ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಶ್ರೀಕಂಠಶಾಸ್ತ್ರೀ


 ಎಸ್. ಶ್ರೀಕಂಠಶಾಸ್ತ್ರೀ


ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರು ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಒಬ್ಬರು. 

ಬೆಂಗಳೂರಿನ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಶ್ರೀಕಂಠಶಾಸ್ತ್ರೀ ಅವರ ಪೂರ್ವಜರು ಊರು. ಶಾಸ್ತ್ರೀ ಅವರು 1904ರ ನವೆಂಬರ್ 5ರಂದು ಜನಿಸಿದರು. ಕೋಲಾರದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ಮುಂದೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ನಡೆಸಿದರು. 

ಶ್ರೀಕಂಠಶಾಸ್ತ್ರೀ ಅವರು ಎಂ. ಎ. ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿಯೇ ಲಂಡನ್‌ನ ಪ್ರತಿಷ್ಠಿತ ಜೆ.ಆರ್.ಎ.ಎಸ್. ಪತ್ರಿಕೆ,  ಇಂಡಿಯನ್ ಆಂಟಿಕ್ವರಿ, ಮಾಡರ್ನ್ ರೆವ್ಯೂ ಮುಂತಾದ ಸಂಶೋಧನಾ ಪತ್ರಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿ ವಿದ್ವಾಂಸರ ಗಮನ ಸೆಳೆದಿದ್ದರು. ಕರ್ನಾಟಕ ಇತಿಹಾಸವನ್ನು ಕುರಿತು ಸಂಶೋಧನೆ ಮಾಡಲು ದೊರೆತ ವಿದ್ಯಾರ್ಥಿ ವೇತನವನ್ನು ಉಪಯೋಗಿಸಿಕೊಂಡು ‘ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ’ ಎಂಬ ಸಂಶೋಧನಾ ಗ್ರಂಥವನ್ನು ಇಂಗ್ಲಿಷಿನಲ್ಲಿ ಸಿದ್ಧಪಡಿಸಿದರು.

ಶ್ರೀಕಂಠಶಾಸ್ತ್ರೀ ಅವರು 1935ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ, ಮುಂದೆ ವಿಭಾಗದ ಮುಖ್ಯಸ್ಥರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದರು. 

ಶಾಸ್ತ್ರೀ ಅವರು 1949ರಲ್ಲಿ ಡಿ. ಲಿಟ್. ಪದವಿಗಾಗಿ ಅದುವರೆಗೂ ತಾವು ಪ್ರಕಟಿಸಿದ್ದ ಸಂಶೋಧನಾ ಪ್ರಬಂಧಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಪರೀಕ್ಷಕರಾಗಿದ್ದ ರಾಧಾ ಕುಮುದ ಮುಖರ್ಜಿ ಅವರು  ‘ಇಷ್ಟು ದೊಡ್ಡ ಪ್ರಮಾಣದ ಸಂಶೋಧನಕಾರ್ಯಕ್ಕೆ ಡಿ. ಲಿಟ್.ನಂಥ ಪದವಿ ಅತ್ಯಲ್ಪ ಮಾತ್ರದ್ದಾಗುತ್ತದೆ’ ಎಂದು ಟಿಪ್ಪಣಿ ಬರೆದಿದ್ದರಂತೆ.

ಶ್ರೀಕಂಠಶಾಸ್ತ್ರೀ ಅವರ ವಿದ್ವತ್ತು, ಪರಿಶ್ರಮಗಳು ಕೇವಲ ಇತಿಹಾಸಕ್ಕಷ್ಟೆ ಸೀಮಿತವಾಗಿರಲಿಲ್ಲ. ಸಾಹಿತ್ಯ, ಅಧ್ಯಾತ್ಮ, ಸಂಸ್ಕೃತಿ, ಚಿತ್ರಕಲೆ, ಶಾಸನಶಾಸ್ತ್ರ, ಪುರಾತತ್ವ, ಮೂರ್ತಿಶಿಲ್ಪ, ಅಲಂಕಾರಶಾಸ್ತ್ರ, ರಾಜ್ಯಶಾಸ್ತ್ರ- ಹೀಗೆ ಹತ್ತು ಹಲವು ವಿಷಯಗಳಲ್ಲಿ ಅವರದ್ದು ತಲಸ್ಪರ್ಶಿಯಾದ ಪಾಂಡಿತ್ಯವಾಗಿತ್ತು. ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್ ಮುಂತಾದ ವಿದೇಶಿ ಭಾಷೆಗಳಲ್ಲೂ ಅವರು ಪ್ರಭುತ್ವ ಸಂಪಾದಿಸಿದ್ದರು.

