ಬಾಲಕಾಂಡ
ಶ್ರೀರಾಮಾಯಣ: ಬಾಲಕಾಂಡ
(ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರ 'ಸಂಗ್ರಹ ರಾಮಾಯಣ')
ತ್ರೇತಾಯುಗದಲ್ಲಿ ಕೋಸಲ ದೇಶಕ್ಕೆ ಚಕ್ರವರ್ತಿಯಾದ ದಶರಥನು ಅಯೋಧ್ಯೆಯಲ್ಲಿ ರಾಜ್ಯವಾಳುತ್ತಿದ್ದನು. ಈತನಿಗೆ ಅನೇಕ ಕಾಲ ಮಕ್ಕಳಿಲ್ಲದುದರಿಂದ ಅಶ್ವಮೇಧಯಾಗವನ್ನು ಮಾಡಿದನು. ಈ ಯಾಗದಲ್ಲಿ ಅಗ್ನಿಯು ಪ್ರತ್ಯಕ್ಷನಾಗಿ ಪಾಯಸ ತುಂಬಿದ ಚಿನ್ನದ ಪಾತ್ರೆಯನ್ನು ಕೊಟ್ಟು ಮಕ್ಕಳಾಗುವುದೆಂದು ಆಶೀರ್ವದಿಸಿದನು.
ದಶರಥನು ಆ ಪಾಯಸವನ್ನು ತನ್ನ ಮೂವರು ಹೆಂಡತಿಯರಾದ ಕೌಸಲ್ಯೆ, ಕೈಕೆ ಮತ್ತು ಸುಮಿತ್ರೆಯರಿಗೆ ಕೊಟ್ಟು ಹಂಚಿಕೊಳ್ಳಲು ತಿಳಿಸಿದನು. ಅವರು ಆ ಪಾಯಸವನ್ನು ಸೇವಿಸಿದ ಮೇಲೆ ಶುಭಮುಹೂರ್ತದಲ್ಲಿ ಶ್ರೀ ಮಹಾವಿಷ್ಣುವು ಬೇರೆ ಬೇರೆ ಅಂಶಗಳಿಂದ ಅವರಲ್ಲಿ ಅವತರಿಸಿದನು.
ದೇವತೆಗಳು ರಾವಣಾದಿ ರಾಕ್ಷಸರ ಬಾಧೆಯನ್ನು ತಡೆಯಲಾರದೆ ವೈಕುಂಠ ಲೋಕದಲ್ಲಿದ್ದ ಶ್ರೀಮನ್ನಾರಾಯಣನ ಮೊರೆಹೊಕ್ಕಿದ್ದರು. ಮಹಾವಿಷ್ಣುವು ದೇವತೆಗಳಿಗೆ ಕೊಟ್ಟ ಭರವಸೆಯಂತೆ, ಮನುಷ್ಯನ ರೂಪದಲ್ಲಿ ಈಗ ದಶರಥನ ಮಗನಾಗಿ ಕೌಸಲ್ಯೆಯಲ್ಲಿ ರಾಮನಾಗಿ ಅವತರಿಸಿದನು. ಕೈಕೆಗೆ ಭರತನೂ, ಸುಮಿತ್ರೆಗೆ ಲಕ್ಷ್ಮಣ-ಶತ್ರುಘ್ನರೂ ಮಕ್ಕಳಾದರು.
ದಶರಥನ ಮಕ್ಕಳಾದ ಶ್ರೀರಾಮಾದಿಗಳು ದಿನೇದಿನೇ ಅಭಿವೃದ್ಧಿ ಹೊಂದುತ್ತಾ ಸಕಲವಿದ್ಯೆಗಳನ್ನು ಕಲಿತರು. ಅವರೆಲ್ಲರೂ ಗುಣವಂತರಾಗಿ ಅನ್ಯೋನ್ಯ ಮೈತ್ರಿಯಿಂದ ಬೆಳೆದರು. ಗುಣವಂತರೂ ಮತ್ತು ಶಕ್ತಿವಂತರೂ ಆದ ಮಕ್ಕಳನ್ನು ನೋಡಿ ದಶರಥನಿಗೆ ಆದ ಆನಂದ ಹೇಳತೀರದು.
