ನಂಜುಂಡಸ್ವಾಮಿ
ವೈ. ಎಸ್. ನಂಜುಂಡಸ್ವಾಮಿ
ಚಿತ್ರಕಲೆ, ರೇಖಾಚಿತ್ರ ಮತ್ತು ವ್ಯಂಗ್ಯಚಿತ್ರಕಲಾವಿದರಾಗಿ ಅಪಾರವಾಗಿ ಕಣ್ಮನಗಳನ್ನು ಸೆಳೆಯುವವರಲ್ಲಿ ನಮ್ಮ ನಡುವೆ ಇರುವ ವೈ. ಎಸ್. ನಂಜುಂಡಸ್ವಾಮಿ ಪ್ರಮುಖರು. ಅವರು ವಿವಿಧ ಕಲಾವಿದರು, ಗಣ್ಯರು ಮತ್ತು ಜನಸಾಮಾನ್ಯರನ್ನು ತಮ್ಮ ರೇಖೆಗಳಲ್ಲಿ ನಿಯತಕಾಲಿಕಗಳಲ್ಲಿ, ಫೇಸ್ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕಲಾಪ್ರದರ್ಶನಗಳಲ್ಲಿ ಅಭಿವ್ಯಕ್ತಿಸಿರುವ ರೀತಿ ಅಪಾರ ಜನಸ್ತೋಮವನ್ನು ಆಕರ್ಷಿಸುತ್ತಿದೆ.
ನಂಜುಂಡಸ್ವಾಮಿ ಅವರು 1964ರ ನವೆಂಬರ್ 4ರಂದು ಜನಿಸಿದರು. ಮೂಲತಃ ಅವರು ಶಿವಮೊಗ್ಗದವರು. ಅವರ ತಂದೆ ವೈ. ಕೆ. ಶ್ರೀಕಂಠಯ್ಯನವರು ಕಲಾವಿದರಾಗಿ ವರ್ಣಚಿತ್ರಕಾರರಾಗಿ ಮತ್ತು ಸಂಗೀತದಲ್ಲಿ ವಾಗ್ಗೇಯಕಾರರಾಗಿ ಹೆಸರಾಗಿದ್ದರು. ಹೀಗೆ ಕಲಾತ್ಮಕ ಆವರಣದಲ್ಲಿ ಬೆಳೆದ ನಂಜುಂಡಸ್ವಾಮಿಗಳಿಗೆ ತಂದೆಯವರೇ ಮೊದಲ ಕಲಾಗುರು.
ಮುಂದೆ ನಂಜುಂಡಸ್ವಾಮಿ ಪ್ರಸಿದ್ಧ ಚಿತ್ರಕಲಾವಿದರೂ, ಶಿಲ್ಪಿಗಳೂ ಆದ ಕೆ. ಜ್ಞಾನೇಶ್ವರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಕಲಾಭ್ಯಾಸ ನಡೆಸಿದರು. ಪಾರಂಪರಿಕ ಮತ್ತು ವಾಣಿಜ್ಯ ಕಲಾಮಾಧ್ಯಮ ಕ್ಷೇತ್ರಗಳೆರಡರಲ್ಲೂ ಕೃಷಿ ನಡೆಸಿದ ಸ್ವಾಮಿ ಅವರಿಗೆ ರಾಮಧ್ಯಾನಿ, ಮೇಗರವಳ್ಳಿ ಸುಬ್ರಮಣ್ಯ ಮತ್ತು ಜೇಮ್ಸ್ ವಾಜ಼್ ಅಂತಹ ಕಲಾವಿದರ ಸಹಚರ್ಯೆ ಲಭಿಸಿತು.
