
ಇವರ ಗೊಂಬೆ ಪದ್ಯದ ಸುಂದರ ಸಾಲುಗಳು ಹೀಗಿವೆ:
ಸೀರೆಯ ನಿರಿಗೆಯನಾಡಿಪ ಗೊಂಬೆ
ಹೀರೆಯ ಹೂವಿನ ರವಿಕೆಯ ಗೊಂಬೆ
ವಾರೆಯ ಬೈತಲೆಯಾ ಕಣ್ಗೊಂಬೆ
ಕುಣಿಯುವೆ ನಾನು ಕುಣಿಯುವೆನು
ಇವಲ್ಲದೆ ರಾಮನಾಯಕರು ರಾಮಕ್ಷತ್ರಿಯ ಜನಾಂಗದ ಇತಿವೃತ್ತ, ಇಕ್ಕೇರಿನಾಯಕರ ಆಳಿಕೆ, ಬೇಕಲಕೋಟೆ ಮುಂತಾದವುಗಳ ಕುರಿತು ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದರು. ಹಲವಾರು ಜಾನಪದ ಹಾಡುಗಳನ್ನೂ ಸಂಗ್ರಹಿಸಿ ಪ್ರಕಟಿಸಿದ್ದರು. ಅವುಗಳಲ್ಲಿ ಪ್ರಮುಖವಾದ ಹಾಡುಗಳೆಂದರೆ ಸುಬ್ಬಪ್ಪನ ಹಾಡು, ತುಂಬೆಹಾಡು, ಗಿಂಡಿಪೂಜೆ, ಕೌಲಿಹಾಡು ಮೊದಲಾದವು. ಇವರ ಮತ್ತೊಂದು ಅಪೂರ್ವ ಕೃತಿ ಎಂದರೆ ‘ವಾಸಿಷ್ಠರಾಮಾಯಣ’ ಎಂಬ ಸಾಂಗತ್ಯ ಕಾವ್ಯದ ಸಂಪಾದಿತ ಕೃತಿ.
ಹೀಗೆ ಸತತ ಅಭ್ಯಾಸ, ಸಂಶೋಧನೆ ಮತ್ತು ಬರಹಗಳಲ್ಲಿದ್ದ ರಾಮನಾಯಕರು 1969ರ ನವಂಬರ್ 21ರಂದು ಈ ಲೋಕವನ್ನಗಲಿದರು.
On the birth anniversary of scholar and historian Bekala Ramanayak 🌷🙏🌷
ಕಾಮೆಂಟ್‌ಗಳು