ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿರಾಟ್ ಕೊಹ್ಲಿ


ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಕ್ರಿಕೆಟ್ ಯುಗದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು.

1988ರ  ನವೆಂಬರ್ 5ರಂದು ದೆಹಲಿಯಲ್ಲಿ ಜನಿಸಿದ ವಿರಾಟ್ ಕೊಹ್ಲಿ 2008ರ ವರ್ಷದಲ್ಲಿ 19ವರ್ಷಕ್ಕಿಂತ ಕಿರಿಯರ ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡದ ನಾಯಕತ್ವ ನಿರ್ವಹಿಸಿ, ಮರುವರ್ಷದಲ್ಲೇ ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಮುಂದೆ ಟೆಸ್ಟ್ ಕ್ರಿಕೆಟ್ ಕೂಡಾ ಪ್ರವೇಶಿಸಿದ ಅವರು ಎಲ್ಲ ರೀತಿಯ ಕ್ರಿಕೆಟ್ನಲ್ಲೂ ತಮ್ಮ ವಿರಾಟ್ ಬ್ಯಾಟಿಂಗ್ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಕೆಲವೇ ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ಅವರಂತೆ ಮತ್ತೊಬ್ಬ ದಾಖಲೆ ವೀರ ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದ ವಿಶ್ವಕ್ಕೆ, ವಿರಾಟ್ ಕೊಹ್ಲಿ ಮತ್ತೊಂದು ಭಾರತೀಯ ಉತ್ತರವಾಗಿದ್ದಾರೆ. ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಸ್ಟೀವ್ ವಾ ಅವರು 'ವಿರಾಟ್ ಕೊಹ್ಲಿ' ಡಾನ್ ಬ್ರಾಡ್ಮನ್ ಅವರ (99.94) ರನ್ ಸರಾಸರಿ ದಾಖಲೆ ಹೊರತು ಪಡಿಸಿದಂತೆ ಉಳಿದೆಲ್ಲ ದಾಖಲೆಗಳನ್ನೂ ಮೀರುವ ಅಪರಿಮಿತ ಶಕ್ತಿವಂತ ಎಂದು ಶ್ಲಾಘಿಸಿದ್ದಾರೆ.

ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಶೀಘ್ರವಾಗಿ ಕೇವಲ 205 ಪಂದ್ಯಗಳಲ್ಲಿ 10000 ರನ್ ಪೂರೈಸಿದ ಕೀರ್ತಿಯ ವಿರಾಟ್ ಕೊಹ್ಲಿ ಒಂದಾದ ನಂತರ ಮತ್ತೊಂದು ದಾಖಲೆಗಳನ್ನು ಪೋಣಿಸುತ್ತಲೇ ಸಾಗಿದ್ದು, ಎಂದೂ ಅಸಾಧ್ಯವೆಂದು ಭಾವಿಸಲಾಗಿದ್ದ ತೆಂಡೂಲ್ಕರ್ ದಾಖಲೆಗಳನ್ನೂ ಮೀರಿ ಸಾಗಿದ್ದಾರೆ.

ಹಲವಾರು ವರ್ಷಗಳಲ್ಲಿ ಐ.ಸಿ.ಸಿ ಒಂದು ದಿನದ ಪಂದ್ಯಗಳ ಶ್ರೇಷ್ಠ, ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿವೆ. 

ಇನ್ನೂ ಕಿರಿಯ ವಯಸ್ಸಿನಲ್ಲೇ 116 ಟೆಸ್ಟ್ ಪಂದ್ಯಗಳಲ್ಲಿ 29 ಶತಕಗಳೊಡನೆ 9017 ರನ್ಗಳು, 295 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 50 ಶತಕಗಳೊಡನೆ 13,906 ರನ್ಗಳು ಹಾಗೂ ಇಪ್ಪತ್ತು ಓವರುಗಳ ಪಂದ್ಯಾವಳಿಗಳಲ್ಲಿ 399 ಪಂದ್ಯಗಳಲ್ಲಿ 9 ಶತಕ ಮತ್ತು 97 ಅರ್ಧ ಶತಕಗಳೊಡನೆ 12,886 ರನ್ಗಳನ್ನು ಸಾಧಿಸಿದ ಈ ಹುಡುಗನ ವಿರಾಟ್ ಸಾಮರ್ಥ್ಯ ಅಚ್ಚರಿ ಹುಟ್ಟಿಸುವಂತದ್ದು.

ದಿನ ಬೆಳಗಾದರೆ ವಿಶ್ವದೆಲ್ಲೆಡೆ ಕ್ರಿಕೆಟ್, ಬೆಂಬಿಡದೆ ಕಾಡುವ ಮಾಧ್ಯಮ ಮತ್ತು ಪ್ರಸಿದ್ಧಿ, ನಾಯಕತ್ವವಿದ್ದಾಗ ಅದರ ಒತ್ತಡ, ಅದು ಕೈ ಬಿಟ್ಟಾಗ ಮಾನಸಿಕ ಹೊಂದಾಣಿಕೆಯಲ್ಲಿನ ಕಷ್ಟ,

ಹಲವು ನೂರು ಉತ್ತಮ ಕ್ರಿಕೆಟ್ಟಿಗರನ್ನು ತಯಾರುಮಡುತ್ತಿರುವ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದ ಹೇಗೆಂಬ ಪ್ರಶ್ನೆ ಇತ್ಯಾದಿಗಳ ನಡುವೆ ಆಗಾಗ ಸುಡುಬೂದಿಯಂತೆ ಮೇಲೆದ್ದು ಬರುವ ಫೀನಿಕ್ಸ್ ಪಕ್ಷಿಯಂತೆ ತನ್ನ ವಿರಾಟ್ ಸ್ವರೂಪವನ್ನು ತೋರುತ್ತಿರುವ ವಿರಾಟ್ ಕೊಹ್ಲಿಯ ಸಾಧನೆ ನಿಜಕ್ಕೂ ಅಮೋಘವಾದುದು.

ಈ ಹುಡುಗ ಇನ್ನೂ ಅನೇಕ ವರ್ಷಗಳ ವರೆವಿಗೆ ಉತ್ತಮ ಸಾಧನೆ ಮಾಡುತ್ತಿರಲಿ ಮತ್ತು ಸಂತೋಷವಾಗಿರಲಿ ಎಂದು ಶುಭ ಹಾರೈಸೋಣ.

On the birth day of amazing achiever Virat Kohli


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