ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಥಕ್ಕರ್ ಬಾಪಾ


ಥಕ್ಕರ್ ಬಾಪಾ


ಥಕ್ಕರ್ ಬಾಪಾ ದೇಶ ಕಂಡ ಮಹಾನ್  ಸಮಾಜ ಸೇವಕರು. ಅವರ ನಿಜಹೆಸರು ಅಮೃತಲಾಲ್ ಥಕ್ಕರ್.  ಥಕ್ಕರ್ ಬಾಪಾ ಎಂಬುದು ಜನ ಪ್ರೀತಿಯಿಂದ ಕೊಟ್ಟ ಹೆಸರು. ಅವರು ನಿರ್ಗತಿಕರ ಪಿತ ಎಂದು ಪ್ರಸಿದ್ಧರಾದವರು.

ಥಕ್ಕರ್ ಬಾಪಾ 1869ರ ನವೆಂಬರ್ 29ರಂದು ಸೌರಾಷ್ಟ್ರದ ಭಾವನಗರದಲ್ಲಿ ಜನಿಸಿದರು. ತಂದೆ ವಿಠ್ಠಲದಾಸ್ ಥಕ್ಕರ್ (ಠಕ್ಕರ್), ಲೋಹಾಣಾ ಎಂಬ ವರ್ತಕ ಸಮುದಾಯದವರು. ಥಕ್ಕರ್ ಬಾಪಾ ಅವರು ಭಾವನಗರದಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ, ಮೆಟ್ರಿಕ್ ಪರೀಕ್ಷೆಯಲ್ಲಿ (1886) ಆಗಿನ ಭಾವ ನಗರ ಸಂಸ್ಥಾನಕ್ಕೇ ಪ್ರಥಮಸ್ಥಾನ ಗಳಿಸಿ ವಿದ್ಯಾರ್ಥಿವೇತನ ಪಡೆದರು. ಪುಣೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮುಂದುವರಿಸಿ ಎಲ್. ಸಿ. ಇ. ಗಳಿಸಿದರು (1890).

ಥಕ್ಕರ್ ಬಾಪಾ ಕಾಠಿಯಾವಾಡ, ಉಗಾಂಡ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ದಕ್ಷ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಆದರೆ ಕೆಲಸದಲ್ಲಿ ಮನಸ್ಸು ನಿಲ್ಲದೆ ನೌಕರಿಯನ್ನು ಹಲವು ಸಾರಿ ಬದಲಾಯಿಸಿದರು. ಮುಂಬಯಿ ಪೌರಸಭೆಯಲ್ಲಿ ಕೆಲಸಮಾಡುತ್ತಿದ್ದಾಗ ಇವರಿಗೆ ಝಾಡಮಾಲಿಗಳಾಗಿ ದುಡಿಯುವ ಹಲವು ಅಸ್ಪೃಶ್ಯರ ಜೀವನದ ಪರಿಚಯವಾಯಿತು. ಸಮಾಜ ಸೇವೆಯ ಕಡೆಗೇ ಮೊದಲಿನಿಂದಲೂ ಒಲಿದಿದ್ದ ಬಾಪಾ ಅವರು ನೌಕರಿಯನ್ನು ತ್ಯಜಿಸಿ (1914) ಪೂರ್ಣಕಾಲಿಕ ಸಮಾಜ ಸೇವಕರಾದರು.
ಬಾಪಾ ತಮ್ಮ 11-12ನೆಯ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಅನಾರೋಗ್ಯದ ನಿಮಿತ್ತ ಅವರು ತೀರಿಕೊಂಡಾಗ ಬಾಪಾ ಮರುಮದುವೆಯಾದರು. ಆದರೆ ದುರದೃಷ್ಟವಶಾತ್ ಎರಡನೆಯ ಹೆಂಡತಿಯೂ ತೀರಿಕೊಂಡರು. ಇದರಿಂದ ಇವರಿಗೆ ಸಂಸಾರದ ಹೊಣೆ ಕಡಿಮೆಯಾಗಿ ಸಮಾಜಸೇವೆಯ ಕಡೆಗೆ ಹೆಚ್ಚಿನ ಗಮನವೀಯಲು ಅವಕಾಶವಾಯಿತು.

