ಹೆಲೆನ್
ಹೆಲೆನ್
ಹೆಲೆನ್ ಹಿಂದೀ ಚಲನಚಿತ್ರಗಳಲ್ಲಿ ನರ್ತಕಿಯ ಪಾತ್ರದಲ್ಲಿ ಬಹುಕಾಲ ನಟಿಸಿದವರು. ಅವರು ಸುಮಾರು 700 ಚಿತ್ರಗಳಲ್ಲಿ ನಟಿಸಿದ್ದರು.
ಹೆಲೆನ್ ಆನ್ ರಿಚರ್ಡ್ಸನ್ 1939ರ ನವೆಂಬರ್ 21ರಂದು ಬರ್ಮಾದ ರಂಗೂನ್‍ನಲ್ಲಿ ಜನಿಸಿದರು. ತಂದೆ ಎರಡನೇ ವಿಶ್ವಮಹಾಯುದ್ಧದಲ್ಲಿ ನಿಧನರಾದರು. 1943ರಲ್ಲಿ ಇವರ ಕುಟುಂಬದವರು ಬರ್ಮಾವನ್ನು ಆಕ್ರಮಿಸಿದ ಜಪಾನ್ ಸೇನೆಯಿಂದ ತಪ್ಪಿಸಿಕೊಂಡು ಮುಂಬೈಗೆ ಪಲಾಯನ ಬಂದರು. ದಾದಿಯಾಗಿ ಕೆಲಸ ಮಾಡುತ್ತಿದ್ದ ತಾಯಿಯ ಸಂಪಾದನೆ ಸಾಲದಾಗಿ ಹೆಲೆನ್ ಮನೆಯಲ್ಲೇ ಇದ್ದಳು.
ಇವರ ಕುಟುಂಬಕ್ಕೆ ಪರಿಚಯವಾಗಿದ್ದ ಅಂದಿನ ಯುಗದ ಸಿನಿಮಾದಲ್ಲಿ ನರ್ತಕಿಯಾಗಿ ಪ್ರಸಿದ್ಧರಾಗಿದ್ದ ಕುಕೂ ಅವರ ಮೂಲಕ ಹೆಲೆನ್ 1951ರಲ್ಲಿ 'ಶಬಿಸ್ತಾನ್' ಮತ್ತು 'ಆವಾರ' ಚಿತ್ರಗಳಲ್ಲಿ ಸಮೂಹ ನೃತ್ಯಗಳಲ್ಲಿನ ಸಹನರ್ತಕಿಯಾಗಿ ಭಾಗವಹಿಸಿದರು.
ಕ್ರಮೇಣದಲ್ಲಿ ಹೆಲೆನ್ ಪ್ರಧಾನ ನರ್ತಕಿಯಾಗಿ, ಕುಕೂ ಅವರು ಸಮೂಹ ನರ್ತಕಿಯಾಗಿ ಪಾಲ್ಗೊಳ್ಳುವ ಹಾಗೆ ಕಾಲ ಬದಲಾಯಿತು. 1954ರಲ್ಲಿ ಅಲಿಫ್ ಲೈಲಾ, ಹೂರ್-ಎ-ಅರಾಬ್ ಮುಂತಾದ ಚಿತ್ರಗಳಲ್ಲಿ ಹೆಲೆನ್ ನರ್ತಿಸಿದರು. ಮಯೂರ್ಪಂಕ್ ಚಿತ್ರದಲ್ಲಿ ಬೀದಿ ಗಾಯಕಿಯಾಗಿ ಹೆಲೆನ್ ಅಭಿನಯಿಸಿದರು.
1958ರಲ್ಲಿ ಶಕ್ತಿಸಾಮಂತ್ ಅವರ 'ಹೌರಾ ಬ್ರಿಡ್ಜ್' ಚಿತ್ರದಲ್ಲಿ ಗೀತಾ ದತ್ ಹಾಡಿದ 'ಮೇರಾ ನಾಮ್ ಚಿನ್ ಚಿನ್ ಚು' ನರ್ತನ ಹೆಲೆನ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಮುಂದೆ ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಅವರಿಗೆ ಅವಕಾಶಗಳ ಹೊಳೆಯೇ ಹರಿದುಬಂತು. ಗೀತಾದತ್ ಮತ್ತು ಆಶಾ ಬೋಸ್ಲೆ ಅವರ ಅನೇಕ ಪ್ರಸಿದ್ಧ ಗೀತೆಗಳಿಗೆ ಹೆಲೆನ್ ನಟಿಸಿದರು.
