ಎಸ್. ದಿವಾಕರ್
ಎಸ್. ದಿವಾಕರ್
ನಮ್ಮ ನಡುವಿನ ಮಹತ್ವದ ವಿದ್ವಾಂಸರೂ, ಆತ್ಮೀಯರೂ ಆದ ಡಾ. ಎಸ್. ದಿವಾಕರ್ ಅವರ ಜನ್ಮದಿನವಿದು.
ದಿವಾಕರ್ ಅವರ ಅಂಕಣಗಳೇ ಇರಲಿ, ವಿವಿಧ ಸಮಾರಂಭಗಳಲ್ಲಿ ನಾವು ಕೇಳಿದ ಅವರ ಉಪನ್ಯಾಸಗಳೇ ಇರಲಿ, ಕಾವ್ಯದ ಓದುವಿಕೆಯೇ ಇರಲಿ, ಹಾಡುವಿಕೆಯೇ ಇರಲಿ, ಕಾರ್ಯಕ್ರಮಗಳಲ್ಲಿ ಕಂಡಾಗ ನಮಸ್ಕಾರ ಎಂದು ಮಾತನಾಡಿಸಿದಾಗ ಅವರು ನನ್ನಂತಹ ಸಾಮಾನ್ಯನೊಂದಿಗೆ ಕೂಡಾ ಪ್ರತಿಕ್ರಿಯಿಸುವ ರೀತಿಯಲ್ಲೇ ಆಗಲಿ, ಒಂದು ಅಪೂರ್ವ ಗಾಂಭೀರ್ಯದ ಸೊಗಸಿದೆ. ಕೆಲವು ವರ್ಷದ ಹಿಂದೆ ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ಒಂದು ಕಿರು ವಿಡಿಯೋದಲ್ಲಿ ಅವರು ಆಪ್ತವಾಗಿ ತೆರೆದಿಟ್ಟ ಪುಸ್ತಕ ಪ್ರೀತಿ ನೆನಪಾಗುತ್ತದೆ. ಅದರಲ್ಲಿ ಅವರು ಶಿವರಾಮ ಕಾರಂತರ ವೈವಿಧ್ಯಮಯ ವ್ಯಕ್ತಿತ್ವದ ಬಗ್ಗೆ ವಿದೇಶದಲ್ಲಿ ನಡೆದ ಕಾರ್ಯಾಗಾರದಲ್ಲಿ ನಿರೂಪಿಸಿದಾಗ, ಅಲ್ಲಿನ ಜನ ಕಾರಂತರಂತಹ ಅದಮ್ಯ ವ್ಯಕ್ತಿ ಇದ್ದಿರಲಿಕ್ಕೆ ಸಾಧ್ಯ ಎಂಬುದನ್ನು ಊಹಿಸಲಾಗದೆ “ನೀನು ಒಬ್ಬ ವ್ಯಕ್ತಿಯನ್ನು ದಂತ ಕತೆಯಂತೆ ಸುಂದರವಾಗಿ ಕಟ್ಟಿಕೊಟ್ಟಿದ್ದೀಯ” ಎಂದು ಪ್ರತಿಕ್ರಯಿಸಿದ್ದನ್ನು ಹೇಳುತ್ತಾರೆ. ದಿವಾಕರ್ ಅವರು ಎಂತದ್ದೇ ವಿಚಾರವನ್ನು ಹೇಳುತ್ತಿರುವಾಗಲೂ ನಾವು ಕತೆಯನ್ನು ಕೇಳುವ ಮಗುವಿನಂತೆ, ಇನ್ನೂ ಬೇಕು ಎಂದು ಕೇಳುವ ಮನಸ್ಸಿನವರಾಗಿರುತ್ತೇವೆ.
ದಿವಾಕರ್ ಅವರು ಜನಿಸಿದ ಊರುಬ ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿ. ಜನಿಸಿದ ದಿನ 1944ರ ನವೆಂಬರ್ 28. ತಮ್ಮ ಶಾಲಾ ಶಿಕ್ಷಣವನ್ನು ದೇವನಹಳ್ಳಿ ಮತ್ತು ಬೆಂಗಳೂರುಗಳಲ್ಲಿ ನಡೆಸಿದ ದಿವಾಕರ್, ಮುಂದೆ ಧಾರವಾಡದಲ್ಲಿ ಪದವಿ ಪಡೆದರು. ಓದಿನ ನಂತರದಲ್ಲಿ ಅವರನ್ನು ಸೆಳೆದದ್ದು ಪತ್ರಿಕೋದ್ಯಮ.
