ಲಕ್ಷ್ಮೀ ಗೋಪಾಲಸ್ವಾಮಿ
ಲಕ್ಷ್ಮೀ ಗೋಪಾಲಸ್ವಾಮಿ
ಲಕ್ಷ್ಮೀ ಗೋಪಾಲಸ್ವಾಮಿ ಕನ್ನಡದ ನೆಲದ ಪ್ರತಿಭೆ. ನೃತ್ಯಕಲಾವಿದರಾದ ಲಕ್ಷ್ಮೀ, ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳನ್ನು ಗಳಿಸಿ ಪ್ರಸಿದ್ಧರಾಗಿರುವುದರ ಜೊತೆಗೆ ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳಲ್ಲೂ ಉತ್ತಮ ಅಭಿನಯದಿಂದ ಜನಮನಸೂರೆಗೊಂಡಿದ್ದಾರೆ.
ಲಕ್ಷ್ಮೀ ಗೋಪಾಲಸ್ವಾಮಿ ಅವರ ಜನ್ಮದಿನ ಜನವರಿ 7. ಅವರು ಬೆಂಗಳೂರಿನಲ್ಲಿ ಜನಿಸಿದರು. ಲಕ್ಮೀ ಅವರ ತಂದೆ ಎಂ. ಕೆ. ಗೋಪಾಲಸ್ವಾಮಿ. ಸಂಗೀತ ವಿದುಷಿಯಾಗಿದ್ದ ತಾಯಿ ಡಾ. ಉಮಾ ಗೋಪಾಲಸ್ವಾಮಿ ಅವರು, ಲಕ್ಷ್ಮೀ ಅವರಿಗೆ ಸಂಗೀತ ನೃತ್ಯಗಳಲ್ಲಿ ಪ್ರೇರಣೆಯಾದರು. ಭರತನಾಟ್ಯವನ್ನು ಹೆಚ್ಚು ಆಪ್ತವಾಗಿಸಿಕೊಂಡ ಲಕ್ಷ್ಮೀ ಅವರು, ಸುಶ್ರಾವ್ಯವಾಗಿ ಹಾಡುತ್ತಾರೆ.
ಲಕ್ಷ್ಮೀ ಅವರು 2000ದ ವರ್ಷದಲ್ಲಿ ಲೋಹಿತಾದಾಸ್ ಅವರ ಮಲಯಾಳಂ ಚಿತ್ರ 'ಅಯ್ಯಣ್ಣಂಗಳುಡೆ ವೀಡು'ನಲ್ಲಿ ಮಮ್ಮೂಟಿ ಅವರೊಂದಿಗೆ ಅಭಿನಯಿಸಿ ಕೇರಳ ರಾಜ್ಯದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಅವರ ಎರಡನೆಯ ಚಿತ್ರ 'ಕೊಚು ಕೊಚು ಸಂತೋಷಂಗಳ್' ಅಭಿನಯ ಸಹಾ ಒಳ್ಳೆಯ ಪ್ರತಿಕ್ರಿಯೆ ಗಳಿಸಿತು. 2007ರಲ್ಲಿ, ಬಾಬು ತಿರುವಲ್ಲಾ ನಿರ್ದೇಶಿಸಿದ 'ತನೀಯೆ' ಮತ್ತು ಪಿ.ಕೆ.ಕುಂಜು ಮೊಹಮ್ಮದ್ ನಿರ್ದೇಶಿಸಿದ 'ಪರದೇಸಿ' ಚಿತ್ರಗಳಲ್ಲಿನ ಅಭಿನಯಕ್ಕಾಗಿ ಲಕ್ಷ್ಮೀ ಎರಡನೇ ಬಾರಿ ಕೇರಳ ರಾಜ್ಯದಿಂದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಳಿಸಿದರು. ಈ ಚಿತ್ರಗಳ ಅಭಿನಯಕ್ಕಾಗಿ ಅವರಿಗೆ "ಅಟ್ಲಾಸ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್" ಸಹಾ ಸಂದಿತು.
2010ರಲ್ಲಿ ಲಕ್ಷ್ಮೀ ಕನ್ನಡದಲ್ಲಿ ಮಹಾನ್ ನಟ ವಿಷ್ಣುವರ್ಧನ್ ಅವರೊಂದಿಗೆ ಪಿ. ವಾಸು ನಿರ್ದೇಶನದ ಪ್ರಸಿದ್ಧ ಚಿತ್ರ 'ಅಪ್ತರಕ್ಷಕ'ದಲ್ಲಿ ಉತ್ತಮವಾಗಿ ನಟಿಸಿದರು. ಲಕ್ಷ್ಮೀ ಅವರು ವಿಷ್ಣುವರ್ಧನ್ ಅವರೊಂದಿಗೆ 'ವಿಷ್ಣು ಸೇನೆ' ಮತ್ತು 'ನಮ್ಮೆಜಮಾನ್ರು' ಚಿತ್ರಗಳಲ್ಲಿಯೂ ನಟಿಸಿದ್ದರು. ತಮಿಳಿನಲ್ಲಿ 'ಲಕ್ಷ್ಮೀ’ ಎಂಬ ಹೆಸರಿನ ಅವರು ನಟಿಸಿದ ಕಿರುತೆರೆಯ ಧಾರಾವಾಹೀ ಕೂಡ ಪ್ರಸಿದ್ಧವಾಯಿತು. 2014ರಲ್ಲಿ ಲಕ್ಷ್ಮೀ ಅವರಿಗೆ ಪಿ. ಶೇಷಾದ್ರಿ ನಿರ್ದೇಶನದ 'ವಿದಾಯ' ಚಿತ್ರದಲ್ಲಿನ ಶ್ರೇಷ್ಠ ಅಭಿನಯಕ್ಕೆ ಕರ್ನಾಟಕ ರಾಜ್ಯಸರ್ಕಾರದ ಚಲನಚಿತ್ರ ಪ್ರಶಸ್ತಿ ಸಂದಿತು. ಇದಲ್ಲದೆ ಅವರಿಗೆ ಇನ್ನೂ ಹಲವು ಮಾಧ್ಯಮದ ಮತ್ತು ವಿಮರ್ಶಕರ ಪ್ರಶಸ್ತಿಗಳು ಸಂದಿವೆ.
ಈಗಲೂ ಮಲಯಾಳಂ ಚಲನಚಿತ್ರಗಳಲ್ಲಿ ನಿರಂತರ ಬೇಡಿಕೆ ಹೊಂದಿರುವ ಲಕ್ಷ್ಮೀ ಗೋಪಾಲಸ್ವಾಮಿ ಇತ್ತೀಚಿನ ವರ್ಷದಲ್ಲಿ ಕನ್ನಡದ 'ಅಲ್ಲಮ', ತೆಲುಗು, ಹಿಂದಿ ಚಿತ್ರಗಳು ಮತ್ತು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳುತ್ತಾ , ಭರತಾಟ್ಯದಲ್ಲಿಯೂ ಆಸಕ್ತಿ ಉಳಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಅಷ್ಟೊಂದು ಸಾಧಿಸಿದ್ದರು ಸರಳರಾಗಿ ಅವರು ನಮ್ಮಂತಹ ಸಾಧಾರಣರ ಜೊತೆಗೂ ಆಪ್ತವಾಗಿ ನಡೆದುಕೊಳ್ಳುವುದ ನೋಡಿದಾಗ ಹೃದಯ ತುಂಬಿಬರುತ್ತದೆ.
ಲಕ್ಷ್ಮೀ ಅವರ ಕಲೆ ಮತ್ತು ಬದುಕು, ಅವರ ಸುಸ್ಮಿತ ಸೌಂದರ್ಯದಷ್ಟೇ ಸೊಬಗಿನಿಂದ ನಿರಂತರ ಕಂಗೊಳಿಸುತ್ತಿರಲಿ. ಅವರ ಸಹಜ ಸರಳ ಉತ್ಸಾಹಿ ಭಾವ ನಮ್ಮನ್ನು ನಿರಂತರ ಪ್ರೋತ್ಸಾಹಿಸಿ ಪ್ರೇರಿಸುತ್ತಿರಲಿ.
ಲಕ್ಷ್ಮೀ ಗೋಪಾಲಸ್ವಾಮಿ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Excellent actress and dance artiste Lakshmi Gopalaswamy

ಕಾಮೆಂಟ್‌ಗಳು