ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಗುಪ್ತ ಮೌರ್ಯ


ಚಂದ್ರಗುಪ್ತ ಮೌರ್ಯ


ಚಂದ್ರಗುಪ್ತ ಮೌರ್ಯ ಪ್ರಾಚೀನ ಭಾರತದ ಒಬ್ಬ ಪ್ರಸಿದ್ಧ ದೊರೆ. ಮೌರ್ಯ ಸಂತತಿಯ ಮೂಲಪುರುಷ. ಸಣ್ಣ-ಪುಟ್ಟ ರಾಜ್ಯಗಳನ್ನು ಒಂದುಗೂಡಿಸಿ, ನೆರೆಯ ಪ್ರದೇಶಗಳನ್ನು ಗೆದ್ದು ಸೇರಿಸಿಕೊಂಡು ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನ ಕಾಲದಿಂದ ಭಾರತದ ಇತಿಹಾಸವನ್ನು ಕ್ರಮಬದ್ಧವಾಗಿ ಅರಿಯುವುದು ಸಾಧ್ಯ. ಚಂದ್ರಗುಪ್ತನ ಇತಿಹಾಸ ಭಾರತದ ರಾಜನೈತಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಐಕ್ಯದ ಕತೆಯಾಗಿದೆ.

ಭಾರತವನ್ನು ಮ್ಯಾಸಿಡೋನಿಯನರಿಂದ ಮುಕ್ತಗೊಳಿಸಿ ಅದರ ಬಹು ಭಾಗವನ್ನು ರಾಜಕೀಯವಾಗಿ ಒಂದು ಆಡಳಿತಕ್ಕೆ ಒಳಪಡಿಸಿದ ಚಂದ್ರಗುಪ್ತನ ಸಾಧನೆ ಬಹಳ ದೊಡ್ಡದು. ಅವನಿಗೆ ಸಿಂಹಾಸನ ಪಿತ್ರಾರ್ಜಿತವಾಗಿ ಬಂದದ್ದಲ್ಲ. ಅವನ ಜನನ ಬಾಲ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ನಮಗೆ ದೊರಕುವುದಿಲ್ಲ. ಅವನು ಬಡ ಸಂಸಾರದಲ್ಲಿ ಹುಟ್ಟಿದವನೆಂದು ಗ್ರೀಕ್ ಲೇಖಕ ಜಸ್ಪಿನ್ ಹೇಳುತ್ತಾನೆ. ಜೈನ ಸಂಪ್ರದಾಯದ ಪ್ರಕಾರ ಆತನ ತಾಯಿ ಹಳ್ಳಿಯ ಮುಖಂಡನೊಬ್ಬನ ಮಗಳು. ಮಯೂರ ಪೋಷಕರಿಂದ ಆ ಹಳ್ಳಿ ಕೂಡಿತ್ತು.