ಇಂದಿನ ದಿನಗಳಲ್ಲಿ ಸಾಹಿತ್ಯ ವಿಮರ್ಶೆಗಳಲ್ಲಿ ಎದ್ದು ಕಾಣುವ ದಿವಾಕರ್ ಅವರು, ಸಣ್ಣಕತೆ, ಕಾವ್ಯ, ಪ್ರಬಂಧ, ವಿಮರ್ಶೆ, ಭಾಷಾಂತರ, ಸಂಪಾದನೆ, ಅಂಕಣ ಬರಹ, ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಪುಲ ಕೃಷಿ ಕೈಗೊಂಡವರು. ಅವರ ಓದು ಮತ್ತು ಓದಿನ ತಿರುಳನ್ನು ಅವರು ಅಂತರ್ಗತವಾಗಿಸಿಕೊಂಡಿರುವ ರೀತಿ ಎರಡೂ ಅತ್ಯಂತ ಆಳದ್ದು. ಕೇವಲ ಸಾಹಿತ್ಯ ಮಾತ್ರವಲ್ಲ, ಅವರ ವಿವಿಧ ಅಭಿರುಚಿಗಳಲ್ಲಿನ ಆಳ ಕೂಡಾ ಮನಸೆಳೆಯುವಂತದ್ದು. ಚಿತ್ರಕಲೆ, ಸಂಗೀತ, ಸಿನಿಮಾ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಕೂಡಾ ಅವರಿಗೆ ಆಳವಾದ ಆಸಕ್ತಿ ಮತ್ತು ಸ್ವಯಂಪರಿಶ್ರಮಗಳು ಇವೆ. ಭಾರತ ರತ್ನ ಭೀಮಸೇನ ಜೋಷಿ ಅವರ ಕುರಿತಾಗಿ ಅವರ ಗ್ರಂಥವೇ ಇದೆ. ಡಾ. ಬಾಲಮುರಳಿ ಕೃಷ್ಣ ಅವರು ನಿಧನರಾದ ಸಂದರ್ಭದಲ್ಲಿ ಅವರು ಮೂಡಿಸಿದ ಬರಹ ಕೂಡಾ ಅವರ ಸಂಗೀತದ ಕುರಿತಾದ ಸೂಕ್ಷ್ಮಾತಿಸೂಕ್ಷ್ಮ ಗ್ರಹಿಕೆಗಳೆಲ್ಲವನ್ನೂ ತೆರೆದು ತೋರುವಂತದ್ದು. ಅವರು ಘಟಶ್ರಾದ್ಧ ಚಿತ್ರಕ್ಕೆ ಸಹನಿರ್ದೇಶಕರಾಗಿ ಸಹಾ ಕೆಲಸ ಮಾಡಿದ್ದರು.
ಎಸ್. ದಿವಾಕರ್ ಅವರು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ, ಸಂಯುಕ್ತ ಕರ್ನಾಟಕ, ಮಲ್ಲಿಗೆ, ಸುಧಾ, ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳಲ್ಲಿ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕರಾಗಿ, ಸಂಪಾದಕೀಯ ಸಲಹೆಗಾರರಾಗಿ ಕೆಲಸಮಾಡಿದ್ದಾರೆ. 1989ರಿಂದ 2005ರ ವರೆಗೆ ಚೆನ್ನೈಯಲ್ಲಿರುವ ಅಮೆರಿಕನ್ ಕಾನ್ಸುಲೇಟ್ನಲ್ಲಿ ಕರ್ನಾಟಕದ ವಿಶೇಷಜ್ಞರಾಗಿ ಅವರ ಸೇವೆ ಸಂದಿದೆ. ಹಲವಾರು ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳಿಗೆ ಅವರ ಸಲಹೆ ಮಾರ್ಗದರ್ಶನಗಳು ದೊರಕಿ, ಕನ್ನಡಕ್ಕೆ ಹಲವು ವಿಶ್ವಶ್ರೇಷ್ಠ ಜ್ಞಾನಗಳು ಲಭ್ಯವಾಗುವುದರಲ್ಲಿ ಪ್ರಮುಖ ಪಾತ್ರವಹಿಸಿವೆ.
