ಸಿದ್ಧಲಿಂಗ ಪಟ್ಟಣಶೆಟ್ಟಿ
ಹಿರಿಯ ಸಾಹಿತಿಗಳಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಕಾವ್ಯವನ್ನು ಪ್ರೀತಿಸುತ್ತ, ಧ್ಯಾನಿಸುತ್ತ, ಆರಾಧಿಸುತ್ತ, ರಚಿಸುತ್ತಾ ಬಂದವರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು 1939ರ ನವೆಂಬರ್ 3ರಂದು ಯಾದವಾಡ ಗ್ರಾಮದಲ್ಲಿ ಜನಿಸಿದರು. ತಂದೆ ಬಸೆಟ್ಟಪ್ಪ. ತಾಯಿ ಗಿರಿಜವ್ವ. ಇನ್ನೂ 1-2 ವರ್ಷದ ಬಾಲ್ಯದಲ್ಲಿ ಇರುವಾಗಲೇ ಅಪ್ಪ ತೀರಿಕೊಂಡರು. ಅವ್ವ ಗಿರಿಜವ್ವ ಕೂಲಿ-ನಾಲಿ ಮಾಡಿ, ತಾನು ಉಪವಾಸ ಇದ್ದು, ಮಗನಿಗೆ ಉಣಿಸಿದಳು. ಅಂದಿನ ಕಷ್ಟದ ದಿನಗಳನ್ನು ಈಗಲೂ ನೆನೆಯುವ ಗುಣ ಅವರನ್ನು ಭಾವುಕರನ್ನಾಗಿಸಿದೆ. "ಅಭಾವ, ಅಪಮಾನ, ಆಘಾತ, ತಾತ್ಸಾರ ಮುಂತಾದುವು ಕಾವ್ಯಪೋಷಕ ದ್ರವ್ಯಗಳೇ. ಅವು ನನ್ನನ್ನು ಬೆಳೆಸಿವೆ" ಎನ್ನುತ್ತಾರೆ.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪ್ರಾರಂಭಿಕ ಶಿಕ್ಷಣ ಮನಗಂಡಿಯಲ್ಲಿ ನಡೆದು ಮುಂದೆ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ನಡೆಯಿತು. ಹೈಸ್ಕೂಲಿನಲ್ಲಿ ಹಿಂದಿಯಲ್ಲಿ ಅನುತ್ತೀರ್ಣರಾದಾಗ ಹಿಂದಿ ಕಲಿಯಬೇಕೆಂಬ ಛಲ ಮೂಡಿತು. 1958ರಲ್ಲಿ, ಹಿಂದಿ ಶಿಕ್ಷಕ್ ಸನದ್‌ನಲ್ಲಿ ಮುಂಬಯಿ ರಾಜ್ಯಕ್ಕೇ ಮೊದಲಿಗರಾಗಿ ಉತ್ತೀರ್ಣರಾದ ಹೆಗ್ಗಳಿಕೆ ಇವರದು. ಸರ್ಕಾರ ನೀಡುವ ಮೆರಿಟ್ ಸ್ಕಾಲರ್‌ಶಿಪ್ ಜೊತೆಗೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ, ತಾವೂ ಕಲಿಯುತ್ತಾ ಬಿ.ಎ. (ಆನರ್ಸ್) ಪದವಿ ಮತ್ತು ಎಂ.ಎ. ಪದವಿಗಳನ್ನು ಪ್ರಥಮ ರ್‍ಯಾಂಕ್ ಸಾಧನೆಯೊಂದಿಗೆ ಪಡೆದರು. "ಮೋಹನ್ ರಾಕೇಶ್ ಔರ್ ಗಿರೀಶ್ ಕಾರ್ನಾಡ್ ನಾಟಕ್ : ಏಕ್ ತುಲನಾತ್ಮಕ್ ಅಧ್ಯಯನ್” ಎಂಬ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಗಳಿಸಿದರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಅಧ್ಯಾಪಕರಾಗಿ 1965 ವರ್ಷದಲ್ಲಿ ಸಿರ್ಸಿ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದರು. ನಂತರ ಧಾರವಾಡದ ಕರ್ನಾಟಕ ಕಲಾ ಮಹಾ ವಿದ್ಯಾಲಯದಲ್ಲಿ ಹಿಂದಿ ಅಧ್ಯಾಪಕರಾಗಿ, ರೀಡರ್ ಆಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರೊಫೆಸರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಕನ್ನಡದ ಪಾಟಿಯ ಮೇಲೆ ಹಿಂದಿಯ ನಾಗರಿ ಮತ್ತು ಇತರ ಲಿಪಿಗಳನ್ನು ಮೂಡಿಸಿದವರು. ಬಾಲ್ಯದಿಂದಲೂ ಬಹುಭಾಷೆಗಳನ್ನು ಓದುವ, ಕೇಳುವ, ತಿಳಿಯುವ ಹುಚ್ಚು ಇವರದ್ದಾಗಿತ್ತು. ಅದಕ್ಕೆ ಬಹುಭಾಷಿಕ ಗೆಳೆಯರು ಮತ್ತು ಶಿಕ್ಷಕರ ಪ್ರೇಮವೂ ಕಾರಣ. ಹೈಸ್ಕೂಲಿನಲ್ಲಿದ್ದಾಗಲೇ ಇಂಗ್ಲಿಷ್ ಜೊತೆಗೆ ಜರ್ಮನ್, ಅರ್ಧಮಾಗಧಿ, ಸಂಸ್ಕೃತ, ಹಿಂದಿ, ಸ್ವಲ್ಪ ಮರಾಠಿ ಒಡನಾಟ ಹೊಂದಿದ್ದರು. ಈಗಾಗಲೇ ಹೇಳಿದ ಹಾಗೆ ಹೈಸ್ಕೂಲಿಗೆ ಬಂದ ಹೊಸತರಲ್ಲಿ ಕಡ್ಡಾಯವಾಗಿದ್ದ ಹಿಂದಿಯಲ್ಲಿ ನಪಾಸಾಗಿದ್ದರು. ತನ್ನನ್ನು ಅವಮಾನಿಸಿದ ಹಿಂದಿಯನ್ನು ಗೆಲ್ಲಲು ಹೋಗಿ, ಹಠದಿಂದ ಹೆಚ್ಚು ಹಿಂದಿ ಕಲಿತು, ಓದಿದರು. ಕೊನೆಗೆ ಹಿಂದಿಯನ್ನು ಪ್ರೀತಿಸತೊಡಗಿದರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬಿ.ವಿ. ಕಾರಂತರ ಒತ್ತಾಯದಿಂದಾಗಿ, ಮೋಹನ್ ರಾಕೇಶ್ ಅವರ ‘ಆಷಾಢದ ಒಂದು ದಿನ’ ಅನುವಾದಿಸಿ ಕೊಟ್ಟರು. ಅಂದಿನಿಂದ ಹಲವರ ಪ್ರೀತಿ, ಒತ್ತಾಯ, ಆಗ್ರಹಗಳಿಗೆ ಮಣಿದು ಹಿಂದಿ ಹಾಗೂ ಇತರ ಭಾಷೆಗಳ ಅನೇಕ ನಾಟಕಗಳನ್ನು, ಇತರ ಕೃತಿಗಳನ್ನು ಕನ್ನಡಿಸಿದರು. ಅಂತೆಯೇ ಕನ್ನಡದ ಅನೇಕ ಕೃತಿಗಳನ್ನು ಹಿಂದಿಗೆ ತಂದರು.
"ನಮ್ಮ ನಾಡಿನಲ್ಲಿಯೇ ಉತ್ತರ ಕರ್ನಾಟಕದಲ್ಲಿ ಹಿಂದಿ ಎಂದೂ ಸಮಸ್ಯೆಯಾಗಲೇ ಇಲ್ಲ. ನಮ್ಮ ದೇಶದಲ್ಲಿ ಅಘೋಷಿತವಾಗಿ, ಇಂಗ್ಲಿಷ್ ಅಲ್ಲ, ಹಿಂದಿಯೇ ಜನತೆಯ ಸಂಪರ್ಕ ಭಾಷೆಯಾಗಿದೆ. ಮೊಘಲರ ಆಡಳಿತದ ಕಾಲಕ್ಕೆ ಕೋರ್ಟು, ಕಚೇರಿ ಎಲ್ಲ ವ್ಯವಹಾರದಲ್ಲಿ ಫಾರ್ಸಿ ಭಾಷೆಯನ್ನು, ನಮ್ಮ ಭಾಗದಲ್ಲಿ ಕೆಲಕಾಲ ಮರಾಠಿಯನ್ನು ಸಹ ಒಪ್ಪಿಕೊಂಡಿದ್ದ ನಾವು, ಆಂಗ್ಲರ ಅಧೀನದಲ್ಲಿ ಇಂಗ್ಲಿಷ್‍ಗೆ ಭಾಷಾಂತರಗೊಂಡವರು. ಒಂದು ವಿದೇಶಿ ಭಾಷೆಯನ್ನು ಒಪ್ಪಿ ಬಳಸುವ ಮನಸ್ಸು, ಶಕ್ತಿ ಇದ್ದವರು ನಮ್ಮದೇ ಸಂಸ್ಕೃತಿಯ, ಬಹುಜನರು ಬಳಸುವ ಒಂದು ಭಾಷೆಯನ್ನು ಕಲಿಯುವುದು ಕಷ್ಟವಲ್ಲ. ಹಿಂದಿಯ ವಿರೋಧ ಕೇವಲ ರಾಜಕಾರಣ. ನಾವು ಕನ್ನಡಿಗರು ಹಿಂದಿ ಹೇರಿಕೆಯನ್ನು ಖಂಡಿತವಾಗಿಯೂ ವಿರೋಧಿಸೋಣ, ಹಿಂದಿಯನ್ನಲ್ಲ. ಹಿಂದಿಯನ್ನು ವಿರೋಧಿಸುವ ನೆಪದಲ್ಲಿ, ಇಂಗ್ಲಿಷ್‍ಪರ ಹೇಳಿಕೆ ನೀಡುವುದೂ ಸರಿಯಲ್ಲ" ಎಂಬುದು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಮಾತು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ರಂಗಭೂಮಿಯಲ್ಲೂ ಅಪಾರ ಒಲವು. ಅವರ ತಾಯಿಯ ತವರುಮನೆ ಯಾದವಾಡ. ಧಾರವಾಡದಿಂದ ಆರು ಮೈಲು ಆಚೆ ಬೆಳವಲ, ಆರು ಮೈಲು ಈಚೆ ಕಡೆ ಮನಗುಂಡಿ, ಮಲೆನಾಡು. ಅಲ್ಲಿ ಅವರ ಸಣ್ಣಜ್ಜನ ಮನೆ. ಅಪ್ಪ ತೀರಿದ ಮೇಲೆ ಅನಿವಾರ್ಯವಾಗಿ ಈ ಎರಡೂ ಊರುಗಳಲ್ಲಿ ಬೆಳೆದರು. ಯಾದವಾಡದಲ್ಲಿ ಸಣ್ಣಾಟ, ಪಾರಿಜಾತ; ಮನಗುಂಡಿಯಲ್ಲಿ ದೊಡ್ಡಾಟ, ಬಯಲಾಟದ ಭರಾಟೆ. ಇವರ ಮೂವರೂ ಸೋದರಮಾವಂದಿರು ಸಣ್ಣಾಟದ ಸರ್ವವಿದ್ಯಾಸಕ್ತರು. ಇವರ ಒಬ್ಬ ಸಣ್ಣಜ್ಜ ಬಯಲಾಟದಲ್ಲಿ ಹೆಸರಾಂತ ಹಾಸ್ಯ ನಟರು. ಹೀಗೆ ರಂಗ ಕಲೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಬಾಲ್ಯಮೋಹವಾಗಿ ರೂಪುಗೊಂಡಿತ್ತು. ಶಾಲೆಯಲ್ಲಿ ಮಕ್ಕಳ ನಾಟಕಗಳಲ್ಲಿ, ನಂತರ ಕರ್ನಾಟಕ ಕಾಲೇಜಿನಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಬಿ.ವಿ. ಕಾರಂತರು 1963ರಲ್ಲಿ ದಿಲ್ಲಿಯಿಂದ ಬಂದ ನಂತರ ಮೊಟ್ಟಮೊದಲು ಧಾರವಾಡದಲ್ಲಿ ನಡೆಸಿದ ನಾಟಕ ತರಬೇತಿಯಲ್ಲಿ ಭಾಗವಹಿಸಿದರು. ಆ ಮೇಲೆ ‘ಅಂತರಂಗ’ ನಾಟಕಕೂಟವನ್ನು ಕಟ್ಟಿ, ಚಂಪಾ, ಶಾಂತಿನಾಥ ದೇಸಾಯಿ, ಸಂಪಿಗೆ ತೋಂಟದಾರ್ಯ Thontadarya Sampige, ಮುರಿಗೆಪ್ಪ, ಹೇಮಾ, ಪದ್ಮಜಾ ಮುಂತಾದವರ ಕೂಡ ನಿಯಮಿತವಾಗಿ ರಂಗ ಚಟುವಟಿಕೆ ನಡೆಸಿದರು. ಶ್ರೀರಂಗರು ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾದಾಗ ಧಾರವಾಡ ಜಿಲ್ಲಾ ಘಟಕಕ್ಕೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರನ್ನು ಸದಸ್ಯರನ್ನಾಗಿಸಿದರು. ಆಗಲೂ ನಾಟಕಗಳನ್ನು