ಉಡುಗಣವೇಷ್ಟಿತ
ಉಡುಗಣವೇಷ್ಟಿತ ಚಂದ್ರಸುಶೋಭಿತ
ನೀಲಾಂಬರ ಸಂಚಾರಿ
ಕಣ್ಣನೀರಿನಲ್ಲಿ ಮಣ್ಣ ಧೂಳಿನಲಿ
ಹೊರಳುತ್ತಿರುವರ ಸಹಚಾರಿ.
ಕೋಟಿಸೂರ್ಯಕರ ತೇಜಃಪುಂಜತರ
ವಿದ್ಯುದ್ರಾಜಿತ ರಥಗಾಮಿ
ಉಳುತಿಹ ರೈತನ ನೇಗಿಲಸಾಲಿನ
ಮಣ್ಣಿನ ರೇಖಾ ಪಥಗಾಮಿ.
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ
ದೀನ ಅನಾಥರ ದುಃಖ ದರಿದ್ರರ
ಮುರುಕು ಗುಡಿಸಲಲಿ ಉಪವಾಸಿ
ಸಾಹಿತ್ಯ: ರಾಷ್ಟ್ರಕವಿ ಜಿ ಎಸ್. ಶಿವರುದ್ರಪ್ಪ
ಈ ಕವನದ ಕುರಿತು ಹೀಗೊಂದು ಚಿಂತನ:
ಬಹಳಷ್ಟು ದೇವರುಗಳು ವೈಭೋಗಗಳಿಂದ ಕಂಗೊಳಿಸಿದರೆ ಈಶ್ವರ ನಿರಾಡಂಬರಿ ಎಂಬುದು
ನಮ್ಮ ಪುರಾಣಗಳಲ್ಲಿ ಹಾಗೂ ಜಾನಪದದಲ್ಲಿ ಪ್ರಚಲಿತದಲ್ಲಿದೆ.
ರಾಷ್ಟ್ರಕವಿಗಳಾದ ಡಾ. ಜಿ. ಎಸ್. ಶಿವರುದ್ರಪ್ಪನವರನ್ನು ಈ ಭಾವ ಆಕರ್ಷಿಸಿದೆ.
ಇಲ್ಲಿ ಶಿವ ವಿಶ್ವನಿವಾಸಿ.
ಉಡುಗಣವೇಷ್ಟಿತ ಚಂದ್ರ ಸುಶೋಭಿತ ನೀಲಾಂಬರ ಸಂಚಾರಿ
"ಅಂದರೆ ನಕ್ಷತ್ರಗಳ ಗುಂಪಿನಿಂದ ಆವೃತನಾದ ಚಂದ್ರನಿಂದ
ಶೋಭಿತನಾದ ನೀಲಗಗನದ ಸಂಚಾರಿ.
ಅವನ ಸಂಚಾರ ಏತಕ್ಕಾಗಿ ಅದು ಕಣ್ಣ ನೀರು ಹಾಕುವ ಶೋಕಸ್ತರು ಮತ್ತು ಮಣ್ಣ ಧೂಳಿನಲಿ
ಹೊರಳುವವರು ಅಂದರೆ ಮಣ್ಣಿನೊಂದಿಗೆ ಕಾಯಕ ಮಾಡುವವರು ಶ್ರಮಜೀವಿಗಳ ಸಹಚಾರಿಯಾಗಿ ಇರುವುದಕ್ಕಾಗಿ.
ಕೋಟಿಸೂರ್ಯಕರ ತೇಜಸ್ಸು ಉಳ್ಳ ಸಮಸ್ತ ವಿಶ್ವವನ್ನೂ ಆತ ನಡೆಸುತ್ತಾನೆ, ಉಳುತ್ತಿರುವ ರೈತನ, ನೇಗಿಲ ಸಾಲಿನ
ಮಣ್ಣಿನ ರೇಖಾ ಪಥವನ್ನು ಕೂಡಾ ನಿರ್ಣಯಿಸುತ್ತಾನೆ.
ಆಕಾಶವನ್ನು ಚುಂಬಿಸುವ ಹಿಮಾವೃತ ಎತ್ತರದ ಪ್ರದೇಶದಲ್ಲಿ ನಿವಾಸಿಯಾದರೂ ಮುರುಕು
ಗುಡಿಸಿಲಿನಲ್ಲಿರುವವರ ಬಡ ಹೃದಯಗಳಲ್ಲೂ ಆತ ನಿವಾಸಿ.
ಒಟ್ಟಿನಲ್ಲಿ ನೋಡುವುದಾದರೆ ಶಿವ ಇಡೀ ವಿಶ್ವ ವ್ಯಾಪಿಯಾದ ತೇಜೋವಂತನಾದರೂ ಆತ
ಪ್ರತಿಯೊಂದು ಬಡಜೀವಿಯ ಕುರಿತು ಚಿಂತಿಸಿ ಅವರೊಡನೆ ವಾಸಿಸುವ, ಅವರೊಡನೆ ಬದುಕುವವ, ಅವರ ಹೃದಯಗಳನ್ನು ಪ್ರಕಾಶಿಸುವವ.
(ಈ ಕವನದ ವಿವರಣೆಯನ್ನು ಕನ್ನಡ ಸಂಪದದ ಆತ್ಮೀಯ
ಬಂಧುವೊಬ್ಬರು ಕೇಳಿದ್ದರಿಂದ ನನ್ನ ಚಿಂತನೆಯ ಮಿತಿಗೆ ತಿಳಿದಂತೆ ಚಿಂತಿಸಲು ಪ್ರಯತ್ನಿಸಿದ್ದೇನೆ.
ಈ ಕುರಿತ ಹೆಚ್ಚಿನ ಚಿಂತನೆ ಏನಾದರೂ ಇದ್ದಾರೆ ವಿದ್ವತ್ಪೂರ್ಣ ಬಂಧುಗಳು ಈ ಕುರಿತು
ಬೆಳಕು ಚೆಲ್ಲಲು ಕೋರುತ್ತೇನೆ)
Tag: Udugana veshtita chandra sushobita
ಕಾಮೆಂಟ್‌ಗಳು