ಎಸ್.ದಿವಾಕರ್ ಅವರು ಅವರು 2002 ವರ್ಷದಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯ ಪ್ರತಿವರ್ಷವೂ ಆಯೋಜಿಸುತ್ತಿರುವ ಅಂತರರಾಷ್ಟ್ರೀಯ ಲೇಖಕರ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ದಿವಾಕರ್ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ‘Hundreds of Streets to the Palace of Lights’ ಕೃತಿ 2016 ವರ್ಷದಲ್ಲಿ ಅಖಿಲ ಭಾರತ ‘ಕ್ರಾಸ್ವರ್ಡ್ ಪ್ರಶಸ್ತಿ’ಗೆ ಆಯ್ಕೆ ಆಗಿತ್ತು.
ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ, ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ, ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ, ಒಂದೊಂದು ನೆನಪಿಗೂ ಒಂದೊಂದು ವಾಸನೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಸಮೂಹ ಮಾಧ್ಯಮಗಳು (ಸಮೀಕ್ಷೆ), ಪಂ. ಭೀಮಸೇನ ಜೋಶಿ (ಜೀವನ ಚಿತ್ರ), ಜಗತ್ತಿನ ಅತಿ ಸಣ್ಣ ಕತೆಗಳು, ಶತಮಾನದ ಸಣ್ಣ ಕತೆಗಳು, ಹಾರಿಕೊಂಡು ಹೋದವನು, ಆಯ್ದ ಕತೆಗಳು, ಕಥಾಜಗತ್ತು, ಪ್ರಪಂಚ ಪುಸ್ತಕ, ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ (ಕವಿತೆಗಳು), ಭಗತ್ ಸಿಂಗ್ ಕುರಿತ ಕುಲದೀಪ್ ನಯ್ಯರ್ ಅವರ ಅನುವಾದಿತ ಕೃತಿ 'ನಿರ್ಭಯ', ಕ್ರಿಯಾಪದಗಳಿವೆ ಕೊಲ್ಲುವುದಕ್ಕೆ, ಎಸ್. ಪುಟ್ಟಣ್ಣನವರ ನೀತಿ ಚಿಂತಾಮಣಿಯ ಪರಿಷ್ಕೃತ ರೂಪ, ಸ್ವಯಂದೀಪಕತೆ, ಪೊಲಿಷ್ ಸಾಹಿತ್ಯ ಕಲೆ ಮುಂತಾದವು ದಿವಾಕರ್ ಅವರ ಸಾಹಿತ್ಯದಲ್ಲಿ ಸೇರಿವೆ. ಮತ್ತೊಮ್ಮೆ ಹೇಳಬೇಕು...... ವಿಶ್ವದ ಪ್ರಸಿದ್ಧ ಬರಹಗಳ ಅನುವಾದ, ಕತೆ, ಕವಿತೆ, ವಿಮರ್ಶೆ, ಚಿಂತನೆ, ಸಂಕಲನ ಹೀಗೆ ಎಲ್ಲವನ್ನೂ ಐದು ದಶಕಗಳಿಂದ ಮಾಡಿರುವ ದಿವಾಕರ್ ಅವರ ಎಲ್ಲ ಕೃತಿಗಳ ಹೆಸರುಗಳನ್ನು ಪಟ್ಟಿಮಾಡುವುದೂ ನನ್ನ ಮಿತಿಯನ್ನು ಮೀರಿದ್ದು. ಅವರ ವ್ಯಾಪ್ತಿ ಅಷ್ಟು ಬೃಹತ್ತಾದುದು.