ಮುಂಬಯಿಯಲ್ಲಿದ್ದಾಗಲೇ ಥಕ್ಕರ್ ಅವರಿಗೆ ಗೋಖಲೆಯಿವರ ಪರಿಚಯವಾಗಿತ್ತು. ಇವರು ಗಾಂಧೀಜಿಯವರ ಪ್ರಭಾವಕ್ಕೂ ಒಳಗಾಗಿದ್ದರು. ಕೆಲಸಕ್ಕೆ ರಾಜೀನಾಮೆ ಕೊಟ್ಟ ಇವರು ಗೋಖಲೆಯವರ ಭಾರತ ಸೇವಕ ಸಮಾಜವನ್ನು ಸೇರಿ ಉತ್ತರ ಪ್ರದೇಶದ ಕ್ಷಾಮಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ನೆರವಾಗಲು ಹೋದರು. ತಮ್ಮ ಮುಂದಾಲೋಚನೆ, ಶಿಸ್ತು ಮತ್ತು ಸೇವಾ ಮನೋಭಾವದಿಂದಾಗಿ ಇವರು ಬಲು ಬೇಗ ಜನಪ್ರಿಯರಾದರು. ಮುಂದೆ ಅಸ್ಸಾಮ್, ಗುಜರಾತ್, ಒರಿಸ್ಸ, ಬಂಗಾಲ ಮುಂತಾದ ಪ್ರದೇಶಗಳಲ್ಲಿ ಕ್ಷಾಮಪರಿಹಾರ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದರು.

1919ರಲ್ಲಿ ಜಮ್‍ಷೆಡ್‍ಪುರದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಕಾರ್ಮಿಕರ ಸ್ಥಿತಿಗತಿಗಳನ್ನು ಉತ್ತಮಗೊಳಿಸಲು ನೆರವಾದರು. ಅದೇ ವರ್ಷ ಗುಜರಾತಿನ ಪಂಚಮಹಾಲ್ ಜಿಲ್ಲೆಯ ಭಿಲ್ಲರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ಅವರ ಶೋಚನೀಯ ಸ್ಥಿತಿಯನ್ನು ಅರಿತರು. ಅವರ ಪುರೋಭಿವೃದ್ಧಿಗಾಗಿ ಭಿಲ್ಲ ಸೇವಾ ಮಂಡಲಿಯೊಂದನ್ನು ಸ್ಥಾಪಿಸಿದರು. ಅವರ ಮಧ್ಯದಲ್ಲಿಯೇ ತಾವೂ ಇದ್ದು ಅವರಲ್ಲಿದ್ದ ದುರ್ವ್ಯಸನಗಳನ್ನು ಹೋಗಲಾಡಿಸಿದರು. 1921ರಲ್ಲಿ ಕಾಠಿಯಾವಾಡದಲ್ಲಿ ಖಾದಿ ಗ್ರಾಮೋದ್ಯೋಗದ ಏರ್ಪಾಟು ಮಾಡಿದರು. ಭಾವನಗರ (1926) ಪೋರ್‍ಬಂದರ್ (1928) ಮುಂತಾದ ಕಡೆ ನಡೆದ ಪ್ರಜಾಸಮ್ಮೇಳನಗಳಿಗೆ ಇವರು ಅಧ್ಯಕ್ಷರಾಗಿದ್ದರು.
1932ರಲ್ಲಿ ಇವರು ಹರಿಜನ ಸೇವಕ ಸಂಘದ ಕಾರ್ಯದರ್ಶಿಯಾದರು. ಕಾರ್ಯದರ್ಶಿಯಾದ ವರ್ಷದಲ್ಲೇ ಇವರಿಂದ ಸಂಘದ 22 ಪ್ರಾಂತೀಯ ಹಾಗೂ 170 ಜಿಲ್ಲಾ ಕೇಂದ್ರಗಳು ಸ್ಥಾಪಿತವಾದವು. ಹರಿಜನರ ಏಳಿಗೆಗಾಗಿ 1933-34ರಲ್ಲಿ ಗಾಂಧೀಜಿಯವರ ಜೊತೆ ಪ್ರವಾಸ ಕೈಗೊಂಡರು. 1937ರಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ಅಧಿಕಾರಕ್ಕೆ ಬಂದಾಗ ಇವರು ಹರಿಜನ ಹಾಗೂ ಆದಿವಾಸಿ ಜನರ ಏಳಿಗೆಯ ಹೊಣೆ ಹೊತ್ತರು. ಇವರು ನಡೆಸಿದ ಅಖಿಲ ಭಾರತ ಸಮೀಕ್ಷೆಯನ್ನು ಆಧರಿಸಿಯೇ ಭಾರತದ ಸರ್ಕಾರ 1950ರಲ್ಲಿ ಹರಿಜನ, ಆದಿವಾಸಿ ಮುಂತಾದ ಹಿಂದುಳಿದ ಜನಾಂಗಗಳ ರಕ್ಷಣೆ ಹಾಗೂ ಕಲ್ಯಾಣ ಕಾರ್ಯಗಳಿಗೆ ಕಾನೂನಿನ ಕ್ರಮಗಳನ್ನು ಕೈಗೊಂಡಿತು.

