ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್.ಆರ್.ಚಂದ್ರಶೇಖರ್


 ಎಚ್.  ಆರ್.  ಚಂದ್ರಶೇಖರ್  


ಅಂತರರಾಷ್ಟ್ರೀಯ ಮಟ್ಟದ  ಶ್ರೇಷ್ಠ  ಭೌತಶಾಸ್ತ್ರಜ್ಞರೊಬ್ಬರು,  ಭಾರತೀಯ  ಪುರಾತನ  ಸಾಂಸ್ಕೃತಿಕ  ಮೌಲ್ಯಗಳ  ಕುರಿತಾಗಿಯೂ  ತಮ್ಮ  ಭೌತಶಾಸ್ತ್ರದಲ್ಲಿನ  ಸಾಧನೆಯ  ಮಟ್ಟದ್ದಷ್ಟೇ  ಎತ್ತರದ  ಸಾಧನೆಯನ್ನು  ಮಾಡಿದ್ದಾರೆ  ಎಂದರೆ  ಅಚ್ಚರಿ ಎನಿಸುತ್ತದಲ್ಲವೆ!  ಅಂತಹ  ಸಾಧನೆ  ಮಾಡಿರುವ  ಜೀವಂತ  ನಿದರ್ಶನ ಇಂದಿನ  ಜಗತ್ತಿನಲ್ಲೂ  ಇದ್ದಾರೆ.  ಅವರೇ  ಕನ್ನಡಿಗರಾದ ಡಾ.  ಎಚ್.  ಆರ್.  ಚಂದ್ರಶೇಖರ್.  ಪ್ರಸಿದ್ಧ ಬರಹಗಾರರಾಗಿದ್ದ ಎಚ್. ಆರ್. ರಾಮಕೃಷ್ಣರಾವ್ ಮತ್ತು ನಮ್ಮೆಲ್ಲರ  ಆತ್ಮೀಯರಾದ ಹೊಳಲ್ಕೆರೆ ವೆಂಕಟೇಶ್ Holalkere Venkatesh ಇವರ ಸಹೋದರರು. 

1946ರ ನವೆಂಬರ್ 29ರಂದು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ  ಗ್ರಾಮದಲ್ಲಿ  ಜನಿಸಿದ  ಹೊಳಲ್ಕೆರೆ  ರಂಗರಾವ್  ಚಂದ್ರಶೇಖರ್  ಅವರು,  ತಮ್ಮ  ಶಾಲಾ ವಿದ್ಯಾಭ್ಯಾಸವನ್ನು  ತಮ್ಮ  ಹುಟ್ಟೂರಿನಲ್ಲಿಯೇ  ಪೂರೈಸಿದರು.  ಮುಂದೆ ಚಂದ್ರಶೇಖರ್ ಅವರು  ಬೆಂಗಳೂರಿನ ಶ್ರೀರಾಮಕೃಷ್ಣ  ಸ್ಟೂಡೆಂಟ್ಸ್ ಹೋಮ್ನಲ್ಲಿದ್ದು  ಪಿ.ಯು. ಸಿ ಮತ್ತು  ಬಿ.ಎಸ್.ಸಿ.  ವಿದ್ಯಾಭ್ಯಾಸವನ್ನು   ನ್ಯಾಷನಲ್ ಕಾಲೇಜಿನಲ್ಲಿ  ನೆರವೇರಿಸಿದರು.  