ಬೇಂದ್ರೆ ಅವರಂತಹ ಹಿರಿಯರೊಂದಿಗೆ ಕೂಡಾ ಯುವಕನಾಗಿ ಮೆಚ್ಚುಗೆಯ ಸಹಚರ್ಯೆ ಪಡೆದಿದ್ದ ದಿವಾಕರ್ ಅವರದ್ದು ಪ್ರಾರಂಭದಿಂದಲೂ ಪ್ರತಿಭೆಯಲ್ಲಿ ಎದ್ದು ಕಾಣುವ ವರ್ಚಸ್ಸು. ಅವರ ಕ್ರೌರ್ಯ, ಅನಾಥರು, ಮೃತ್ಯುಂಜಯ ಮುಂತಾದ ಬಹುತೇಕ ಕತೆಗಳು ವಿಶೇಷ ಸಂಚಿಕೆಗಳಲ್ಲಿ ಮೂಡಿದ ಸಂದರ್ಭಗಳಲ್ಲೇ ಬಹುಮಾನಗಳಿಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಸಾಹಿತ್ಯವಲಯದ ಹಿರಿಯರ ಗಮನವನ್ನೂ ಸೆಳೆದಿತ್ತು. ದಿವಾಕರ್ ಅವರ ‘ಇತಿಹಾಸ’ ಕಥಾಸಂಕಲನಕ್ಕೆ ಮುನ್ನುಡಿ ಬರೆದಿರುವ ಡಾ. ಶಾಂತಿನಾಥ ದೇಸಾಯಿ ಅವರು “ಎಸ್. ದಿವಾಕರರ ಈ ಕಥಾಸಂಗ್ರಹಕ್ಕೆ ಮುನ್ನುಡಿಯ ರೂಪದಲ್ಲಿ ಪ್ರಾಸ್ತಾವಿಕವಾದ ಮಾತು ಹೇಳಲು ನಾ ಯಸ್ ಅಂದದ್ದು, ತರುಣ, ‘ಉದಯೋನ್ಮುಖ’ ಲೇಖಕರಿಗೆ ಆಶೀರ್ವಾದ ಮಾಡುವ ಹಿರಿಯತನದ ಹೆಮ್ಮೆಯಿಂದಲ್ಲ. ದಿವಾಕರರಂಥ ಒಬ್ಬ ಸಂವೇದನಾಶೀಲ ಲೇಖಕನ ಹೊಸ ಪ್ರತಿಭೆಯನ್ನು ಸ್ವಲ್ಪ ಒಳಗಿನಿಂದ ನೋಡಿ ತಿಳಕೊಳ್ಳುವ, ಅದರ ಜೊತೆ ತಾದ್ಯಾತ್ಮ ಹೊಂದಿ ಅದಕ್ಕೆ ಪ್ರತಿಸ್ಪಂದಿಸಬೇಕೆನ್ನುವ ಒಂದು ಆತ್ಮಕೇಂದ್ರಿತ, ಸ್ವಾರ್ಥಪರ ಅಂತರ್ಬುದ್ಧಿಯಿಂದ! ಈ ಕತೆಗಳು ನಮ್ಮ ನವ್ಯ ಪರಂಪರೆಯ ಬಹುಶಃ ಕೊನೆಯ (?) ಘಟ್ಟಕ್ಕೆ ಸೇರಿದ ಕತೆಗಳೆಂದಿನಿಸಿದ್ದರಿಂದ ನವ್ಯತೆಯ ಕೆಲವು ಹದ್ದುಗಳನ್ನೂ ಸಾಧ್ಯತೆಗಳನ್ನೂ ಅನ್ವೇಷಿಸುವ ಯೋಗವನ್ನು ಯಾಕೆ ಕಳಕೊಳ್ಳಬೇಕು ಎಂದೆನಿಸಿಕೊಂಡ ಜವಾಬ್ದಾರಿಯಿದು....” ಎಂದು ಹೇಳಿರುವ ಮಾತುಗಳಲ್ಲಿ ದಿವಾಕರ್ ಅವರು ತಮ್ಮ ಯುವ ವಯಸ್ಸಿನಲ್ಲೇ ಮೂಡಿಸಿದ್ದ ಪ್ರಭೆಯ ಅರಿವು ನಮಗೆ ಕಾಣುತ್ತದೆ.
