ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಂಜನಿ




 ರಂಜನಿ 

ರಂಜನಿ ರಾಮಪ್ರಸಾದ್ ಬಹುಮುಖಿ ಪ್ರತಿಭಾವಂತರು.  ಹೆಸರಾಂತ ಕಾರ್ಯಕ್ರಮ ನಿರೂಪಕಿ, ಗುರು, ಶಿಷ್ಯೆ, ಕವಯತ್ರಿ, ಸಂಗೀತ ಕಲಾವಿದೆ ಮತ್ತು ಸಮಾಜ ಸೇವಕಿ ಹೀಗೆ ಅವರದ್ದು  ಬಹುರೂಪಿ ಸಂಗಮ.

ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಹಿನ್ನೆಲೆಯಳ್ಳ ರಂಜನಿ, ಸಾಹಿತ್ಯಕ ಆಸಕ್ತಿಯಿಂದಾಗಿ ಕನ್ನಡ ಸಾಹಿತ್ಯದಲ್ಲಿನ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ.  ಕನ್ನಡ ಮತ್ತು ಇಂಗ್ಲಿಷಿನಲ್ಲಿ ಕವಯತ್ರಿ ಆಗಿರುವ ಅವರ ಬರಹಗಳು ಭಾರತ ಮತ್ತು ವಿದೇಶಗಳಲ್ಲಿನ ಅನೇಕ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.

ಸಂಗೀತಾಸಕ್ತರಾದ ರಂಜನಿ ರಾಮಪ್ರಸಾದ್, ಗುರು ವಿದುಷಿ ವಾಣಿ ಸತೀಶ‍್ ಅವರಲ್ಲಿ ಸಂಗೀತ ಸಾಧನೆ ಮಾಡಿದ್ದಾರೆ.  ಅವರು ಪ್ರಭಾತ್ ಕಲಾವಿದರು ನಡೆಸಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಸಾಧನೆ ಮತ್ತು ಪರ್ಯಾಯ ಪಾರಿತೋಷಕ ಗೆದ್ದು ಮಹಾನ್ ಕಲಾವಿದೆ ಡಾ. ಟಿ. ಎಸ್. ಸತ್ಯವತಿ ಅವರಿಂದ ಬಹುಮಾನ ಸ್ವೀಕರಿಸಿದವರು.  ಅಮೆರಿಕದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಅಲ್ಲಿನ ವಾದ್ಯಗೋಷ್ಠಿಗಳಲ್ಲಿ ಪ್ರಧಾನ ಗಾಯಕಿಯಾಗಿದ್ದ ಅನುಭವವೂ ಅವರೊಂದಿಗಿದೆ. 

ರಂಜನಿ ಅವರು ಅನೇಕ ಪ್ರಸಿದ್ಧ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಗೂ ಹೆಸರಾದವರು.  ಅವರು ' ಚಂದನ' ದೂರದರ್ಶನ ಮತ್ತು ಆಕಾಶವಾಣಿ ಅಧಿಕೃತ ಕಾರ್ಯಕ್ರಮ ನಿರೂಪಕರ ಪಟ್ಟಿಯಲ್ಲಿ ಅಲಂಕೃತರು. ಕಿರುತೆರೆಯಲ್ಲಿನ ಅನೇಕ ಸಂಗೀತ ನೃತ್ಯ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ನಿರೂಪಿಸಿ ಹೆಸರಾಗಿದ್ದಾರೆ.  ಅವರ ಧ್ವನಿಯಲ್ಲಿ ಸಂಗೀತ, ಅದರಲ್ಲೂ ವಿಶೇಷವಾಗಿ ಸುಸ್ಪಷ್ಟ ಕನ್ನಡ ಉಚ್ಚಾರದ ವಚನ ಸಂಗೀತ ಮತ್ತು ದಾಸ ಸಾಹಿತ್ಯದ ಗೀತೆಗಳನ್ನು ಕೇಳುವುದು ಆಪ್ತ ಅನುಭವವೆನಿಸುತ್ತದೆ. ಅನೇಕ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಗಳಲ್ಲಿನ ಸಮೂಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ಸಾಂಸ್ಕೃತಿಕ ಗೋಷ್ಠಿಗಳು ಮತ್ತು ನಿರೂಪಣೆಗಳಿಗೂ ಅವರು ಆಮಂತ್ರಿತರಾಗಿದ್ದಾರೆ. 

ಸಮಾಜಮುಖಿ ತುಡಿತವುಳ್ಳ ರಂಜನಿ ರಾಮಪ್ರಸಾದ್ ಹಲವಾರು ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳೊಂದಿಗೆ ಸಕ್ರಿಯರಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ಸಮಾಜಮುಖಿ ಕಾರ್ಯಕ್ರಮಗಳ ಪ್ರಯೋಜನಗಳು ತಲುಪಲು ಅನುವಾಗುವಂತೆ, ಅನೇಕ ಸಮೀಕ್ಷೆಗಳು ಮತ್ತು ಪ್ರಶ್ನಾವಳಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿಕೊಟ್ಟಿದ್ದಾರೆ.  ಇದಲ್ಲದೆ ಅಂಧವಿದ್ಯಾರ್ಥಿಗಳ ಅಭ್ಯಾಸಕ್ಕೋಸ್ಕರ  ಲಿಪಿಗಾರರಾಗಿ ಮತ್ತು ಅವರ ಪರೀಕ್ಷೆಗಳಲ್ಲಿನ ಸಹಬರಹಗಾರ್ತಿಯಾಗಿಯೂ ತಮ್ಮ ಸಮಯವನ್ನು ನೀಡುತ್ತಾ ಬಂದಿದ್ದಾರೆ.

ಮೇಲೆ ಹೆಸರಿಸಿದ ಬಹುಮಾನಗಳೇ ಅಲ್ಲದೆ ರಂಜನಿ ಅವರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 'ಜ್ಞಾನ ಸರಸ್ವತಿ' ಪುರಸ್ಕಾರ ಸಂಮಾನಿತರಾಗಿದ್ದಾರೆ.  ಅವರಿಗೆ ಸಾಂಸ್ಕೃತಿಕ ಕೊಡುಗೆಗಳಿಗಾಗಿನ ರಾಜ್ಯಮಟ್ಟದ 'ಜ್ಞಾನಶ್ರೀ'  ಗೌರವ ಕೂಡಾ ಸಂದಿದೆ.‍ ಇದಲ್ಲದೆ ಅಮೆರಿಕದ ಸೀಟಲ್ ನಗರದಲ್ಲಿನ ಸಹ್ಯಾದ್ರಿ ಕನ್ನಡ ಸಂಘದಿಂದ 'ಬೆಸ್ಟ್ ಪರ್ಫಾರ್ಮರ್ ಅವಾರ್ಡ್'  ಸಹಾ ಸಂದಿದೆ.

ಆತ್ಮೀಯರೂ ಪ್ರತಿಭಾವಂತರೂ ಆದ ರಂಜನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.


Happy birthday Ranjani Gr

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