ರಾಮನಿಗೆ ಇನ್ನೂ ಹದಿನಾರು ವರ್ಷ ವಯಸ್ಸಾಗದಿದ್ದಾಗಲೇ ಒಂದು ದಿನ ವಿಶ್ವಾಮಿತ್ರ ಮಹರ್ಷಿಯು ದಶರಥನ ಬಳಿಗೆ ಬಂದು ತನ್ನ ಯಾಗ ಸಂರಕ್ಷಣೆಗಾಗಿ ಮಹಾಶಕ್ತನಾದ ರಾಮನನ್ನು ತನ್ನೊಡನೆ ಕಳುಹಿಸಿ ಕೊಡುವಂತೆ ತಿಳಿಸಿದನು. ಪುತ್ರ ವ್ಯಾಮೋಹದಿಂದ ದಶರಥನಿಗೆ ರಾಮನನ್ನು ಅಗಲಿರುವುದು ಕಷ್ಟವಾಯಿತಾದರೂ, ರಾಜಪುರೋಹಿತರಾದ ವಸಿಷ್ಠರ ಅಣತಿಯಂತೆ ರಾಮನನ್ನು ವಿಶ್ವಾಮಿತ್ರನಿಗೆ ಒಪ್ಪಿಸಿದನು.
ಬಾಲ್ಯದಿಂದಲೂ ರಾಮನೂ ಲಕ್ಷ್ಮಣನೂ ಹೊಂದಿಕೊಂಡು ಬೆಳೆದವರಾದುದರಿಂದ ಆಗ ರಾಮನೊಡನೆ ಲಕ್ಷ್ಮಣನೂ ವಿಶ್ವಾಮಿತ್ರರನ್ನು ಹಿಂಬಾಲಿಸಿದನು. ದಾರಿಯಲ್ಲಿ ವಿಶ್ವಾಮಿತ್ರರು ಬಲಾ, ಅತಿಬಲಾ ಎಂಬೆರಡು ಮಂತ್ರಗಳನ್ನು ಉಪದೇಶಿಸಲಾಗಿ, ಅವರಿಗೆ ಹೊಸಶಕ್ತಿ ಬಂದು ಹಸಿವು ಬಾಯಾರಿಕೆಗಳ ಅರಿವೇ ಇಲ್ಲದಂತಾಯಿತು.
ಗುರುವರ್ಯರನ್ನು ಹಿಂಬಾಲಿಸುತ್ತಾ ರಾಮಲಕ್ಷ್ಮಣರು ಗಂಗಾನದಿಯನ್ನು ದಾಟಿದರು. ಗಂಗಾತೀರದಲ್ಲಿದ್ದ ಅನೇಕ ಋಷ್ಯಾಶ್ರಮಗಳನ್ನು ನೋಡಿ ಆನಂದಿಸಿದರು. ಮುಂದೊಂದು ಭಯಂಕರ ಕಾಡಿನಲ್ಲಿದ್ದ ಲೋಕಕಂಟಕಳಾದ ತಾಟಕಿಯೆಂಬ ರಾಕ್ಷಸಿಯನ್ನು ಕೊಲ್ಲುವಂತೆ ವಿಶ್ವಾಮಿತ್ರನು ರಾಮನಿಗೆ ಆಜ್ಞಾಪಿಸಿದನು. ಗುರುಗಳ ಅಪ್ಪಣೆಯಂತೆ ರಾಮನು ತನ್ನ ಧನುಸ್ಸಿನ ಶಬ್ದ ಮಾಡಲು, ಆ ಶಬ್ದವನ್ನು ಕೇಳಿದ ತಾಟಕಿಯು ರಾಮಲಕ್ಷ್ಮಣರ ಮೇಲೆ ಎರಗಿದಳು. ಆಗ ಲಕ್ಮಣನು ಅವಳ ಕಿವಿಮೂಗುಗಳನ್ನು ಕತ್ತರಿಸಲು ಅವಳು ನೋವಿನಿಂದ ಕಿರುಚಿಕೊಳ್ಳುತ್ತಾ ಮಾಯಾಯುದ್ಧವನ್ನು ಮಾಡಿದಳು. ರಾಮನು ತನ್ನ ತಂದೆಯಂತೆ ಶಬ್ದದಿಂದಲೇ ಗುರಿಹಿಡಿದು ಬಾಣ ಪ್ರಯೋಗ ಮಾಡಿ ಅವಳನ್ನು ಕೊಂದನು.
