ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ಜಗದಾತ್ಮಾನಂದ


 ಸ್ವಾಮಿ ಜಗದಾತ್ಮಾನಂದ



‘ಬದುಕಲು ಕಲಿಯಿರಿ’ ಕೃತಿ ಮೂಲಕ ನಾಡಿನಾದ್ಯಂತ  ಹೆಸರಾಗಿದ್ದವರು  ರಾಮಕೃಷ್ಣ ಮಠದ ಸ್ವಾಮಿ ಶ್ರೀ ಜಗದಾತ್ಮಾನಂದರು.

ನಮ್ಮ ಕಾಲದಲ್ಲಿ ಈ ‘ಸೆಲ್ಫ್ ಹೆಲ್ಪ್’ ಎಂಬ ವಿಶೇಷ ಘೋಷಣೆಗಳ ಪ್ರತ್ಯೇಕ ಬರಹ ವಿಭಾಗಗಳ ಭರಾಟೆ ಇರಲಿಲ್ಲ.  ನಾನು ಕಾಲೇಜಿನಲ್ಲಿ ಓದುವಾಗ  ನನ್ನ ಆಪ್ತ ಮತ್ತು ಗೌರಾವಾನ್ವಿತ ಸಹಪಾಠಿ ಚಂದ್ರಶೇಖರ ಸೋಮಯಾಜಿ ಕೇಳಿದ “ನೀನು ಬದುಕಲು ಕಲಿಯಿರಿ ಓದಿದ್ದೀಯ” ಅಂತ.  ಅಂದಿನಿಂದ  ಆ ಪುಸ್ತಕ  ಮನದಲ್ಲಿ ಮೂಡಿ ನಿಂತಿದೆ.  ನಾನು ಮೈಸೂರು ಮತ್ತು ಬೆಂಗಳೂರಿನ  ರಾಮಕೃಷ್ಣ ಆಶ್ರಮಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಜಗದಾತ್ಮಾನಂದರನ್ನು ಕೆಲವು ಸಂದರ್ಭಗಳಲ್ಲಿ ಕಂಡಿದ್ದೇನೆ.  ಆದರೆ  ಅವರ ಹೆಸರು ಇದು, ಇವರೇ ‘ಬದುಕಲು ಕಲಿಯಿರಿ’ ಕೃತಿ ಬರೆದವರು ಎಂದು ತುಲನೆ ಕಂಡಿರಲಿಲ್ಲ. ಎರಡು ವರ್ಷದ ಹಿಂದೆ ಅವರು ಹೋಗಿಬಿಟ್ಟರು ಎಂದು ಅವರ ಚಿತ್ರ ನೋಡಿದಾಗಲೇ ಅವರೇ ಇವರು ಎಂದು ತಿಳಿದದ್ದು.  ಪ್ರಚಾರ ಮತ್ತು ಸತ್ವ ಎರಡೂ ಎಷ್ಟು ವಿಭಿನ್ನ ಎನಿಸುತ್ತದೆ!  ನಮ್ಮ ಬದುಕಿನಲ್ಲಿ ದೊಡ್ಡ ವ್ಯಕ್ತಿಗಳ ದೊಡ್ಡತನ ಹೊರಬರುವುದು ಅವರು ಜೀವ ತೊರೆದಾಗಲೇ ಇರಬೇಕು.    

