ನಾನಾಜಿ ದೇಶಮುಖ್
ಭಾರತರತ್ನ ನಾನಾಜಿ ದೇಶಮುಖ್
ನಾನಾಜಿ ದೇಶಮುಖ್ ತಮ್ಮ ಬಳಿ ಬಂದ ಮಂತ್ರಿ ಪದವಿಯನ್ನೂ ಬೇಡವೆಂದು ಜನಹಿತಕ್ಕಾಗಿ ದುಡಿದ ಅಪೂರ್ವ ಸಮಾಜ ಸೇವಕರು.
ಚಂಡಿಕಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ ಅವರು 1916ರ ಅಕ್ಟೋಬರ್ 11ರಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಎಂಬಲ್ಲಿ ಜನಿಸಿದರು. ಇವರ ತಂದೆ ಅಮೃತರಾವ್ ದೇಶಮುಖ್. ತಾಯಿ ರಾಜಾಬಾಯಿ ಅಮೃತರಾವ್ ದೇಶಮುಖ್. ತರಕಾರಿ ಮಾರಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಒದಗಿಸಿಕೊಳ್ಳುತ್ತಿದ್ದ ನಾನಾಜಿ ಸಿಕಾರ್ನಲ್ಲಿ ವಿದ್ಯಾರ್ಥಿ ವೇತನ ಪಡೆದು ಹೈಸ್ಕೂಲು ವಿದ್ಯಾಭ್ಯಾಸ ನಡೆಸಿದರು. ರಾಜಾಸ್ತಾನದ ಪಿಲಾನಿಯ ಬಿರ್ಲಾ ಕಾಲೇಜಿನಲ್ಲಿ (ಇಂದಿನ ಬಿಟ್ಸ್, ಪಿಲಾನಿಯಲ್ಲಿ) ಪದವಿ ಪಡೆದರು.
ನಾನಾಜಿ ಅವರು ಬಾಲ್ಯದಿಂದಲೇ ಬಾಲಗಂಗಾಧರ ತಿಲಕ್ ಮತ್ತು ಕೇಶವ ಹೆಗಡೆವಾರರ ಪ್ರಭಾವಗಳಿಂದ ಆಕರ್ಷಿತರಾದರು. ಪಿಲಾನಿಯಲ್ಲಿ ಓದುವ ದಿನಗಳಲ್ಲೇ ಆರ್.ಎಸ್. ಎಸ್ ಸೇರಿದರು. ಮಹಾರಾಷ್ಟ್ರದಲ್ಲಿ ಜನಿಸಿದರೂ ಅವರ ಕಾರ್ಯ ರಾಜಾಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಿಸಿತ್ತು. ಉತ್ತರ ಪ್ರದೇಶಕ್ಕೆ ಪ್ರಚಾರಕರಾಗಿ ಬಂದ ನಾನಾಜಿ, ಸಂಘದ ವಿವಿದ ಹಂತಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಅರ್.ಎಸ್.ಎಸ್ ಮತ್ತು ಭಾರತೀಯ ಜನಸಂಘ. ಕಾರ್ಯಕರ್ತರಾಗಿ ಉತ್ತರಪ್ರದೇಶದ ಆಗ್ರಾ, ಗೋರಖ್‍ಪುರಗಳಲ್ಲಿ ಶ್ರಮಿಸಿದ ನಾನಾಜಿ, ಆರ್.ಎಸ್.ಎಸ್ ನ ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಪತ್ರಿಕೆಗಳ ಸಂಪಾದನೆಯಲ್ಲಿಯೂ ಪ್ರಮುಖ ಪಾತ್ರಧಾರಿಯಾಗಿದ್ದರು.