ಪ್ರೌಢಶಾಲೆ ಹಾಗೂ  ವಿಶ್ವವಿದ್ಯಾಲಯಗಳಲ್ಲಿ  ಪ್ರಪ್ರಥಮ ಸ್ಥಾನ  ಮತ್ತು  ಚಿನ್ನದ  ಪದಕಗಳನ್ನು ಗಳಿಸಿದ ಚಂದ್ರಶೇಖರ್  1973ರ ವರ್ಷದಲ್ಲಿ ಅಮೆರಿಕ  ಸಂಯುಕ್ತ ಸಂಸ್ಥಾನದ  ಪರ್ಡ್ಯೂ ವಿಶ್ವವಿದ್ಯಾಲಯದಿಂದ  ಭೌತಶಾಸ್ತ್ರದ  ಪಿಎಚ್.ಡಿ. ಪಡೆದರು.  ಅಮೆರಿಕ, ಜರ್ಮನಿ  ಮುಂತಾದ  ದೇಶಗಳಲ್ಲಿ  ಭೌತಶಾಸ್ತ್ರದ  ಸಂಶೋಧನೆ  ನಡೆಸಿ ಖ್ಯಾತರಾದ  ಶ್ರೀಯುತರು   ಈಗ  ಮಿಸ್ಸೋರಿ  ಪ್ರಾಂತ್ಯದ  ವಿಶ್ವವಿದ್ಯಾಲಯದಲ್ಲಿ  ಪ್ರಾಧ್ಯಾಪಕರೂ, ಭೌತಶಾಸ್ತ್ರ ವಿಭಾಗದ  ಅಧ್ಯಕ್ಷರೂ  ಆಗಿದ್ದಾರೆ.  ಹೀಗೆ  ಭೌತಶಾಸ್ತ್ರದಲ್ಲಿ  ಮಹತ್ವದ  ಹೆಜ್ಜೆಗಳನ್ನು  ಹಾಕಿರುವ ಚಂದ್ರಶೇಖರ್  ಅವರಿಗೆ  ಪ್ರತಿಷ್ಠಿತ ‘ಆಲ್ಫ್ರೆಡ್ ಸ್ಲೋನ್’ ಗೌರವವೂ  ಸೇರಿದಂತೆ  ಅನೇಕ  ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಗಳು  ಸಂದಿವೆ.  ವಿಶ್ವಸಂಸ್ಥೆಯ ಒಂದು ವಿಭಾಗದಿಂದಲೂ  ಪ್ರಶಸ್ತಿ ಪಡೆದ ಚಂದ್ರಶೇಖರರು 1993ರ ವರ್ಷದಲ್ಲಿ  ಭಾರತದ  ಪ್ರಸಿದ್ಧ  ಸಂಶೋಧನಾ ಕೇಂದ್ರಗಳಲ್ಲೂ  ತಮ್ಮ  ಸಂಶೋಧನೆಯ  ಸಾರಸತ್ವವನ್ನು  ವಿಸ್ತರಿಸಿದರು.  ಚಂದ್ರಶೇಖರ್  ಅವರು  ಸುಮಾರು ನೂರೈವತ್ತು  ಸಂಶೋಧನಾ  ಪತ್ರಿಕೆಗಳನ್ನೂ,  ಅನೇಕ  ಸಂಶೋಧಕ  ಗ್ರಂಥಗಳಲ್ಲಿ  ವಿಶಿಷ್ಟ  ಅಧ್ಯಾಯಗಳನ್ನೂ ಹಾಗೂ  ಅಂತರರಾಷ್ಟ್ರೀಯ  ಸಂಚಿಕೆಗಳಲ್ಲಿ  ವೈಜ್ಞಾನಿಕ ಮಹತ್ವದ  ಪ್ರಬಂಧಗಳನ್ನೂ  ಪ್ರಕಟಿಸಿದ್ದಾರೆ.   ಶ್ರೀಯುತರು,  ವಿಶ್ವಸಂಸ್ಥೆಯ  ಅಭಿವೃದ್ಧಿ  ಕಾರ್ಯಕ್ರಮಗಳ (United Nations Development Program) ಸಲಹೆಗಾರರಾಗಿಯೂ  ತಮ್ಮ  ಅಮೂಲ್ಯ  ಸೇವೆ  ಸಲ್ಲಿಸಿದ್ದಾರೆ.

