ಮಹಲಿಂಗರಂಗ
ಮಹಲಿಂಗರಂಗ
ಕವಿ ಮಹಲಿಂಗರಂಗನ ಕಾಲ ಸುಮಾರು 1675. ಈತ ಅನುಭವಾಮೃತ ಗ್ರಂಥದ ಕರ್ತೃ. ತಂದೆ ಸಹವಾಸಿ ವಂಶದ ಮಹಲಿಂಗದೇವ. ಗುರು ಸಹಜಾನಂದ. ಕವಿಯ ನಿಜನಾಮ ರಂಗನಾಥ. ಇವನಿಗೆ ರಂಗಾವಧೂತ ಎಂಬ ಹೆಸರೂ ಇದ್ದಂತೆ ತಿಳಿಯುತ್ತದೆ. ಸ್ಥಳ ಚಿತ್ರದುರ್ಗ ಜಿಲ್ಲೆಯ ಉಚ್ಚಂಗಿ ದುರ್ಗದ ಸುತ್ತುಮುತ್ತಿನದಾಗಿರಬೇಕೆಂದು ವಿದ್ವಾಂಸರ ಆಭಿಪ್ರಾಯವಾಗಿದೆ. ಈತನಿಗೆ ರಾಜಾ ಚಿಕ್ಕದೇವರಾಜ ಆಶ್ರಯ ನೀಡಿದ್ದ.
ಅನುಭವಾಮೃತ ಅದ್ವೈತ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿದ್ದು ಭಾಮಿನೀ ಷಟ್ಟದಿಯಲ್ಲಿದೆ. ಇದರಲ್ಲಿ ಅಧಿಕಾರ ಲಕ್ಷಣ, ವೈರಾಗ್ಯ ಪ್ರಕರಣ, ತ್ವಂ ಪದಾರ್ಥ ಶೋಧನೆ, ತತ್ತ್ವಪದಾರ್ಥ ಶೋಧನೆ, ಅಸಿಪದಾರ್ಥ ನಿರ್ಣಯ, ಸಪ್ತ ಭೂಮಿಕೆಗಳ ಅಭ್ಯಾಸ, ಪರಮಾತ್ಮಪದ ನಿರೂಪಣ, ಮಾಯಾಮಿಥ್ಯಾತ್ವ ಪ್ರಕರಣ, ಜೀವನ್ಮುಕ್ತಿ ನಿರೂಪಣ, ನಿರ್ಗುಣಾರಾಧನೆ ನಿರ್ಣಯ ಎಂಬ 11 ಅಧ್ಯಾಯಗಳೂ 804 ಪದ್ಯಗಳೂ ಇವೆ. ಮಹಾರಾಷ್ಟ್ರದ ಕವಿ ಮುಕುಂದ ರಾಜನ (13ನೆಯ ಶತಮಾನ) ವಿವೇಕಸಿಂಧು ಈ ಕೃತಿಗೆ ಆಧಾರವೆಂದು ತೋರುತ್ತದೆ. ಕವಿ ತಾನು ಅಖಿಳ ವೇದಾಂತಾರ್ಥವನ್ನು ಸಂಗ್ರಹಿಸಿ ಪೇಳ್ ಸಕಲರಿಗೆ ತಿಳಿದಂತೆ ಎಂದೂ ಉಪನಿಷದರ್ಥವನ್ನು ಸಂಪನ್ನಮತಿಗಳು ಪೇಳ್ದುದನೆ ನಾ ಕನ್ನಡಿಸಿದೆನೆಂದೂ ಹೇಳಿಕೊಂಡಿದ್ದಾನೆ. ಕಾವ್ಯ ಶ್ರೀಶೈಲ ಮಲ್ಲಿಕಾರ್ಜುನನ ಅಂಕಿತದಲ್ಲಿದೆ.
ಮಹಲಿಂಗರಂಗನಿಗೆ ಕನ್ನಡದ ಬಗ್ಗೆ ಅಪಾರ ಒಲವು.
"ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೋಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ ? ಸಂಸ್ಕೃತದೊಳಿನ್ನೇನು?”
