ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಧುರಿ ದೇಶಪಾಂಡೆ


ಮಾಧುರಿ ದೇಶಪಾಂಡೆ


ಮಾಧುರಿ ದೇಶಪಾಂಡೆ ವೃತ್ತಿಯಿಂದ ಅನುವಾದಕರಾಗಿ ಪ್ರವೃತ್ತಿಯಿಂದ ಮಾಧುರಿ ಎಂಬ ಕಾವ್ಯನಾಮದ ಬರಹಗಾರ್ತಿಯಾಗಿ, ಸಂಘಟಕರಾಗಿ, ಕನ್ನಡ ಪ್ರೇಮಿಯಾಗಿ ಬಹುಮುಖಿ ಆಸಕ್ತಿ ಉಳ್ಳವರಾಗಿದ್ದಾರೆ. 

ಅಕ್ಟೋಬರ್ 26, ಮಾಧುರಿ ಅವರ ಜನ್ಮದಿನ. ಮೂಲತಃ ಬಿಜಾಪುರದವರಾದ ಇವರು ಬೆಂಗಳೂರು ನಿವಾಸಿ. 

ಮಾಧುರಿ ಅವರ ಪ್ರಕಟಿತ ಕೃತಿಗಳಲ್ಲಿ
ಮಾತೃತ್ವ ಮತ್ತು ಇತರ ಕಥೆಗಳು, ಪರಿವರ್ತನೆ ಮತ್ತು ಇತರ ಕಥೆಗಳು, ಕಾದಂಬರಿ ಮತ್ತು ಇತರ ಕಥೆಗಳು, ಕಥಾರಂಜಿನಿ ಎಂ  ಕಥಾ ಸಂಕಲನಗಳಿವೆ. ಕವನ ಝರಿ ಎಂಬ ಕವನ ಸಂಕಲನ; ಪ್ರೇಮ (ಮೂಲ ಮುನ್ಷಿ ಪ್ರೇಮಚಂದ್) ಚಂದ್ರ ಗುಪ್ತ (ನಾಟಕ - ಮೂಲ ಜಯಶಂಕರ ಪ್ರಸಾದ್) ಮುಂತಾದ ಅನುವಾದಗಳು; ಬಾಂಧವ್ಯ (ಕಾದಂಬರಿ); ಮಕ್ಕಳಿಗಾಗಿ ಸುವಿಚಾರ ಮುಂತಾದವು ಇವರ ವೈವಿಧ್ಯಪೂರ್ಣ ಕೃತಿಗಳಲ್ಲಿ ಸೇರಿವೆ. 
ಮಾಧುರಿ ದೇಶಪಾಂಡೆ ಅವರು ಹಲವು ಸಂಸ್ಥೆಗಳ ಮಾನವ ಸಂಪನ್ಮೂಲ ನೀತಿ ನಿಯಮವಳಿಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೆಎಚ್‌ಪಿಟಿ ಎಂಬ ಎನ್‌ಜಿಒದ ಹಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಮಾಚಾರ ಪತ್ರಿಕೆಗೆ ಕೊಡುವ ಜಾಹಿರಾತು (ಕಾನೂನಿನ ನೋಟಿಸು ಸೂಚನಾ ಪತ್ರಗಳನ್ನು ) ಅನುವಾದಿಸಿದ್ದಾರೆ. ವಕೀಲರ ಕೆಲವು ಹಳೆಯ ಪ್ರಕರಣಗಳು ಹಾಗೂ ಆಂಗ್ಲದಲ್ಲಿರುವ ಸಂಪೂರ್ಣ ಮೊಕದ್ದಮೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂವಿಧಾನದ ಕರಡು ಪ್ರತಿಯ ಚರ್ಚೆಯ ಸಮಯದ ಆಂಗ್ಲ ಅವತರಣಿಕೆಯನ್ನು ಇಂಗ್ಲೀಷ್‌ನಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಲುವಾಗಿ ಅನುವಾದಿಸಿದ್ದಾರೆ. ಬ್ರಿಟಿಷ್ ಒರಿಜಿನ್ ಆಫ್ ಕೌ ಸ್ಲಟರ್ಸ್ ಎಂಬ ಧರ್ಮ ಪಾಲ್ ಸರಣಿಯ ಪುಸ್ತಕದಲ್ಲಿನ ಕೆಲವು ಪುಟಗಳನ್ನು ಕುವೆಂಪು ಭಾಷಾ ಭಾರತೀ ಪ್ರಾಧಿಕಾರಕ್ಕಾಗಿ ಅನುವಾದ ಮಾಡಿಕೊಟ್ಟಿದ್ದಾರೆ. ವಿನೋಬಾ ಭಾವೆಯವರು ಋಗ್ವೇದದ ಆಯ್ದ ಶೋಕಗಳಿಗೆ ಹಿಂದಿಯಲ್ಲಿ ಹೇಳಿದ ಅರ್ಥವಿರುವ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಹಿಂದುಸ್ಥಾನ್‌ ಸಮಾಚಾರ ಹಿಂದೀ ಪತ್ರಿಕೆಗೆ  ಕೆಲವು ಕಾಲ ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಆಂಗ್ಲದಿಂದ ಹಿಂದಿಗೆ ಕೆಲವು ಸಂಸ್ಥೆಗಳ ಪತ್ರಗಳನ್ನು ಅನುವಾದ ಮಾಡಿಕೊಟ್ಟಿದ್ದಾರೆ. ಐಎಚ್‌ಎಟಿ ಎನ್ನುವ ಎನ್‌ಜಿಒಗೆ ಮಾಹಿತಿ ಪುಸ್ತಕ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಸೌಹಾರ್ದ ಕೋ ಆಪರೇಟಿವ್ ಸಲುವಾಗಿ ಅವರ ಕೋ ಆಪರೇಟಿವ್‌ ಕಾಯಿದೆ ಪುಸ್ತಕವನ್ನು ಮಾಡಿಕೊಟ್ಟಿದ್ದಾರೆ.  ಕನ್ನಡ ದಿಂದ ಹಿಂದಿಗೆ ಡಾ|| ಸುರೇಶ ಪಾಟೀಲರ ಎರಡು ಕಥೆಗಳನ್ನು ಅನುವಾದಿಸಿದ್ದಾರೆ. 