ಭೌತವಿಜ್ಞಾನದಲ್ಲಿ  ಮಹತ್ವದ್ದನ್ನು  ಸಾಧಿಸಿ ವಿದೇಶದ  ನೆಲದಲ್ಲಿ ನೆಲೆಸಿದ್ದಾರಾದರೂ,   ಚಂದ್ರಶೇಖರ್ ಅವರು ತಾವು  ಬಾಲ್ಯದಲ್ಲಿ  ಹೊಂದಿದ್ದ  ಕನ್ನಡ ಮತ್ತು  ಭಾರತೀಯ  ಸಾಂಸ್ಕೃತಿಕ  ಒಲವುಗಳಿಗೂ  ನಿರಂತರವಾಗಿ  ನೀರೆರೆದು  ಪೋಷಿಸಿಕೊಂಡು ಬಂದಿದ್ದಾರೆ.    ಚಂದ್ರಶೇಖರ್  ಅವರ ತಂದೆ   ಎಚ್.ವಿ. ರಂಗರಾಯರು ಕನ್ನಡ, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸ್ವಯಂಪರಿಣತಿ ಸಾಧಿಸಿ  ವಿದ್ವತ್ಪ್ರಭೆಯನ್ನು  ಪ್ರಕಾಶಿಸಿದ್ದವರು;  ಅತ್ಯಂತ ದೈವಭಕ್ತರು ಮತ್ತು  ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರಾಗಿದ್ದರು.  ಮರಾಠಿ ಭಾಷೆಯ 'ದಾಸ್ ಬೋಧ್' ನಿಂದ ಹಾಗೂ ಮರಾಠಿ ಮಹಾಭಾರತಗಳಿಂದ ಆಯ್ದ ಕಥಾ ಪ್ರಸಂಗಗಳನ್ನು ಅವರು ತಮ್ಮ ವಠಾರದ ಅಂಗಳದಲ್ಲಿ ಆಸಕ್ತ  ಜನಸ್ತೋಮದ  ಮುಂದೆ  ಪಠಿಸುತ್ತಿದ್ದರು. ಪ್ರತಿದಿನ ಹೊಸಕೆರೆ ಚಿದಂಬರಯ್ಯನವರ 'ಅನುಭವಾಮೃತ'ದಿಂದ ಆಯ್ದ ಪದ್ಯಗಳನ್ನು ಮಕ್ಕಳಿಗೆ ಓದಿ ಹೇಳುತ್ತಿದ್ದರು.  ವೇದಾಂತದಲ್ಲಿಯೂ ಅವರಿಗೆ ಅಪಾರ ಆಸಕ್ತಿ.  ತಾಯಿ ರಾಧಮ್ಮನವರು ಮಹಾಸಾಧ್ವಿ, ಸಂಪ್ರದಾಯಗಳ ಹಾಡುಗಳು  ಅವರಿಗೆ  ಅಪಾರವಾಗಿ  ಒಲಿದಿದ್ದವು.   ಈ ಮನೆಯಲ್ಲಿನ  ಕಪಾಟಿನಲ್ಲಿ  ಬಿ.ಎಂ.ಶ್ರೀಕಂಠಯ್ಯ, ಎ. ಆರ್. ಕೃಷ್ಣಶಾಸ್ತ್ರಿ, ಡಿ.ವಿ.ಜಿ.  ರವೀಂದ್ರನಾಥ ಠಾಕೂರ್, ಶರಶ್ಚಂದ್ರ ಚಟರ್ಜಿ, ಗಳಗನಾಥ, ಶಿವರಾಮ ಕಾರಂತ, ವಿ. ಸೀತಾರಾಮಯ್ಯ,  ಅ.ನ.ಕೃ, ತ.ರಾ.ಸು, ಕೆ.ವಿ.ಅಯ್ಯರ್, ಕೈಲಾಸಂ ಹೀಗೆ  ಸಮಸ್ತ  ಸಾಹಿತಿಗಳ  ಕೃತಿಗಳೂ ತುಂಬಿ ತುಳುಕುತ್ತಿದ್ದವು.  