ವಾಣಿ ಜಯರಾಂ
ವಾಣಿ ಜಯರಾಂ
ವಾಣಿ ಜಯರಾಂ ಮಹಾನ್ ಹಿನ್ನೆಲೆ ಗಾಯಕಿಯಾಗಿ, ತಮ್ಮ ಸುಶ್ರಾವ್ಯ ಕಂಠಸಿರಿಗೆ ಹೆಸರಾದವರು.
“ಮೂಡಣದ ರವಿ, ಮೂಡಲು ಮಮತೆಯಲಿ,
ಮೂಡಿದೆ ಕೆಂದೂಳಿ, ಬಾನಿಗೆ ಬಣ್ಣದ ಓಕುಳಿ;
ಉದಯದ ಸೂರ್ಯನು ಏರಿದ ರಥ ತಾನು,
ಏಳಿರಿ ಬೆಳಗಾಯಿತು ಏಳೀ" ... ಹೀಗೆ ಹಾಡುತ್ತ ಕನ್ನಡ ಚಿತ್ರರಂಗಕ್ಕೆ 1973ರಲ್ಲಿ ತಮ್ಮ ಸುಮಧುರ ಗಾಯನದಿಂದ ವಾಣಿ ಜಯರಾಂ ಪ್ರವೇಶಿಸಿದರು. ಗಾನ ಮಾಧುರ್ಯತೆಯ ವಿಚಾರ ಬಂದಾಗ ಭಾರತೀಯ ಚಿತ್ರರಸಿಕರಿಗೆ ನೆನಪಾಗುವ ಪ್ರಮುಖ ಹೆಸರು ‘ವಾಣಿ ಜಯರಾಂ’.
‘ಭಾವವೆಂಬ ಹೂವು ಅರಳಿ, ಗಾನವೆಂಬ ಗಂಧ ಚೆಲ್ಲಿ, ರಾಗವೆಂಬ ಜೇನ ಹೊನಲು, ತುಂಬಿ ಹರಿಯಲಿ, ಜಗವ ಕುಣಿಸಿ ನಲಿಸಲಿ” ಎಂದು ಆಕೆ ಹಾಡಿರುವುದು ಕಿವಿಗೆ ಬಿದ್ದೊಡನೆ, ನಮ್ಮ ಹೃದಯಾಂತರಂಗ ಸಂಗೀತದಲ್ಲಿ ವಿಲೀನವಾಗಿಬಿಟ್ಟಿರುತ್ತದೆ. ಸಂಗೀತ ಪ್ರಧಾನವಾದ ‘ಶಂಕರಾಭರಣಂ’ ಚಿತ್ರ, ಸಂಗೀತ ಪ್ರೇಮಿಗಳು ತುಂಬಿರುವ ಕನ್ನಡ ನಾಡಿನಲ್ಲಿ ಪ್ರಚಂಡ ಯಶಸ್ಸು ಕಂಡಿತು. ಆ ಚಿತ್ರದಲ್ಲಿ ವಾಣಿ ಜಯರಾಂ ಅವರ ದ್ವನಿಯಲ್ಲಿ ಮೂಡಿರುವ ‘ಮಾನಸ ಸಂಚರರೆ, ಬ್ರಹ್ಮನಿ ಮಾನಸ ಸಂಚರರೆ’ ಹಾಡು ಕೇಳುವುದು ಒಂದು ಆಧ್ಯಾತ್ಮಿಕ ಅನುಭವವಾಗುತ್ತದೆ. ಆ ಹಾಡಿನ ಅಂತಿಮ ಚರಣದಲ್ಲಿನ ‘ಪರಮಹಂಸ ಮುಖ ಚಂದ್ರ ಚಕೋರೆ, ಪರಿಪೂರಿತ ಮುರಳೀರವಧಾರೆ’ ಎಂಬಲ್ಲಿ ವಾಣಿ ಜಯರಾಂ ಅವರ ಭಾವುಕ ಉಚ್ಚಾರ ಸರ್ವಶ್ರೇಷ್ಠವಾದದ್ದು. ಇದೇ ಹಾಡಿಗೆ ವಾಣಿ ಜಯರಾಂ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಇದೇ ರೀತಿ ರಜನೀಕಾಂತರನ್ನು ತಮಿಳು ಸಿನಿಮಾಗೆ ಪರಿಚಯಿಸಿದ ‘ಅಪೂರ್ವ ರಾಗಂಗಳ್‘ ಚಿತ್ರದ ‘ಏಳು ಸ್ವರಂಗಳುಕ್ಕುಳ್ ಎತ್ತನೈ ಪಾಡಲ್’ ಎಂಬ ಅಷ್ಟೇ ಸುಶ್ರಾವ್ಯ ಹಾಡಿಗೂ ಕೂಡ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.
