ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೇಜಸ್ವಿನಿ ಹೆಗಡೆ



 ತೇಜಸ್ವಿನಿ ಹೆಗಡೆ


ಇಂದು ಕವಯತ್ರಿ, ಕತೆ-ಕಾದಂಬರಿಗಾರ್ತಿ, ಸಾಹಿತ್ಯಕ-ಸಾಂಸ್ಕೃತಿಕ-ಜನಪರ ಕಾರ್ಯಕರ್ತೆ, ಹಸನ್ಮುಖಿ ಮತ್ತು ನಮ್ಮೆಲ್ಲರ ಆತ್ಮೀಯರಾದ ತೇಜಸ್ವಿನಿ ಹೆಗಡೆ ಅವರ ಜನ್ಮದಿನ.


ತೇಜಸ್ವಿನಿ ಅವರ ಮೂಲ ಊರು ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಅವರ ತಂದೆ ಡಾ. ಜಿ. ಎನ್. ಭಟ್ಟರು ಮಹಾನ್ ಸಂಸ್ಕೃತ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಅನೇಕ ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರಾಗಿ, ಪರೋಪಕಾರಿಗಳಾಗಿ, ಹಲವಾರು ಪುಸ್ತಕಗಳ ಸಂಪಾದಕರಾಗಿ, ಲೇಖಕರಾಗಿ, ಪ್ರಕಾಶಕರಾಗಿ, ಹೀಗೆ ವಿವಿಧ ರೀತಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧರಾದವರು.  ತಾಯಿ ಜಯಲಕ್ಷ್ಮಿ ಭಟ್, ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ವಿಶೇಷ ಒಲವುಳ್ಳವರು.  ತಂದೆ ತಾಯಿಯರ ಪ್ರೇರಣೆಯಲ್ಲಿ ತೇಜಸ್ವಿನಿ ಚಿಕ್ಕಂದಿನಿಂದಲೇ ತಮ್ಮನ್ನು ವಿವಿಧ ರೀತಿಯ ಓದುಗಳಿಗೆ  ತೊಡಗಿಸಿಕೊಂಡರು.  


ತಂದೆ ಸಂಸ್ಕೃತದ ವಿದ್ವಾಂಸರಾದರೂ ಹಾಗೂ ಸ್ವಯಂ ಭಗವದ್ಗೀತೆಯ ಪಠಣ, ಸಂಸ್ಕೃತ ಶ್ಲೋಕಗಳನ್ನು ಉಲಿದು ಸಂತಸ ಪಡುವ ಹೃದಯ ಇದ್ದಾಗಿಯೂ ತೇಜಸ್ವಿನಿ ಅವರ ಹೃದಯಕ್ಕೆ ಆಪ್ತವಾಗಿದ್ದು ಕನ್ನಡಭಾಷೆ.  ಹೀಗಾಗಿ ಅವರು ಸ್ನಾತಕಕೋತ್ತರ ಪದವಿ ಗಳಿಕೆಯವರೆಗಿನ ಓದಿನಲ್ಲಿ ಕನ್ನಡವನ್ನು ಜೊತೆ ಜೊತೆಯಾಗಿ ಆಪ್ತವಾಗಿ ಇರಿಸಿಕೊಂಡು ಸಾಗಿದವರು.  ಈ ಆಪ್ತ ಕನ್ನಡ ಭಾವ ತೇಜಸ್ವಿನಿ ಅವರ ಎಲ್ಲ ಬರಹಗಳಲ್ಲಿಯೂ ಆಪ್ತವಾಗಿ ವ್ಯಾಪಿಸಿಕೊಂಡಿರುವುದು ಓದುಗನ ಅನುಭಾವಕ್ಕೆ ಸಮರ್ಥವಾಗಿ ತಲುಪುವಂತದ್ದಾಗಿದೆ.


ತೇಜಸ್ವಿನಿ ಹೆಗಡೆ ಅವರ ಬರಹಗಳು ಮೂಡದ ಕನ್ನಡದ ಪ್ರಸಿದ್ಧ ಪತ್ರಿಕೆಗಳೇ ಇಲ್ಲ ಎಂಬುದು ಅತಿಶಯೋಕ್ತಿಯ ಮಾತೇನಲ್ಲ.  ಅವರ ಕವಿತೆ, ಕತೆ, ಲಲಿತ ಪ್ರಬಂಧ, ಚಿಂತನಾತ್ಮಕ ಲೇಖನಗಳು ವಿವಿಧ ಮುಖಿಯಾಗಿ ಪತ್ರಿಕೆಗಳು, ಅಂತರಜಾಲ, ಸಾಮಾಜಿಕ ತಾಣ ಮತ್ತು ನಿಯತಕಾಲಿಕೆಗಳನ್ನು ನಿರಂತರ ಅಲಂಕರಿಸುತ್ತ ಬಂದಿವೆ.  ಇವುಗಳಲ್ಲಿ ಕೆಲವು ಗೊಂಚಲುಗಳೋಪಾದಿಯಲ್ಲಿ ಕವನ ಸಂಕಲನ‍ ಮತ್ತು ಕಥಾ ಸಂಕಲನಗಳಾಗಿ ಹೊರಹೊಮ್ಮಿವೆ.  