ಸ್ವಾಮಿ ಜಗದಾತ್ಮಾನಂದಜೀ ಶ್ರೀರಾಮಕೃಷ್ಣ ಮಹಾಸಂಘದ ಹಿರಿಯ ಸನ್ಯಾಸಿಗಳು. ಶ್ರೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಿಂದ ಸ್ಪೂರ್ತಿ ಪಡೆದ ಸ್ವಾಮೀಜಿ 1960ರಲ್ಲಿ ಬೆಂಗಳೂರಿನ ಶಾಖೆಯಲ್ಲಿ ರಾಮಕೃಷ್ಣ ಸಂಘ ಸೇರಿದರು. ಸಂಘದ ಉಪಾಧ್ಯಕ್ಷರೂ, ಬೆಂಗಳೂರು ಕೇಂದ್ರದ ಅಧ್ಯಕ್ಷರೂ ಆದ ಸ್ವಾಮಿ ಯತೀಶ್ವರಾನಂದಜೀ ಮಹಾರಾಜರ ಪ್ರೇಮಪೂರ್ಣ ಆರೈಕೆ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ ಪಡೆದು ಬೆಳೆಯುವ ಸೌಭಾಗ್ಯ ಇವರದಾಗಿತ್ತು. ಮಂತ್ರ ದೀಕ್ಷೆಯನ್ನು ಸ್ವಾಮಿ ಯತೀಶ್ವರಾನಂದರಿಂದಲೂ, ಸನ್ಯಾಸ ದೀಕ್ಷೆಯನ್ನು ರಾಮಕೃಷ್ಣ ಮಹಾಸಂಘದ ಅಂದಿನ ಅಧ್ಯಕ್ಷರಾದ ಸ್ವಾಮಿ ವೀರೇಶ್ವರಾನಂದಜೀ ಮಹಾರಾಜರಿಂದಲೂ ಪಡೆದರು. ನಂತರ ಮಂಗಳೂರು, ಮೈಸೂರು, ಷಿಲ್ಲಾಂಗ್, ಸಿಂಗಪೂರ್, ಪೊನ್ನಂಪೇಟೆ ರಾಮಕೃಷ್ಣಾಶ್ರಮಗಳಲ್ಲಿ ಸೇವೆ ಸಲ್ಲಿಸಿದರು. ಮೈಸೂರಿನಲ್ಲಿರುವಾಗ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಕ್ಷೇಮಪಾಲಕರಾಗಿ ಮತ್ತು ಶಾಲೆಯ ಆಸ್ಪತ್ರೆಯ ಮೇಲ್ವಿಚಾರಣೆ ಜವಾಬ್ದಾರಿ ನಿರ್ವಹಿಸಿದರು. 

‘ಬದುಕಲು ಕಲಿಯಿರಿ’ ಕೃತಿ ಅನೇಕ ಮರುಮುದ್ರಣಗಳನ್ನು ಕಂಡಿದ್ದು, ತಮಿಳು, ತೆಲುಗು, ಮರಾಠಿ, ಗುಜರಾತಿ, ಇಂಗ್ಲೀಷ್ ಮುಂತಾದ ಹತ್ತು ಭಾಷೆಗಳಿಗೆ ಅನುವಾದಗೊಂಡಿದೆ. 

ಸಾಮಾಜಿಕವಾಗಿಯೂ ಕೊಡುಗೆ ನೀಡಿದ ಸ್ವಾಮೀಜಿ, ವಿರಾಜಪೇಟೆ ತಾಲೂಕಿನ ಬುಡಕಟ್ಟು ಜನಾಂಗದ ಜೀವನಮಟ್ಟವನ್ನು ಸುಧಾರಿಸಲು ಹಲವಾರು ಕ್ರಮ ಕೈಗೊಂಡರು. ಆರೋಗ್ಯ, ನೈರ್ಮಲ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿಪರ ಯೋಜನೆಗಳನ್ನು ಮಾಡಿದ್ದರು.

ದೇಹ ಬಿದ್ದುಹೋಗುತ್ತದೆ. ಬದುಕಿದ್ದಾಗ ಹಿರಿಯರು ಮಾಡಿದ ಕೆಲಸ ನಮಗೆ ಅರಿವಿಗೆ ಬರುವುದೇ ಕಡಿಮೆ.  ಅವರ ಹೋಗಿಬಿಟ್ಟ ಸಂದರ್ಭದಲ್ಲಿ ಕಿಂಚಿತ್ ವ್ಯಥೆ ಮೂಡುತ್ತದಾದರೂ ಅದು ಬೆಳಕಾದ ಜ್ಞಾನವಾಗಿ ಆಳಕ್ಕಿಳಿಯುವುದು ತುಂಬಾ ಕಡಿಮೆ.  