ಬೌದ್ಧ ಬರೆಹಗಳ ಪ್ರಕಾರ ಚಂದ್ರಗುಪ್ತ ಕ್ಷತ್ರಿಯ. ಮೋರಿಯ ವಂಶದವ. ಈ ಹೆಸರಿನ ವಂಶವೊಂದು ಬುದ್ಧನ ಕಾಲದಲ್ಲೂ ಇದ್ದುದು ಖಚಿತ. ಚಂದ್ರಗುಪ್ತ ಈ ವಂಶದವನೆಂಬುದು ನಿಜವಿರಬಹುದೆಂದು ಕಾಣುತ್ತದೆ. ಚಂದ್ರಗುಪ್ತನ ತಂದೆ ಪಿಪ್ಪಲಿ ವನದ ರಾಜನಾಗಿದ್ದಾಗ ಯುದ್ಧವೊಂದರಲ್ಲಿ ಮರಣಹೊಂದಿದ. ಚಂದ್ರಗುಪ್ತನ ತಾಯಿ ದೂರದ ಪುಷ್ಪಪುರ ಅಥವಾ ಕುಸುಮಪುರ ಅಥವಾ ಪಾಟಲಿಪುತ್ರಕ್ಕೆ ಬಂದು ಆಶ್ರಯ ಪಡೆದಳು. ಚಂದ್ರಗುಪ್ತ ಹುಟ್ಟಿದ್ದೂ ಅಲ್ಲಿಯೇ. ಹಳ್ಳಿಗರ ನಡುವೆ ಬೆಳೆಯುತ್ತಿದ್ದ ಹುಡುಗನಿಂದ ಚಾಣಕ್ಯ ಆಕರ್ಷಿತನಾಗಿ ಅವನನ್ನು ತನ್ನ ಸ್ಥಳವಾದ ತಕ್ಷಶಿಲೆಗೆ ಕರೆದೊಯ್ದು ಸಕಲ ಕಲೆ ಶಾಸ್ತ್ರಗಳಲ್ಲಿ ಅವನನ್ನು ಪಾರಂಗತನನ್ನಾಗಿ ಮಾಡಿದ. ವಿದೇಶೀಯರ ಆಕ್ರಮಣದಿಂದ ದೇಶವನ್ನು ವಿಮೋಚನೆಗೊಳಿಸುವುದೂ ಚಾಣಕ್ಯನಿಗೆ ಅವಮಾನಮಾಡಿದ್ದ ನಂದ ದೊರೆಯ ದುರಾಡಳಿತದಿಂದ ಅದನ್ನು ಪಾರು ಮಾಡುವುದೂ ಅವನಿಗೆ ವಹಿಸಲಾದ ಕರ್ತವ್ಯ. ಚಾಣಕ್ಯನ ನೆರವಿನಿಂದ ಇವನು ಈ ಕರ್ತವ್ಯವನ್ನು ಚೆನ್ನಾಗಿ ನೆರವೇರಿಸಿದ, ಚಂದ್ರಗುಪ್ತ ಪಂಜಾಬಿನಲ್ಲಿ ಅಲೆಗ್ಸಾಂಡರನನ್ನು ಸಂಧಿಸಿದ್ದನೆಂಬುದಾಗಿ ಕೆಲವು ಅಭಿಜಾತ ಕೃತಿಗಳು ಹೇಳುತ್ತವೆ. ಅವನಿಗೆ ಕೋಪ ಬರುವಂತೆ ಚಂದ್ರಗುಪ್ತ ವರ್ತಿಸಿದನೆಂದೂ ಇವನನ್ನು ಕೊಲ್ಲಬೇಕೆಂದು ಅಲೆಗ್ಸಾಂಡರ್ ಆಜ್ಞೆ ನೀಡಿದನೆಂದೂ ಚಂದ್ರಗುಪ್ತ ಅಲ್ಲಿಂದ ತಪ್ಪಿಸಿಕೊಂಡು ಹೋದನೆಂದೂ ಹೇಳಲಾಗಿದೆ. ಅಲೆಗ್ಸಾಂಡರನ ವಿರುದ್ಧ ಹೋರಾಡಿ ರಕ್ತ ಚೆಲ್ಲಿದ ಪಂಜಾಬಿನ ಜನಪದಗಳ ಯುದ್ಧಶಕ್ತಿಗಳನ್ನೂ ಅವು ಸೂಕ್ತ ಸಂಘಟನೆ ಮತ್ತು ನಾಯಕತ್ವ ಇಲ್ಲದ್ದರಿಂದ ಕುಸಿದುಬಿದ್ದದ್ದನ್ನೂ ಚಂದ್ರಗುಪ್ತ ಅರಿತುಕೊಂಡಿದ್ದಿರಬೇಕು. ಇದು ಆತನ ಅನಂತರದ ಮಹತ್ ಕಾರ್ಯಕ್ಕೆ ಬುನಾದಿಯಾಗಿದ್ದಿರಬಹುದು.
