ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಿಂತಲಪಲ್ಲಿ


ಚಿಂತಲಪಲ್ಲಿ ರಾಮಚಂದ್ರ ರಾಯರು

ಕರ್ನಾಟಕದ ಸಂಗೀತಗಾರರಲ್ಲಿ  ವಿದ್ವಾನ್ ಚಿಂತಲಪಲ್ಲಿ ರಾಮಚಂದ್ರ ರಾಯರ ಹೆಸರು ಚಿರವಿರಾಜಿತ.  ಗಾಯಕರಾಗಿ ಮತ್ತು ಬೋಧಕರಾಗಿ ಅವರು ಮಹತ್ವದ ಸೇವೆ ಸಲ್ಲಿಸಿದವರು. ಚಿಂತನಪಲ್ಲಿ ಎಂದರೆ ಸಂಗೀತ ಪರಂಪರೆಯ  ಹಿರಿಯ ಮನೆತನ. ಅವರ ಪೂರ್ವಿಕರಲ್ಲಿ  ತಿಮ್ಮಣ್ಣವರು ಅನೇಕ ಗೌರವಗಳಿಗೆ ಪಾತ್ರರಾದವರಾದರೆ, ಗವಿ ರಂಗಪ್ಪನವರು ಹಲವು ಕೃತಿಗಳನ್ನು ರಚಿಸಿದವರು.

ರಾಮಚಂದ್ರ ರಾವ್ ಅವರು 1916ರ ನವೆಂಬರ್ 14ರಂದು ಚಿಂತನಪಲ್ಲಿಯಲ್ಲಿ ಜನಿಸಿದರು. ತಂದೆ ಸಂಗೀತ ವಿದ್ವಾಂಸರಾದ ವೆಂಕಟರಾಯರು ಮತ್ತು ತಾಯಿ ರಾಮಕ್ಕ ಅವರು. 

ರಾಮಚಂದ್ರರಾಯರು ದೊಡ್ಡಪ್ಪ ವೆಂಕಟಾಚಲಯ್ಯನವರಿಂದ ಮತ್ತು ತಂದೆ ವೆಂಕಟರಾಯರಿಂದ ಕಲಿತದ್ದಲ್ಲದೆ ಪಾಲ್‌ಘಾಟ್ ಸೋಮೇಶ್ವರ ಭಾಗವತರು ಮತ್ತು ಪೊನ್ನಯ್ಯ ಪಿಳ್ಳೆ ಅವರಿಂದಲೂ ಹೆಚ್ಚಿನ ಮಾರ್ಗದರ್ಶನ ಪಡೆದರು. ರಾಮಚಂದ್ರರಾಯರು ಚಿಕ್ಕ ಬಾಲಕನಾಗಿದ್ದ ಇವರಿಂದ ಹಾಡು ಕೇಳಿದ ಭೈರವಿ ಕೆಂಪೇಗೌಡರು ನಾಲ್ಕಾಣೆ ಇನಾಮು ನೀಡಿ ಬೆನ್ನು ತಟ್ಟಿದರಂತೆ.

ಒಮ್ಮೆ ರಾಯರ ಒಂದು ಕಛೇರಿಯ ವಿಮರ್ಶೆಯನ್ನು ಮಹಾರಾಜ ನಾಲ್ವಡಿ ಕಷ್ಣರಾಜ ಒಡೆಯರು 'ದಿ ಹಿಂದೂ' ಪತ್ರಿಕೆಯಲ್ಲಿ ಓದಿದ್ದರು. ಆ ಹಾಡುಗಾರಿಕೆಯನ್ನು ಬಹುವಾಗಿ ಪ್ರಶಂಶಿಸಿದ್ದನ್ನು ಓದಿ, ಕುತೂಹಲಗೊಂಡು, ರಾಯರನ್ನು ಅರಮನೆಗೆ ಆಹ್ವಾನಿಸಿದರು. 

