ಜಿ. ಎಸ್. ಸರ್‍ದೇಸಾಯಿ
ಗೋವಿಂದ ಸಖಾರಾಮ್ ಸರ್‍ದೇಸಾಯಿ
ಗೋವಿಂದ ಸಖಾರಾಮ್ ಸರ್‍ದೇಸಾಯಿ ಭಾರತೀಯ ಇತಿಹಾಸಕಾರರಾಗಿ ಪ್ರಸಿದ್ಧರು. ಇಂದು ಅವರ ಸಂಸ್ಮರಣಾ ದಿನ.
ಗೋವಿಂದ ಸಖಾರಾಮ್ ಸರ್‍ದೇಸಾಯಿ ಅವರು ಮಹಾರಾಷ್ಟ್ರದ ರತ್ನಗಿರಿಯಲ್ಲಿ 1865ರ ಮೇ 17ರಂದು ಜನಿಸಿದರು. ಪುಣೆ ಹಾಗೂ ಮುಂಬಯಿಯಲ್ಲಿ ಪದವಿ ಶಿಕ್ಷಣ ಪಡೆದು 1889ರಲ್ಲಿ ಬರೋಡ ಸಂಸ್ಥಾನದಲ್ಲಿ ವೃತ್ತಿಜೀವನ ಆರಂಭಿಸಿದರು. ಜೊತೆಗೆ ಮಹಾರಾಜ 3ನೆಯ ಸಯಾಜಿರಾವ್ ಗಾಯಕವಾಡರ ಖಾಸಗಿ ಗುಮಾಸ್ತರೂ ಆಗಿದ್ದರು. ಅನಂತರ ರಾಜಮನೆತನದ ಮಕ್ಕಳಿಗೆ ಖಾಸಗಿ ಬೋಧಕರಾಗಿ ನೇಮಿಸಲ್ಪಟ್ಟರು. ಇತಿಹಾಸದಲ್ಲಿ ಇವರಿಗೆ ಆಸಕ್ತಿ ಬೆಳೆಯಲು ಕಾರಣ ಮಕ್ಕಳಿಗೆ ಇವರು ಹೇಳುತ್ತಿದ್ದ ಮನೆಪಾಠ. ಮುಂದೆ ಮಹಾರಾಜರ ಪ್ರೋತ್ಸಾಹದಿಂದ ಹಾಗೂ ರಾಜಗ್ರಂಥಾಲಯದಲ್ಲಿ ಲಭ್ಯವಿದ್ದ ನೂರಾರು ಚಾರಿತ್ರಿಕ ಪುಸ್ತಕಗಳ ನೆರವಿನಿಂದ ಮರಾಠಿಯಲ್ಲಿ ಹಲವು ಕೃತಿಗಳನ್ನು ರಚಿಸಿದರು.
ಮರಾಠಿ ರಿಯಾಸತ್ (8 ಸಂಪುಟ), ಮುಸಲ್ಮಾನಿ ರಿಯಾಸತ್ (3 ಸಂಪುಟ) ಹಾಗೂ ಬ್ರಿಟಿಷ್ ರಿಯಾಸತ್ (2 ಸಂಪುಟ) ಸಂಪುಟಗಳಲ್ಲಿ ಭಾರತದ 1000 ವರ್ಷಗಳ ಇತಿಹಾಸವನ್ನು ನಿರೂಪಿಸಿರುವುದು ಗೋವಿಂದ ಸಖಾರಾಮರ ಸಾಧನೆ.
ಸಖಾರಾಮರು 1925ರಲ್ಲಿ ನಿವೃತ್ತರಾದ ಅನಂತರ ಮುಂಬಯಿ ಸರ್ಕಾರದ ಕೋರಿಕೆಯ ಮೇರೆಗೆ ರಾಜ್ಯ ದಾಖಲೆಗಳನ್ನು ಸಂಪಾದಿಸುವ ಕಾರ್ಯ ಕೈಗೊಂಡರು. ಮೋಡಿ, ಮರಾಠಿ, ಇಂಗ್ಲಿಷ್, ಪಾರ್ಸಿ ಹಾಗೂ ಗುಜರಾತಿ ಭಾಷೆಗಳಲ್ಲಿರುವ ಸುಮಾರು 34,972 ದಾಖಲೆಗಳನ್ನು ಸಂಗ್ರಹಿಸಿ ಈ ಪೈಕಿ 8,650 ದಾಖಲೆಗಳನ್ನು ಪೇಶ್ವ ದಫ್ತಾರ್ ಎಂಬ ಶೀರ್ಷಿಕೆಯಲ್ಲಿ 45 ಸಂಪುಟಗಳಲ್ಲಿ ಪ್ರಕಟಿಸಿದರು. ಮತ್ತಷ್ಟು ದಾಖಲೆಗಳನ್ನು ಸರ್ಕಾರದಿಂದಿಗೆ ಪೂನಾ ರೆಸಿಡೆನ್ಸಿ ಕರೆಸ್ಪಾಂಡೆನ್ಸ್ ಎಂಬ ಶೀರ್ಷಿಕೆಯಲ್ಲಿ ಸಂಪಾದಿಸಿದರು. 80ರ ಇಳಿವಯಸ್ಸಿನಲ್ಲಿ ಇವರು ಪ್ರಕಟಿಸಿದ ದಿ ನ್ಯೂ ಹಿಸ್ಟರಿ ಆಫ್ ಮರಾಠಾಸ್ನ 3 ಸಂಪುಟಗಳು ಮರಾಠ ಇತಿಹಾಸದ ಆಕರಗ್ರಂಥಗಳಾಗಿವೆ.
ಗೋವಿಂದ ಸಖಾರಾಮ್ ಸರ್‍ದೇಸಾಯಿ ಅವರಿಗೆ ರಾವ್ ಬಹಾದ್ದೂರ್ (1937) ಹಾಗೂ ಇತಿಹಾಸ ಮಾರ್ತಾಂಡ್ (1946) ಎಂಬ ಬಿರುದುಗಳು ಪ್ರಾಪ್ತವಾಗಿದ್ದವು. ಪುಣೆ ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತ್ತು (1951). ಭಾರತ ಸರ್ಕಾರವು 1957ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.
ಗೋವಿಂದ ಸಖಾರಾಮ್ ಸರ್‍ದೇಸಾಯಿ ಅವರು 1959ರ ನವೆಂಬರ್ 29ರಂದು ನಿಧನರಾದರು.
Great historian Govind Sakharam Sardesai
ಕಾಮೆಂಟ್‌ಗಳು