ಹೀಗೆ  ಸಾಂಸ್ಕೃತಿಕ ಸಾಹಿತ್ಯ  ಪರಿಸರದಲ್ಲಿ  ಬೆಳೆದ  ಬಾಲಕ  ಚಂದ್ರಶೇಖರ್  ಇವೆಲ್ಲವುಗಳ  ಸಾರವನ್ನು  ತಮ್ಮ  ವ್ಯಕ್ತಿತ್ವದಲ್ಲಿ  ಅಂತರ್ಗತವಾಗಿಸಿಕೊಂಡು  ಬೆಳೆಯತೊಡಗಿದ್ದರು.  ಇನ್ನೂ 8ನೇ ವಯಸ್ಸಿನಲ್ಲಿಯೇ, ‘ಭಗವದ್ಗೀತೆ’ಯನ್ನು  ಕಂಠ-ಪಾಠಮಾಡಿ ನಿರರ್ಗಳವಾಗಿ ವಾಚನಮಾಡುತ್ತಿದ್ದ ಅದಮ್ಯಶಕ್ತಿ  ಅವರಲ್ಲಿ  ಮೊಳೆತಿತ್ತು. ಹೀಗೆ  ಬೆಳೆದ  ಚಂದ್ರಶೇಖರ್  ತಮ್ಮ  ವ್ಯಾಸಂಗದ  ಜೊತೆ ಜೊತೆಗೆ   ಬಾಲ್ಯದಿಂದಲೂ ಕನ್ನಡ ಭಾಷೆಯಲ್ಲಿ ಕಥೆ, ಕವನ, ಕಾದಂಬರಿ, ಪುರಾಣ, ಮಹಾಕಾವ್ಯಗಳನ್ನು ಅಭ್ಯಯಿಸಿ ತಾವೂ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರಹಗಳನ್ನು  ಪ್ರಕಟಿಸುತ್ತಾ ಬಂದಿದ್ದಾರೆ.   

ಚಂದ್ರಶೇಖರ್ ಅವರಿಗೆ  ಭೌತಶಾಸ್ತ್ರ  ಹೃದಯಕ್ಕೆ ಹತ್ತಿರವಿರುವಂತೆಯೇ ಭಾರತೀಯ ಸಂಗೀತ, ನೃತ್ಯ, ಸಾಹಿತ್ಯ, ನಾಟಕ, ಇತಿಹಾಸ, ಕ್ರಿಕೆಟ್, ಲಾನ್ ಟೆನ್ನಿಸ್ ಹೀಗೆ  ವಿವಿಧ  ಶಾಖೆಗಳಲ್ಲಿ    ಆಸಕ್ತಿಗಳು ವ್ಯಾಪಿಸಿವೆ.  ಈ  ಆಸಕ್ತಿಗಳನ್ನು  ಅವರು  ತಾವಿರುವ  ಅಮೆರಿಕದಲ್ಲೂ  ವ್ಯಾಪಿಸಿದ್ದಾರೆ. ಚಂದ್ರಶೇಖರ್  ಅವರ  ಅಂತರ್ಜಾಲ ತಾಣವಾದ  http://web.missouri.edu/~chandrasekharh ಕಂಡರೆ  ಅಲ್ಲಿರುವ ಭೌತಶಾಸ್ತ್ರ  ಅಧ್ಯಯನ  ಸಾಧನೆಗಳ  ಜೊತೆ ಜೊತೆಗೆ  ಕನ್ನಡದ  ಗಣಿಯನ್ನು  ಕಂಡು  ಅಚ್ಚರಿ ಹುಟ್ಟುತ್ತದೆ.  ಅಲ್ಲಿ  ದಾಸರ ಪದಗಳು, ಭಾವಗೀತೆಗಳು, ಜನಪದ ಗೀತೆಗಳು, ಒಗಟುಗಳು, ಸರ್ವಜ್ಞ ವಚನಗಳು, ಹಾಸ್ಯ, ಕನ್ನಡ  ಸಂಗೀತ ಲೋಕ, ನಮ್ಮ  ಕರ್ನಾಟಕ, ಕರ್ನಾಟಕದ ಕುರಿತಾದ  ಪ್ರಾತ್ಯಕ್ಷಿಕೆ, ಭರತ ನಾಟ್ಯ  ಇವುಗಳೆಲ್ಲದರ  ರಸದೌತಣವಿದೆ.   ಇದು  ವಿಜ್ಞಾನಿಯೊಬ್ಬರ  ಮನಮುಟ್ಟುವ  ಕನ್ನಡ  ಮತ್ತು  ಭಾರತೀಯ  ಸಂಸ್ಕೃತಿಗಳ  ಮೇಲಿನ  ಪ್ರೀತಿಯ ದ್ಯೋತಕದಂತಿದೆ.  