ಎಂದು ಕನ್ನಡದ ಬಗ್ಗೆ ತನಗಿರುವ ಅಭಿಮಾನವನ್ನೂ ಕನ್ನಡ ಭಾಷೆಯ ವೈಶಿಷ್ಟ್ಯವನ್ನೂ ಪ್ರಕಟಿಸಿದ್ದಾನೆ. ಕಾವ್ಯಶೈಲಿ ಸರಳ, ಸುಲಭ ಹಾಗೂ ಲಲಿತ. ತತ್ತ್ವವಿಚಾರಗಳು ಸಹಜವಾಗಿ, ನೇರವಾಗಿ, ಮನಮುಟ್ಟುವಂತೆ ನಿರೂಪಿತವಾಗಿವೆ. ದೃಷ್ಟಾಂತ ಉಪಮೆ, ರೂಪಕಾದಿ ಅಲಂಕಾರಗಳೊಡನೆ ವಿಷಯವನ್ನು ಸಹೃದಯನಿಗೆ ಸ್ಪಷ್ಟಪಡಿಸುವ ಇವನ ಕಾವ್ಯ ರೀತಿ ಮೆಚ್ಚತಕ್ಕದ್ದು.
“ಯೌವನ, ಧನಸಂಪತ್ತು ಇತ್ಯಾದಿಗಳಿದ್ದವರಿಗೆ ಆಧ್ಯಾತ್ಮ ಸಿದ್ಧಿಸದು”ಎಂಬುದನ್ನು “ಮೊದಲೇ ಮರ್ಕಟ ಮೇಲೆ ಮದ್ಯದ ಮದವೆದೆಯ ಹಿಡಿದಿರಲು ವೃಶ್ಚಿಕ ತುದಿಯ ಕಾಲನ ಕಚ್ಚಿದರೆ ಕುಣಿದಾಡುವಂದದಲಿ ಅಧಿಕ ಧನ ಸಂಪತ್ತು ಯೌವನವೊದತಿರಲು ವನಿತಾದಿ ವಿಷುಯಾಸ್ಪದನೆಸಿಯೊಡಲರಿಯದವಗಧ್ಯಾತ್ಮಕವೇಕೆಂದ" ಎಂಬ ಪದ್ಯದಲ್ಲಿ ಅನುಭವಕ್ಕೆ ತಾಕುವಂತೆ ಹೇಳಿರುವುದು ವಿಶಿಷ್ಟವಾಗಿದೆ. ಕಾವ್ಯಗುಣಗಳಿಂದಲೂ ಈ ಕೃತಿ ಮನ್ನಣೆ ಪಡೆದಿದೆ.
ಭಗವದ್ದೀತೆ, ಭಾರತ, ರಾಮಾಯಣ, ಶಾಂಕರಭಾಷ್ಯ ಮೊದಲಾದ ಗ್ರಂಥಗಳಿಂದ ಕವಿ ಸಹಾಯ ಪಡೆದಿದ್ದರೂ ಇವನಲ್ಲಿ ಸ್ವತಂತ್ರ ಲೋಕಾನುಭವ ಹಾಗೂ ಪ್ರತಿಭೆ ಕಂಡುಬರುತ್ತವೆ. ಅದ್ವೈತ ತತ್ತ್ವದ ತಿರುಳನ್ನು ಅರಿಯಲು ಕನ್ನಡಿಗರಿಗೆ ಈ ಗ್ರಂಥ ಕೈಪಿಡಿಯಾಗಿದೆ. ಈ ಕೃತಿಯನ್ನು ಆಧರಿಸಿ ಚಿದಾನಂದಾವಧೂತ (18ನೆಯ ಶತಮಾನ) ಜ್ಞಾನಸಿಂಧು ಎಂಬ ದೊಡ್ಡ ಗ್ರಂಥ ಬರೆದಿದ್ದಾನೆ. ಶ್ರೀಮತ್ಪರಮಹಂಸ ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು ಅನುಭವಾಮೃತವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ. ಇದು ಈ ಕೃತಿಯ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ವೇದಾಂತ ತತ್ತ್ವಗಳನ್ನು ಬೋಧಿಸುವಾಗ ಜಗನ್ನಾಥದಾಸರು ಮಹಲಿಂಗರಂಗನ ಜಾಡನ್ನೇ ಅನುಸರಿಸಿರುವುದು ಕಾಣುತ್ತದೆ.
Mahalingaranga
ಕಾಮೆಂಟ್‌ಗಳು