ಬದುಕಲು ಕಲಿಯಿರಿ ಕೃತಿಯಲ್ಲಿ ನನ್ನ ಮನದ ಆಳಕ್ಕಿಳಿದ ಒಂದು ಭಾಗ ಇಲ್ಲಿ ಸ್ಮರಿಸುವ ಮೂಲಕ ಈ ಚೇತನಕ್ಕೆ ನಮಿಸುತ್ತೇನೆ.

ದುರುಪಯೋಗದಿಂದ ದುರಂತ
ಕೃಪೆ: ಬದುಕಲು ಕಲಿಯಿರಿ

ಆಸ್ಕರ್ ವೈಲ್ಡ್ ಹೇಳಿದ ಕತೆಯಿದು – ಒಮ್ಮೆ ಏಸುಕ್ರಿಸ್ತನು ಗ್ರಾಮೀಣ ಪ್ರದೇಶದಿಂದ ನಗರದ ಸಮೀಪ ಬರುತ್ತಿದ್ದ.  ನಗರದ ಹೊರವಲಯದ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಯುವಕನೊಬ್ಬ ಚರಂಡಿಯಲ್ಲಿ ಬಿದ್ದುಕೊಂಡಿರುವುದನ್ನು ಕಂಡ.  ಆ ಯುವಕನನ್ನು ಕುರಿತು “ಅಯ್ಯಾ, ನೀನೇಕೆ ಕುಡಿತದ ಅಮಲಿನಲ್ಲಿ ಈ ರೀತಿ ಕಾಲ ಕಳೆಯುತ್ತಿದ್ದೀಯೆ?” ಎಂದು ಕೇಳಿದ.  ಯುವಕ ಉತ್ತರಿಸಿದ: ‘ಪ್ರಭು, ನಾನು ಕುಷ್ಠರೋಗದಿಂದ ನರಳುತ್ತಿದ್ದೆ.  ದಯಾಮಯನಾದ ನೀನು ನನ್ನನ್ನು ಗುಣಪಡಿಸಿದೆ.  ನಾನಿನ್ನೇನು ಮಾಡಲಿ?’ ಎಂದು.  

ಏಸುವು ನಿಟ್ಟುಸಿರು ಬಿಟ್ಟು ಮುನ್ನಡೆಯುತ್ತಿದ್ದನಂತೆ.  ತರುಣನೊಬ್ಬ ವೇಶ್ಯೆಯನ್ನು ಹಿಂಬಾಲಿಸುತ್ತಿದ್ದದನ್ನು ಕಂಡು ಮರುಕದಿಂದ, ‘ಅಯ್ಯಾ ನೀನೇಕೆ ನಿನ್ನ ಚೇತನವನ್ನು ವ್ಯಭಿಚಾರದಲ್ಲಿ ಮುಳುಗಿಸುತ್ತಿದ್ದೀಯೆ?’ ಎಂದು ಪ್ರಶ್ನಿಸಿದ.  ಆ ತರುಣ ‘ಪ್ರಭು, ನಾನು ಕುರುಡನಾಗಿದ್ದೆ.  ಕೃಪಾಪರವಶನಾಗಿ ನೀನು ನನಗೆ ದೃಷ್ಟಿ ದಾನವನ್ನು ಮಾಡಿದೆ.  ನಾನಿನ್ನೇನು ಮಾಡಲಿ?’ ಎಂದನಂತೆ.  

ಕೊನೆಗೆ ನಗರದ ಮಧ್ಯಭಾಗಕ್ಕೆ ಬರುವ ವೇಳೆಗೆ, ವೃದ್ಧನೊಬ್ಬ ಗೋಳಿಡುತ್ತ ಹೊರಳಾಡುವುದನ್ನು ಕಂಡು ಏಸು ಅವನ ಅಳುವಿಗೆ ಕಾರಣ ಕೇಳಿದಾಗ, ಆತನೆಂದ: ‘ಪ್ರಭು, ನಾನು ಸತ್ತು ಹೋಗಿದ್ದೆ. ನೀನು ನನ್ನನ್ನು ಬದುಕಿಸಿದೆ -  ಪ್ರಾಣದಾನ ಮಾಡಿದೆ.  ನಾನಿನ್ನೇನು ಮಾಡಲು ಶಕ್ತ?’ ಎಂಬುದಾಗಿ ಹೇಳಿದನಂತೆ.  ಹೀಗೆ ಏಸುವಿನ ಕೃಪೆಯನ್ನು ಅವರೆಲ್ಲ ದುರುಪಯೋಗ ಮಾಡಿಕೊಂಡಿದ್ದರು.