ಗುಮ್ನಾಮ್ ಚಿತ್ರದ ಅಭಿನಯಕ್ಕೆ ಹೆಲೆನ್ ಫಿಲಂಫೇರ್ ಪ್ರಶಸ್ತಿಗೆ ನಾಮಾಂಕಿತಗೊಂಡರು. ಚೈನಾ ಟೌನ್, ಸಚಾಯಿ ಚಿತ್ರಗಳಲ್ಲಿ ಶಮ್ಮಿ ಕಫೂರ್ ಒಂದಿಗೆ ಅವರ ನರ್ತನ ಜನಪ್ರಿಯಗೊಂಡಿತು. ಚೋಟೆ ಸರ್ಕಾರ್ ಚಿತ್ರದಲ್ಲಿ ಅವರ ಅಭಿನಯ ಸೂಕ್ಷ್ಮಜ್ಞತೆಗಳಿಂದ ಮೆಚ್ಚುಗೆ ಪಡೆಯಿತು. ಜಂಗ್ಲಿಯ 'ಸುಕು ಸುಕು', ಚೈನಾ ಟೌನ್ ಚಿತ್ರದ 'ಯಮ ಯಮ', ತೀಸ್ರೀ ಮಂಜಿಲ್ ಚಿತ್ರದ 'ಈ ಹಸೀನಾ ಸುಲ್ಫೋವಾಲಿ', ಸಿಂಗಾಪುರದಲ್ಲಿ 'ಹೈಯ್ ಪ್ಯಾರ್ ಕಾ ಹಿ ನಾಮ್', ಪ್ರಿನ್ಸ್ ಚಿತ್ರದ 'ಮುಕಾಬಲ ಹಮ್ಸೆ ನ ಕರೋ' ಮುಂತಾದ ಗೀತೆಯ ಹೆಲೆನ್ ನರ್ತನಗಳು ಜನಪ್ರಿಯಗೊಂಡವು.
ಬರಹಗಾರ ಸಲೀಮ್ ಖಾನ್ ಅವರ ಸಹಾಯದಿಂದ ಹೆಲೆನ್ ಇಮಾನ್ ಧರಮ್, ಡಾನ್, ದೋಸ್ತಾನಾ ಮತ್ತು ಶೋಲೆ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ಪಾತ್ರವಹಿಸಿದರು. ಮಹೇಶ್ ಭಟ್ ಅವರ 'ಲಹು ಕೆ ದೋ ರಂಗ್' ಅಭಿನಯ ಹೆಲೆನ್ ಅವರಿಗೆ ಫಿಲಂಫೇರ್ ಪ್ರಶಸ್ತಿ ತಂದುಕೊಟ್ಟಿತು.
1983ರಲ್ಲಿ ನಿವೃತ್ತಿ ಘೋಷಿಸಿದ ಹೆಲೆನ್ ಮುಂದೆ ಕಾಮೋಷಿ, ಮೊಹಬತ್ತೆನ್, ಹಮ್ ದಿಲ್ ದೆ ಚುಕೆ ಸನಮ್ ಅಂತಹ ಕೆಲವು ಚಿತ್ರಗಳಲ್ಲಿ ಮಾತ್ರಾ ನಟಿಸಿದರು.
ಹೆಲೆನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಫಿಲಂಫೇರ್ ಜೀವಮಾನ ಸಾಧನಾ ಗೌರವ ಮುಂತಾದ ಗೌರವಗಳು ಸಂದವು.
ಮರ್ಚೆಂಟ್ ಐವರಿ ಸಂಸ್ಥೆ 'ಕ್ವೀನ್ ಆಫ್ ನಾಚ್ ಗರ್ಲ್ಸ್' ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿತು. ಜೆರ್ರಿ ಪಿಂಟೋ ಅವರು 'The Life and Times of an H-Bomb’ ಎಂಬ ಹೆಸರಿನಲ್ಲಿ ಪ್ರಕಟಿಸಿದ ಹೆಲೆನ್ ಅವರ ಕುರಿತ ಜೀವನ ಚರಿತ್ರೆ ರಾಷ್ಟ್ರೀಯ ಪುರಸ್ಕಾರ ಗಳಿಸಿತು.
On the birthday of popular film artiste Helen
ಕಾಮೆಂಟ್‌ಗಳು