ಶ್ರೀಕಂಠಶಾಸ್ತ್ರೀ ಅನೇಕ ಸಂಶೋಧನಾ ಗ್ರಂಥಗಳನ್ನೂ ನೂರಾರು ಪ್ರಬಂಧಗಳನ್ನೂ ಪ್ರಕಟಿಸಿದ್ದರು. ಅವರ ‘ಭಾರತೀಯ ಸಂಸ್ಕೃತಿ’ ಗ್ರಂಥವು ಭಾರತೀಯ ಸಂಸ್ಕೃತಿಯನ್ನು ಕುರಿತಂತೆ ರಚಿತವಾಗಿರುವ ಪ್ರಮುಖ ಆಕರ ಗ್ರಂಥಗಳಲ್ಲಿ ಒಂದೆನಿಸಿದೆ. ‘ರೋಮನ್ ಚಕ್ರಾಧಿಪತ್ಯದ ಇತಿಹಾಸ’, ‘ಪ್ರಪಂಚ ಚರಿತ್ರೆಯ ರೂಪರೇಖೆಗಳು’, ‘ಪುರಾತತ್ವ ಶೋಧನೆ’, ‘ಹೊಯ್ಸಳ ವಾಸ್ತುಶಿಲ್ಪ’ ಅವರ ಪ್ರಮುಖ ಕನ್ನಡ ಕೃತಿಗಳು. ‘ಪ್ರೊಟೊ ಇಂಡಿಕ್ ರಿಲಿಜಿಯನ್’, ‘ಐಕನಾಗ್ರಫಿ ಆಫ್ ವಿದ್ಯಾರ್ಣವತಂತ್ರ’, ‘ಅರ್ಲಿ ಗಂಗಾಸ್ ಆಫ್ ತಲಕಾಡ್’, ‘ಎವಲ್ಯೂಷನ್ ಆಫ್ ಗಂಡಬೇರುಂಢ’- ಇವು ಅವರ ಪ್ರಮುಖ ಇಂಗ್ಲಿಷ್ ಕೃತಿಗಳು. ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಜಗತ್ತಿನ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಈ ಬರಹಗಳು ಆರ್. ಸಿ. ಮಜುಂದಾರ್, ಪಿ. ಕೆ. ಗೋಡೆ, ಡಿ. ಸಿ. ಸರ್ಕಾರ್, ಆ. ನೇ. ಉಪಾಧ್ಯೇ ಮುಂತಾದ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿತ್ತು. 

ಶ್ರೀಕಂಠಶಾಸ್ತ್ರೀ ಅವರು ಜನಸಾಮಾನ್ಯರಿಗೂ ಇತಿಹಾಸ ಸಂಶೋಧನೆಯ ಓದು ದಕ್ಕಬೇಕೆಂದು ನೂರಾರು ಲೇಖನಗಳನ್ನು ದಿನಪತ್ರಿಕೆಗಳಿಗೂ ಬರೆದರು. ಹೀಗೆ ಬರೆದ ಅವರ ಬಹುತೇಕ ಲೇಖನಗಳು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡವು. ಶಾಸ್ತ್ರೀ ಅವರು ಕನ್ನಡದಲ್ಲಿ ಬರೆದಿರುವ 112 ಸಂಶೋಧನಾ ಲೇಖನಗಳನ್ನು ಸೇರಿಸಿ ಸಂಪುಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಡಾ.ಬಾ.ರಾ. ಗೋಪಾಲ್ ಮತ್ತು ಡಾ.ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಸಂಪಾದಕತ್ವದಲ್ಲಿ ಪ್ರಕಟಿಸಿತು. ಮುಂದೆ ಇಂಗ್ಲಿಷ್ ಪ್ರಬಂಧಗಳು ಮಿಥಿಕ್ ಸೊಸೈಟಿಯಿಂದ ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು.

ಶ್ರೀಕಂಠಶಾಸ್ತ್ರೀ ಅವರ ಶಿಷ್ಯರೂ ಅಭಿಮಾನಿಗಳೂ ಅವರಿಗೆ ‘ಶ್ರೀಕಂಠಿಕಾ’ ಎಂಬ ಅಭಿನಂದನಾ ಗ್ರಂಥವನ್ನು 1973ರಲ್ಲಿ ಅರ್ಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಮಿಥಿಕ್ ಸೊಸೈಟಿಯ ವಜ್ರಮಹೋತ್ಸವ ಸನ್ಮಾನ ಮುಂತಾದ ಗೌರವಗಳು ಶ್ರೀಕಂಠಶಾಸ್ತ್ರೀ ಅವರಿಗೆ ಸಂದಿದ್ದವು. 

ಶ್ರೀಕಂಠಶಾಸ್ತ್ರಿಗಳು 1974ರ ಮೇ 10ರಂದು ಈ ಲೋಕವನ್ನಗಲಿದರು. 

Great historian, Indologist, and polyglot Dr. Sondekoppa Srikanta Sastri 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