ಅಮೆರಿಕದ  ಮಿಸ್ಸೋರಿ ರಾಜ್ಯದ  ಕೊಲಂಬಿಯಾ ಪ್ರಾಂತ್ಯದಲ್ಲಿನ  ‘ಶಾಂತಿಮಂದಿರ್’ ಭಾರತೀಯ ಆಧ್ಯಾತ್ಮಿಕ,  ಸಾಂಸ್ಕೃತಿಕ ಮತ್ತು  ಕ್ರೀಡಾ ವೈವಿಧ್ಯ ಮನೋಭಾವನೆಗಳ  ಕೇಂದ್ರವಾಗಿದ್ದು  ಇದು  ತನ್ನದೇ ಆದ  ದೇಗುಲ  ಮತ್ತು  ಸಾಂಸ್ಕೃತಿಕ ಭವನಗಳನ್ನೂ  ಹೊಂದಿದೆ.  ಇದರ  ಸಂಸ್ಥಾಪನೆಯಿಂದ  ಮೊದಲುಗೊಂಡಂತೆ, ಮುಂದಿನ     ಪ್ರಗತಿ ಮತ್ತು  ಕಾರ್ಯನಿರ್ವಹಣಾ  ನಿರ್ದೇಶನದಲ್ಲಿ ಒಟ್ಟುಗೂಡಿದ  ಭಾರತೀಯ  ಕುಟುಂಬಗಳಲ್ಲಿ  ಚಂದ್ರಶೇಖರ್  ಮತ್ತು  ಅವರ  ಕುಟುಂಬದವರ ಭಾಗವಹಿಕೆಯೂ   ಮಹತ್ವದ್ದಾಗಿವೆ.      

ಭಾರತೀಯ  ಸಾಂಸ್ಕೃತಿಕ  ಲೋಕಕ್ಕೆ  ಚಂದ್ರಶೇಖರ್ ಗಣನೀಯವಾದ  ಪ್ರಥಮ  ಸಾಹಿತ್ಯ  ಕೊಡುಗೆ ಎಂದರೆ  ವಿದೇಶದಲ್ಲಿ  ನೆಲೆಸಿರುವ  ಭಾರತೀಯರಲ್ಲಿ,  ಭಾರತೀಯ  ಸಂಸ್ಕೃತಿಯನ್ನು  ಚಿರಂತನಗೊಳಿಸುವತ್ತ  ಗಮನವಿಟ್ಟು,    2001ರ ವರ್ಷದಲ್ಲಿ  ಇಂಗ್ಲಿಷಿನಲ್ಲಿ ಅವರು  ಪ್ರಕಟಿಸಿರುವ ಕೃತಿ  ‘Tales from Indian Epics’.  ಇದು  ಭಾರತೀಯರನ್ನಷ್ಟೇ ಅಲ್ಲದೆ ಭಾರತೀಯ ಸಂಸ್ಕೃತಿಯ  ಕುರಿತಾದ ಪೌರಾಣಿಕ  ಕಥಾನಕಗಳನ್ನರಿಯಬಯಸುವ  ಸಕಲರಿಗೂ  ಆಕರ್ಷಕವೆನಿಸಿದ್ದು  ಬಹುಜನಪ್ರಿಯವೆನಿಸಿದೆ.    

ಚಂದ್ರಶೇಖರ್ ಅವರ  ಮಹತ್ವದ  ಕೊಡುಗೆಯೆಂದೇ ಕನ್ನಡ  ಸಾಂಸ್ಕೃತಿಕ ಮತ್ತು  ವಿದ್ವಾಂಸ ಲೋಕದಲ್ಲಿ  ಕೊಂಡಾಡಲ್ಪಟ್ಟಿರುವುದು  ಅವರ  ಕೊಡುಗೆಯಾದ  ಎರಡು  ಬೃಹತ್  ಸಂಪುಟಗಳ  ‘ಕರ್ಣಾಟಕ ಭಾಗವತ’.  ಚಂದ್ರಶೇಖರ್ ಅವರ  ಮೂಲ ನೆಲೆಯಾದ  ಹೊಳಲ್ಕೆರೆ  ಗ್ರಾಮದ  ಅವರ  ಪುರಾತನ  ಕಾಲದ  ಮನೆಯಲ್ಲಿ ಹದಿನಾರನೇ ಶತಮಾನದ   'ನಿತ್ಯಾತ್ಮ ಶುಕಯೋಗಿ'  ವಿರಚಿತ ಕನ್ನಡ ಭಾಗವತ ಮಹಾಕಾವ್ಯವನ್ನು ಅವರ ವಂಶದ ಪೂರ್ವಿಕರಾದ 'ಶ್ರೀ ರಾಮಣ್ಣಯ್ಯವರು' ಕ್ರಿ.ಶ. 1755ರಲ್ಲಿ ತಾಳೆಗರಿಯಲ್ಲಿ ಬರೆದಿದ್ದರು.  ಈ ಗ್ರಂಥದ  ಇರುವಿಕೆಯ ಬಗ್ಗೆಯೂ  ಚಂದ್ರಶೇಖರ್ ಅವರಿಗೆ ಸರಿಯಾಗಿ ಗೊತ್ತಿರಲಿಲ್ಲ. 1991ರ ವರ್ಷದಲ್ಲಿ ಅಂತರರಾಷ್ಟ್ರೀಯ ಭೌತವಿಜ್ಞಾನ ಸಮ್ಮೆಳನವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ಚಂದ್ರಶೇಖರ್ ಅವರಿಗೆ ಈ ಬೃಹದ್ಗ್ರಂಥವು ತಮ್ಮ  ಚಿಕ್ಕಪ್ಪನವರ ಮನೆಯ ದೇವರ ಕೋಣೆಯಲ್ಲಿ ಪೂಜಿಸಲ್ಪಡುತ್ತಿದ್ದುದು  ತಿಳಿದು ಬಂತು.  ನಮ್ಮ ಭಾರತದೇಶದ ಪುರಾತನ ಸಂಸ್ಕೃತಿಯ ಕುರುಹಾದ ಈ  ಗ್ರಂಥವನ್ನು ನೋಡಿದೊಡನೆಯೇ, ಅದನ್ನು ಪರಿಷ್ಕರಿಸಿ ನವೀನ ರೀತಿಯ ಮುದ್ರಣದಲ್ಲಿ ತರುವ ಉತ್ಕಟವಾದ ಆಕಾಂಕ್ಷೆಗಳು ಚಂದ್ರಶೇಖರರಲ್ಲಿ ಸ್ಪುರಿಸಿದವು.  232 ತಾಳೆಗರಿಗಳ ಚಿಕ್ಕ ಅಕ್ಷರಗಳಲ್ಲಿ ಬರೆದ ಸುಮಾರು 12884  ಭಾಮಿನಿ ಷಟ್ಪದಿಯ ಪದ್ಯಗಳನ್ನು ಪರಿಷ್ಕರಿಸುವ  ಕಾರ್ಯವನ್ನು  1992ರ  ವರ್ಷದಿಂದ  ಪ್ರಾರಂಭಿಸಿದ ಚಂದ್ರಶೇಖರರು 2008ರ ವರೆಗಿನ  ವರುಷದವರೆಗಿನ 16 ವರ್ಷಗಳ  ಸುದೀರ್ಘ ಅವಧಿಯ ಕಾಲದವರೆಗೆ  ಓರ್ವ ಶ್ರದ್ಧಾವಂತ  ಲಿಪಿಕಾರರಾಗಿ,  ಅನುವಾದಕರಾಗಿ ಮತ್ತು  ಸಂಪಾದಕರಾಗಿ  ಎರಡು ಸಮೃದ್ಧ  ಸೊಗಸಾದ ಸಂಪುಟಗಳ   ‘ಕರ್ಣಾಟಕ ಭಾಗವತ’ ಕೃತಿಗಳು ಕನ್ನಡದಲ್ಲಿ  ವಿಶ್ವಕ್ಕೆ  ದೊರಕುವಂತಹ  ಮಹತ್ಕಾರ್ಯವನ್ನು  ಮಾಡಿದ್ದಾರೆ.  12884 ಪದ್ಯಗಳು 12 ಸ್ಕಂದಗಳಲ್ಲಿ  ಈ ಕೃತಿಯಲ್ಲಿ  ಪ್ರಸ್ತುತಗೊಂಡಿರುವುದರ ಜೊತೆಗೆ, ಮೂಲ  ತಾಳೆಗರಿಗಳ  ವರ್ಣಪ್ರತಿಗಳನ್ನೂ, ಇಂಗ್ಲಿಷ್ ಅನುವಾದವನ್ನೂ ಜೊತೆಗೆ ಸಂಗ್ರಹರೂಪದ  ಶಬ್ದಕೋಶವನ್ನೂ  ಓದುಗರ  ಆಪ್ತತೆಗೆ  ದೊರಕುವಂತೆ  ಮಾಡಲಾಗಿದೆ.  ಈ  'ಕರ್ಣಾಟಕ ಭಾಗವತ' ಕೃತಿ ಪರಿಶೋಧನೆಯ ಕಾರ್ಯದಲ್ಲಿ  ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರ ನೇತೃತ್ವದಲ್ಲಿ ವಿದ್ವಾಂಸರಾದ   ಜಿ. ಜಿ. ಮಂಜುನಾಥನ್, ಎಚ್. ಎಸ್.ಹರಿಶಂಕರ್ Harishankar H S, ಟಿ.ಎನ್.ನಾಗರತ್ನ, ವೈ.ಸಿ.ಭಾನುಮತಿ, ಶಿಕಾರಿಪುರ ಹರಿಹರೇಶ್ವರ, ಎಚ್. ಆರ್. ರಾಮಕೃಷ್ಣ ರಾವ್ ಮುಂತಾದ ಗಣ್ಯರನ್ನೊಳಗೊಂಡ  ಸಮಿತಿಯ  ಸಲಹೆಗಳನ್ನೂ ಪಡೆದ  ಚಂದ್ರಶೇಖರ್  ಅವರು  ‘ಕರ್ಣಾಟಕ  ಭಾಗವತ’ ಕೃತಿಯು  ಶ್ರೇಷ್ಠ ಮಟ್ಟದಲ್ಲಿ  ಹೊರಹೊಮ್ಮುವುದನ್ನು ದೃಢೀಕರಿಸಿಕೊಂಡಿದ್ದಾರೆ.  ಹೀಗೆ  ಮೂಡಿಬಂದ  ಈ ಕೃತಿ  2008ರ ವರ್ಷದಲ್ಲಿ  ‘’ಹೂಸ್ಟನ್ ಕನ್ನಡ ವೃಂದ’ದ ಆಶ್ರಯದಲ್ಲಿ  ಲೋಕಾರ್ಪಣೆಗೊಂಡು ಈ  ಸಂಬಂಧಿತವಾದ ಸಾಂಸ್ಕೃತಿಕ ಸಮಾರಂಭಗಳು ಗಣ್ಯರ  ಸಮ್ಮುಖದಲ್ಲಿ ಶಿವಮೊಗ್ಗ, ಧಾರವಾಡ, ಮೈಸೂರು, ಬೆಂಗಳೂರುಗಳಲ್ಲೂ  ನಡೆದವು.  

