ಚಂದ್ರಿಕಾ ಪುರಾಣಿಕ
ಚಂದ್ರಿಕಾ ಪುರಾಣಿಕ
ಚಂದ್ರಿಕಾ ಪುರಾಣಿಕ ಅವರು ಪ್ರಾಧ್ಯಾಪಕರಾಗಿ, ಲೇಖಕರಾಗಿ, ವಚನ ಸಾಹಿತ್ಯದ ಪರಿಚಾರಕರಾಗಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರಾಗಿ ಸೇವೆ ಸಲ್ಲಿಸುತ್ತಿರುವವರು.
ಚಂದ್ರಿಕಾ ಪುರಾಣಿಕರು 1960ರ ನವೆಂಬರ್ 29ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಜನಿಸಿದ್ದು ಮಹಾನ್ ಸಾಹಿತಿಗಳ ವಂಶದಲ್ಲಿ. ಇವರ ತಂದೆ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ತಾಯಿ ನೀಲಾಂಬಿಕೆ. ಇವರ ದೊಡ್ಡಪ್ಪ ವಚನೋಧ್ಯಾನದ ಅನುಭಾವಿ ಮತ್ತು ಸಾಹಿತಿ 'ಕಾವ್ಯಾನಂದ'ರಾದ ಸಿದ್ಧಯ್ಯ ಪುರಾಣಿಕರು. ಚಿಕ್ಕಪ್ಪ ಮತ್ತೊಬ್ಬ ಪ್ರಸಿದ್ಧ ಬರಹಗಾರರಾದ ಬಸವರಾಜ ಪುರಾಣಿಕರು. ತಾತ ಮಹಾನ್ ಕವಿರತ್ನ ಕಲ್ಲಿನಾಥ ಶಾಸ್ತ್ರಿಗಳು. ಚಂದ್ರಿಕಾ ಪುರಾಣಿಕರ ಸಹೋದರ ಕನ್ನಡ ತಂತ್ರಜ್ಞಾನ ಲೋಕಕ್ಕೆ ಮಹಾನ್ ಕೊಡುಗೆ ನೀಡುತ್ತ ಬಂದಿರುವ ಉದಯಶಂಕರ ಪುರಾಣಿಕರು.
ಚಂದ್ರಿಕಾ ಪುರಾಣಿಕರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸುದೀರ್ಘ ಅವಧಿಯ ಕಾಲ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಶೇಷಾದ್ರಿಪುರದ ಸಂಜೆ ಕಾಲೇಜುಗಳಲ್ಲಿ ಬೋಧಕರಾಗಿ, ಪ್ರಾಂಶುಪಾಲರಾಗಿ ಮತ್ತು ಪ್ರಾಧ್ಯಾಪಕರಾಗಿ ಸೇವೆ ನಿರ್ವಹಿಸಿದವರು.
ಚಂದ್ರಿಕ ಪುರಾಣಿಕರು ಆಕಾಶವಾಣಿ ಕಲಾವಿದೆಯಾಗಿ, ಬರಹಗಾರ್ತಿಯಾಗಿ , ಅನೇಕ ಕಾರ್ಯಕ್ರಮಗಳ ಸಂಘಟಕಾರರಾಗಿ ಮತ್ತು ಹಲವು ಚಳವಳಿಗಳ ಧ್ವನಿಯಾಗಿ ಹೆಸರಾದವರು. ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬಸವ ಸಮಿತಿಯ ಸದಸ್ಯರಾಗಿ ಅವರ ಸೇವೆ ಸಲ್ಲುತ್ತಿದೆ. 'ಬಸವ ಪಥ' ಮಾಸಿಕ ಪತ್ರಿಕೆಯ ಸಹ ಸಂಪಾದಕರಾಗಿ ಅವರು ಕೆಲಸ ಮಾಡಿದ್ದಾರೆ. 'ವಚನ ಚಂದ್ರಮ' ಅಂತಹ ಕೃತಿ ಹೊರಬರುವುದರಲ್ಲಿ ಚಂದ್ರಿಕಾ ಅವರ ಅಪಾರ ಪರಿಶ್ರಮವಿದೆ. ಸ್ತ್ರೀ ಸ್ವಾತಂತ್ರ್ಯ ಮತ್ತು ದಲಿತ ಪರ ಚಳುವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತ ಬಂದಿದ್ದಾರೆ.
ಪುರಾಣ ಚರಿತ್ರೆಗಳ ಬಗ್ಗೆ ಒಲವುಳ್ಳ ಚಂದ್ರಿಕಾ ಪುರಾಣಿಕ ಅವರ ಕೃತಿಗಳಲ್ಲಿ ಎಡಿಯೂರು ಯತೀಶ್ವರ, ನಿರಂಜನ ಜಂಗಮಜ್ಯೋತಿ ಅಂತಹ ಜೀವನ ಚರಿತ್ರೆಗಳು ಸೇರಿವೆ.
ಹಿರಿಯರಾದ ಚಂದ್ರಿಕಾ ಪುರಾಣಿಕರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday Chandrika Puranik
Madam 🌷🙏🌷
ಕಾಮೆಂಟ್‌ಗಳು