ಸ್ವತಃ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದ ನಾಲ್ವಡಿಯವರನ್ನು ಮೆಚ್ಚಿಸುವುದು ಸುಲಭದ ಮಾತಾಗಿರಲಿಲ್ಲ. ರಾಯರ ಮಧುರವಾದ ಕಂಠ, ಮಿಂಚಿನ ತಾಜಾ ಸಂಗತಿಗಳು, ಆಕರ್ಷಕ ಬಿರ್ಕಾಗಳು ಮಹಾರಾಜರ ಅಪಾರ ಮೆಚ್ಚುಗೆ ಪಡೆದವು. ನಿಗದಿತ ಸಮಯಕ್ಕಿಂತ ಮೂರ್ಮಡಿ ಹೆಚ್ಚು ಹೊತ್ತು ಮಹಾರಾಜರು ಸಂಗೀತ ಕೇಳಿದ್ದೇ ಒಂದು ದಾಖಲೆ. 

ಅದರಿಂದ 16ರ ಪ್ರಾಯದಲ್ಲೇ ಚಿಂತಲಪಲ್ಲಿ ರಾಮಚಂದ್ರ ರಾಯರು ಆಸ್ಥಾನ ವಿದ್ವಾಂಸರಾದರು. ತಂದೆ (ವೆಂಕಟರಾಯರು) ಮತ್ತು ಮಗ (ರಾಮಚಂದ್ರರಾಯರು) ಇಬ್ಬರ ಗಾಯನವೂ ಅರಮನೆಯಲ್ಲಿ ನಡೆಯಿತು. ಪ್ರಭು ವಿಶೇಷ ಮರ್ಯಾದೆಯನ್ನೂ ಮಾಡಿದರು.

ರಾಜ್ಯದ ಪ್ರಮುಖ ಸಭೆ, ಸಮ್ಮೇಳನಗಳಲ್ಲಿ ಹಾಡಿದ ರಾಮಚಂದ್ರರಾಯರ ಕಾರ್ಯಕ್ರಮಗಳು ದಕ್ಷಿಣ ಭಾರತದಾದ್ಯಂತ ನಡೆದವು. ಅವರ ಹಾಡುಗಾರಿಕೆಯ ಗ್ರಾಮಫೋನ್ ಪ್ಲೇಟ್ ಸಹ ಆ ಕಾಲಕ್ಕೇ ಹೊರಬಂದಿತು. ಪಿಟೀಲು ಚೌಡಯ್ಯ ಮತ್ತು ಆರ್.ಆರ್. ಕೇಶವಮೂರ್ತಿ ಅಂತಹ ದಿಗ್ಗಜರ ಪಕ್ಕವಾದ್ಯವಿತ್ತು. ರಾಮಚಂದ್ರರಯರು ಬೋಧಕರಾಗಿ ಸಹಾ ಅನೇಕರಿಗೆ ವಿದ್ಯಾಭ್ಯಾಸವನ್ನು ಮಾಡಿಸಿದರು.

ರಾಮಚಂದ್ರ ರಾಯರು1977ವರ್ಷದಲ್ಲಿ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ 'ಸಂಗೀತ ಕಲಾರತ್ನ’ ಬಿರುದಿಗೆ ಭಾಜನರಾದರು. ಮೈಸೂರು ಪ್ರದೇಶ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ತ್ಯಾಗರಾಜ ಗಾನಸಭೆಯ `ಕಲಾಭೂಷಣ’ ಮುಂತಾದ ಅನೇಕ ಗೌರವಗಳೂ ಅವರಿಗೆ ಸಂದಿದ್ದವು.

ರಾಮಚಂದ್ರ ರಾಯರು 1985ರ ಜುಲೈ 2ರಂದು ಈ ಲೋಕವನ್ನಗಲಿದರು. ಅವರು ವಾಸವಾಗಿದ್ದ ಬೀದಿಗೆ `ಚಿಂತಲಪಲ್ಲಿ ರಾಮಚಂದ್ರರಾವ್ ರಸ್ತೆ' ಎಂದು ಹೆಸರಿಸಲಾಗಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Great musician Chintalapalli Ramachandra Rao 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