ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ.ಎನ್. ಶೇಷನ್


 ಟಿ.ಎನ್. ಶೇಷನ್ 


ಭಾರತೀಯ ಚುನಾವಣೆಗಳು ಗುಮ್ಮನಂತೆ ಎಂದು ಸಂಶಯಗಳು ಕಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಚುನಾವಣಾ ಆಯೋಗಕ್ಕೆ ಬಂದ ಟಿ.ಎನ್. ಶೇಷನ್ ರಾಜಕೀಯ ಪುಡಾರಿಗಳ ತೋಳ್ಬಲ ಪ್ರದರ್ಶನದ ವಿರುದ್ಧ ಅಚಲನಾಗಿ ನಿಂತ ಮಹಾನ್ ಧೀರ. ಇಂದು ಅವರ ಸಂಸ್ಮರಣಾ ದಿನ.

ಚುನಾವಣಾ ನೀತಿ ಸಂಹಿತೆ ಜಾರಿಯ ಹರಿಕಾರ ಎಂದೇ ಖ್ಯಾತಿ ಪಡೆದಿದ್ದ ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್.ಶೇಷನ್ 1932ರ ಡಿಸೆಂಬರ್ 15ರಂದು  ಕೇರಳದ ಪಾಲಕ್ಕಾಡ್‌ನ‌ಲ್ಲಿ ಜನಿಸಿದರು.   ಅವರು ಭಾರತೀಯ ಆಡಳಿತ ಸೇವೆಗೆ ತಮಿಳುನಾಡು ಕೇಡರ್‌ನಿಂದ 1955ರಲ್ಲಿ ಸೇರ್ಪಡೆಗೊಂಡಿದ್ದರು. ತಮಿಳುನಾಡು ಸರ್ಕಾರದಲ್ಲಿ ಹಲವು ಇಲಾಖೆಗಳ ನಾನಾ ಹುದ್ದೆಗಳನ್ನು ಅಲಂಕರಿಸಿದ್ದ ಶೇಷನ್, ಬಳಿಕ ಕೇಂದ್ರದಲ್ಲಿ ಕೆಲವಾರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಸರಕಾರವಿದ್ದಾಗ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ಟಿ.ಎನ್. ಶೇಷನ್ ಡಿಸೆಂಬರ್ 12, 1990 ರಿಂದ ಡಿಸೆಂಬರ್ 11, 1996ರವರೆಗೆ 10ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಆಯೋಗದ ಕಾರ್ಯ ವಿಧಾನವನ್ನು ಬದಲಿಸಿ ದೇಶದ ಗಮನ ಸೆಳೆದಿದ್ದ ಶೇಷನ್ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದರು.

ಟಿ.ಎನ್. ಶೇಷನ್ ಅವರ ಅಧಿಕಾರಾವಧಿಯಲ್ಲಿ ಅರ್ಹ ಮತದಾರರಿಗೆ ಗುರುತಿನ ಚೀಟಿ ಜಾರಿಗೆ ತರಲಾಯಿತು. ದೇಶದೆಲ್ಲೆಡೆ, ಶಾಂತಿಯುತ, ಸ್ವಚ್ಛವಾದ ಮತದಾನ ನಡೆಯುವಂಥ ವಾತಾವರಣ ಸೃಷ್ಟಿಸಿದರು. 1997ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಶೇಷನ್ ಅವರು ಕಾಂಗ್ರೆಸ್‌ನ ಕೆ.ಆರ್‌. ನಾರಾಯಣನ್‌ ವಿರುದ್ಧ ಸ್ಪರ್ಧಿಸಿ ಸೋತರು.

ಶೇಷನ್ ಅವರಿಗೆ ರೇಮನ್ ಮ್ಯಾಗ್ಸೆಸೆಸೆ ಪ್ರಶಸ್ತಿ ಸಂದಿತ್ತು.  ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಸದಾ ಪ್ರಥಮ ಸಾಲಿನಲ್ಲಿ ವಿರಾಜಿಸುತ್ತಿದ್ದವರು.  'ಹಾರ್ಟ್ ಫುಲ್ ಆಫ್ ಬರ್ಡನ್' ಎಂಬ ಅವರ ಕೃತಿ ಅವರ ಅನುಭವಗಳು ಮತ್ತು ದೇಶದ ಕುರಿತಾದ ಅವರ ಕಾಳಜಿಗಳನ್ನು ಬಿಂಬಿಸಿದ್ದ ಕೃತಿ.  

ಆಧಿಕಾರ ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ.  ಅದು ಬಂದಾಗ  ಧೈರ್ಯವಾಗಿ ಒಳಿತಿಗಾಗಿ ಉಪಯೋಗಿಸುವವರು ಅಪರೂಪ.  ಪ್ರಜಾಪ್ರಭುತ್ವದಲ್ಲಿ ಎಲ್ಲರನ್ನೂ ಮೆಚ್ಚಿಸಿ ಕೆಲಸ ಮಾಡುವುದು ಅಪೇಕ್ಷಿತವಾದರೂ ಹಾಗೆ ಮಾಡುವುದು ಕಷ್ಟಸಾಧ್ಯ ಮತ್ತು ಬಹುತೇಕವಾಗಿ ನೀರಸ ಮತ್ತು ವ್ಯರ್ಥ ಪ್ರಯತ್ನ.  ಅಂತೆಯೇ ತನಗೆ ಸರಿ ಎನಿಸುವುದನ್ನು ಒಬ್ಬ ವ್ಯಕ್ತಿ ಮಾಡಿದಾಗ ಅದು ಅಹಂಕಾರದಂತೆ ಕಾಣುವುದೂ ಸಹಜವೇ.  ಈ ಎಲ್ಲ ಅಂಶಗಳನ್ನು ತುಲನೆ ಮಾಡಿ ಕಾಣುವಾಗ 'ಲೋಕವ ಮೆಚ್ಚಿಸದೆ ತನ್ನ ಆಂತರ್ಯಕ್ಕೆ ನಿಷ್ಠನಾಗಿ' ಕೆಲಸ ಮಾಡಿದವನೇ ಮಹತ್ವದ ವ್ಯಕ್ತಿ.  ಅಂತಹ ವ್ಯಕ್ತಿತ್ವದ ಶೇಷನ್ 2019ರ ನವೆಂಬರ್ 10ರಂದು ಈ ಲೋಕವನ್ನಗಲಿದರು.

T N Sheshan who brought orderliness to Indian Election system

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