ತಾನು ಸಂಗ್ರಹಿಸಿದ ಸೈನ್ಯದ ನೆರವಿನಿಂದ ಮೊದಲು ಸಿಂಹಾಸನವನ್ನೇರಿ ಅನಂತರ ಅಲೆಗ್ಸಾಂಡರನ ಪ್ರಾಂತ್ಯಾಧಿಕಾರಿಗಳೊಡನೆ ಹೋರಾಡಿ ಅವರನ್ನು ಸೋಲಿಸಿ, ಹಲವರನ್ನು ಕೊಂದು ದೇಶವನ್ನು ವಿಮೋಚನೆಗೊಳಿಸಿದನೆಂದು ಜಸ್ಟಿನ್ ಹೇಳಿದ್ದಾನೆ. ಅವನು ಹೆಸರಿಸಿರುವ ಸಂದ್ರಕೋಟಸ್ ಎಂಬುವನು ಚಂದ್ರಗುಪ್ತನೇ ಇರಬೇಕು. ಇದುವರೆಗೆ ಲಭ್ಯವಿರುವ ಎಲ್ಲ ಪುರಾವೆಗಳಿಂದ ಚಂದ್ರಗುಪ್ತ ಕ್ರಿಸ್ತ ಪೂರ್ವ 324ರಲ್ಲಿ ಸಿಂಹಾಸವನ್ನೇರಿರಬಹುದೆಂದು ತಾತ್ಕಾಲಿಕವಾಗಿ ನಿರ್ಧರಿಸಬಹುದಾಗಿದೆ. ಪಂಜಾಬ್ ಮತ್ತು ಸಿಂಧ್ ಪ್ರದೇಶಗಳ ಮೇಲೆ ಒಡೆತನ ಸ್ಥಾಪಿಸಿದ ಮೇಲೆ ದೊರೆ ನಂದನ ದುರಾಡಳಿತವನ್ನು ಕೊನೆಗೊಳಿಸುವ ಕಾರ್ಯದಲ್ಲಿ ಚಂದ್ರಗುಪ್ತ ಉದ್ಯುಕ್ತನಾದನೆಂದು ಹೇಳಲಾಗಿದೆ. ಕೊನೆಗೆ ಅವನು ಪಾಟಲಿಪುತ್ರವನ್ನು ಆಕ್ರಮಿಸಿ, ದುರಾಡಳಿತದಿಂದ ಜನಪ್ರಿಯತೆಯನ್ನು ಕಳೆದುಕೊಂಡಿದ್ದ ಧನನಂದನನ್ನು ಕೊಂದನೆಂದು ಅವು ತಿಳಿಸುತ್ತವೆ. ಚಂದ್ರಗುಪ್ತನ ಸಮರಚಾತುರ್ಯಕ್ಕೆ ಚಾಣಕ್ಯನ ರಾಜತಂತ್ರ ಸೇರಿಕೊಂಡಿತೆಂದು ಬಹುಶಃ ಹೇಳಬಹುದು.

ಪಾಟಲಿಪುತ್ರದಲ್ಲಿ ಮೌರ್ಯರ ಆಳ್ವಿಕೆ ಆರಂಭವಾಯಿತು. ಕೌಟಿಲ್ಯನನ್ನು ಚಂದ್ರಗುಪ್ತ ತನ್ನ ಮುಖ್ಯಮಂತ್ರಿಯನ್ನಾಗಿ ಮಾಡಿಕೊಂಡು, ಚಕ್ರವರ್ತಿಯಾಗಿ ನಂದರ ಸೈನ್ಯವನ್ನೆಲ್ಲ ಪಡೆದು, ವಾಯವ್ಯ ಸೈನ್ಯವನ್ನು ಅದಕ್ಕೆ ಸೇರಿಸಿ ಅದು ದಕ್ಷತೆಯಿಂದ ಕೂಡಿರುವಂತೆ ಮಾಡಿದ. ಈ ಸೈನ್ಯದ ಸಹಾಯದಿಂದ ಕೆಲವೇ ವರ್ಷಗಳಲ್ಲಿ ಅವನು ಸಾಮ್ರಾಜ್ಯ ವಿಸ್ತರಿಸಿದ. ಅವನ ವಿಜಯಗಳಿಗೆ ಮುಖ್ಯವಾಗಿ ಅವನ ಪ್ರತಿಭೆಯೇ ಕಾರಣವಾಗಿತ್ತು. ಅವನು ಸ್ಥಾಪಿಸಿದ ಸಾಮ್ರಾಜ್ಯ ಹಿಂದಿನ ರಾಜ್ಯಗಳಿಗಿಂತ ವಿಸ್ತಾರವಾಗಿತ್ತು. ರಾಜ್ಯವಿಸ್ತರಣಕಾರ್ಯ ಮುಗಿದ ಮೇಲೆ ಸಂಘಟನೆಯ ಕೆಲಸ ಆರಂಭವಾಯಿತು. ಕೌಟಿಲ್ಯ ಉತ್ತಮ ಆಡಳಿತ ವ್ಯವಸ್ಥೆಯನ್ನು ರೂಪಿಸಿದ. ಅದರಲ್ಲಿ ಅಧಿಕಾರವೆಲ್ಲ ರಾಜನಲ್ಲಿಯೇ ಕೇಂದ್ರಿಕೃತವಾಗಿತ್ತು. ಭಾರತ ಹಿಂದಿನಂತೆ ಅಂತರ್ಯುದ್ಧಗಳಿಗೆ ಒಳಗಾದ ಸಣ್ಣ ಸಣ್ಣ ರಾಜ್ಯಗಳಿಂದ ಕೂಡಿರಲಿಲ್ಲ. ಅದರ ಬದಲು ಏಕತೆಯಿಂದ ಕೂಡಿದ ದಕ್ಷ ರಾಜ್ಯವಾಗಿದ್ದು ಪರಕೀಯರ ದಾಳಿಯನ್ನು ಎದುರಿಸುವ ಶಕ್ತಿ ಹೊಂದಿತ್ತು.
ಅಲೆಗ್ಸಾಂಡರನ ಮರಣಾನಂತರ ಅವನ ದಳಪತಿಗಳಲ್ಲಿ ಒಬ್ಬನಾದ ಸೆಲ್ಯೂಕಸ್ ತನ್ನ ವೈರಿಗಳ ಮೇಲೆ ಜಯಗಳಿಸಿ ಅಲೆಗ್ಸಾಂಡರನ ಸಾಮ್ರಾಜ್ಯದ ಪುರ್ವಭಾಗಗಳಲ್ಲಿ ಹಲವನ್ನು ಗೆದ್ದು, ಪ್ರಬಲನಾಗಿ, ಅಲೆಗ್ಸಾಂಡರ್ ಭಾರತದಲ್ಲಿ ಆಕ್ರಮಿಸಿಕೊಂಡಿದ್ದು ಕೈತಪ್ಪಿಹೋಗಿದ್ದ ಪ್ರದೇಶಗಳನ್ನು ಹಿಂದಕ್ಕೆ ಪಡೆಯುವ ಉದ್ದೇಶದಿಂದ ಕ್ರಿಸ್ತ ಪೂರ್ವ 305ರಲ್ಲಿ ಭಾರತದ ಮೇಲೆ ಧಾಳಿ ಮಾಡಿದ. ಯುದ್ಧದಲ್ಲಿ ಚಂದ್ರಗುಪ್ತ ಸೆಲ್ಯೂಕಸನನ್ನು ಪುರ್ಣವಾಗಿ ಸೋಲಿಸಿದ. ಸೆಲ್ಯೂಕಸ್ ಒಪ್ಪಂದ ಮಾಡಿಕೊಂಡು ಏರಿಯ, ಆರಾಕೋಸಿಯ, ಪರೋಪನಿಸಿಡೀ ಪ್ರದೇಶಗಳನ್ನು ಚಂದ್ರಗುಪ್ತನಿಗೆ ಒಪ್ಪಿಸಬೇಕಾಯಿತು. ಈಗಿನ ಹೆರಾತ್, ಕಾಂದಹಾರ್ ಮತ್ತು ಕಾಬೂಲ್ಗಳು ಅವುಗಳ ರಾಜಧಾನಿಗಳಾಗಿದ್ದುವು. ಜಿಡ್ರೋಷಿಯದ (ಬಲೂಚಿಸ್ತಾನ) ಕೆಲವು ಭಾಗಗಳೂ ಚಂದ್ರಗುಪ್ತನ ವಶವಾಗಿದ್ದಿರಬೇಕು. ಪ್ರತಿಯಾಗಿ ಚಂದ್ರಗುಪ್ತ ಅವನಿಗೆ 500 ಯುದ್ಧದ ಆನೆಗಳನ್ನು ಕೊಟ್ಟ. ಅವರಿಬ್ಬರ ನಡುವೆ ವಿವಾಹಬಾಂಧವ್ಯ ಬೆಳೆಯಿತು. ಸೆಲ್ಯೂಕಸನ ಮಗಳನ್ನು ಚಂದ್ರಗುಪ್ತ ಮದುವೆಯಾದನೆಂದು ಭಾವಿಸಲಾಗಿದೆ. ಇವರಿಬ್ಬರ ಸಖ್ಯದ ಗುರುತಿಗಾಗಿ ಮೆಗಾಸ್ತನೀಸ್ ಎಂಬ ರಾಯಭಾರಿಯನ್ನು ಸೆಲ್ಯೂಕಸ್ ಚಂದ್ರಗುಪ್ತನ ಆಸ್ಥಾನಕ್ಕೆ ಕಳಿಸಿದ. ಮೆಗಾಸ್ತಿನೀಸ್ ಪಾಟಲಿಪುತ್ರದಲ್ಲಿ ಬಹಳ ಕಾಲ ಇದ್ದ. ಭಾರತದ ಬಗ್ಗೆ ಪುಸ್ತಕವೊಂದನ್ನು ಬರೆದ. ಅದು ನಷ್ಟವಾಗಿದೆ. ಅದರ ಹಲವು ಭಾಗಗಳು ಇತರ ಲೇಖಕರಿಂದ ದೀರ್ಘವಾಗಿ ಉದ್ಧೃತವಾಗಿವೆ.

ಚಂದ್ರಗುಪ್ತನ ಸಾಮ್ರಾಜ್ಯ ವಿಸ್ತಾರವಾಗಿತ್ತೆಂಬುದು ನಿಸ್ಸಂದೇಹ. 6 ಲಕ್ಷ ಜನರಿಂದ ಕೂಡಿದ ಇವನ ಸೇನೆ ಇಡೀ ಭಾರತವನ್ನು ಗೆದ್ದಿತೆಂದು ಪ್ಲುಟಾರ್ಕ್ ಹೇಳಿದ್ದಾನೆ. ಇವನ ಸಾಮ್ರಾಜ್ಯದ ವಿಸ್ತಾರವೆಷ್ಟಿತ್ತೆಂಬುದು ಪರೋಕ್ಷವಾದ ಮಾಹಿತಿಗಳಿಂದ ತಿಳಿದುಬರುತ್ತದೆ. ಇವನ ಮೊಮ್ಮಗನಾದ ಅಶೋಕ ಕಳಿಂಗವೊಂದನ್ನು ಬಿಟ್ಟು ಬೇರೆ ಯಾವ ಪ್ರದೇಶವನ್ನೂ ಗೆದ್ದಂತೆ ಕಾಣುವುದಿಲ್ಲ. ಬಿಂದುಸಾರ ಯಾವುದೇ ನೆಲವನ್ನು ಗೆದ್ದ ಬಗ್ಗೆ ಉಲ್ಲೇಖಗಳಿಲ್ಲ. ಅಶೋಕ ಬಹುತೇಕ ಚಂದ್ರಗುಪ್ತ ಗೆದ್ದ ನೆಲವನ್ನೇ ಆಳುತ್ತಿದ್ದನೆಂಬುದು ಸ್ಪಷ್ಟ. ದಕ್ಷಿಣದಲ್ಲಿ ಕರ್ನಾಟಕದವರೆಗೂ ವಾಯವ್ಯದಲ್ಲಿ ಪರ್ಷಿಯದ ಎಲ್ಲೆಯವರೆಗೂ ಅವನ ಸಾಮ್ರಾಜ್ಯ ಹಬ್ಬಿತ್ತು. ವಂಬ ಮೋರಿಯರು ದಕ್ಷಿಣದ ಮೇಲೆ ದಂಡೆತ್ತಿ ಬಂದಿದ್ದರೆಂದು ಕೆಲವು ತಮಿಳು ಕೃತಿಗಳಲ್ಲಿ ಹೇಳಲಾಗಿದೆ. ಇವರು ಚಂದ್ರಗುಪ್ತನ ಸೇನೆಯ ಜನರೇ ಇರಬೇಕು. ತಿನ್ನವೆಲ್ಲಿ ಜಿಲ್ಲೆಯವರೆಗೂ ಇವನ ಸೇನೆ ಬಂದಿತ್ತೆಂದು ಹೇಳಲಾಗಿದೆ. ಜುನಾಗಢದಲ್ಲಿರುವ ಒಂದನೆಯ ರುದ್ರದಾಮನ ಶಾಸನದ ಪ್ರಕಾರ ಸೌರಾಷ್ಟ್ರ ಚಂದ್ರಗುಪ್ತ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿತ್ತು. ಅದನ್ನು ಪುಷ್ಯಗುಪ್ತನೆಂಬ ಪ್ರಾಂತ್ಯಾಧಿಕಾರಿ ಆಳುತ್ತಿದ್ದ.
ಚಂದ್ರಗುಪ್ತ ತನ್ನ ಜೀವಮಾನದ ಉಳಿದ ಬಹುಭಾಗವನ್ನು ಜೈತ್ರಯಾತ್ರೆಯಲ್ಲಿ ಮತ್ತು ಸಾಮ್ರಾಜ್ಯ ಸಂಘಟನೆಯಲ್ಲಿ ಕಳೆದ. ಅವನು ಪ್ರ.ಶ.ಪು. 300ರ ವರೆಗೆ ಆಳಿರಬೇಕು. ಆ ಬಗ್ಗೆ ವಿವರಗಳು ದೊರಕುವುದಿಲ್ಲ. 


ಚಂದ್ರಗುಪ್ತ ಜೈನಧರ್ಮವನ್ನವಲಂಬಿಸಿ, ಎಲ್ಲಾ ಭೋಗಭಾಗ್ಯಗಳನ್ನೂ ತ್ಯಜಿಸಿ, ರಾಜ್ಯವನ್ನು ಮಗನಾದ ಬಿಂದುಸಾರನಿಗೆ ವಹಿಸಿಕೊಟ್ಟು, ಗುರುವಾದ ಭದ್ರಬಾಹುವಿನೊಡನೆ ಶ್ರವಣಬೆಳಗೊಳಕ್ಕೆ ಬಂದು ಉಪವಾಸ ಮಾಡಿ ದೇಹತ್ಯಾಗಮಾಡಿದನೆಂದು ಜೈನರ ನಂಬಿಕೆ.

ಚಂದ್ರಗುಪ್ತನ ರಾಜಧಾನಿ ಪಾಟಲಿಪುತ್ರ ವಿಶಾಲನಗರವಾಗಿತ್ತು. ಅದರ ಮಧ್ಯೆ ಸುಂದರವಾದ ಉಪವನಗಳಿಂದ ಆವೃತವಾದ ಅರಮನೆಯಿತ್ತು.