ಏಸುವು ಅಂದು ಅತಿಮಾನುಷ ದೈವೀಶಕ್ತಿಯಿಂದ ಮಾಡಿದ ಇಂಥ ಪವಾಡವನ್ನು ಇಂದು ವಿಜ್ಞಾನ ಸಹಜವಾಗಿ ಮಾಡುತ್ತಿದೆ.  ಶಸ್ತ್ರಚಿಕಿತ್ಸೆಯ ಪವಾಡಸದೃಶ ವಿಧಾನಗಳಿಂದ, ವಿಸ್ಮಯಕಾರಕ ಔಷಧಗಳ ಅನ್ವೇಷಣೆಯಿಂದ ವಿಜ್ಞಾನವು ರೋಗಗಳನ್ನು ಓಡಿಸುತ್ತಿದೆ; ವೃದ್ಧಾಪ್ಯವನ್ನು ಮುಂದಕ್ಕೆ ತಳ್ಳುತ್ತಿದೆ.  ವಂಶವಾಹಿಗಳ ಪೃಥಕರಣ – ಪರಿಷ್ಕರಣಗಳಿಂದ ಪ್ರಾಯಃ ಮೃತ್ಯುವನ್ನು ಮುಂದೂಡಲು, ಜಯಿಸಲೂ(?) ವಿಜ್ಞಾನಿಯು ಸಮರ್ಥನಾದಾನು.  ಆದರೆ ಮಾನವನು ತನಗೆ ಲಭ್ಯವಾದ ಈ ಅಪೂರ್ವ ಅವಕಾಶಗಳನ್ನು ವೈಯಕ್ತಿಕ ಅಭಿವೃದ್ಧಿಗೂ, ಸಮಾಜದ ಕಲ್ಯಾಣಕ್ಕೂ ಕಾರಣವಾಗುವಂತೆ ಉಪಯೋಗಿಸುತ್ತಿರುವನೆ?  ಅಥವಾ ಆಸ್ಕರ್ ವೈಲ್ಡ್ ಹೇಳಿದ ಕಥೆಯಂತೆ ಬದುಕಿನಲ್ಲಿ ಆತ್ಮಶಕ್ತಿಯ ಅಭಿವೃದ್ಧಿಗೆ ಬೇರಾವ ಮೌಲ್ಯಗಳನ್ನೂ ನೆಚ್ಚಿಕೊಳ್ಳದೆ, ಮಾನವ ಇಂದು ಇಂದ್ರಿಯ ಪರಾಯಣನಾಗಿ ದೊರೆತ ಅವಕಾಶಗಳ ದುರುಪಯೋಗ ಮಾಡುತ್ತ, ದುರಂತದತ್ತ ಧಾವಿಸುತ್ತಿರುವನೆ?