ಅಂದು 'ಯುವಕ' ಎಂದು ಶಾಂತಿನಾತ ದೇಸಾಯಿ ಅವರು ಹೇಳಿದ ಯುವಕ ದಿವಾಕರ ಅವರು ಎಂಬತ್ತರ ಕ್ಲಬ್ಬಿಗೆ ಕಾಲಿಟ್ಟರು ಎಂದು ಕನ್ನಡ ಸಾಹಿತ್ಯಲೋಕ 26.11.2023ರಂದು 'ನಮ್ಮ ದಿವಾಕರ್' - ಅಭಿನಂದನೆ ಮತ್ತು ಸಂಗೀತ-ಸಂಭ್ರಮ ಏರ್ಪಡಿಸಿತ್ತು. ಈ ಸಂದರ್ಭದಲ್ಲಿ
'ಪರಿಮಳದ ಪಡಸಾಲೆ' ಎಂಬ ಎಸ್. ದಿವಾಕರ್ ಸಾಹಿತ್ಯ ಸಂಭ್ರಮದ ವಿಶೇಷ ಸಂಚಿಕೆ ಹೊರಹೊಮ್ಮಿತು. ಅವರಿಗೆ ವಯಸ್ಸಾಗಿದೆ ಎಂದರೆ ಮನ ಒಪ್ಪದು. ಹುಡುಗರಾಗಿದ್ದ ನಮಗೆ ಯುವಕರಾಗಿದ್ದ ಅವರು, ನಮಗೆ ಸದಾ ಯುವಕರು. ಅಂತೆಯೇ, ನಾವು ಅವರ ಮುಂದೆ ಸದಾ ಆಡಿ ನಲಿಯುತ್ತಿರುವ ಹುಡುಗರೇ.
ದಿವಾಕರ್ ಅವರ ಸಾಹಿತ್ಯ, ಹಲವು ರೀತಿಯ ಸಾಗರದ ಎಲ್ಲೆಗಳನ್ನು ದಾಟಿದ್ದು. ವಿಶ್ವದ ಅನೇಕ ಸಾಹಿತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿರುವ ದಿವಾಕರ್ ಅವರು, ಅದರ ರಸಾನುಭವವನ್ನು ಕನ್ನಡಕ್ಕೆ ತಂದಿದ್ದಾರೆ. ಜೊತೆಗೆ ಈಗಾಗಲೇ ಹೇಳಿದಂತೆ ಇಲ್ಲಿನ ಸೊಗಡನ್ನು ವಿದೇಶಿಗರಿಗೂ ಪರಿಚಯಿಸಿದ್ದಾರೆ. ದಿವಾಕರ್ ಅವರ ಅನುವಾದಗಳಲ್ಲಿ ಮೂಡಿದ ಕೃತಿಗಳಲ್ಲಿ ಕಥಾ ಜಗತ್ತು (ನೊಬೆಲ್ ಪ್ರಶಸ್ತಿ ವಿಜೇತ ಲೇಖಕರು ಬರೆದ 50 ಕತೆಗಳ ಅನುವಾದ), ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು (ವಿವಿಧ ದೇಶಗಳ ಕತೆಗಳು), ಹಾರಿಕೊಂಡು ಹೋದವನು (ವಿವಿಧ ದೇಶಗಳ ಅತಿ ಸಣ್ಣಕತೆಗಳು), ಈ ಊರಿನಲ್ಲಿ ಕಳ್ಳರೇ ಇಲ್ಲ (ಗಾಬ್ರಿಯೇಲ್ ಗಾರ್ಸಿಯಾ ಮಾರ್ಕೆಸ್ನ ಕತೆಗಳು) ಪ್ರಮುಖವಾದವು. ಶತಮಾನದ ಸಣ್ಣ ಕತೆಗಳು, ಸಣ್ಣಕತೆ 1983, ಕನ್ನಡದ ಅತಿಸಣ್ಣ ಕತೆಗಳು, ಸಾಹಿತ್ಯ – ಕಲೆ, ನಾದದ ನವನೀತ (ಸಂಗೀತವನ್ನು ಕುರಿತ ಪ್ರಬಂಧಗಳು, ಕವಿತೆಗಳು, ಸಣ್ಣಕತೆಗಳು), ಬೆಸ್ಟ್ ಆಫ್ ಕೇಫ ಮುಂತಾದವು ಅವರು ಸಂಪಾದಿಸಿರುವ ಇನ್ನಿತರ ಕೃತಿಗಳಲ್ಲಿ ಸೇರಿವೆ. ಅವರು ಸಾಕ್ಷಿ ಪತ್ರಿಕೆಯ ಕೆಲವು ಸಂಚಿಕೆಗೆ ಸಂಪಾದಕರೂ ಆಗಿದ್ದರು. ಈಗಲೂ ಅವರ ಅಂಕಣಗಳು, ಕತೆಗಳು, ಕವಿತೆಗಳು, ವಿಮರ್ಶೆಗಳು, ಚಿಂತನೆಗಳು ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ರಾರಾಜಿಸುತ್ತಿವೆ.