“ಶಾಂತರಸ ಹರಿದಿಹುದು ತುಂಗೆಯಾಗಿ, ಶಾರದೆಯು ನೆಲೆಸಿಹಳು ಮಾತೆಯಾಗಿ” ಎಂಬ ದಿನನಿತ್ಯ ನಾವು ಕೇಳುವ ಹಾಡಾಗಲಿ, ಆಗಾಗ ಸುಗಮ ಸಂಗೀತದಲ್ಲಿ ರೇಡಿಯೋದಲ್ಲಿ ನಮ್ಮ ಕಿವಿಗೆ ಬೀಳುತ್ತಿದ್ದ “ಏನು ಮಾತು, ಏನು ಮಾತು, ಏನು ಮಾತಮ್ಮ ಇದು ಸುಳ್ಳು ಹೋಗಿ ಹೋಗಿ” ಎಂಬ ಸುಗಮ ಸಂಗೀತದ ಛಾಯೆ ಇರುವ ಹಾಡಿನಲ್ಲಾಗಲಿ, “ಮಲೆನಾಡಿನ್ ಮೂಲೆಯಾಗೆ ಇತ್ತೊಂದು ಸಣ್ಣ ಹಳ್ಳಿ” ಎಂಬ ಜನಪದ ಶೈಲಿಯ ಹಾಡಾಗಲಿ, “ಹ್ಯಾಪಿಯೆಸ್ಟ್ ಮೂಮೆಂಟ್, ಎವ್ರಿ ಈವೆಂಟ್” ಎಂಬ ಪಾಶ್ಚಾತ್ಯ ಶೈಲಿಯ ಹಾಡಾಗಲಿ ಅಥವಾ ಇನ್ಯಾವುದೇ ಹಾಡಿನಲ್ಲಾಗಲಿ ವಾಣಿ ಜಯರಾಂ ಅವರ ಧ್ವನಿ ತನ್ನ ಮಾಧುರ್ಯವನ್ನು ಬಿಟ್ಟುಕೊಡಲೇ ಇಲ್ಲ. ಅಷ್ಟು ಪರಿಪಕ್ವ, ಅವರ ಹೃದಯಾಂತರಾಳದ ಸಂಗೀತಸುಧೆ.
ವಾಣಿಜಯರಾಂ 1945ರ ನವೆಂಬರ್ 30ರಂದು ವೆಲ್ಲೂರಿನ ಇಡಂಗು ಗ್ರಾಮದಲ್ಲಿ ಜನಿಸಿದರು. ವಾಣಿಯವರ ತಾಯಿ, ಸುಪ್ರಸಿದ್ಧ ಸಂಗೀತ ವಿದ್ವಾಂಸ ರಂಗ ರಾಮಾನುಜ ಅಯ್ಯಂಗಾರ್ ಅವರ ಶಿಷ್ಯೆ. ಹೀಗಾಗಿ ಸಂಗೀತದ ಹಿನ್ನಲೆ ಸ್ವಾಭಾವಿಕವಾಗಿ ವಾಣಿ ಜಯರಾಂ ಅವರಿಗೆ ದೊರಕಿತ್ತು. ತಮ್ಮ ಐದನೆಯ ವಯಸ್ಸಿನಲ್ಲೇ ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತಾಭ್ಯಾಸ ಪ್ರಾರಂಭ ಮಾಡಿದರು. ಏಳನೇ ವಯಸ್ಸಿಗೆ ಬರುವ ವೇಳೆಗೆ ದೇಶಿಕರ್ ಕೃತಿಗಳನ್ನು ಸ್ಫುಟವಾಗಿ ಸರಾಗವಾಗಿ ಹಾಡುತ್ತಿದ್ದರು. ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸುದೀರ್ಘ ಸಂಗೀತ ಕಚೇರಿ ನೀಡಿದಾಗ ವಾಣಿ ಅವರಿಗೆ ವಯಸ್ಸು ಕೇವಲ ಹತ್ತು ವರ್ಷ. ಮುಂದೆ ಅವರು ಆರ್. ಬಾಲಸುಬ್ರಮಣ್ಯಂ ಮತ್ತು ಆರ್. ಎಸ್. ಮಣಿ ಅಂತಹ ಹಿರಿಯರಲ್ಲಿ ಕೂಡ ಹೆಚ್ಚಿನ ಸಂಗೀತಾಭ್ಯಾಸ ನಡೆಸಿದರು. ಕೇವಲ ಗಾಯನದಲ್ಲಷ್ಟೇ ಅಲ್ಲದೆ ಚಿತ್ರರಚನೆಯಲ್ಲೂ ಅವರದು ಗಣನೀಯ ಪ್ರತಿಭೆ. ಓದಿನಲ್ಲೂ ಪ್ರಚಂಡರಾದ ಆಕೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಚೇಂಬರ್ ಆಫ್ ಕಾಮರ್ಸ್ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ ನಡೆದ ವಿವಾಹ, ವಾಣಿ ಅವರ ಜೀವನದಲ್ಲಿ ಮಹತ್ತರ ತಿರುವು ತಂದಿತು. ಸ್ವತಃ ಸಿತಾರ್ ವಾದಕರಾಗಿದ್ದ ಸಂಗೀತಪ್ರಿಯ ಜಯರಾಂ, ತಮ್ಮ ಪತ್ನಿಯ ಪ್ರತಿಭೆಗೆ ನೀರೆರೆದು ಪೋಷಿಸಿದರು. ವಾಣಿಯವರು ಪಟಿಯಾಲ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ಥಾನಿ ಸಂಗೀತ ಕಲಿಯಲು ಪ್ರೇರಕರಾದರು. ಈ ಸಂದರ್ಭದಲ್ಲಿ ಇವರ ಕಂಠಸಿರಿಗೆ ಮಾರುಹೋದ ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿ ತಮ್ಮ ಮರಾಠಿ ಆಲ್ಬಂನ 'ಋಣಾನುಬಂಧಾಚ್ಯ' ಗೀತೆಗೆ ಕುಮಾರಗಂಧರ್ವರೊಂದಿಗೆ ಹಾಡಿಸಿದರು. ಈ ಚಿತ್ರದ ಗಾಯನವನ್ನು ಮೆಚ್ಚಿಕೊಂಡ ಪ್ರಸಿದ್ಧ ಹಿಂದಿ ಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ತಮ್ಮ ಪ್ರಖ್ಯಾತ ಚಿತ್ರ ‘ಗುಡ್ಡಿ’ ಚಿತ್ರದಲ್ಲಿ ವಾಣಿ ಜಯರಾಂ ಅವರಿಂದ ಹಾಡಿಸಿದರು. ಈ ಚಿತ್ರದ “ಬೋಲ್ ರೆ ಪಪ್ಪಿ ಹರಾ” ದೇಶಾದ್ಯಂತ ಸಂಚಲನೆಯನ್ನುಂಟು ಮಾಡಿ, ವಾಣಿ ಜಯರಾಂ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಮಿಯನ್ ಮಲ್ಹಾರ್ ರಾಗದಲ್ಲಿ ಮೂಡಿದ ಈ ಹಾಡಿಗೆ, ಶ್ರೇಷ್ಠ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಚಲನಚಿತ್ರಗೀತೆಗೆ ನೀಡಲಾಗುವ ಪ್ರತಿಷ್ಟಿತ ‘ತಾನ್ ಸೇನ್ ಸಮ್ಮಾನ್’ ಗೌರವ ನೀಡಲಾಯಿತು.
