ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಘು ದೀಕ್ಷಿತ್


 ರಘು ದೀಕ್ಷಿತ್


ರಘು ದೀಕ್ಷಿತ್ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ಗೀತ ರಚನಕಾರರಾಗಿ, ಸಂಗೀತದ ನವ್ಯ ಆಲ್ಬಮ್ ಸೃಜನಕಾರರಾಗಿ, ನಟರಾಗಿ, ಕಿರುತೆರೆ ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಹೀಗೆ ಬಹುಮುಖಿಯಾಗಿ ಸುದ್ಧಿಯಲ್ಲಿರುವವರು.

ರಘುಪತಿ ದ್ವಾರಕಾನಾಥ್ ದೀಕ್ಷಿತ್ ಜನಿಸಿದ್ದು 1974ರ ನವೆಂಬರ್ 11ರಂದು.  ಮೈಸೂರು ವಿಶ್ವವಿದ್ಯಾಲಯದಿಂದ ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಘು, ಭರತನಾಟ್ಯದಲ್ಲಿಯೂ ಪರಿಣತಿ ಸಾಧಿಸಿದ್ದಾರೆ. ಕೆಲಕಾಲ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ದುಡಿದ ರಘು ಎಲ್ಲವನ್ನೂ ಬಿಟ್ಟು ಹೊರಟದ್ದು ಸಂಗೀತದ ಹಿಂದೆ.

'ಸೈಕೋ' ಚಿತ್ರದಲ್ಲಿ ಅವರು ಸಂಗೀತ ನೀಡಿ ಹಾಡಿದ “ನಿನ್ನ ಪೂಜೆಗೆ ಬಂದೆ ಮಾದೇಶ್ವರ” ಪಡೆದ ಜನಪ್ರಿಯತೆ ಅಪಾರವಾದದ್ದು. ಹೀಗೆ ಚಲನಚಿತ್ರರಂಗದಲ್ಲಿ ಲಗ್ಗೆ ಇಟ್ಟ ಅವರು ಜಸ್ಟ್ ಮಾತ್ ಮಾತಲ್ಲಿ, ಕೋಟೆ ಮುಂತಾದ ಕನ್ನಡ ಚಿತ್ರಗಳಲ್ಲದೆ ಹಿಂದಿಯ ಕ್ವಿಕ್ ಗನ್ ಮುರುಗನ್, ಮುಜ್ಸೆ ಫ್ರೆಂಡ್ಷಿಪ್ ಕರೋಗಿ, ಕೆಲವು ತೆಲುಗು, ತಮಿಳು, ಮಲಯಾಳ ಹೀಗೆ ಎಲ್ಲ ಚಿತ್ರಗಳಿಗೆ ವ್ಯಾಪಿಸಿದ್ದಾರೆ. ಗುರುಡಾ, ಪ್ರದೇಶ ಸಮಾಚಾರ, ಯಾನ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ರಘು ಸಂಗೀತಲ್ಲಿ ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತಗಳ ಸಂಯೋಗದ ವಿವಿಧ ಸಾಧ್ಯತೆಗಳತ್ತ ನೋಟಬೀರಿ ವಿಶ್ವದ ಹಲೆವೆಡೆ ಗಣನೀಯ ಯಶಸ್ಸು ಗಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ 'ಸಾಂಗ್‌ಲೈನ್ಸ್'‌‌ ಇಂದ ಪ್ರಶಸ್ತಿ ಪಡೆದಿದ್ದಾರೆ. ರಘು ದೀಕ್ಷಿತ್‌ ಕಿರುತೆರೆಯಲ್ಲಿ  ಗಾಯನ ಸ್ಪರ್ಧೆಯ ತೀರ್ಪುಗಾರರೂ ಆಗಿದ್ದಾರೆ.

'ರಘು ದೀಕ್ಷಿತ್ ಪ್ರಾಜೆಕ್ಟ್' ಎಂಬುದು ರಘು ದೀಕ್ಷಿತ್ ನೇತೃತ್ವದ ಬಹುರಾಷ್ಟ್ರಗಳ - ಬಹುಭಾಷಾ ಜಾನಪದೀಯ ಸಂಗೀತ ಸಂಗಮಗಳ ಗಾನಗೋಷ್ಠಿ.   ಈ ಗೋಷ್ಠಿಗಳ ಗಾನಮಾಲಿಕೆಯಲ್ಲಿ ಮೈಸೂರ್ ಸೇ ಆಯಿ, ಭಗವಾನ್, ಹರ್ ಸಾನ್ಸ್ ಮೇ, ಜಾ ಚಂಗಾ, ಅಂತರಂಗಿ, ಹೇ ಭಗವಾನ್, ಗುಡುಗುಡಿಯ, ಕಿಡ್ಕಿ ಮುಂತಾದ ಸಂಯೋಜನೆಗಳು ಮೂಡಿವೆ.  ಅನೇಕ ಸಮಕಾಲೀನ ನೃತ್ಯ ಪ್ರಕಾರ ಮತ್ತು ರಂಗಪ್ರಯೋಗಗಳಿಗೆ ಸಹಾ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ.

ರಘು ದೀಕ್ಷಿತ್ ಅವರ ಸಾಧನೆ ಉತ್ತಮವಾಗಿರಲಿ ಹಾಗೂ ಅವರ ಕುರಿತು ಉತ್ತಮ ಸುದ್ಧಿಗಳನ್ನು ನಾವು ಕೇಳುವಂತಾಗಲಿ ಎಂದು ಆಶಿಸುತ್ತಾ ಶುಭಹಾರೈಸೋಣ.

On the birthday of Raghu Dixit 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