ಅನುವಾದಿಸುತ್ತ, ಆಡುತ್ತ, ಊರೂರು ಸುತ್ತಿ ನೋಡುತ್ತ, ‘ರಂಗಭೂಮಿಕಾ’ದಿಂದ ಬೇರೆಬೇರೆ ತಂಡದವರನ್ನು ಕರೆಸಿ ಆಡಿಸುತ್ತ ನಾಟಕದವರಾದರು. ಕಾಳಿದಾಸನ ‘ಮಾಲವಿಕಾಗ್ನಿಮಿತ್ರಮ್’ ನಾಟಕವನ್ನು ನಮ್ಮ ದೊಡ್ಡಾಟದ ಶೈಲಿಗೆ ಸಂಪೂರ್ಣ ಹೊಸ ಬಗೆಯಲ್ಲಿ ರಂಗಾನುವಾದ ಮಾಡಿ ಕೊಟ್ಟಿದ್ದು, ಅದನ್ನು ಜಂಬೆ ನಿರ್ದೇಶಿಸಿದ್ದಾರೆ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಗಿರಡ್ಡಿ ಹಾಗೂ ಚಂಪಾರೊಡನೆ 'ಸಂಕ್ರಮಣ' ಪತ್ರಿಕೆ ಆರಂಭಿಸಿದವರು.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬರೆದ ಕತೆ, ವಿಮರ್ಶೆ, ಅಂಕಣ, ಅನುವಾದಿಸಿದ ನಾಟಕ, ಕಲಿಸಿದ ಪಾಠ, ಆಡಿದ ನುಡಿ ಎಲ್ಲದರಲ್ಲಿಯೂ ಕವಿತೆ ಅಡಗಿದೆ.
ನೀನಾ, ಔರಂಗಜೇಬ ಮತ್ತು ಇತರ ಕವನಗಳು, ಪರದೇಶಿ ಹಾಡುಗಳು, ನೂರಾರು ಪದ್ಯಗಳು, ಪ್ರತೀಕ್ಷೆ, ಮತ್ತೆ ಬಂದಿದ್ದಾಳೆ, ಆಯ್ದಕವನಗಳು, ಇಂದು ರಾತ್ರಿಯ ಹಾಗೆ, ಅಂತರಂಗದ ಕವನಗಳು, ಇಷ್ಟು ಹೇಳಿದ ಮೇಲೆ, ಸಮಗ್ರ ಕಾವ್ಯ ಹೀಗೆ ಕಾವ್ಯದಲ್ಲಿ ಅವರದ್ದು ವಿಶಾಲ ಕಾರ್ಯ. ಮಾವ ಮತ್ತು ಇತರ ಕಥೆಗಳು, ಹಕ್ಕಿಗಳು ಮುಂತಾದವು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕಥಾ ಸಂಕಲನಗಳು. ಆಧುನಿಕ ಕನ್ನಡ, ಹಿಂದಿ ಕಾವ್ಯ, ಅನುಶೀಲನ, ರಂಗಾಯಣ, ಪರಿಭಾವನ, ಅನುಸ್ವಾದನ ಮುಂತಾದವು ವಿಮರ್ಶೆಗಳು. ಸಂದರ್ಶನ, ಋಣಾನುಬಂಧ ಮುಂತಾದವು ವ್ಯಕ್ತಿ ಚಿತ್ರಗಳು. ಧರ್ಮಸ್ಥಳ, ಹಳ್ಳಿ ಕೇರಿ ಗುದ್ಲೆಪ್ಪನವರು ಮುಂತಾದವು ಜೀವನ ಚರಿತ್ರೆಗಳು. ಅವರ ಅಂಕಣಬರಹವಾದ 'ಚಹಾದ ಜೋಡಿ…’ ಐದು ಸಂಪುಟಗಳಲ್ಲಿ ಮೂಡಿಬಂದಿದೆ.
ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಕೆ.ವಿ. ಸುಬ್ಬಣ್ಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. 2006ವರ್ಷದಲ್ಲಿ ಅವರ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಸಹೃದಯಿ'.
ಈ ಹಿರಿಯರ ಬದುಕು ಸುಂದರತೆ, ಸುಮಧುರತೆ ಮತ್ತು ಸೌಖ್ಯತೆಯಿಂದ ಕೂಡಿರಲಿ ಎಂಬುದು ನಮ್ಮ ಆಶಯ.
ಕಾಮೆಂಟ್‌ಗಳು