ನಾನಾಜಿ ದೇಶಮುಖ್ ಅವರು ಗೋರಖ್‍ಪುರದಲ್ಲಿ ಸರಸ್ವತಿ ಶಿಶುಮಂದಿರವನ್ನು ಸ್ಥಾಪಿಸಿದರು. ದೀನದಯಾಳ್ ಸಂಶೋಧನಾ ಕೇಂದ್ರದ ನೇತೃತ್ವ ವಹಿಸಿ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ, ನೈರ್ಮಲ್ಯ ಮತ್ತು ಗುಡಿಕೈಗಾರಿಕೆಗಳ ಸಬಲೀಕರಣಕ್ಕೆ ಅಪಾರ ಕೊಡುಗೆ ಸಲ್ಲಿಸಿದರು. ಇವರ ಪರಿಶ್ರಮದಿಂದ ಅತ್ಯಂತ ಕ್ಷಿಪ್ರ 3 ವರ್ಷಗಳ ಅವಧಿಯಲ್ಲಿ 250ಕ್ಕೂ ಹೆಚ್ಚು ಸ್ವಯಂಸೇವಕ ಸಂಘದ ಶಾಖೆಗಳು ಮೂಡಿದವು.
ಆರ್ ಎಸ್ ಎಸ್ ಚಟುವಟಿಕೆಗಳಿಂದ ನಾನಾಜಿ ಅವರಿಗೆ ಉತ್ತರ ಪ್ರದೇಶದ ನಿಕಟ ಪರಿಚಯ ದಕ್ಕಿತು. ಪಂಡಿತ್ ದೀನದಯಾಳ್ ಉಪಾಧ್ಯಾಯರ ದೂರದೃಷ್ಟಿ, ಅಟಲ್ ಬಿಹಾರಿ ವಾಜಪೇಯಿ ಅವರಿಗಿದ್ದ ವಾಕ್ಪ್ರಸಿದ್ಧಿ ಮತ್ತು ನಾನಾಜಿ ಅವರ ಕಾರ್ಯಗಳು ಭಾರತೀಯ ಜನಸಂಘದ ಖ್ಯಾತಿಯನ್ನು ಎಲ್ಲೆಡೆ ವ್ಯಾಪಿಸುತ್ತಿತ್ತು. ಹೀಗಾಗಿ ಭಾರತೀಯ ಜನಸಂಘಕ್ಕೆ ಅಲ್ಲಿ ಅಪಾರ ಜನಬೆಂಬಲ ಗಳಿಸುವುದು ಸಾಧ್ಯವಾಯಿತು.
ನಾನಾಜಿ ಅವರಿಗೆ ತಮ್ಮ ಪಕ್ಷದ ನಾಯಕರೊಂದಿಗೆ ಮಾತ್ರವಲ್ಲ ಇತರ ನಾಯಕರೊಂದಿಗೆ ಸಹಾ ವ್ಯಾಪಕವಾದ ಸ್ನೇಹವಿತ್ತು. ನಾನಾಜಿ ಅವರು ಲೋಹಿಯಾ ಅವರ ಆಪ್ತರಾಗಿದ್ದರು. ವಿನೋಬಾ ಅವರ ಭೂದಾನ ಚಳುವಳಿಯಲ್ಲೂ ಸಕ್ರಿಯರಾಗಿದ್ದರು. ಜಯಪ್ರಕಾಶ್ ನಾರಾಯಣ್ ಅವರ ಸಂಪೂರ್ಣಕ್ರಾಂತಿಗೆ ಬೆಂಬಲವಾಗಿ ನಿಂತರು.
1977ರಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಬಲರಾಮಪುರ ಲೋಕಸಭಾ ಕ್ಷೇತ್ರದಿಂದ ನಾನಾಜಿಯವರು ಸಂಸದರಾಗಿ ಆರಾಮವಾಗಿ ಆರಿಸಿಬಂದರು.
