ಕೆ. ಎಸ್. ರಾಮಚಂದ್ರ
ಕೆ. ಎಸ್. ರಾಮಚಂದ್ರ
ನನಗೆ ಕನ್ನಡದ ಹೆಸರಲ್ಲಿ ಮೊಳೆಯಲು, ಬೆಳೆಯಲು ನೀರೆರೆದವರಲ್ಲಿ ಗೆಳೆಯ ಕೆ. ಎಸ್. ರಾಮಚಂದ್ರ ಪ್ರಮುಖರು. ಇಂದು ರಾಮಚಂದ್ರರಿಗೆ 72ನೇ ಹುಟ್ಟುಹಬ್ಬ.
ಈಗಲೂ ಚಟುವಟಿಕೆಯಿಂದ ಬೆಂಗಳೂರಿನ ವಿದ್ಯಾಸಂಸ್ಥೆಯೊಂದರಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿರುವ ರಾಮಚಂದ್ರರಿಗೆ 72 ಅಯ್ತಾ ಅಚ್ಚರಿ ಆಗುತ್ತೆ. ಜೊತೆಯಲ್ಲಿ ಬೆಳೆದ ಗೆಳೆಯರಿಗೆ ವಯಸ್ಸಾಯ್ತು ಅಂದ್ರೆ ನಂಬಕ್ಕಾಗೊಲ್ಲ. ನಂಬಕ್ಕಾಗಲ್ಲ ಅನ್ನೋಕಿಂತ ಇಷ್ಟ ಆಗಲ್ಲ. ಯಾಕೆ ಅಂದ್ರೆ ಅವರಿಗೆ ವಯಸ್ಸಾಯ್ತು ಅಂದರೆ, "ನನ್ ಮಗನೇ ನಿನಗೂ ವಯಸ್ಸಾಯ್ತು” ಅಂತ ಕಾಲ ನೆನಪಿಸುತ್ತೆ!
1980ರಲ್ಲಿ ನಾನು ಅಪ್ರೆಂಟಿಸ್ ಆಗಿ ಎಚ್ ಎಮ್ ಟಿ ವಾಚಸ್ ಮಾರ್ಕೆಟಿಂಗ್ ವಿಭಾಗಕ್ಕೆ ಸೇರಿದಾಗಲೇ ಎಚ್ ಎಮ್ ಟಿ ಪ್ರಧಾನ ಕಚೇರಿ ನಿಯಂತ್ರಣದಲ್ಲಿದ್ದ ಕಚೇರಿಗಳಿಗೆ ಸೇರಿದಂತೆ ಎಚ್ ಎಮ್ ಟಿ ಕನ್ನಡ ಸಂಪದ ಆರಂಭಗೊಂಡಿತು. ಎಚ್ ಎಸ್ ಸೂರ್ಯನಾರಾಯಣ, ಎಸ್ ಜಯಸಿಂಹ, ಎಂ.ನರಸಿಂಹ, ಕುಪ್ಪೂರಾವ್ ಪಂತ್, ಬಿ. ಎನ್. ಗುರುಪ್ರಕಾಶ್ ಅಂತಹ ನುರಿತವರ ಮಾರ್ಗದರ್ಶನ ಅಲ್ಲಿತ್ತು.
ಸುಮಾರು 1982ರ ವೇಳೆಗೆ ಕೆಲವರಿಗೆ ನಿವೃತ್ತಿ ಮತ್ತು ಕೆಲವರು ಸಂಸ್ಥೆ ಬಿಟ್ಟ ಕಾರಣ ಎಚ್ ಎಮ್ ಟಿ ಕನ್ನಡ ಸಂಪದದಲ್ಲಿ ಕೆ. ಎಸ್. ರಾಮಚಂದ್ರ ಕಾರ್ಯದರ್ಶಿ ಆಗಿ ನಾನು ಸಮಿತಿ ಸದಸ್ಯನಾದೆ. ರಾಮಚಂದ್ರರ ವಿಶಿಷ್ಟತೆ ಏನು ಅಂದ್ರೆ ಎಲ್ಲವನ್ನೂ ಮಾಡಿ ತಾವು ತೆರೆಯಹಿಂದೆ ನಿಲ್ಲುವ ಗುಣ. ನನಗೋ ಏನೂ ತಿಳಿಯದಿದ್ದರೂ ಮುಂದೆ ನಿಲ್ಲುವ ಚಪಲ. ಹೀಗೆ ರಾಮಚಂದ್ರ ಕನ್ನಡ ಸಂಪದದಲ್ಲಿ ನನಗೆ ಮುಂದೆ ನಿಲ್ಲುವ ಅವಕಾಶ ಕೊಟ್ಟು ನನಗೆ ಸದಾ ಶಕ್ತಿಯಾಗಿ ನಿಂತರು. ನಮ್ಮ ಈ ಕನ್ನಡ ಸಂಪದದ ಜೊತೆಗಾರಿಕೆ ಮುಂದೆ ಎರಡು ದಶಕಗಳ ಭವ್ಯ ವಿಸ್ತಾರ ಕಂಡಿತು.
