ವಾಲ್‍ಚಂದ್ ಹೀರಾಚಂದ್
ವಾಲ್‍ಚಂದ್ ಹೀರಾಚಂದ್
ದೂರದೃಷ್ಟಿಯ ಉದ್ಯಮಿ, ವಾಲ್‍ಚಂದ್ ಹೀರಾಚಂದ್ 'ಬೆಂಗಳೂರನ್ನು ವಾಯುಯಾನದ ಭೂಪಟದಲ್ಲಿ ಮೂಡಿಸಿದ ಕೀರ್ತಿಶಾಲಿಗಳು'. ಕನ್ನಡದ ನೆಲವು ಭಾರತದ ವಾಯುಯಾನದ ತವರೂರಾಗಲು ವಾಲ್ ಚಂದ್ ಹೀರಾಚಂದ್ ಅವರ ಪರಿಶ್ರಮ ಅನನ್ಯ. ಭಾರತದಲ್ಲಿ ಒಂದು ಸೈಕಲ್ ತಯಾರಿಸುವ ಕಾರ್ಖಾನೆ ಸಹಾ ಇಲ್ಲದಿದ್ದ ಕಾಲದಲ್ಲಿ ಆಗಿನ ಮೈಸೂರು ಸಂಸ್ಥಾನದಲ್ಲಿ ‘ಹಿಂದೂಸ್ಥಾನ್ ಏರ್ ಕ್ರಾಫ್ಟ್’ ಸಂಸ್ಥೆ ಸ್ಥಾಪಿತವಾಗಿದ್ದು ದೇಶಪ್ರೇಮಿ ಉದ್ಯಮಿಯೊಬ್ಬರ ಕನಸಿನ ಪ್ರೇರಣೆಯಾಗಿತ್ತು. ವಾಲ್‍ಚಂದರ ಈ ಕಾಯಕಕ್ಕೆ ಸರ್ ಎಂ ವಿಶ್ವೇಶ್ವರಯ್ಯನವರ ಗರಡಿಯಲ್ಲಿ ಮೂಡಿಬಂದ ಸೃಜನಶೀಲ ಮಿರ್ಜಾ ಇಸ್ಮಾಯಿಲ್ ಅವರ ಬೆಂಬಲ ಕೂಡಾ ಚರಿತ್ರೆಯಲ್ಲಿ ದಾಖಲಾಗಿದೆ. ವಿಮಾನ ಕಾರ್ಖಾನೆ ನಿರ್ಮಾಣಗೊಂಡ ಕೆಲವೇ ತಿಂಗಳುಗಳಲ್ಲಿ ’ಹಾರ್ಲೋ ಟ್ರೇನರ್ ವಿಮಾನ’ ಜೋಡಣೆಗೊಂಡು, ಜುಲೈ 29, 1941ರಂದು ಆಗಸದಲ್ಲಿ ಸಂಚರಿಸಿತು.
ಸೇಠ್ ವಾಲ್‍ಚಂದರು 1882ರ ನವೆಂಬರ್ 23ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ದಿಗಂಬರ ಜೈನ ಕುಟುಂಬದಲ್ಲಿ ಜನಿಸಿದರು. ಲಕ್ಷ್ಮಣರಾವ್ ಬಲ್ವಂತ್ ಪಾಠಕ್ ಅವರೊಂದಿಗೆ ಸೇರಿ, ಅವರು ರೈಲು ಗುತ್ತಿಗೆಯ ಉದ್ಯಮಕ್ಕೆ ಸಂಬಂಧಿಸಿದ ಪಾಠಕ್-ವಾಲ್‍ಚಂದ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿದರು. ಬೊಂಬಾಯಿನಿಂದ ಪುಣೆಗೆ ಭೋರ್ ಘಾಟ್ ಮೂಲಕ ಕೊರೆದು ಹೊರಟ ರೈಲು ಹಳಿಮಾರ್ಗ ಈ ಕಂಪೆನಿಯ ಕಾರ್ಯವಾಗಿತ್ತು. ಸಿಂಧೂನದಿಯಮೇಲೆ ಕಾಲಾಬಾಗ್ ಸೇತುವೆಯ ನಿರ್ಮಾಣದ ಕೆಲಸವನ್ನೂ ಇದೇ ಸಂಸ್ಥೆ ನಿರ್ವಹಿಸಿತ್ತು.