ಥಕ್ಕರ್ ಬಾಪಾ ಅನೇಕ ಸ್ಮಾರಕ ನಿಧಿಗಳ ಸಂಗ್ರಹಣೆಗಾಗಿಯೂ ದುಡಿದರು. ಭಿಲ್ಲರಿಗಾಗಿ ರಚಿಸಿದಂತೆ ಗೋಂಡ್, ಆದಿಮ ಜಾತಿ ಮುಂತಾದವುಗಳಿಗೂ ಇವರು ಮಂಡಲಿಗಳನ್ನು ಸ್ಥಾಪಿಸಿ ಹಿಂದುಳಿದ ಜನಾಂಗಗಳ ಅಭಿವೃದ್ಧಿಗಾಗಿ ದುಡಿದರು. ಇವರ ಹಿರಿತನ ಹಾಗೂ ಸೇವಾಮನೋಭಾವನ್ನು ಮೆಚ್ಚಿ ಜನ ಇವರನ್ನು ಥಕ್ಕರ್ ಬಾಪಾ (ತಂದೆ) ಎಂದು ಕರೆದರು. ಅದೇ ಹೆಸರು ಇವರಿಗೆ ಸ್ಥಿರವಾಯಿತು.

ಥಕ್ಕರ್ ಬಾಪಾ ತಮ್ಮ ಗುರುಗಳೆಂದು ನಾಲ್ಕು ಜನರನ್ನು ಹೆಸರಿಸಿದ್ದಾರೆ. ತಂದೆ ವಿಠಲದಾಸ್ ಇವರ ಪ್ರಥಮ ಗುರು. ಅವರಿಂದ ಪರೋಪಕಾರ ಹಾಗೂ ಸೇವಾವೃತ್ತಿಯನ್ನು ಇವರು ಪಡೆದರು. ವಿಠ್ಠಲ ರಾಮ್‍ಜಿ ಶಿಂಧೆ ಇವರ ಎರಡನೆಯ ಗುರು. ದಲಿತರ ಸೇವೆ ಮಾಡುವುದನ್ನೂ ಶಿಕ್ಷಣಕ್ಕಾಗಿ ಕೆಲಸ ಮಾಡುವುದನ್ನೂ ಅವರ ಹಕ್ಕುಗಳಿಗಾಗಿ ಹೊಡೆದಾಡುವುದನ್ನೂ ಶಿಂಧೆಯವರಿಂದ ಕಲಿತರು. ಗೋಪಾಲಕೃಷ್ಣ ದೇವಧರ್ ಇವರ ಮೂರನೆಯ ಗುರು. ಅವರಿಂದ ಹರಿಜನರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಉಪಾಯಗಳನ್ನು ಕಲಿತರು. ಮಹರ್ಷಿ ಕರ್ವೆ ಇವರ ನಾಲ್ಕನೆಯ ಗುರು. ಸ್ತ್ರೀಶಿಕ್ಷಣದ ಕೆಲಸವನ್ನು ಇವರು ಕಲಿತದ್ದು ಕರ್ವೆಯವರಿಂದ

ಬಾಪಾ ಅವರ 40ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸವಿನೆನಪಿನ ಗ್ರಂಥವೊಂದನ್ನು 1949ರ ನವೆಂಬರ್ 29ರಂದು ಇವರಿಗೆ ಅರ್ಪಿಸಲಾಯಿತು. ಥಕ್ಕರ್ ಬಾಪಾ ಅವರು 1951ರ ಜನವರಿ 19ರಂದು ತೀರಿಕೊಂಡರು.

ಬಾಪಾರವರು ಬರೆದದ್ದು ತೀರ ಕಡಿಮೆ. ಸರ್ವೆಂಟ್ಸ್ ಆಫ್ ಇಂಡಿಯ, ಹರಿಜನ್, ಹಿಂದುಸ್ಥಾನ್ ಟೈಮ್ಸ್ ಮುಂತಾದ ಪತ್ರಿಕೆಗಳಿಗೆ ಕ್ವಚಿತ್ತಾಗಿ ಬರೆದ ಲೇಖನಗಳಿಂದಲೂ ಅವರ ದಿನಚರಿಯ ಪುಟಗಳಿಂದಲೂ 1941ರಲ್ಲಿ ಅವರು ಕೊಟ್ಟ ಕಾಳೆ ಸ್ಮಾರಕ ಉಪನ್ಯಾಸದಿಂದಲೂ ಅವರ 'ಟ್ರೈಬ್ಸ್ ಆಫ್ ಇಂಡಿಯ' ಎಂಬ (1950) ಗ್ರಂಥದಿಂದಲೂ ಬಾಪಾರವರಿಗೆ ಭಾರತದ ಹಿಂದುಳಿದ ಆದಿವಾಸಿ ಜನರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ವ್ಯಕ್ತವಾಗುತ್ತವೆ. ಅವರ ಈ ನಿಃಸ್ವಾರ್ಥ ಗುಣಗಳಿಂದಾಗಿಯೇ ನಿರ್ಗತಿಕರ ಪಿತ ಎಂಬ ಬಿರುದು ಅವರಿಗೆ ದೊರಕಿತು.

On the birth anniversary of great social worker Thakkar Bapa


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