ಕಾಲಾನುಕ್ರಮದಲ್ಲಿ ನಾನು ಹಲವು ಸಂಘಟನೆಗಳಲ್ಲಿ ಹಾದುಹೋಗಿದ್ದೇನೆ. ದೊಡ್ಡ ಹೆಸರಿನ ಸಂಸ್ಥೆಗಳಲ್ಲಿ ಹಲವು ರೀತಿ ಕ್ರಮಿಸಿದ್ದೇನೆ. ಎಲ್ಲೆಲ್ಲಿಯೂ ನಾಯಕತ್ವದ ಅಟ್ಟಹಾಸಗಳು ತಾಂಡವ ಆಡುತ್ತವೆ. ಮುಖ್ಯ ಸಮಾರಂಭ ಕೆಲವು ನಿಮಿಷಗಳಾದರೆ, ಏನೂ ಮಾಡದವರಿಗೆ ಸನ್ಮಾನಗಳು ಗಂಟೆಗಟ್ಟಲೆ ನಡೆಯುತ್ತವೆ. ತಮಗೆ ತಾವೇ ಸನ್ಮಾನ ಮಾಡಿಸಿಕೊಳ್ಳುವ ಪ್ರವೃತ್ತಿ ದಿನೇ ದಿನೇ ಕಾಹಿಲೆಯಾಗಿ ಪರಿಣಮಿಸಿದೆ. ಕನ್ನಡಕ್ಕಾಗಿ ನಿಂತ ರಾಮಚಂದ್ರರಿಗೆ ಯಾರೂ ಒಂದು ಹೂವಿರಲಿ ಒಂದು ಹುಲ್ಲುಕಡ್ಡಿಯನ್ನೂ ಕೊಡಲಿಲ್ಲ. ಆದರೂ ಇಂದೂ ನಮ್ಮ ಇಂದಿನ ಟೆಲಿಫೋನ್ ಕರೆಯಲ್ಲೂ ತುಂಬಿತುಳುಕುತ್ತಿದ್ದದ್ದು ಆತ್ಮೀಯತೆ ಮತ್ತು ಅಂತರಂಗದ ನಿಷ್ಕಳಂಕ ಕನ್ನಡ ಪ್ರೇಮ.
ಅಂದಿನ ದಿನಗಳಲ್ಲಿ ಕೆ. ಎಸ್. ರಾಮಚಂದ್ರ ಡಾ. ಎಂ. ಚಿದಾನಂದ ಮೂರ್ತಿ ಮತ್ತು ಕನ್ನಡ ಶಕ್ತಿ ಕೇಂದ್ರದವರು ಎಲ್ಲೇ ಕನ್ನಡ ಪರ ಕೂಗಿದರೂ ನಮ್ಮನ್ನೆಲ್ಲ ಜೊತೆ ಸೇರಿಸಿ ಕರೆದುಕೊಂಡು ಹೋಗುತ್ತಿದ್ದರು. ಇಂತಹವರ ಉಪನ್ಯಾಸ ಕಾರ್ಯಕ್ರಮ ಮಾಡೋಣ ಅಂದರೆ ತಕ್ಷಣ ಅವರ ಮನೆಗೆ ಹೋಗಿ ಕಾರ್ಯಕ್ರಮ ನಡೆಸಲಿಕ್ಕೆ ಅನುವು ಮಾಡಿಕೊಡುತ್ತಿದ್ದರು. ಪ್ರವಾಸ ಕಾರ್ಯಕ್ರಮವನ್ನು ಕನ್ನಡ ಸಂಪದದ ಮೂಲಕ ಮಾಡುತ್ತಿದ್ದರು. ಆದರೆ ಮೈಕ್ ಹಿಡಿಯಬೇಕು, ನಾಯಕನಾಗಬೇಕು ಎಂದು ಎಂದೂ ಅವರ ಮನದಲ್ಲಿ ಸುಳಿಯಲೇ ಇಲ್ಲ. ಸನ್ಮಾನ ಅವರಿಗೆ ಮಾಡಿಗೊತ್ತಿತ್ತು. ಎಂದೂ ಪಡೆಯಬೇಕು ಎಂದು ಆಶಿಸಲಿಲ್ಲ.