ಕನ್ನಡ ಚಲನಚಿತ್ರರಂಗದಲ್ಲಿ 1973ರಿಂದ ಹಾಡಲು ಆರಂಭಿಸಿದ ವಾಣಿ ಜಯರಾಂ ಒಂದು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಒಟ್ಟು ಹನ್ನೆರಡು ಭಾಷೆಗಳಲ್ಲಿ ಅವರು ಹಾಡಿರುವ ಚಿತ್ರಗೀತೆಗಳ ಸಂಖ್ಯೆಯೇ ಹತ್ತು ಸಾವಿರವನ್ನೂ ಮೀರುತ್ತವೆ. ಅವರ ಇನ್ನಿತರ ಕೆಲವು ಹಾಡುಗಳನ್ನು ಮೆಲುಕು ಹಾಕುತ್ತಾ ಹೋದರೆ, ‘ನಗು ನೀ ನಗು, ಕಿರು ನಗೆ ನಗು’, ‘ಮೋಹನಾಂಗ ನಿನ್ನ ಕಂಡು ಓಡಿ ನಾ ಬಂದೆನೋ’, ‘ಈ ಶತಮಾನದ ಮಾದರಿ ಹೆಣ್ಣು’, ‘ದಾರಿ ಕಾಣದಾಗಿದೆ ರಾಘವೇಂದ್ರನೆ’, ‘ಸವಿ ನೆನಪುಗಳು ಬೇಕು ಸವಿಯಲೀ ಬದುಕು’, ‘ಓ ತಂಗಾಳಿಯೇ ನೀನಿಲ್ಲಿಗೆ ಓಡೋಡಿ ನಲಿದು ಒಲಿದು ಬಾ’, ‘ಲೈಫ್ ಈಸ್ ಎ ಮೆರ್ರಿ ಮೆಲೋಡಿ’, ‘ದಿವ್ಯ ಗಗನ ವನವಾಸಿನಿ’, ‘ಆ ದೇವರೆ ನುಡಿದ ಮೊದಲ ನುಡಿ’, ‘ಬಂದಿದೆ ಬದುಕಿನ ಬಂಗಾರದಾ ದಿನ’, ‘ನನ್ನಾ ದೇವನ ವೀಣಾವಾದನ’, ‘ಜೀವನ ಸಂಜೀವನ’, ‘ಹಾಡು ಹಳೆಯದಾದರೇನು ಭಾವ ನವ ನವೀನ’, ‘ಭಾವಯ್ಯ ಭಾವಯ್ಯಾ ಇಲ್ಲೇ ನಿಂತಿರೇಕಯ್ಯ’, ‘ಸದಾ ಕಣ್ಣಲಿ ಒಲವಿನಾ ಕವಿತೆ ಹಾಡುವೆ’, ‘ಪ್ರಿಯತಮಾ... ಕರುಣೆಯಾ ತೋರೆಯಾ’, ‘ಏನೇನೋ ಆಸೆ... ನೀ ತಂದಾ ಭಾಷೆ’, ‘ರಾಗಾ ಜೀವನ ರಾಗಾ’, ‘ಬೆಸುಗೆ... ಬೆಸುಗೆ... ಜೀವನವೆಲ್ಲಾ ಸುಂದರ ಬೆಸುಗೆ’, ‘ಶ್ರಾವಣಮಾಸ ಬಂದಾಗ’, ‘ಕನಸಲೂ ನೀನೆ ಮನಸಲೂ ನೀನೆ’, ‘ನಾ ನಿನ್ನ ಮರೆಯಲಾರೆ’, ‘ಶುಭಮಂಗಳ ಸುಮುಹೂರ್ತವೇ’, ‘ತೆರೆದಿದೆ ಮನೆ ಓ ಬಾ ಅತಿಥಿ’, ‘ಮಧು ಮಾಸ ಚಂದ್ರಮ ನೈದಿಲೆಗೆ ಸಂಭ್ರಮ’, ‘ವಸಂತ ಬರೆದನು ಒಲವಿನ ಓಲೆ’, ‘ಗಾಡಾಂಧಕಾರದ ಇರುಳಲ್ಲಿ, ಕಾರ್ಮೋಡ ನೀರಾದ ವೇಳೆಯಲಿ’, ‘ಗೌರಿ ಮನೋಹರಿಯ ಕಂಡೆ’, ‘ನೀಲ ಮೇಘ ಶ್ಯಾಮ, ನಿತ್ಯಾನಂದ ಧಾಮ’, ‘ಈ ಜೀವ ನಿನದೇ, ಈ ಭಾವ ನಿನದೇ’, ‘ಅಧರಂ ಮಧುರಂ, ವದನಂ ಮಧುರಂ’ , ‘ನನ್ನೆದೆ ವೀಣೆಯು ಮಿಡಿಯುವುದು’, ‘ದೇವ ಮಂದಿರದಲ್ಲಿ ದೇವರು ಕಾಣಲೇ ಇಲ್ಲ’ ಹೀಗೆ ಅಸಂಖ್ಯಾತ ಸುಶ್ರಾವ್ಯ ಹಾಡುಗಳ ಬೃಹತ್ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.
