ಸ.ಸ. ಮಾಳವಾಡ
ಸ.ಸ. ಮಾಳವಾಡ
ಸ.ಸ. ಮಾಳವಾಡರು ಪ್ರಾಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹಾನ್ ಹೆಸರಾದವರು.
ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ 1910ರ ನವೆಂಬರ್ 14ರಂದು ಜನಿಸಿದರು. ತಂದೆ ಸಂಗನ ಬಸಪ್ಪನವರು ಮತ್ತು ತಾಯಿ ಕಾಳಮ್ಮನವರು. ಮಾಳವಾಡರ ಪ್ರಾರಂಭಿಕ ಶಿಕ್ಷಣವು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ನೆರವೇರಿತು. ಎಂ. ಎ ಪದವಿಯವರೆಗೆ ಉನ್ನತ ವ್ಯಾಸಂಗವನ್ನು ಧಾರವಾಡದಲ್ಲಿ ನಡೆಸಿದರು. ಮಾಳವಾಡರು ವಿದ್ಯಾರ್ಥಿ ದೆಸೆಯಲ್ಲಿಯೇ ಮಂಗ ಮಠ ಎಂಬ ಸಾಹಿತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದರು.
ಸ.ಸ. ಮಾಳವಾಡರು ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಂತರದಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅದೇ ಕಾಲೇಜಿನ ಪ್ರಾಚಾರ್ಯರಾಗಿ, ನಿವೃತ್ತರಾಗುವವರೆವಿಗೂ ಸೇವೆ ಸಲ್ಲಿಸಿದರು. ನಿವೃತ್ತಿಯ ನಂತರದಲ್ಲಿ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ, ರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಗಣನೀಯ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದ್ದರು
‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ಮಾಳವಾಡರ ಮೊಟ್ಟ ಮೊದಲ ಕೃತಿ. ನಂತರದಲ್ಲಿ ಸಾಹಿತ್ಯ ಸಮಾಲೋಚನೆ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಸಾಹಿತ್ಯ ಸಂಗಮ, ಷಡಕ್ಷರಿ, ಸಾಹಿತ್ಯ ದೃಷ್ಟಿ, ಹರಿಹರ-ರಾಘವಾಂಕರು ಮುಂತಾದ ಹಲವಾರು ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದರು.
ಮಾಳವಾಡರ ಸಂಪಾದಿತ ಕೃತಿಗಲ್ಲಿ ಕನ್ನಡ ಗದ್ಯಮಾಲೆ, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ ಮುಂತಾದವು ಸೇರಿವೆ.
ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ ಮುಂತಾದವು ಮಾಳವಾಡರ ವೈಚಾರಿಕ ಬರಹಗಳು. ಪಯಣದ ಕತೆ, ಸಂಚಾರ ಸಂಗಮ ಪ್ರವಾಸ ಕಥನಗಳು. ಸ್ವಾದಿ ಅರಸು ಮನೆತನ, ಉತ್ತಂಗಿ ಚನ್ನಪ್ಪ, ಮಧುರ ಚೆನ್ನ, ಬಸವಣ್ಣನವರು, ನಾಗ ಮಹಾಶಯ, ಶಿಶುನಾಳ ಶರೀಫರು ಮುಂತಾದವು ವ್ಯಕ್ತಿಚಿತ್ರಗಳು. ಹಳ್ಳಿಯ ಹುಡುಗ, ದಾರಿ ಸಾಗಿದೆ ಅವರ ಆತ್ಮಕೃತಿಗಳು. ಹೀಗೆ ಅವರು 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರು. ಮಾಳವಾಡರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ನಾಡು, ನುಡಿ, ಭಾಷೆ ಸಾಹಿತ್ಯಕ್ಕೆ ಅಪಾರ ಸೇವೆ ಸಲ್ಲಿಸಿದವರು.
ಸ. ಸ. ಮಾಳವಾಡರಿಗೆ 1972ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1985ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.
ಪ್ರೊ. ಮಾಳವಾಡರು 1987ರ ಆಗಸ್ಟ್ 30ರಂದು ಈ ಲೋಕವನ್ನಗಲಿದರರು.
On the birth anniversary of great scholar and writer S.S. Malavada
ಕಾಮೆಂಟ್‌ಗಳು