1919ರಲ್ಲಿ ಮೊದಲ ಮಹಾಯುದ್ಧ ಮುಗಿದ ನಂತರದಲ್ಲಿ ವಾಲ್‍ಚಂದರು ಹಡಗು ಉದ್ಯಮಕ್ಕೆ ಕಾಲಿಟ್ಟರು. ಗ್ವಾಲಿಯರಿನ ಸಿಂಧಿಯಾ ರಾಜರೊಡನೆ ಮಾತುಕತೆ ನಡೆಸಿ, ಎಸ್.ಎಸ್.ಲಾಯಲ್ಟಿ ಎಂಬ ಒಂದು ಉಗಿ ಹಡಗನ್ನು ಕೊಂಡರು. ಬ್ರಿಟಿಷ್ ಸರ್ಕಾರ ಮಾತ್ರ ಒಡೆತನವನ್ನು ಹೊಂದಿದ್ದ ಆಗಿನ ಹಡಗು ಉದ್ಯಮಕ್ಕೆ ವಾಲ್‍ಚಂದರು ಹೊಸಬರಾಗಿದ್ದರೂ ಇವರಿಗೆ ಮೊದಲು ಮತ್ಯಾರಿಗೂ ಪರವಾನಗಿ ದೊರೆತಿರಲಿಲ್ಲ. ಮಹಾತ್ಮ ಗಾಂಧೀಜಿಯವರು ಹೆಮ್ಮೆಯಿಂದ ಅಂದು, ತಮ್ಮ 'ಯಂಗ್ ಇಂಡಿಯಾ' ಹಾಗೂ 'ಹರಿಜನ್' ಪತ್ರಿಕೆಯಲ್ಲಿ ದಾಖಲಿಸಿದ, 'ಮೊಟ್ಟಮೊದಲ ಸ್ವದೇಶಿ ಶಿಪ್ಪಿಂಗ್ ಕಂಪೆನಿ'ಯಾಗಿದ್ದ ಸಿಂಧಿಯಾ ಸ್ಟೀಮ್ ನ್ಯಾವಿಗೆಷನ್ ಕಂಪನಿ ಲಿಮಿಟೆಡ್ ಅತ್ಯಂತ ಪ್ರಸಿದ್ಧಿ ಪಡೆಯಿತು. ವಿದೇಶಿಯರ ಜೊತೆ ಸ್ಪರ್ಧೆಗಿಳಿದ ನಮ್ಮ ದೇಶೀ ಉದ್ಯಮಶೀಲರೆಂದು ಗಾಂಧೀಜಿ ಕೊಂಡಾಡಿದ್ದರು. 1919ರ ಏಪ್ರಿಲ್ 5ರಂದು ಈ ಎಸ್ ಎಸ್ ಲಾಯಲ್ಟಿ ಹಡಗು ತನ್ನ ಮೊದಲ ಯಾನವನ್ನು ನಡೆಸಿದ ಸ್ಮರಣಾರ್ಥವಾಗಿ ಇಂದು ಕೂಡಾ ‘ಏಪ್ರಿಲ್ 5’ರ ದಿನವನ್ನು ‘ಸಮುದ್ರಯಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ಮುಂದೆ ವಾಲ್‍ಚಂದರಿಗೆ ಒಂದು ಸಶಕ್ತ ಹಡಗು ಕಟ್ಟುವ ತಾಣ ಅನಿವಾರ್ಯವೆಂದು ಅರಿವಾಯಿತು. ಈ ನಿಟ್ಟಿನಲ್ಲಿ ಅವರು ವಿಶಾಖಪಟ್ಟಣದಲ್ಲಿ ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಂಬ ಸಂಸ್ಥೆಯನ್ನು 1940ರಲ್ಲಿ ಸ್ಥಾಪಿಸಿದರು. ಆ ಸಂಸ್ಥೆಯ ಅಡಿಯಲ್ಲಿ ಮೊಟ್ಟಮೊದಲ ಹಡಗಾದ ‘ಜಲುಶಾ’ವನ್ನು 1948ರಲ್ಲಿ ಪ್ರಧಾನಿ ಜವಹರಲಾಲ್ ನೆಹರೂ ಉದ್ಘಾಟಿಸಿದ್ದರು. ಭಾರತದ ರೈಲು, ವಿಮಾನ, ಹಡಗು, ಕಾರು ಮುಂತಾದ ಉದ್ಯಮಗಳ ಹಿಂದೆ 'ವಾಲ್‍ಚಂದ್' ರವರ ಆರಂಭದ ಶ್ರಮವೆದ್ದು ಕಾಣಿಸುತ್ತಿತ್ತು.
ಬೆಂಗಳೂರಿನಲ್ಲಿ ವಿಮಾನಕಾರ್ಖಾನೆ ಸ್ಥಾಪಿತವಾದ 5 ವರ್ಷಗಳ ಬಳಿಕ ವಾಲ್ ಚಂದರ ಪರಿಶ್ರಮದಿಂದ ಮುಂಬೈನ ಉಪನಗರವಾದ, ಕುರ್ಲಾದಲ್ಲಿ 1945ರಲ್ಲಿ ಪ್ರೀಮಿಯರ್ ಆಟೋಮೊಬೈಲ್ಸ್ ಎಂಬ ಕಾರು ನಿರ್ಮಾಣದ ಸಂಸ್ಥೆ ತಲೆಯೆತ್ತಿತು. ವಾಲ್ ಚಂದರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆ ತಮ್ಮ ಯೋಜನೆಗಳಿಗೆ ದುಡಿದರೂ ಭಾರತದ ಸ್ವಾತಂತ್ರ್ಯದ ಹೋರಟದಲ್ಲಿ ಅಚಲ ಬೆಂಬಲಿಗರಾಗಿ ಸ್ವದೇಶಿ ಸ್ವಾವಲಂಬನೆಯ ಹಾದಿಯಲ್ಲಿ ಮುನ್ನುಗ್ಗಿ ಸಫಲರಾದರು. ಅವರ ಬಹಳಷ್ಟು ಯೋಜನೆಗಳನ್ನು ಉದ್ಘಾಟಿಸಿದವರು ಸ್ವಾತಂತ್ರ್ಯ ಚಳುವಳಿಗಾರರು.