ಮೇಲ್ಕಂಡ  ಕಾರ್ಯಗಳಲ್ಲದೆ ‘ಚಂದ್ರ ಪಬ್ಲಿಕೇಷನ್ ಎಲ್.ಎಲ್.ಸಿ’ ಎಂಬುದು ಚಂದ್ರಶೇಖರ್ ಅವರ  ಕುಟುಂಬವು ಸ್ಥಾಪಿಸಿರುವ  ಪ್ರಕಟಣಾ  ಸಂಸ್ಥೆಯಾಗಿದ್ದು  ಮೌಲ್ಯಯುತವಾದ ಪ್ರಕಟಣೆಗಳಿಗೆ  ಹೆಸರಾಗಿದೆ. ಹಲವಾರು ವಿದ್ಯಾವರ್ಧಕ,  ಜ್ಞಾನಬೋಧಕ, ಹಾಗೂ ಮಕ್ಕಳಿಗಾಗಿಯೇ ವಿಶೇಷ ಆಸ್ತೆಯಿಂದ ರಚಿಸಿದ ಪುಸ್ತಕಗಳ ಆವೃತ್ತಿಗಳನ್ನು ಪ್ರಕಾಶಗೊಳಿಸಿದ ಶ್ರೇಯಸ್ಸು ಈ ಸಂಸ್ಥೆಯದ್ದಾಗಿದೆ. 
  
ಹೀಗೆ ವಿದೇಶದಲ್ಲಿ  ನೆಲೆಸಿದ್ದೂ,  ತಮ್ಮ  ವೃತ್ತಿ ಕ್ಷೇತ್ರವಾದ  ವಿಜ್ಞಾನವೇ  ಅಲ್ಲದೆ ವಿವಿಧ  ಸಾಂಸ್ಕೃತಿಕ ಮತ್ತು  ಕನ್ನಡಪರ  ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ  ಡಾ.  ಎಚ್. ಆರ್.  ಚಂದ್ರಶೇಖರ್ ಮತ್ತವರ  ಕುಟುಂಬವರ್ಗದವರ ವಿಫುಲ ಕಾರ್ಯಚಟುವಟಿಕೆಗಳ   ಕುರಿತಾದ ವಿವರಗಳು  ಅಂತರ್ಜಾಲದಲ್ಲಿ  ಬಹಳಷ್ಟು   ಲಭ್ಯವಾಗುವಂತಿವೆ.  ಹೀಗೆ ನಮ್ಮ  ಭಾಷೆ  ಮತ್ತು  ಸಾಂಸ್ಕೃತಿಕ  ಒಲವುಗಳನ್ನು  ಲೋಕದಲ್ಲಿ  ಪ್ರೇರೇಪಿಸುವತ್ತ  ಮಹತ್ವದ  ಕೆಲಸ  ಮಾಡುತ್ತಿರುವ  ಚಂದ್ರಶೇಖರ್ ಹಾಗೂ    ಅವರ ಕುಟುಂಬವನ್ನೊಳಗೊಂಡ ಅವರ   ಪತ್ನಿ  ಮೀರಾ ಚಂದ್ರಶೇಖರ್  ಮತ್ತು  ಸುಪುತ್ರಿಯರಾದ  ತಾರಾ, ರಜನಿ ಮತ್ತು ಇಂದು ಅವರಿಗೆ  ಧನ್ಯತಾಪೂರ್ವಕವಾದ  ಮೆಚ್ಚುಗೆಗಳನ್ನು  ಸಲ್ಲಿಸೋಣ.  ಇವರ ಸಹೋದರರಾದ ದಿವಂಗತ ಎಚ್. ಆರ್. ರಾಮಕೃಷ್ಣರಾವ್ ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಅಮೂಲ್ಯ ಸೇವೆ ಸಲ್ಲಿಸಿದವರು.  ಮತ್ತೊಬ್ಬ ಸಹೋದರರಾದ ಹೊಳಲ್ಕೆರೆ ವೆಂಕಟೇಶ್ ಅವರು ಮುಂಬೈನಲ್ಲಿದ್ದರೂ ಅಪಾರ ಕನ್ನಡ ಕಾಳಜಿಗಳುಳ್ಳ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.


On the birth day of great physicist of International fame  with great heart for Indian Cultural and Literary values Dr. Holalkere Chandrasekhar, Chandrashekhar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