ಆ ಚುನಾವಣೆಯಲ್ಲಿ ದೇಶದಲ್ಲಿ ಜನತಾ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸಿದ್ದು ನಮಗೆ ತಿಳಿದಿದೆ. ಇಂದಿರಾ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ ಜೆಪಿ ಮತ್ತು ಪ್ರಧಾನಿಯಾಗಿ ಆಯ್ಕೆಯಾದ ಮುರಾರ್ಜಿ ದೇಸಾಯಿ ಅವರಿಗೆ ನಾನಾಜಿ ದೇಶಮುಖರ ಜನಪರ ಕಳಕಳಿ, ಕಾರ್ಯಸಾಮರ್ಥ್ಯದ ಪರಿಚಯ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಸಚಿವ ಸಂಪುಟ ಸೇರುವಂತೆ ಖುದ್ದು ಜೆಪಿ ಮತ್ತು ಮುರಾರ್ಜಿ ಆಹ್ವಾನಿಸಿದರು. ಸಂಪುಟ ದರ್ಜೆ ನೀಡಿ ಕೈಗಾರಿಕಾ ಖಾತೆ ನೀಡುವುದಾಗಿ ಹೇಳಿದರು. ಆದರೆ ನಾನಾಜಿ ಬಿಲ್ ಕುಲ್ ಒಪ್ಪಲಿಲ್ಲ.
ಹುಡುಕಿಕೊಂಡು ಬಂದ ಮಂತ್ರಿ ಸ್ಥಾನವನ್ನು ಬೇಡವೆಂದ ನಾನಾಜಿ, 60 ವರ್ಷವಾದಾಗ ರಾಜಕೀಯದಿಂದಲೇ ನಿವೃತ್ತರಾಗಿಬಿಟ್ಟರು! ರಾಜಕೀಯ ಸಾಕೆಂದ ಅವರು ತಾವು 1969ರಲ್ಲಿ ಪ್ರಾರಂಭಿಸಿದ್ದ ದೀನದಯಾಳ್ ರಿಸರ್ಚ್ ಇನ್ಸ್ಟಿಟ್ಯೂಟ್ ಚಟುವಟಿಕೆಗಳಿಗೆ ಟೊಂಕಕಟ್ಟಿ ನಿಂತರು. ಗ್ರಾಮೀಣಾಭಿವೃದ್ಧಿ, ಗ್ರಾಮಗಳಲ್ಲಿ ಉದ್ಯೋಗ, ಆರೋಗ್ಯ, ಗ್ರಾಮೀಣ ಶಿಕ್ಷಣ, ಮುಂತಾದ ಸಮಾಜಸೇವಾ ಚಟುವಟಿಕೆಗಳಲ್ಲಿ ತಲ್ಲೀನರಾಗಿ ಬಿಟ್ಟರು. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾಮಾಜಿಕ ಪುನರ್ನಿರ್ಮಾಣದ ರೂವಾರಿಯಾದರು.
1999ರಲ್ಲಿ ಎನ್‍ಡಿಎ ಸರ್ಕಾರ ಬಂದಾಗ ನಾನಾಜಿ ದೇಶಮುಖ್ ಅವರಿಗೆ ರಾಜ್ಯಸಭೆಯ ಸದಸ್ಯತ್ವ ನೀಡಿ ಗೌರವಿಸಿತು.
ನಾನಾಜಿ ದೇಶ್‍ಮುಖ್ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಿ ಅದರ ಉಪಕುಲಪತಿಗಳಾಗಿಯೂ ಕಾರ್ಯನಿರ್ವಹಿಸಿದರು.
ನಾನಾಜಿ ದೇಶಮುಖ್ ಅವರಿಗೆ 1999ರಲ್ಲಿ ಪದ್ಮವಿಭೂಷಣ ಗೌರವ ನೀಡಲಾಯಿತು. 2019ರಲ್ಲಿ ಅವರ ಗೌರವಾರ್ಥವಾಗಿ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಸಲ್ಲಿಸಲಾಯಿತು.
ಜೀವನಪೂರ್ತಿ ಬ್ರಹ್ಮಚಾರಿಗಳಾಗಿ ಜನಸೇವೆಗೆ ನಿಂತ ನಾನಾಜಿ ದೇಶಮುಖ್ ಅವರು 2010ರ ಫೆಬ್ರವರಿ 27ರಂದು ಈ ಲೋಕವನ್ನಗಲಿದರು. ಈ ಮಹಾನುಭಾವರಿಗೆ ನಮನ.
On the birth anniversary of Bharata Ratna Nanaji Deshmukh
ಕಾಮೆಂಟ್‌ಗಳು