ಅನು ಪ್ರಭಾಕರ್
ಅನು ಪ್ರಭಾಕರ್
ಅನು ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ಮಿನುಗಿದ ಸ್ಥಳೀಯ ನಗೆಮೊಗದ ಬೆಡಗಿ.
ಅನು ಪ್ರಭಾಕರ್ 1980ರ ನವೆಂಬರ್ 9ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಂ. ವಿ. ಪ್ರಭಾಕರ್ ಬಿ.ಹೆಚ್.ಇ. ಎಲ್ ಸಂಸ್ಥೆಯ ಉದ್ಯೋಗಿಯಾಗಿದ್ದರು. ತಾಯಿ ಗಾಯತ್ರಿ ಧ್ವನಿದಾನ ಕಲಾವಿದರಾಗಿ ಅಪಾರ ಹೆಸರಾಗಿ, ಅಭಿನಯದಲ್ಲೂ ಆಗಾಗ ಕಾಣುತ್ತಿದ್ದ ಗಾಯತ್ರಿ ಪ್ರಭಾಕರ್.
ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಳೆದ ಅನು ಅವರು, ನಿರ್ಮಲಾ ರಾಣಿ ಹೈಸ್ಕೂಲಿನಲ್ಲಿ ಓದಿದರು. ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ಬಾಲ ಕಲಾವಿದೆಯಾಗಿ 'ಚಪಲ ಚನ್ನಿಗರಾಯ' 'ಶಾಂತಿ ಕ್ರಾಂತಿ' ಮತ್ತು ಇಂಗ್ಲಿಷಿನ 'ಮಿಸರಿಸ್ ಆಫ್ ದ ಡಾರ್ಕ್ ಜಂಗಲ್' ಚಿತ್ರಗಳಲ್ಲಿ ಅಭಿನಯಿಸಿದ್ದರು.
ಕಾಲೇಜು ಸೇರಿದ ದಿನಗಳಲ್ಲಿ ಹೆಚ್ಚಾದ ಚಿತ್ರರಂಗದ ಬೇಡಿಕೆಯ ದೆಸೆಯಿಂದ ಓದು ನಿಲ್ಲಿಸಿದ ಅನು ಪ್ರಭಾಕರ್, ಮುಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸೋಷಿಯಾಲಜಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.
ಅನು ಅವರು 1999ರಲ್ಲಿ ಶಿವರಾಜಕುಮಾರ್ ಜೊತೆ 'ಹೃದಯ ಹೃದಯ' ಚಿತ್ರದಲ್ಲಿ ಅಭಿನಯಿಸಿದರು. ರಮೇಶ್ ಅರವಿಂದ್, ರಾಮ್ ಕುಮಾರ್ ಮುಂತಾದ ನಟರೊಂದಿಗೂ ಯಶಸ್ವೀ ಜೋಡಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಅವರ ಸೂರಪ್ಪ, ಜಮೀನ್ದಾರ್ರು, ಹೃದಯವಂತ, ಸಾಹುಕಾರ, ವರ್ಷ ಮುಂತಾದ ಚಿತ್ರಗಳಲ್ಲಿಯೂ ಅವರಿಗೆ ಪಾತ್ರವಿತ್ತು. ಅನು ಕೆಲವು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ಅಭಿನಯಿಸಿದ 'ಬಡವರ ಮನೆ ಊಟ ರುಚಿಯಮ್ಮಿ' ಮತ್ತು 'ಒಂದೇ ಉಸುರಿನಂತೆ ಇನ್ನು ನಾನು' ಗೀತೆಗಳು ನನ್ನ ನೆನಪಿನಲ್ಲಿ ಬಹುಕಾಲದಿಂದ ಉಳಿದಿವೆ.
ಅಕ್ಕಮಹಾದೇವಿ ಚಿತ್ರದಲ್ಲಿ ಅನು ಪ್ರಭಾಕರ್ ಒಬ್ಬ ಕವಯತ್ರಿ ಶರಣೆಯಾಗಿ ಮತ್ತು ಸಂಶೋಧನಾ ಅಭ್ಯರ್ಥಿಯಾಗಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳಲ್ಲೂ ಕಂಡಿದ್ದಾರೆ.
ಉತ್ತಮ ಭಾವಪೂರ್ಣ ಅಭಿನಯಕ್ಕೆ ಹೆಸರಾದ ಅನು ಪ್ರಭಾಕರ್ 'ಪರೀಕ್ಷೆ' ಮತ್ತು 'ಶಾಪ' ಚಿತ್ರಗಳಲ್ಲಿನ ಅಭಿನಯಕ್ಕೆ ಕರ್ನಾಟಕ ರಾಜ್ಯಸರ್ಕಾರದ ಉತ್ತಮ ಅಭಿನೇತ್ರಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.
ಅನು ಪ್ರಭಾಕರ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of talented artiste Anu Prabhakar
ಕಾಮೆಂಟ್ಗಳು