ಚಂದ್ರಗುಪ್ತ ತನ್ನ ವಿಶಾಲ ಸಾಮ್ರಾಜ್ಯವನ್ನು ಆಳಲು ಸುಲಭವಾಗುವಂತೆ ಅದನ್ನು ಹಲವು ಪ್ರಾಂತ್ಯಗಳಾಗಿ ವಿಂಗಡಿಸಿ ಅವುಗಳಿಗೆ ಅಧಿಕಾರಿಗಳನ್ನು ನೇಮಿಸಿದ್ದ. ಪೂರ್ವ ಮತ್ತು ಮಧ್ಯಭಾಗಗಳನ್ನು ನೇರವಾಗಿ ಅವನೇ ಆಳುತ್ತಿದ್ದ. ಗ್ರಾಮಾಡಳಿತ ಗ್ರಾಮಸಭೆಯಿಂದ ನಡೆಯುತ್ತಿತ್ತು. ಬಹಳಮಟ್ಟಿಗೆ ಅಧಿಕಾರದ ವಿಕೇಂದ್ರೀಕರಣ ಜಾರಿಯಲ್ಲಿತ್ತು. ಸಚಿವರುಗಳಿಂದ ಕೂಡಿದ ಮಂತ್ರಿಪರಿಷತ್ತು ಆಡಳಿತದಲ್ಲಿ ರಾಜನಿಗೆ ಸಹಾಯಕವಾಗಿತ್ತು. ಗೂಢಚಾರರ ಮೂಲಕ ದೇಶದ ಆಗುಹೋಗುಗಳನ್ನು ರಾಜ ತಿಳಿಯುತ್ತಿದ್ದ. ಮೆಗಾಸ್ತನೀಸ್ ಸ್ಥಳೀಯಾಡಳಿತದ, ಅದರಲ್ಲೂ ಪಾಟಲೀಪುತ್ರದ ಪೌರಾಡಳಿತದ ವಿಷಯವಾಗಿ ವಿಶೇಷ ಮಾಹಿತಿ ಕೊಟ್ಟಿದ್ದಾನೆ. ಅದರ ಆಡಳಿತ ಆಧುನಿಕ ಪೌರಸಭೆಯ ಆಡಳಿತದಂತಿತ್ತು. ನಗರಪಾಲಕನ ನೇತೃತ್ವದಲ್ಲಿ ಐವರು ಸದಸ್ಯರ ಆರು ಸಮಿತಿಗಳಿದ್ದುವು. ಪ್ರತಿ ಸಮಿತಿಗೂ ಒಂದೊಂದು ಕೆಲಸವನ್ನು ವಹಿಸಲಾಗಿತ್ತು. ಮೊದಲ ಸಮಿತಿ ನಗರದ ಔದ್ಯೋಗಿಕ ಕಾರ್ಯಗಳನ್ನು ನೋಡಿಕೊಳ್ಳುತ್ತಿತ್ತು. ಎರಡನೆಯ ಸಮಿತಿ ನಗರದ ವಿದೇಶೀಯರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿತ್ತು. ಜನನಮರಣ ದಾಖಲೆಗಳನ್ನು ಇಡುವುದು ಮೂರನೆಯದರ ಕೆಲಸ. ನಾಲ್ಕನೆಯದು ವ್ಯಾಪಾರದ ತೂಕ ಮತ್ತು ಅಳತೆಗಳನ್ನು ನೋಡಿಕೊಳ್ಳುತ್ತಿತ್ತು. ಐದನೆಯದು ಕೈಗಾರಿಕಾವಸ್ತುಗಳ ತಯಾರಿಕೆ ಮತ್ತು ಮಾರಾಟವನ್ನು ನೋಡಿಕೊಳ್ಳುತ್ತಿತ್ತು. ಮಾರಾಟವಾದ ಸರಕುಗಳ ಬೆಲೆಯ ಹತ್ತನೆಯ ಒಂದು ಭಾಗವನ್ನು ವಸೂಲು ಮಾಡುವುದು ಆರನೆಯ ಸಮಿತಿಯ ಕಾರ್ಯಭಾರ. ಲೋಕೋಪಯೋಗಿ ಕೆಲಸಗಳು, ಮಾರುಕಟ್ಟೆ, ಬಂದರು, ದೇವಸ್ಥಾನಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ವ್ಯವಸ್ಥೆಯಿತ್ತು.