ತಾಟಕಾವಧೆಯಿಂದ ಸಂತೋಷಗೊಂಡ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಅನೇಕ ದಿವ್ಯಾಸ್ತ್ರಗಳನ್ನು ಕೊಟ್ಟರು. ಮುಂದೆ ಇವರು ಬಲಿಯ ತ್ಯಾಗಕ್ಕೆ ಹೆಸರಾದ ಸಿದ್ಧಾಶ್ರಮವನ್ನು ಹೊಕ್ಕರು. ಇಂತಹ ಸಿದ್ಧಾಶ್ರಮದಲ್ಲಿ ವಿಶ್ವಾಮಿತ್ರ ಮಹರ್ಷಿಯು ಯಜ್ಞವನ್ನು ಕೈಗೊಂಡಾಗ ರಾಮಲಕ್ಷ್ಮಣರು ಹಗಲು ರಾತ್ರಿಗಳಲ್ಲಿ ಯಾಗಸಂರಕ್ಷಣೆಗೆ ಟೊಂಕಕಟ್ಟಿ ನಿಂತರು. ಐದು ದಿನಗಳ ನಂತರ ಸುಬಾಹು ಮಾರೀಚರೆಂಬ ರಾಕ್ಷಸರು ಯಜ್ಞನಾಶಕ್ಕೆ ಪ್ರಯತ್ನಿಸಲು ರಾಮನು ಅವರಮೇಲೆ ತನ್ನ ನಿಶಿತಾಸ್ತ್ರಗಳನ್ನು ಬಿಟ್ಟನು. ಇದರಿಂದ ಸುಬಾಹುವು ಇತರ ರಾಕ್ಷಸರೂ ತಕ್ಷಣವೇ ಪ್ರಾಣಬಿಟ್ಟರು. ತಾಟಕಾಪುತ್ರನಾದ ಮಾರೀಚನು ಸ್ಮೃತಿತಪ್ಪಿ ಸಮುದ್ರದಲ್ಲಿ ಬಿದ್ದನು. ಮುಂದೆ ಯಜ್ಞವು ನಿರ್ವಿಘ್ನವಾಗಿ ನಡೆದುದರಿಂದ ರಾಮಲಕ್ಷ್ಮಣರು ಸರ್ವರಿಂದ ಸ್ತುತಿಸಲ್ಪಟ್ಟರು.
ಈ ವೇಳೆಗೆ ಮಿಥಿಲಾನಗರದಲ್ಲಿ ಜನಕರಾಜನು ಒಂದು ಯಾಗಮಾಡುತ್ತಿರುವ ವಾರ್ತೆಯು ವಿಶ್ವಾಮಿತ್ರರಿಗೆ ಮುಟ್ಟಿದುದರಿಂದ, ಅವರು ಋಷಿಪರಿವಾರದೊಂದಿಗೆ ರಾಮಲಕ್ಷ್ಮಣರನ್ನು ಕರೆದುಕೊಂಡು ಅಲ್ಲಿಗೆ ಹೊರಟರು. ಮಾರ್ಗಮಧ್ಯದಲ್ಲಿ ವಿಶ್ವಾಮಿತ್ರರು, ಭಗೀರಥನು ಭೂಲೋಕಕ್ಕೆ ದೇವಗಂಗೆಯನ್ನು ಬಹುಪ್ರಯತ್ನಗಳಿಂದ ತಂದು, ಸಗರಪುತ್ರರಿಗೆ ಸದ್ಗತಿಯನ್ನು ಕರುಣಿಸಿದ ಸಂಗತಿಯನ್ನು ವಿವರಿಸಿದರು. ಹಾಗೆಯೇ ಮುಂದೆ ಬರುತ್ತಿರಲಾಗಿ ಗೌತಮರ ಆಶ್ರಮವು ಸಿಕ್ಕಿತು. ಗೌತಮರ ಶಾಪದಿಂದ ಕಲ್ಲಾಗಿದ್ದ ಅಹಲ್ಯೆಗೆ ರಾಮನ ಪಾದಸ್ಪರ್ಶದಿಂದ ಮೊದಲಿನ ರೂಪಬಂತು. ಆ ಸಮಯಕ್ಕೆ ಗೌತಮರೂ ಅಲ್ಲಿಗೆ ಬಂದು ಅಹಲ್ಯೆಯನ್ನು ಸ್ವೀಕರಿಸಿ ಶ್ರೀರಾಮನನ್ನು ಕೊಂಡಾಡಿದರು.