ವಾಣಿ ಜಯರಾಂ ಗಝಲ್, ಭಜನ್, ಭಕ್ತಿಗೀತೆಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದರು. ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ. 'ಪಂಡಿತ್ ಬಿರ್ಜು ಮಹಾರಾಜ್'ರೊಂದಿಗೆ ಸೇರಿ ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ. ಚೆನ್ನೈ ನಗರದಲ್ಲಿ ಇವರು ನಡೆಸುತ್ತಿದ್ದ 'ಸಂಗೀತ ಸಂಶೋಧನಾ ಕೇಂದ್ರ' ವರ್ಷವಿಡೀ 'ರಸಗ್ರಹಣ ಶಿಬಿರ' ಮತ್ತು 'ವಿಚಾರ ಸಂಕೀರ್ಣ'ಗಳನ್ನು ಏರ್ಪಡಿಸುತ್ತಿತ್ತು. ಶಾಲಾ ಮಕ್ಕಳಿಗಾಗಿ ವಿಶೇಷ ಶಿಬಿರಗಳಿದ್ದವು. ಸಂಗೀತದಿಂದ ಕ್ಯಾನ್ಸರ್ ರೋಗಿಗಳ ನೋವು ನಿವಾರಿಸುವ ಕುರಿತು ಸಹಾ ಶಿಬಿರಗಳನ್ನು ಆಯೋಜಿಸಿದ್ದರು. ಸಂಗೀತ ಮೌಲ್ಯಗಳ ಕುರಿತ ವಿದ್ವತ್ಪೂರ್ಣ ಉಪನ್ಯಾಸಗಳಿಗೆ ಸಹಾ ಅವರು ಪ್ರಸಿದ್ಧಿ ಪಡೆದಿದ್ದರು.
ತಮಿಳಿನಲ್ಲಿ ‘ಅಪೂರ್ವ ರಾಗಂಗಳ್’, ‘ತೆಲುಗಿನಲ್ಲಿ ಶಂಕರಾಭರಣಂ’, ‘ಸ್ವಾತಿ ಕಿರಣಂ’ ಚಿತ್ರಗಳಲ್ಲಿನ ಹಿನ್ನಲೆಗಾಯನಕ್ಕೆ ರಾಷ್ಟ್ರಪ್ರಶಸ್ತಿ, ಹಲವಾರು ರಾಜ್ಯಗಳ ಶ್ರೇಷ್ಠ ಗಾಯಕಿ ಪ್ರಶಸ್ತಿ, ಸಂಗೀತ ಸಂಮಾನ್, ಹಿಂದಿ ಭಾಷೆಯನ್ನೊಳಗೊಂಡಂತೆ ಹಲವು ಭಾಷೆಗಳ ಚಿತ್ರಗಳ ಗಾಯನಕ್ಕಾಗಿ ಫಿಲಂ ಫೇರ್ ಪ್ರಶಸ್ತಿ, ಪದ್ಮಭೂಷಣ ಹೀಗೆ ಹಲವಾರು ಪ್ರಶಸ್ತಿಗಳು ವಾಣಿ ಜಯರಾಂ ಸಂದಿದ್ದರಿಂದ ಆ ಪ್ರಶಸ್ತಿಗಳ ಮೌಲ್ಯಗಳು ಹೆಚ್ಚಿವೆ. ಈ ಪ್ರಶಸ್ತಿಗಳಲ್ಲಿ ಗುಜರಾಥ್, ಒರಿಸ್ಸಾ ರಾಜ್ಯಗಳ ಪ್ರಶಸ್ತಿಗಳೂ ಸೇರಿವೆ ಎಂದರೆ ವಾಣಿ ಜಯರಾಂ ಅವರಿಗಿರುವ ವ್ಯಾಪ್ತಿಯ ಅರಿವಾಗುತ್ತದೆ.
ಅವರ ವೆಬ್ ಪುಟದಲ್ಲಿ ವಾಣಿ ಜಯರಾಂ ಅವರ ಉದ್ಘೋಷ ಹೀಗಿದೆ “I need songs with substance. It was music rather than name, fame and glamour that always captivated me."
ಇಂತಹ ಮಹಾನ್ ಗಾಯಕಿ, ಸಜ್ಜನ ವ್ಯಕ್ತಿತ್ವದ ವಾಣಿ ಜಯರಾಂ ಅವರನ್ನು, ಇಡೀ ವಿಶ್ವ ಇವರು ನಮ್ಮವರು ಎಂದು ಅಭಿಮಾನಿಸಿದ್ದರಲ್ಲಿ ಅಚ್ಚರಿ ಇಲ್ಲ.
ಇಂತಹ ಮಹಾನ್ ಗಾಯಕಿ 2023ರ ಫೆಬ್ರವರಿ 4ರಂದು ನಿಧನರಾದರು. ದಿವ್ಯ ಜೀವಿಗಳೇ ಹಾಗೆ ಸದ್ದಿಲ್ಲದೆ ಬಾಳಿ ಸದ್ದಿಲ್ಲದೆ ಹೇಳದೆ ಕೇಳದೆ ಹೊರಟುಬಿಡುತ್ತಾರೆ.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿ ಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಈ ಮಹಾನ್ ಗಾಯಕಿಯ ನೆನಪು ಅಮರ🌷🙏🌷
On the birth anniversary of Great singer Vani Jayaram 🌷🙏🌷
ಕಾಮೆಂಟ್‌ಗಳು