ನಂಜುಂಡಸ್ವಾಮಿ ಅವರು ಶಿವಮೊಗ್ಗದಲ್ಲಿದ್ದು ವಾಣಿಜ್ಯ ನಗರಿ ಬೆಂಗಳೂರಿನ ನೆಲೆಗೆ ಬಂದದ್ದು 9 ವರ್ಷಗಳಿಂದೀಚೆಗೆ. ವ್ಯಂಗ್ಯಚಿತ್ರಗಳ ಲೋಕಕ್ಕೆ ಅವರು ಪ್ರವೇಶಿಸಿದ್ದು ಸಹಾ ಕಳೆದ ಏಳೆಂಟು ವರ್ಷಗಳಲ್ಲೇ. ಈ ಅವಧಿಯಲ್ಲೇ ತಮ್ಮ ಕಲಾಪ್ರತಿಭೆ, ಉತ್ಸಾಹ ಶ್ರದ್ಧೆಗಳಿಂದ ವ್ಯಂಗ್ಯಚಿತ್ರ ಕಲಾಲೋಕಕ್ಕೇ ಒಂದು ವಿಶಿಷ್ಟ ಕಳೆ ತಂದವರಾಗಿ ಸಹಾಸ್ರಾರು ಪ್ದಬುದ್ಧ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಅವರ ರೇಖಾ ಚಿತ್ರದಲ್ಲಿ ಮೂಡದಿರುವ ಪ್ರಸಿದ್ಧ ಕಲಾವಿದರೇ ಇಲ್ಲವೆನ್ನುವಷ್ಟು ಅವರ ರೇಖೆಗಳು ವಿಸ್ತೃತವಾಗಿ ವ್ಯಾಪಿಸುತ್ತಾ ಸಾಗಿದೆ. 'ತರಂಗ' ವಾರಪತ್ರಿಕೆಯ ಕಲಾವಿದರಾದ ಜೇಮ್ಸ್ ವಾಜ಼್ ಅವರಂತಹವರಿಗೆ ನಂಜುಂಡ ಸ್ವಾಮಿ ಅವರ ಕಲಾಸಾಮರ್ಥ್ಯ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಜೇಮ್ಸ್ ವಾಜ಼್ ಅವರು ನಂಜುಂಡ ಸ್ವಾಮಿ ಅವರ ಕಲಾಭಿವ್ಯಕ್ತಿಗೆ ಪ್ರೋತ್ಸಾಹ ಮತ್ತು ಅಭಿವ್ಯಕ್ತಿ ಮಾಧ್ಯಮದ ಬೆಂಬಲ ಒದಗಿಸಿದರು.
ಸ್ವಾಮಿ ಅವರದ್ದು ಅತ್ಯಂತ ಆಪ್ತ ಸ್ನೇಹಿ ಸದ್ಗುಣ. ಅವರು, ತಮಗೆ ಹಿರಿಯ ರೇಖಾಚಿತ್ರಗಾರರಾದ ಪ್ರಕಾಶ್ ಶೆಟ್ಟಿ, ಗುಜ್ಜಾರ್, ನರೇಂದ್ರ, ನಾಗನಾಥ್, ಸತೀಶ್ ಆಚಾರ್ಯ ಮುಂತಾದವರಿಂದ ದೊರೆತ ಪ್ರೇರಣೆಯನ್ನು ನೆನೆಯುವುದರ ಜೊತೆಗೆ, ಅನೇಕ ವ್ಯಂಗ್ಯಚಿತ್ರ ಕಲಾವಿದರ ಸಮೂಹಗಳು ತಮಗೆ ನೀಡಿರುವ ಸಲಹಾತ್ಮಕ ಪ್ರತಿಕ್ರಿಯೆಗಳನ್ನು ಸಹಾ ಆಪ್ತವಾಗಿ ಸ್ಮರಿಸುತ್ತಾರೆ.