ಮುಂದೆ ಸರ್ವರೂ ಮಿಥೆಲೆಗೆ ಬರಲು, ಜನಕನು ಅವರನ್ನು ಸಂತೋಷದಿಂದ ಸ್ವಾಗತಿಸಿದನು. ಅಲ್ಲಿಯ ಪುರೋಹಿತರು ಅಹಲ್ಯೆಯ ಪುತ್ರರಾದ ಶತಾನಂದರು. ಅವರು ರಾಮಲಕ್ಷ್ಮಣರಿಗೆ ವಿಶ್ವಾಮಿತ್ರರ ಪೂರ್ವಚರಿತ್ರೆಯನ್ನೂ ಅವರು ತಪಃಶ್ಯಕ್ತಿಯಿಂದ ಬ್ರಹ್ಮರ್ಷಿಯಾದ ಬಗೆಯನ್ನೂ ವರ್ಣಿಸಿದರು. ವಿಶ್ವಾಮಿತ್ರರು ಜನಕರಾಜನಿಗೆ ರಾಮಲಕ್ಷ್ಮಣರ ಸಾಮರ್ಥ್ಯವನ್ನು ತಿಳಿಸಿದರು. ಆಗ ಜನಕನು ಐದುಸಾವಿರ ಜನಗಳಿಂದ ಹೊರೆಸಿತಂದ ಶಿವ ಧನುಸ್ಸನ್ನು ತೋರಿಸಲು ಶ್ರೀರಾಮನು ಆ ಧನುಸ್ಸನ್ನು ಸುಲಭವಾಗಿ ಮುರಿದನು. ಇದನ್ನು ಕಂಡ ಸೀತೆಯ ಆನಂದಕ್ಕೆ ಪಾರವಿಲ್ಲದಂತಾಯಿತು. ತಕ್ಷಣವೇ ಜನಕನು ಸೀತೆಯನ್ನು ರಾಮನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿ ದಶರಥರಾಜನನ್ನು ಮಿಥಿಲೆಗೆ ಕರೆಯಿಸಿದನು.
ಆಗ ರಾಜನು ತನ್ನ ಮಗಳಾದ ಸೀತೆಯನ್ನು ರಾಮನಿಗೂ, ಊರ್ಮಿಳೆಯನ್ನು ಲಕ್ಷ್ಮಣನಿಗೂ, ತಮ್ಮನಾದ ಈಶಧ್ವಜನ ಮಕ್ಕಳಾದ ಮಾಂಡವಿಯನ್ನು ಭರತನಿಗೂ, ಶ್ರುತಕೀರ್ತಿಯನ್ನು ಶತ್ರುಘ್ನನಿಗೂ ಕೊಟ್ಟು ವೈಭವದಿಂದ ವಿವಾಹವನ್ನು ನೆರವೇರಿಸಿದನು.
ಮುಂದೆ ದಶರಥನು ತನ್ನ ಮಕ್ಕಳೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಿದ್ದಾಗ ದಾರಿಯಲ್ಲಿ ಜಮದಗ್ನಿಯ ಮಗನಾದ ಪರಶುರಾಮನು ಕೋಪದಿಂದ ರಾಮನನ್ನು ಎದುರಿಸಿದನು. ಇಪ್ಪತ್ತೊಂದು ಬಾರಿ ಕ್ಷತ್ರಿಯ ಕುಲವನ್ನೆಲ್ಲಾ ನಾಶಪಡಿಸಿದ್ದ ಬ್ರಾಹ್ಮಣನಾದ ಪರಶುರಾಮನಲ್ಲಿ ಒಂದು ಅದ್ಭುತವಾದ ವಿಷ್ಣುಧನುಸ್ಸು ಇದ್ದಿತು. ಶ್ವೆತಧನುಸ್ಸನ್ನು ಮುರಿದ ರಾಮನು ಅದನ್ನು ಸುಲಭವಾಗಿ ಎತ್ತಿ ಬಾಣವನ್ನು ಹೂಡಲು ಪರಶುರಾಮನ ಗರ್ವಭಂಗವಾಯಿತು.
ಆಮೇಲೆ ಎಲ್ಲರೂ ಸುಖವಾಗಿ ಅಯೋಧ್ಯೆಯನ್ನು ಸೇರಿದಮೇಲೆ ರಾಮಲಕ್ಷ್ಮಣರು ತಮ್ಮ ಪತ್ನಿಯರೊಂದಿಗೆ ಆನಂದದಿಂದಿರುತ್ತಿದ್ದರು.
(ನಾಳೆ ಮುಂದುವರೆಯುವುದು)
ಕಾಮೆಂಟ್‌ಗಳು