ದಿವಾಕರ್ ಅವರನ್ನರಸಿ ಬಂದ ಪುರಸ್ಕಾರಗಳು ಹಲವು. ಇವುಗಳ ಪೈಕಿ ಪ್ರಮುಖವಾದವು ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ಸೀನಿಯರ್ ಫೆಲೋಶಿಪ್, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಅಮೆರಿಕದ ಅಯೋವಾ ವಿಶ್ವವಿದ್ಯಾಲಯದ ರೈಟರ್-ಇನ್-ರೆಸಿಡೆನ್ಸ್ ಗೌರವ, ಅಖಿಲ ಭಾರತ ಕಥಾ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ, ಕೋಲ್ಕತಾದ ಅಖಿಲ ಭಾರತ ಹಿಂದೀ ಪುರಸ್ಕಾರ್, ವಿಶ್ವವಿದ್ಯಾಲಯವೊಂದರ ಡಾಕ್ಟರೇಟ್ ಮುಂತಾದವುಗಳು ಸೇರಿವೆ.
ಹಾ... ಸ್ವಲ್ಪ ಇರಿ ನಮ್ಮ ಎಚ್. ಎಸ್. ವೆಂಕಟೇಶಮೂರ್ತಿ ಅವರು ನಮ್ಮ ದಿವಾಕರ್ ಅವರ ಕುರಿತು ಬರೆದದ್ದು ಒಮ್ಮೆ ಓದಿಬಿಡಿ ಸಾಕು. ತಿಳಿಯುತ್ತಾರೆ ದಿವಾಕರ ಅವರೇನೆಂದು ...
ಘನವಾದದ್ದ ಮನಕ್ಕೆ ಕೊಟ್ಟವರೇ, ನೀಲಿಹಕ್ಕಿಯಂತೆ ಭೂಗೋಳ ಅಂತರಾಳದ ನಡುವೆ ತೇಲಿ ಬಿಟ್ಟವರೇ,
ಅಕ್ಜರೆಯುಕ್ಕುವ ಮಾತನು ನನ್ನ ಮುಗಿಲ ಮಂಜರಿಗೆ ಇಟ್ಟವರೇ,
ಲೋಕಾಲೋಕದಂತೆದುರಿಗೆದ್ದ ಮಂಜು-ಹಿಂಜಿನ ಅಸ್ಪಷ್ಟತೆ ತೊಟ್ಟವರೇ,
ಕಾಣದ್ದ ಕಾಣಲು ವಿಶ್ವಧರಿಸಿದ ಇನ್ನೊಂದು ದುರ್ಬೀನ ಕಣ್ಣು ನೀವು.
ಯಾವತ್ತೂ ನಿಮ್ಮ ನಿಗೂಢ ನುಡಿಯ ಕಿವಿಗೊಟ್ಟು ಆಲಿಸಲು ಬಯಸುವೆ.
ಪಿಟೀಲ ಮೇಲೆ ಸುಮ್ಮನಾಡುವ ಕಮಾನೇ....
ಹೀಗೂ ಆಗಬಹುದು ರಾಗ,
ಸಂಜೆ-ಗೆಂಪು;
ಸಂಧ್ಯಾಭಾಷೆ ನಾದಕೆರೆದಹೊಸಭಾಷ್ಯ
ನೆನಪಾಗುವುದು
ಹೆಗ್ಗೋಡಲ್ಲಿ
ಕಾಡುಹಾದಿಯ ಬೈ-ತಲೆ ತುದಿಗೆ ಫಳಕ್ಕನೆ ಹೊಳೆದ ಮುತ್ತೈದೆ ಮುತ್ತು.
ಅಂಗೈದೀಪಕ್ಕುಂಟೆ ಹೊತ್ತುರಿಯೆ ಹೊತ್ತೂಗೊತ್ತೂ?
ಪ್ರಾಜ್ಞರೂ, ಪೂಜ್ಯರೂ ಮತ್ತು ಆತ್ಮೀಯರೂ ಆದ ಎಸ್. ದಿವಾಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.
ಚಿತ್ರಕೃಪೆ: Mukunda AN Uma Mukund
ಕಾಮೆಂಟ್‌ಗಳು