ನಂಜುಂಡ ಸ್ವಾಮಿ ಅವರ ವ್ಯಂಗ್ಯಚಿತ್ರಗಳು ತರಂಗ, ತುಷಾರ, ಉತ್ಥಾನ ಸೇರಿದಂತೆ ಅನೇಕ ನಿಯತಕಾಲಿಕಗಳಲ್ಲಿ ಮೂಡುತ್ತಿರುವುದರ ಜೊತೆ ಜೊತೆಗೆ ಇಂಟರ್ನ್ಯಾಶನಲ್ ಕ್ಯಾರಿಕೇಚರ್ ಆರ್ಟ್ ಕಂಟೆಸ್ಟ್, ಟ್ರೆಡಿಷನಲ್ ಕ್ಯಾರೆಕೇಚರ್ ಆರ್ಟ್ ಕಂಟೆಸ್ಟ್ ಮುಂತಾದ ಪ್ರತಿಷ್ಠಿತ ಸ್ಪರ್ಧಾ ವೇದಿಕೆಗಳಲ್ಲಿಯೂ ಬಹುಮಾನಿತಗೊಂಡಿದೆ. ಪ್ರಸಿದ್ಧ ಕಲಾಪ್ರದರ್ಶನಗಳಲ್ಲಿಯೂ ಅಪಾರ ಕಲಾಭಿಮಾನಗಳನ್ನು ಆಕರ್ಷಿಸಿದೆ. 2022ರ ಜುಲೈ 3ರಿಂದ 10ರವರೆಗೆ ಒಂದು ವಾರದ ಕಾಲ ಇಂಡಿಯನ್ ಇನಸ್ಟಿಟ್ಯೂಟ್ನಲ್ಲಿ ಅವರ ಕಲಾಪ್ರದರ್ಶನವು ಸಂಗೀತ ಕಾರ್ಯಕ್ರಮಗಳ ಸಂಯೋಗದಲ್ಲಿ ನಡೆದು ವ್ಯಾಪಕವಾಗಿ ಜನರ ಹೃನ್ಮನಗಳನ್ನು ತಲುಪಿ ಅಪಾರ ಮೆಚ್ಚುಗೆ ಗಳಿಸಿತು. 2023ರ ನವೆಂಬರ್ ಮಾಸದಲ್ಲಿ "ಕಲಾಕುಂಚದಲ್ಲಿ ಅರಳಿದ ಕನ್ನಡ ಸಾಹಿತಿಗಳು" ಪ್ರದರ್ಶನ ನಡೆದಿದೆ
ನಂಜುಂಡಸ್ವಾಮಿ ಅವರ ರೇಖೆಗಳು ಹಾಸ್ಯಾಭಿವ್ಯಕ್ತಿಗಾಗಿ ರಾಜಕಾರಣಿಗಳನ್ನು ಮಾತ್ರ ಬಿಂಬಿಸದೆ, ಕೌಟುಂಬಿಕ, ಬದುಕಿನ ವಾಸ್ತವಿಕ ಸ್ಥಿತಿಗತಿಗಳು, ಸಂಗೀತ-ಸಾಹಿತ್ಯ-ರಂಗಭೂಮಿ-ಚಿತ್ರಕಲಾ ಲೋಕ, ಸಾಂಸ್ಕೃತಿಕ ಲೋಕ, ಜನಸಾಮಾನ್ಯ ಸ್ನೇಹ ಲೋಕ ಎಲ್ಲವನ್ನೂ ತನ್ನ ತೆಕ್ಕೆಯಲ್ಲಿ ಎಲ್ಲೂ ಮಿತಿಮೀರದೆ, ಉಲ್ಲಾಸಕರ ಸಾಂಸ್ಕೃತಿಕ ಆವರಣದಲ್ಲಿ ನವುರಾಗಿ ಅಭಿವ್ಯಕ್ತಿಸುತ್ತಾ ಸಾಗಿದೆ. ನಂಜುಂಡ ಸ್ವಾಮಿ ಅವರ ರೇಖಾಚಿತ್ರಗಳು ಹಾಸ್ಯಾಭಿವ್ಯಕ್ತಿಯನ್ನು ಹೊರಸೂಸುವುದರ ಜೊತೆ ಜೊತೆಗೆ, ಸಾಂಪ್ರಾದಾಯಿಕ ಕಲೆಗಳಲ್ಲಿ ಕಾಣಬರುವ ಚೆಲುವನ್ನೂ ಸಾಕಷ್ಟು ತುಂಬಿಕೊಂಡಿರುವುದು ನಮ್ಮಂತಹ ಸಾಮಾನ್ಯ ಕಣ್ಣುಗಳಿಗೂ ಗೋಚರಿಸುತ್ತದೆ.
ನಂಜುಂಡ ಸ್ವಾಮಿಯವರ ಈ ಕಲಾವಂತಿಕೆಯ ಸೊಬಗು ನಮ್ಮ ಮನಗಳನ್ನು ನಿರಂತರ ಮುದಗೊಳಿಸುತ್ತಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
On the birthday of our excellent artiste Nanjunda Swamy Sir
ಕಾಮೆಂಟ್‌ಗಳು