ಕನ್ನಡ ಭಾಷೆ ಉಳಿಯುವುದು, ಬೆಳೆಯುವುದು ತಾವು ದೊಡ್ಡವರೆಂದು ಭಾವಿಸಿದವರಿಂದ ಅಲ್ಲ. ತಮ್ಮನ್ನು ದೊಡ್ಡವರಾಗಿ ಭಾವಿಸದ ರಾಮಚಂದ್ರರಂತಹ ಸರಳರಿಂದ.
ಅಂದಿನ ದಿನಗಳಲ್ಲಿ ಒಂದು ಕಾರ್ಯಕ್ರಮ ಮಾಡಬೇಕೆಂದರೆ, ಅದಕ್ಕೆ ಆಯೋಜನೆ ಮಾಡಲು ನಮ್ಮ ರಜೆ ಉಪಯೋಗಿಸಬೇಕಿತ್ತು. ನಮ್ಮಲ್ಲಿದ್ದ ಪುಡಿಗಾಸು ಕ್ರೋಡೀಕರಣ ಮಾಡಬೇಕಿತ್ತು, ಜನ ಸೇರಿಸಲು ಕಷ್ಟಪಡಬೇಕಿತ್ತು, ಬಂದವರಿಗೆ ತಿಂಡಿ ತೀರ್ಥ ಕೊಟ್ಟು ಅವರ ತಟ್ಟೆ ಲೋಟ ನಾವು ತೊಳೆಯಬೇಕಿತ್ತು, ಅಂದಿನ ದಿನಗಳ ಕನ್ನಡೇತರ ಅಧಿಕಾರಿಗಳಿಗೆ ನಾವು ಹಾಸ್ಯಾಸ್ಪದ ಬಂಡುಕೋರರಂತೆ ಕಾಣುತ್ತಿದ್ದರೆ, ಈ ಕಾರ್ಯಕ್ರಮಗಳೆಲ್ಲ ಬುದ್ಧಿವಂತರಿಗಲ್ಲ ಎಂದು ಬೀಗುತ್ತಿದ್ದ ಕನ್ನಡದವರಿಗೆ ನಾವು ಕಾಲಹರಣ ಮಾಡುವವರಾಗಿ ಕಾಣಬರುತ್ತಿದ್ದೆವು. ಉದಾರವಾದಿಗಳಿಗೆ ನಾವು ಪ್ರತ್ಯೇಕತಾ ವಾದಿಗಳಾಗಿ ಕಾಣುತ್ತಿದ್ದೆವು. ಇದನ್ನೆಲ್ಲ ಅನುಭವಿಸಿಯೂ ಇಂದೂ ಕನ್ನಡ ಪ್ರೀತಿ ಉಳಿಸಿಕೊಳ್ಳುವುದು ಕಡಿಮೆಯ ಮಾತಲ್ಲ. ಬಹುಶಃ ಈ ಅನುಭವವೇ ನಮ್ಮ ಕನ್ನಡ ಪ್ರೀತಿಯ ಗುಟ್ಟಿದ್ದರೂ ಇದ್ದೀತು.
ಅತ್ಮೀಯ ರಾಮಣ್ಣ ಉರುಫ್ ರಾಮಚಂದ್ರ ನಿಮ್ಮೊಡನೆ ಕನ್ನಡದಲ್ಲಿ ಹೆಜ್ಜೆ ಇಟ್ಟಿದ್ದು ಮತ್ತು ಈಗಲೂ ನಿಮ್ಮೊಡನೆ ಸ್ನೇಹಹೊಂದಿರುವುದು ನನಗೆ ಧನ್ಯಭಾವ. ಅದು ಸದಾ ನನ್ನದಾಗಿರಲಿ. ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು ರಾಮಣ್ಣ. ಬದುಕು ಸುಂದರವಾಗಿರಲಿ.
🌷🙏🌷🙏🌷🙏🌷🙏🌷🙏🌷🙏🌷🙏🌷
Happy birthday Ramachandra
ಕಾಮೆಂಟ್‌ಗಳು