ತೇಜಸ್ವಿನಿ ಹೆಗಡೆ ಅವರ ಪ್ರಥಮ ಕವನ ಸಂಕಲನ 'ಚಿಗುರು' 1995 ವರ್ಷದಲ್ಲೇ ಪ್ರಕಟಗೊಂಡಿತು.  'ಪ್ರತಿಬಿಂಬ' ಅವರ ಮತ್ತೊಂದು ಕವನ ಸಂಕಲನ.  'ಕಾಣ್ಕೆ' 'ಸಂಹಿತಾ' ಮತ್ತು 'ಜೋತಯ್ಯನ ಬಿದಿರು ಬುಟ್ಟಿ' ತೇಜಸ್ವಿನಿ ಅವರ ಕಥಾ ಸಂಕಲನಗಳು. 'ಹೊರಳು ದಾರಿ' ಮತ್ತು 'ಹಂಸಯಾನ' ತೇಜಸ್ವಿನಿ ಹೆಗಡೆ ಅವರ ಇದುವರೆಗಿನ ಪ್ರಕಟಿತ ಕಾದಂಬರಿಗಳು. ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆಯಲ್ಲಿ 'ಅಬ್ರಹಾಂ ಲಿಂಕನ್' ಮೂಡಿಸಿದ್ದಾರೆ. 'ತನ್ನ-ತಾನ' ಇವರ ಅಂಕಣ ಬರಹಗಳ ಸಂಕಲನ.


ತೇಜಸ್ವಿನಿ ಅವರ ಬರಹಗಳು ಬಿಡಿಯಾಗಿ ಪ್ರಕಟಗೊಂಡ ಅನೇಕ ವಿಶೇಷಾಂಕಗಳಲ್ಲಿ ಬಹುಮಾನಿತಗೊಂಡಿರುವುದರ ಜೊತೆಗೆ ಓದುಗ ಮತ್ತು ಪ್ರಾಜ್ಞ ವಿಮರ್ಶಕರ ಮೆಚ್ಚುಗೆ ಸಹಾ ಗಳಿಸಿರುವುದು ವಿಶೇಷ. ಅವರ ‘ಹಂಸಯಾನ' ಕಾದಂಬರಿಗೆ ಸಂದ ಮಾಸ್ತಿ ಪುರಸ್ಕಾರವೂ ಒಳಗೊಂಡಂತೆ ಅನೇಕ ಗೌರವ ಮತ್ತು ಪುರಸ್ಕಾರಗಳು ಅವರಿಗೆ ಸಂದಿವೆ.


ಎಲ್ಲ ಬಗೆಯ ಒಳ್ಳೆಯ ಓದು, ಸಂಗೀತ. ಸಿನಿಮಾ, ಕ್ರೀಡೆ ಇವೆಲ್ಲ ತೇಜಸ್ವಿನಿ ಅವರಿಗೆ ಪ್ರಿಯ.  ಬೆಂಗಳೂರಿನಲ್ಲಿ ಸಾಹಿತ್ಯ ಚಿಂತನೆ, ಜನಪರ ಕಾಳಜಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೇ ಇರಲಿ, ಅವುಗಳಿಗೆ ಹೋದವರಿಗೆ,  ಅಲ್ಲಿ ಎಲ್ಲರೊಂದಿಗೆ ಆತ್ಮೀಯ ಭಾವದಲ್ಲಿ ಬೆರೆವ ಮಂದಹಾಸಯುಕ್ತ 'ತೇಜಸ್ವಿ' ತೇಜಸ್ವಿನಿ ಹೆಗಡೆ ಅವರು ಆಪ್ತವಾಗಿ ಎದುರಾಗುವುದು ಖಂಡಿತ.  ಈ ತೇಜಸ್ಸು ನಮಗೆ ನಿರತ ಪ್ರೇರಣೆಯಾಗಿ, ಅವರು ಇನ್ನೂ ವೈವಿಧ್ಯಮಯ ಓದನ್ನು ನಮಗೆ ಉಣಬಡಿಸುತ್ತಿರುತ್ತಾರೆ ಎಂದು ಆಶಿಸುತ್ತಾ ಅವರಿಗೆ ಆತ್ಮೀಯ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.



On the birth day of our talented writer, cultural activist and affectionate Tejaswini Hegde

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