‘ಈ ಭೂಮಂಡಲದ ನಿವಾಸಿಗಳ ಪೈಕಿ ಇಬ್ಬರಲ್ಲಿ ಒಬ್ಬನು ಪುಷ್ಟಿಕರ ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿದ್ದಾನೆ.  ಪ್ರಪಂಚದ ಮಿಲಿಟರಿ ವೆಚ್ಚದಲ್ಲಿ ನೂರರಲ್ಲಿ ಕೇವಲ ಒಂದು ಅಂಶವನ್ನು ತೆಗೆದಿರಿಸಿದರೆ, ಹಸಿವಿನಿಂದ ಬಳಲುತ್ತಿರುವ ಇಪ್ಪತ್ತು ಕೋಟಿ ಮಕ್ಕಳಿಗೆ ಆಹಾರ ಸಾಕಾಗುತ್ತದೆ’- ಇದು ವಿಶ್ವಸಂಸ್ಥೆಯ ಅಭಿಮತ.  ಆದರೆ, ಹಾಗೆ ಹಣವನ್ನು ಯಾರೂ ತೆಗೆದಿರಿಸಹೊರಟಿಲ್ಲ.  ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಹಣ ಸುರಿಯುತ್ತಿದ್ದಾರೆ.  ಇದನ್ನು ಕಂಡಾಗ ಬರ್ಟ್ರಾಂಡ್ ರಸ್ಸೆಲ್ಲರ ಒಂದು ಮಾತು ನೆನಪಿಗೆ ಬಾರದೇ ಇರದು: "ನಮಗೆ ಶತ್ರುಗಳ ವಿನಾಶವಾಗಬೇಕು ಎನ್ನುವ ಬಗ್ಗೆ ಇರುವ ಆಸೆ ಆಕಾಂಕ್ಷೆ, ನಮ್ಮ ಸ್ನೇಹಿತರ ಅಭ್ಯುದಯವಾಗಬೇಕು ಎನ್ನುವ ಬಗೆಗೆ ಇಲ್ಲ.  ಇಂಥ ಮನೋವೃತ್ತಿ, ಜಗತ್ತಿನ ಹಿತಕ್ಕೆ ಸಾಧುವಲ್ಲ".  ಕೆಲವೊಮ್ಮೆ, ನಿಜವಾದ ಶತ್ರುಗಳ ವಿನಾಶಕ್ಕಿಂತಲೂ, ಕಲ್ಪಿತ ಶತ್ರುಗಳ ವಿನಾಶಕ್ಕಾಗಿಯೇ ನಮ್ಮ ಸಂಪತ್ತು, ಶಕ್ತಿ ವಿನಿಯೋಗವಾಗುತ್ತದೆ!  

ಮನುಷ್ಯನ ಹೃದಯದಲ್ಲಿ ದಯೆ, ಕರುಣೆ, ಆತ್ಮ ಸಂಯಮ, ನಿಸ್ವಾರ್ಥತೆ, ಪರೋಪಕಾರ ಬುದ್ಧಿ ಬೆಳೆಯದೆ, ಕೇವಲ ಯಾಂತ್ರಿಕ, ತಾಂತ್ರಿಕ ಪ್ರಗತಿಯಾದ ಮಾತ್ರದಿಂದ ಬಹಳ ಪ್ರಯೋಜನವಾಗಲಿಲ್ಲ.  ಪ್ರಯೋಜನವಾಗದಿರುವುದು ಮಾತ್ರವಲ್ಲ, ವ್ಯಾಪಕ ಪ್ರಮಾಣದಲ್ಲಿ ಕೆಡುಕೂ ಆಗಬಹುದು.  ಈ ತಾಂತ್ರಿಕ ಪ್ರಗತಿ ಮನುಷ್ಯರ ಅಭ್ಯುದಯಕ್ಕೆ ಬದಲು ಅವರ ಹಿನ್ನಡೆಗೆ ಕಾರಣವಾಗುತ್ತದೆ. ಆದದ್ದೇನು ಎಂಬುದನ್ನು ಕವಿ ಕುವೆಂಪು ಅವರ ಕವಿವಾಕ್ಯಗಳಲ್ಲಿ ಹೇಳುವುದಾದರೆ–

ಸಂಪತ್ತಿದೆ ವಿದ್ವತ್ತಿದೆ
ಕೈಸೇರಿದೆ ವಿಜ್ಞಾನ
ವಿಷಯಾಗ್ನಿಯ ಸುಖದಾಸೆಗೆ
ಕಲ್ಲೆಣ್ಣೆಯ ಪಾನ
ಭುಗಿಭುಗಿಲನೆ ಧಗಧಗಿಸಿದೆ
ರಣರೋಷದ ಕೆಂಗಿಚ್ಚು
ಹಲ್ಮಸೆದಿದೆ ಬಿಲ್ಲೆತ್ತಿದೆ
ಸಂಗ್ರಹಗೈಯುವ ಹುಚ್ಚು

ಸ್ವಾಮಿ ಶ್ರೀ ಜಗದಾತ್ಮಾನಂದಜೀ ಅವರು  2018ರ ನವೆಂಬರ್ 15ರಂದು ಈ ಲೋಕವನ್ನಗಲಿದರು. 

Swami Jagadatmanandaji 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