ರಕ್ಷಣಾಡಳಿತವೂ ಉತ್ತಮವಾಗಿತ್ತು. ಉತ್ತಮ ತರಬೇತಿ ಪಡೆದು ದಕ್ಷತೆಯಿಂದ ಕೂಡಿದ್ದ ಸೈನ್ಯವಿತ್ತು. ಸೈನ್ಯದಲ್ಲಿ 6 ಲಕ್ಷ ಸೈನಿಕರು, 30 ಸಾವಿರ ಕುದುರೆಗಳು, 9 ಸಾವಿರ ಆನೆಗಳು ಮತ್ತು 8 ಸಾವಿರ ರಥಗಳಿದ್ದುವು. ರಾಜನೇ ಸೈನ್ಯದ ಮುಖ್ಯ ನಾಯಕನಾಗಿದ್ದ. ಅದರ ಆಡಳಿತ, ಹತೋಟಿ 30 ಸಾವಿರ ಜನರ ಕಚೇರಿಯ ಹೊಣೆ. ಅದರಲ್ಲಿ ಆರು ಮಂಡಳಿಗಳಿದ್ದುವು.ಭೂಕಂದಾಯವೇ ರಾಜ್ಯದ ಮುಖ್ಯ ಆದಾಯ. ಉದ್ಯೋಗಗಳು, ಗಣಿ, ಕಾಡುಗಳ ಮೇಲೆ ತೆರಿಗೆ ಮತ್ತು ಸಾಮಂತರಾಜರ ಕಪ್ಪಕಾಣಿಕೆಗಳು ಇತರ ಆದಾಯಗಳು. ಅವುಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಸಮಾಹರ್ತ ಎಂಬ ಅಧಿಕಾರಿಯಿದ್ದ. ಚಂದ್ರಗುಪ್ತ ಮೌರ್ಯ ವ್ಯವಸಾಯಕ್ಕೆ ಪ್ರೋತ್ಸಾಹ ನೀಡಿದ. ಅವನ ಆಸ್ಥಾನದ ವೈಭವವನ್ನೂ ಅರಮನೆಯನ್ನೂ ಮೆಗಾಸ್ತಿನೀಸ್ ವಿವರಿಸಿದ್ದಾನೆ. ಉದ್ಯಾನಗಳಲ್ಲಿ ನವಿಲುಗಳೂ ಇತರ ಹಲವು ಪಕ್ಷಿಗಳೂ ಇದ್ದುವು. ಅರಮನೆಯ ತಟಾಕಗಳಲ್ಲಿ ಬಣ್ಣಬಣ್ಣದ ಮೀನುಗಳಿದ್ದುವು. ಗ್ರೀಕ್ ಚರಿತ್ರಕಾರರು ಸಾಮಾನ್ಯ ಜನಗಳ ಜೀವನದ ವಿಚಾರವಾಗಿಯೂ ಕೆಲವು ಮಾಹಿತಿ ಒದಗಿಸಿದ್ದಾರೆ. ರಾಜ್ಯ ಸುಭಿಕ್ಷದಿಂದಿತ್ತು. ಜನರಲ್ಲಿ ನೆಮ್ಮದಿ ಇತ್ತು. ಅವರು ಕುಶಲಕಲೆ ಮತ್ತು ಇತರ ಉದ್ಯೋಗಗಳಲ್ಲಿ ಪರಿಶ್ರಮ ಹೊಂದಿದ್ದವರಾಗಿದ್ದರು. ಜನ ಪ್ರಾಮಾಣಿಕರಾಗಿದ್ದರು. ಕಳ್ಳತನ ಮತ್ತು ದರೋಡೆಗಳು ವಿರಳವಾಗಿದ್ದುವು. ಜನತೆಯ ರಕ್ಷಣೆಗಾಗಿ ಒಂದು ಪೊಲೀಸ್ ಪಡೆಯಿತ್ತು. ದಂಡನೀತಿ ಕಠಿಣವಾಗಿತ್ತು. 

ಮಾಹಿತಿ ಆಧಾರ:. ಮೈಸೂರು ವಿಶ್ವಕೋಶ


King Chandragupta Mourya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