ಮಾಧುರಿ ದೇಶಪಾಂಡೆ ಅವರ ಇತರ ಬರಹಗಳಲ್ಲಿ ಪತ್ರಿಕೆಗಳಲ್ಲಿ ಅಂಕಣ, ಸಾಂದರ್ಭಿಕ ಲೇಖನಗಳು ಸೇರಿವೆ.  ಎರಡು ವರ್ಷಗಳಿಂದ ದಿ ಡೈಲಿ ನ್ಯೂಸ್ ಪತ್ರಿಕೆಗೆ 'ಹಿತ್ತಲ ಮದ್ದು' ಎಂಬ ನಮ್ಮ ದಿನ ನಿತ್ಯದ ಆಹಾರ ಪದಾರ್ಥಗಳ ಕುರಿತಾದ ಲೇಖನ ಹಾಗೂ ಅವುಗಳನ್ನು ಹೇಗೆ ಅರೋಗ್ಯಕರವಾಗಿ ಬಳಸಬಹುದೆಂಬ ಇವರ ಲೇಖನಗಳು 135 ಕಂತುಗಳಲ್ಲಿ ಪ್ರಕಟವಾಗಿವೆ.  ಎರಡು ವರ್ಷಗಳಿಂದ ಇಂದು ಸಂಜೆ ಪತ್ರಿಕೆಯಲ್ಲಿ ದಿನ ನಿತ್ಯ 'ಸುವಿಚಾರ' ಎಂಬ ಅಂಕಣ ಮೂಡಿಸುವುದರ ಜೊತೆಗೆ, ಆಗಾಗ ಸಾಂದರ್ಭಿಕ ಲೇಖನಗಳು, ಆಯಾ ದಿನದ ಆಚರಣೆಯ ಮಹತ್ವಗಳ ಕುರಿತಾಗಿ ಲೇಖನಗಳನ್ನು ಬಿಂಬಿಸಿದ್ದಾರೆ. ವಿಜಯಪುರದ ಸಂದರ್ಶನ ಪತ್ರಿಕೆ,  ಉದಯಕಾಲ ಪತ್ರಿಕೆಯಲ್ಲಿ,  ಸಂಯುಕ್ತ ಕರ್ನಾಟಕ ಮತ್ತು ವಿಶ್ವವಾಣಿ ಮುಂತಾದ ಪತ್ರಿಕೆಗಳಲ್ಲಿ  ಸಾಂದರ್ಭಿಕ ಲೇಖನಗಳನ್ನು ಮೂಡಿಸಿದ್ದಾರೆ.  ಧಾರ್ಮಿಕ ಪತ್ರಿಕೆಯಾದ 'ಶ್ರೀ ಶೈಲಪ್ರಭ' ಮಾಸ ಪತ್ರಿಕೆಯಲ್ಲಿ 3 ವರ್ಷಗಳಿಂದ ಲೇಖನ ಬರೆಯುತ್ತಿದ್ದಾರೆ.   ಸಪ್ತಗಿರಿ ಧಾರ್ಮಿಕ ಪತ್ರಿಕೆಯಲ್ಲಿಯೂ ಕೆಲವು ಲೇಖನಗಳನ್ನು ಬರೆದಿದ್ದಾರೆ.  ಕರ್ಮವೀರ, ವಿಕ್ರಮ ವಾರ ಪತ್ರಿಕೆಗಳಿಗೂ ಲೇಖನ ಬರೆದಿದ್ದು  ಹಲವು ಅಭಿನಂದನಾ ಗ್ರಂಥಗಳಿಗೆ ವಿವಿಧ ವಿಷಯ  ವಿಶೇಷ ಲೇಖನಗಳನ್ನು ಬರೆದಿದ್ದಾರೆ.

ಮಾಧುರಿ ದೇಶಪಾಂಡೆ ಅವರಿಗೆ 2012 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಟಿತ ಅರಳು ಪ್ರಶಸ್ತಿ,  2020 ಸಾಲಿನ ಬುದ್ಧ ಬಸವ ಗಾಂಧಿ ಪ್ರತಿಷ್ಟಾನದ ದತ್ತಿ ಪ್ರಶಸ್ತಿ,  2023ನೇ ಸಾಲಿನ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತ ಮಹಿಳಾ ಸಾಧಕಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

ಮಾಧುರಿ ದೇಶಪಾಂಡೆ ಅವರು ಕನ್ನಡ ಸಂಘಟನಾ ಚತುರೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅನೇಕ ಗೋಷ್ಠಿಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದಾರೆ. 

ಮಾಧುರಿ ದೇಶಪಾಂಡೆ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.

Happy birthday Madhuri Deshpande 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