ಕಲಂಬ್ ಎಂಬ ಬರಡು ಗ್ರಾಮವನ್ನು ಹಚ್ಚ ಹಸುರಿನ ಕಬ್ಬು ಬೆಳೆಗಳಿಂದ ಬೆಳಗಿಸಿ, 1934ರ ಕಬ್ಬಿನ ಉತ್ಪಾದನೆಗೆ ಉತ್ತೇಜಕವೋ ಎಂಬಂತೆ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಿದ ಕೀರ್ತಿ ಕೂಡಾ ವಾಲ್‍ಚಂದರಿಗೆ ಸೇರುತ್ತದೆ. ಇಂದು ಈ ಪ್ರದೇಶ ‘ವಾಲ್ ಚಂದ್ ನಗರ’ವೆಂಬ ಹೆಸರಿನಿಂದ ಪ್ರಖ್ಯಾತವೆನಿಸಿದೆ.
ವಾಲ್‍ಚಂದರು ಮೂಡಿಸಿದ ವಿಮಾನ ಮತ್ತು ಬಂದರುಗಳ ಒಡೆತನ ಸ್ವಾತಂತ್ರ್ಯಾನಂತರದಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟವು. ಹೀಗಾಗಿ ವಾಲ್‍ಚಂದ್ ಕೈಗಾರಿಕಾ ಸಮೂಹವು ಇಂದು ಉನ್ನತ ತಾಂತ್ರಿಕ ಉತ್ಪಾದನೆಗಳ ಕ್ಷೇತ್ರಕ್ಕೆ ತನ್ನ ಕಾರ್ಯಕ್ಷೇತ್ರವನ್ನು ಬದಲಿಸಿಕೊಂಡು ರಕ್ಷಣಾ ಉತ್ಪನ್ನಗಳು, ಪರಮಾಣು ತಂತ್ರಜ್ಞಾನ ಮತ್ತು ಬಾಹ್ಯಾಕಾಶಕ್ಕೆ ಅವಶ್ಯಕ ಉತ್ಪನ್ನಗಳು, ಸಿಮೆಂಟ್ ಉತ್ಪಾದನಾ ಯಂತ್ರಗಳ ನಿರ್ಮಾಣ, ಹಬೆ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು, ಸಕ್ಕರೆ ಕಾರ್ಖಾನೆಗಳು, ಕೈಗಾರಿಕಾ ಹಾಗೂ ಸಮುದ್ರಯಾನ ಗೇರ್ ಬಾಕ್ಸ್ ಉತ್ಪಾದನೆಗಳು, ವಾಹನಗಳ ಉದ್ಯಮ, ಸಿವಿಲ್ ಇಂಜಿನಿಯರಿಂಗ್ ಉದ್ಯಮ, ಆಣೆಕಟ್ಟು, ಸುರಂಗ ನಿರ್ಮಾಣ, ಬೃಹತ್ ಸೌಧ ನಿರ್ಮಾಣಕಾರ್ಯ ಮುಂತಾದ ಅನೇಕ ವಿಸ್ತೃತ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ವಾಲ್ ಚಂದರು 1953ರ ವರ್ಷದಲ್ಲಿ ಈ ಲೋಕವನ್ನಗಲಿದರು. ಅವರು ಭಾರತದಲ್ಲಿ ಮೂಡಿಸಿದ ಕೈಗಾರಿಕೆಯ ಹೊಂಗಿರಣ ತನ್ನ ಪ್ರಕಾಶವನ್ನು ತುಂಬಿಕೊಂಡು ನಿರಂತರವಾಗಿ ಮುನ್ನಡೆದಿದೆ. ಇದಕ್ಕೆ ಪೂರಕವೋ ಎಂಬಂತೆ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಹೀಗೆ ನುಡಿದಿದ್ದಾರೆ: “ರಾಷ್ಟ್ರಭಕ್ತ ಕೈಗಾರಿಕೋದ್ಯಮಿಗಳಾದ ವಾಲ್‍ಚಂದರ ಜೀವನ ಪ್ರತೀಕೂಲ ಸನ್ನಿವೇಶ ಎಂತದ್ದೇ ಇದ್ದರೂ ತಾಳ್ಮೆಯುತ ನಿರಂತರ ಪರಿಶ್ರಮಕ್ಕೇ ಜಯ ಎಂಬುದನ್ನು ಸಾರಿ ಹೇಳುತ್ತದೆ”. ಈ ಮಾತುಗಳು ವಾಲ್‍ಚಂದರು ಈ ದೇಶಕ್ಕೆ ನೀಡಿರುವ ಕೊಡುಗೆಯನ್ನು ಸಾರಿ ಹೇಳುತ್ತಿವೆ.
Walchand Hirachand
ಕಾಮೆಂಟ್‌ಗಳು